ಲೋಕಸಭಾ ಅಖಾಡಕ್ಕೆ ಇಳಿಯೋದಿಲ್ಲ ಮಲ್ಲಿಕಾರ್ಜುನ ಖರ್ಗೆ – ಚುನಾವಣೆಯಲ್ಲಿ ಅಳಿಯನಿಗೆ ಟಿಕೆಟ್ ಫಿಕ್ಸ್?

ಲೋಕಸಭಾ ಅಖಾಡಕ್ಕೆ ಇಳಿಯೋದಿಲ್ಲ ಮಲ್ಲಿಕಾರ್ಜುನ ಖರ್ಗೆ – ಚುನಾವಣೆಯಲ್ಲಿ ಅಳಿಯನಿಗೆ ಟಿಕೆಟ್ ಫಿಕ್ಸ್?

ಲೋಕಸಭಾ ಸಮರ ಗೆಲ್ಲಲು ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳೆಲ್ಲಾ ಭರ್ಜರಿ ರಣತಂತ್ರ ಹೆಣೆಯುತ್ತಿವೆ. ಅಭ್ಯರ್ಥಿಗಳ ಆಯ್ಕೆಗೆ ಭಾರೀ ಕಸರತ್ತು ನಡೆಸಲಾಗ್ತಿದೆ. ಈಗಾಗ್ಲೇ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸ್ಪರ್ಧೆಯೂ ಅನೌನ್ಸ್ ಆಗಿದೆ. ಆದ್ರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ ಲೋಕಸಭಾ ಅಖಾಡಕ್ಕೆ ಇಳಿಯಲ್ಲ ಎನ್ನುವ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ. ಖರ್ಗೆ ಬದಲಿಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿಗೆ ಕಾಂಗ್ರೆಸ್ ಟಿಕೆಟ್ ಎಂಬ ವಿಚಾರ ಹಲ್​ಚಲ್ ಎಬ್ಬಿಸಿದೆ. 81 ವರ್ಷದ ಖರ್ಗೆ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದರು. ಆದರೆ 2019 ರ ಚುನಾವಣೆಯಲ್ಲಿ ಸೋತಿದ್ದರು. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಆಗಿರುವ ಖರ್ಗೆ, ರಾಷ್ಟ್ರಮಟ್ಟದಲ್ಲಿ ಪಕ್ಷದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಆದ್ರೆ ಖರ್ಗೆ ಕಲಬುರಗಿಯಿಂದ ಸ್ಪರ್ಧಿಸಿದರೆ ಗೆಲುವು ಸಿಗುವುದಿಲ್ಲ ಎಂಬ ವರದಿಗಳು ಕೈ ಸೇರಿವೆ. ಅಲ್ಲದೆ, ಅವರಿಗೆ ರಾಜ್ಯಸಭೆಯಲ್ಲಿ ಇನ್ನೂ ನಾಲ್ಕು ವರ್ಷಗಳ ಅವಧಿ ಉಳಿದಿದೆ. ಹೀಗಾಗಿ ಖರ್ಗೆ ಲೋಕಸಭಾ ಚುನಾವಣಾ ಸಮರಕ್ಕೆ ಇಳಿಯೋದು ಡೌಟ್ ಎನ್ನಲಾಗ್ತಿದೆ.

ಇದನ್ನೂ ಓದಿ: ಖರ್ಗೆ ಸೋಲಿಸಲು ರಣವ್ಯೂಹ! – ಬಿಜೆಪಿ ನಾಯಕರ ತಂತ್ರಗಾರಿಕೆ ಏನು..?

ಖರ್ಗೆ ಅಳಿಯನಿಗೆ ಟಿಕೆಟ್? 

ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯನಾಗಿರುವ ರಾಧಾಕೃಷ್ಣ ದೊಡ್ಡಮನಿ ತಮ್ಮದೇ ಶಿಕ್ಷಣ ಸಂಸ್ಥೆಗಳನ್ನ ಹೊಂದಿದ್ದಾರೆ. ಹಾಗೇ ಉದ್ಯಮಿಯೂ ಆಗಿದ್ದಾರೆ.  ಮಲ್ಲಿಕಾರ್ಜುನ ಖರ್ಗೆಗೆ ಈ ಬಾರಿಯೂ ಕ್ಷೇತ್ರದಲ್ಲಿ ಗೆಲುವು ಕಷ್ಟವಾಗಲಿದೆ ಎಂಬ ರಿಪೋರ್ಟ್ ಹೈಕಮಾಂಡ್ ಕೈ ಸೇರಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರೊಂದಿಗೆ ಸಮಾಲೋಚಿಸಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹೀಗಾಗಿ ಪುತ್ರ ಪ್ರಿಯಾಂಕ್ ಖರ್ಗೆಗೆ ಕಲಬುರಗಿ ಲೋಕಸಭಾ ಟಿಕೆಟ್ ಆಫರ್ ನೀಡಲಾಗಿತ್ತು. ಆದ್ರೆ ರಾಜ್ಯದಲ್ಲಿ ಸಚಿವರಾಗಿರುವ ಪ್ರಿಯಾಂಕ್ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಖರ್ಗೆ ಅವ್ರ ಅಳಿಯನನ್ನ ಅಖಾಡಕ್ಕಿಳಿಸಲು ತಯಾರಿ ನಡೆಸಲಾಗಿದೆ. ಆರಂಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ ರಾಧಾಕೃಷ್ಣರ ಮನವೊಲಿಕೆ ಕೂಡ ಮಾಡಲಾಗಿದೆ.

ಖರ್ಗೆ ಏನು ಸಾಮಾನ್ಯ ವ್ಯಕ್ತಿ ಅಲ್ಲ. ದಲಿತ ಸಮುದಾಯಕ್ಕೆ ಸೇರಿದ್ದ ಖರ್ಗೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ಮೈಲುಗಲ್ಲು ನೆಟ್ಟ ನಾಯಕ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಖರ್ಗೆ ಅವರು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ಸಚಿವ- ಕಾರ್ಮಿಕ ಮತ್ತು ಉದ್ಯೋಗ, ರೈಲ್ವೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ರಾಜ್ಯದ ಕಾಂಗ್ರೆಸ್ ಸರ್ಕಾರಗಳಲ್ಲಿ ವಿವಿಧ ಖಾತೆಗಳನ್ನು ಹೊಂದಿದ್ದರು ಮತ್ತು ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷರೂ ಮತ್ತು ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದರು. ದಶಕಗಳ ಕಾಲ ಸೋಲಿಲ್ಲದ ಸರದಾರನಾಗಿ ಮೆರೆದ ಖರ್ಗೆಗೆ ಸೋಲಿನ ರುಚಿ ತೋರಿಸಿದ್ದೇ 2019ರ ಲೋಕಸಭಾ ಚುನಾವಣೆ. ಅದೂ ಕೂಡ ಖರ್ಗೆಯವ್ರ ಶಿಷ್ಯ ಉಮೇಶ್ ಜಾಧವ್ ಮಾಡಿದ್ದ ತಂತ್ರಗಾರಿಕೆ.

ಸೋಲಿಲ್ಲದ ಸರದಾರ ಖರ್ಗೆಗೆ ನೋವು ಕೊಟ್ಟ ಆ ಸೋಲು! 

1972 ಮತ್ತು 2004 ರ ನಡುವೆ ಖರ್ಗೆ ಅವರು ಸತತವಾಗಿ ಪ್ರತಿನಿಧಿಸುತ್ತಿದ್ದ ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ ಅವರು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಜನಪ್ರಿಯರಾಗಿದ್ದಾರೆ. ಆದ್ರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಖರ್ಗೆ ಸೋಲು ಅನುಭವಿಸಿದ್ದರು.  ಒಂಬತ್ತು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಖರ್ಗೆ ಅವರಿಗೆ 2019 ರ ಚುನಾವಣೆ ಕಠಿಣವೆಂದು ಪರಿಗಣಿಸಲಾಗಿತ್ತು, ಈ ಪ್ರದೇಶದಿಂದ ಕಾಂಗ್ರೆಸ್‌ನ ಹಲವಾರು ಹಿರಿಯ ನಾಯಕರಾದ ಬಾಬುರಾವ್ ಚಿಂಚನಸೂರ್, ಎ ಬಿ ಮಾಲಕ ರೆಡ್ಡಿ ಮತ್ತು ಮಾಲೀಕಯ್ಯ ಗುತ್ತೇದಾರ್ ಅವರು ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಪರಿಣಾಮ ಸೋಲಿಲ್ಲದ ಸರದಾರ ಎಂದು ಜನಪ್ರಿಯವಾಗಿ ಕರೆಸಿಕೊಳ್ಳುತ್ತಿದ್ದ ಖರ್ಗೆಯವರ ಹಲವಾರು ದಶಕಗಳ ಕಾಲದ  ರಾಜಕೀಯ ಜೀವನದಲ್ಲಿ ಮೊದಲ ಚುನಾವಣಾ ಸೋಲಾಗಿತ್ತು.

ಇದೇ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಹೆಸರು ಕಲಬುರ್ಗಿ ಕ್ಷೇತ್ರಕ್ಕೆ ಕೇಳಿ ಬಂದಿದೆ. ಈ ಕ್ಷೇತ್ರದಿಂದ ಖರ್ಗೆ ಅವರೇ ಸ್ಪರ್ಧಿಸಬೇಕು ಎಂಬ ಅಪೇಕ್ಷೆ ಕಾಂಗ್ರೆಸ್‌ನದು. ಆದರೆ, ಹೆಚ್ಚಿನ ಜವಾಬ್ದಾರಿ ಇರುವ ಕಾರಣ ಖರ್ಗೆ ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಸೂಕ್ತ ಅಭ್ಯರ್ಥಿಯ ಶೋಧದಲ್ಲಿರುವಾಗ ರಾಧಕೃಷ್ಣ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ.

Sulekha