ವರ್ಷಾಂತ್ಯಕ್ಕೆ ಅಯೋಧ್ಯೆ ರಾಮಮಂದಿರದಲ್ಲಿ ಮಹಾ ದೀಪೋತ್ಸವ – ಜನವರಿಗೆ ಪ್ರಧಾನಿ ಸಾರಥ್ಯದಲ್ಲಿ ರಾಮ ಲಲ್ಲಾ ಪ್ರವೇಶ
ಅಯೋಧ್ಯೆಯ ರಾಮಮಂದಿರ ಹಿಂದೂಗಳ ಪವಿತ್ರ ದೇವಾಲಯ. ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯ ಪವಿತ್ರ ಯಾತ್ರಾ ಸ್ಥಳ. ಹಿಂದೂಗಳು ಈ ಸ್ಥಳವು ರಾಮನ ಜನ್ಮಸ್ಥಳವೆಂದು ನಂಬುತ್ತಾರೆ, ರಾಮ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸುತ್ತಾರೆ. ಸದ್ಯ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. 2018ರಲ್ಲಿ ಪ್ರಧಾನಿ ನರೇಂದ್ರಮೋದಿ ದೇವಾಲಯದ ಶಿಲಾನ್ಯಾಸವನ್ನು ನೆರವೇರಿಸಿದ್ದರು.
ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ವಿಗ್ರಹ ಪ್ರತಿಷ್ಠಾಪನೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ನಡೆಯಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಚಿತಪಡಿಸಿದ್ದಾರೆ. 2024ರ ಜನವರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ 2023ರ ಅಂತ್ಯಕ್ಕೆ ಅಯೋಧ್ಯೆಯಲ್ಲಿ ಮಹಾ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ದೀಪೋತ್ಸವದಲ್ಲಿ ಈ ಬಾರಿ ಅಯೋಧ್ಯಾ ನಗರಿಯ ತುಂಬಾ 21 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಹಚ್ಚುವುದಾಗಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ಇದನ್ನೂ ಓದಿ : ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ನಿರಾಕರಣೆ – ʼಮೋದಿ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆʼ ಎಂದ ಕಾಂಗ್ರೆಸ್
500 ವರ್ಷಗಳ ಬಳಿಕ ರಾಮ ಲಲ್ಲಾ ತನ್ನ ಮಂದಿರದ ಒಳಗೆ ವಿರಾಜಮಾನರಾಗುವ ಸಂದರ್ಭದಲ್ಲಿ ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿ ನೋಡುವಂತೆ ಮಾಡುತ್ತೇವೆ ಎಂದು ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. 2024ರ ಜನವರಿ 22 ರಂದು ಶ್ರೀರಾಮ ಮಂದಿರದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಅಯೋಧ್ಯಾ ಶ್ರೀರಾಮಮಂದಿರ ಟ್ರಸ್ಟ್ ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಈ ಒಂದು ಘೋಷಣೆ ಮಾಡಿದ್ದಾರೆ. ಆದ್ರೆ, ಈ ಸಂಬಂಧ ಪ್ರಧಾನಿ ಕಚೇರಿಯಿಂದ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.
ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಹಾಗೂ ಪ್ರಚಾರ ಅಭಿಯಾನಗಳಲ್ಲಿ ಭಾಗವಹಿಸುವಂತೆ ಬಿಜೆಪಿ ಪಕ್ಷದ ಸಂಸದರಿಗೆ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ. ತ್ರೇತಾಯುಗದ ಮಹಾ ನಗರ ಅಯೋಧ್ಯೆಯು ಇಡೀ ದೇಶಕ್ಕೇ ಸ್ಫೂರ್ತಿ ತುಂಬುತ್ತಿದೆ ಎಂದ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ದೇಶದಲ್ಲಿ ರಾಮರಾಜ್ಯ ನಿರ್ಮಾಣದ ಕನಸು ನನಸಾಗಿಸುವ ಪ್ರಯತ್ನವಿದು ಎಂದಿದ್ದಾರೆ.