ದೇಶದಾದ್ಯಂತ ದೀಪಾವಳಿ ಸಂಭ್ರಮ – ಹಬ್ಬದ ಸಮಯದಲ್ಲಿ ಭೇಟಿ ಕೊಡಬಹುದಾದಂತಹ ಸ್ಥಳಗಳ ಪಟ್ಟಿ ಇಲ್ಲಿದೆ..

ದೇಶದಾದ್ಯಂತ ದೀಪಾವಳಿ ಸಂಭ್ರಮ – ಹಬ್ಬದ ಸಮಯದಲ್ಲಿ ಭೇಟಿ ಕೊಡಬಹುದಾದಂತಹ ಸ್ಥಳಗಳ ಪಟ್ಟಿ ಇಲ್ಲಿದೆ..

ಭಾರತದಾದ್ಯಂತ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೀದಿ ಬೀದಿಗಳಲ್ಲಿ ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಕೆಡುಕಿನ ಮೇಲೆ ಒಳಿತಿನ ವಿಜಯದ ನೆನಪಿಗಾಗಿ ಆಚರಿಸಲಾಗುವ ದೀಪಾವಳಿಯು ಭಾರತದಲ್ಲಿ ಅತ್ಯಂತ ಜನಪ್ರಿಯ ಹಬ್ಬವಾಗಿದೆ. ಮನೆಗಳ ಹೊರಗೆ ದೀಪಗಳನ್ನು ಬೆಳಗಿಸಿ ಲಕ್ಷ್ಮೀದೇವಿಯನ್ನು ಮನೆಗೆ ಬರಮಾಡಿಕೊಳ್ಳಲಾಗುತ್ತದೆ. ಹಬ್ಬದ ಹಿನ್ನೆಲೆ ಸಾಲು ಸಾಲು ರಜೆಗಳಿರುತ್ತವೆ. ಹೀಗಾಗಿ ಅನೇಕರು ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಬೇಕೆಂದು ಬಯಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಯಾವ ಸ್ಥಳಕ್ಕೆ ಹೋಗುವುದು ಉತ್ತಮ. ಅಲ್ಲಿನ ವಿಶೇಷತೆ ಏನು ಎಂಬುವುದರ ಕುರಿತ ಮಾಹಿತಿ ಇಲ್ಲಿದೆ.

ಪಶ್ಚಿಮ ಬಂಗಾಳ : ದೀಪಾವಳಿಯ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ದೀಪಾವಳಿಯಂದು ಕಾಳಿಗೆ ಮಣ್ಣಿನ ದೀಪಗಳನ್ನು ಹಚ್ಚಿ ಪೂಜಿಸಲಾಗುತ್ತದೆ. ದಕ್ಷಿಣೇಶ್ವರ ಮತ್ತು ತಾರಾಪೀಠದಲ್ಲಿರುವ ದೇವಾಲಯಗಳು ಹಾಗೂ ಕಾಳಿ ಪೂಜಾ ಮಂಟಪಗಳು ನಗರದಲ್ಲಿ ಹೆಚ್ಚಾಗಿ ಇವೆ. ಹೀಗಾಗಿ ಇಲ್ಲಿ ದೀಪಾವಳಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅಲ್ಲಿನ ಜನರು ದೀಪಾವಳಿಯ ದಿನದಂದು ಹೆಚ್ಚಿನ ಅಂಗಡಿಗಳನ್ನು ಮುಚ್ಚುವ ಮೂಲಕ ಜನ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ದೀಪಾಲಂಕಾರವನ್ನು ಮಾಡಲಾಗಿರುತ್ತದೆ. ದೀಪಾವಳಿ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸುಂದರ ಅನುಭವ ನಿಮ್ಮದಾಗುತ್ತದೆ.

ಇದನ್ನೂ ಓದಿ:

ಗೋವಾ : ಗೋವಾ ತನ್ನ ವೈಲ್ಡ್ ಪಾರ್ಟಿಗಳಿಗೆ ಹೆಸರುವಾಸಿಯಾಗಿರಬಹುದು. ಆದರೆ ಭಾರತದ ಅತ್ಯಂತ ಪ್ರಸಿದ್ಧ ಬೀಚ್ ರಾಜ್ಯ ಗೋವಾ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ. ನರಕ ಚತುರ್ದಶಿಯಂದು ಪ್ರತಿ ಹಳ್ಳಿಯಲ್ಲಿ ನರಕಾಸುರನ ದೊಡ್ಡ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಯಾರ ಮೂರ್ತಿಯು ಅತ್ಯಂತ ಎತ್ತರವಾಗಿದೆ ಮತ್ತು ಭಯಾನಕವಾಗಿದೆ ಎಂದು ನಿರ್ಣಯಿಸಲು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಈ ಸ್ಪರ್ಧೆಗಳಲ್ಲಿ ಜನರ ಉತ್ಸಾಹವನ್ನು ಕಣ್ತುಂಬಿಕೊಳ್ಳುವುದೇ ಮನಸ್ಸಿಗೆ ಹಿತ. ಹೀಗಾಗಿ ನಿಮ್ಮ ರಜಾ ದಿನಗಳನ್ನು ನೀವು ಗೋವಾದಲ್ಲೂ ಕಳೆಯಬಹುದು.

ಅಮೃತಸರ : ಪಂಜಾಬ್ ಮತ್ತು ಅಮೃತಸರದಲ್ಲಿ ದೀಪಾವಳಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ ಬಹಳ ಅದ್ಭುತವಾದ ದೀಪಾವಳಿ ಹಬ್ಬದ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸುತ್ತದೆ. ದೀಪಾವಳಿಯು ಹಿಂದೂ ಹಬ್ಬವಾಗಿದ್ದರೂ, ಗುರು ಹರಗೋಬಿಂದ್ ಸಾಹಿಬ್ ಮೊಘಲ್ ಸೆರೆಯಿಂದ ಹಿಂದಿರುಗಿದ ದಿನವಾಗಿ ಸಿಖ್ಖರು ಇದನ್ನು ಆಚರಿಸುತ್ತಾರೆ. ಜೊತೆಗೆ 1577 ರಲ್ಲಿ ದೀಪಾವಳಿಯಂದು ಗೋಲ್ಡನ್ ಟೆಂಪಲ್‌ನ ಅಡಿಪಾಯ ಹಾಕಲಾಯಿತು. ಹೀಗಾಗಿ ಈ ದಿನದಂದು ಪಟಾಕಿ ಪ್ರದರ್ಶನದ ಜೊತೆಗೆ, ಸರೋವರದ ಅಂಚಿನಲ್ಲಿ ಸಾವಿರಾರು ದೀಪಗಳನ್ನು ಸಾಲು ಸಾಲಾಗಿ ಹಚ್ಚಿ ಜನ ಸಂಭ್ರಮಿಸುತ್ತಾರೆ. ಇದನ್ನು ವೀಕ್ಷಿಸುವುದೇ ಒಂದು ಆನಂದ. ಅದು ಗೋಲ್ಡನ್ ಟೆಂಪಲ್ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಗುಜರಾತ್ : ಗುಜರಾತ್‌ನಲ್ಲಿ ದೀಪಾವಳಿಯನ್ನು ತುಂಬಾ ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿ ದೀಪಾವಳಿಯಂದು ಆಕಾಶದಲ್ಲಿ ವಿಭಿನ್ನ ಪಾಟಾಕಿಗಳನ್ನು ನೋಡುವುದೇ ಚಂದ. ದೀಪಾವಳಿ ಆಚರಣೆಗಳು ಧನ್ತೇರಸ್ ನಿಂದ ಪ್ರಾರಂಭವಾಗುತ್ತದೆ. ಇದಕ್ಕೂ ಮುನ್ನ ಮನೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಹಬ್ಬದಲ್ಲಿ ಉಪವಾಸ ಆಚರಿಸಲಾಗುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರನ್ನು ಆಹ್ವಾನಿಸಲಾಗುತ್ತದೆ ಮತ್ತು ಹಬ್ಬದ ಉತ್ಸಾಹದಲ್ಲಿ ಜನ ಮಿಂದೇಳುತ್ತಾರೆ. ಜೊತೆಗೆ ಈ ಸಮಯದಲ್ಲಿ ಹಸುಗಳು ಮತ್ತು ಕರುಗಳನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಪೂಜಿಸಿ ರಾಕ್ಷಸನ ಪತನವನ್ನು ಆಚರಿಸಲಾಗುತ್ತದೆ. ವಿಭಿನ್ನ ಪಟಾಕಿಗಳನ್ನು ಸಿಡಿಸುವ ಅದ್ಭುತ ಪ್ರದರ್ಶನವು ನಡೆಯುತ್ತದೆ.

ಮಹಾರಾಷ್ಟ್ರಮಹಾರಾಷ್ಟ್ರದ ದೀಪಾವಳಿ ಆಚರಣೆಗಳು ತಮಿಳುನಾಡು ಮತ್ತು ಗುಜರಾತ್‌ಗಿಂತ ಹೆಚ್ಚು ಭಿನ್ನವಾಗಿಲ್ಲ. ಕರುಗಳನ್ನು ಪೂಜಿಸಲಾಗುತ್ತದೆ. ವಿಶೇಷವಾಗಿ ಈ ದಿನ ಚಿನ್ನವನ್ನು ಖರೀದಿಸಲಾಗುತ್ತದೆ. ನರಕ ಚತುರ್ದಶಿಯಂದು ನರಕಾಸುರನ ವಧೆಯನ್ನು ಆಚರಿಸಲಾಗುತ್ತದೆ. ಲಕ್ಷ್ಮಿ ಪೂಜೆಯಂದು ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನು ಪೂಜಿಸಿ, ಸ್ನೇಹಿತರು, ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಔತಣಕ್ಕಾಗಿ ಆಹ್ವಾನಿಸಲಾಗುತ್ತದೆ.

ವಾರಣಾಸಿ – ವಾರಣಾಸಿಯ ರಾಜ್‌ಘಾಟ್‌ನಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಲು ಭೂಮಿಗೆ ಇಳಿಯುವ ದೇವರುಗಳನ್ನು ಸ್ವಾಗತಿಸಲು ಭವ್ಯವಾದ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಜನರು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಐದು ದಿನಗಳ ಕಾಲ ಇಲ್ಲಿ ಹಬ್ಬ ಆಚರಿಸಲಾಗುತ್ತದೆ. ಇಲ್ಲಿ ಹಬ್ಬಗಳು ಎಷ್ಟು ಜನಪ್ರಿಯತೆಯನ್ನು ಗಳಿಸಿವೆ ಅಂದರೆ ಹೆಚ್ಚಿನ ಜನರನ್ನು ಆಕರ್ಷಿಸುವ ಸಲುವಾಗಿ ಗಂಗಾ ಮಹೋತ್ಸವ ಎಂಬ ಹಬ್ಬವನ್ನು ದೀಪಾವಳಿಯೊಂದಿಗೆ ಆಚರಿಸಲಾಗುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿರುತ್ತದೆ.

ತಮಿಳುನಾಡು : ತಮಿಳುನಾಡಿನಲ್ಲಿ ದೀಪಾವಳಿ ಆಚರಣೆಗೆ ಜನಪ್ರಿಯತೆ ಪಡೆದಿದೆ. ಕುಬೇರನಿಗೆ ಒಣ ಖರ್ಜೂರ, ಜೇನುತುಪ್ಪ ಮತ್ತು ಬೆಲ್ಲವನ್ನು ಅರ್ಪಿಸಲಾಗುತ್ತದೆ. ಮತ್ತು ಆರೋಗ್ಯದ ದೇವತೆ ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಅದಿತಿಯ ಕೈಯಲ್ಲಿ ನರಕಾಸುರನ ಅವನತಿಯನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪವಿತ್ರ ದಾಂಪತ್ಯ ಮತ್ತು ಒಡಹುಟ್ಟಿದವರ ಬಂಧವನ್ನು ಗೌರವಿಸಲಾಗುತ್ತದೆ. ದೇಶದ ಇತರ ಭಾಗಗಳಂತೆ, ತಮಿಳುನಾಡು ಕೂಡ ದುಷ್ಟಶಕ್ತಿಗಳನ್ನು ದೂರವಿಡಲು ಪಟಾಕಿಗಳ ಭವ್ಯವಾದ ಪ್ರದರ್ಶನದೊಂದಿಗೆ ದೀಪಾವಳಿಯನ್ನು ಆಚರಿಸುತ್ತದೆ.

Shwetha M