ಕೇರಳದ ಲಾಟರಿ ಗೆದ್ದ ಮೇಸ್ತ್ರಿ – ಉಪ್ಪಿನಂಗಡಿ ನಿವಾಸಿಗೆ ಒಲಿಯಿತು ಅದೃಷ್ಟ!
ಅದೃಷ್ಟ ಚೆನ್ನಾಗಿದ್ರೆ ಮುಟ್ಟಿದ್ದೆಲ್ಲಾ ಚಿನ್ನ ಆಗಬಹುದು. ಎಂತಹ ಕಡು ಬಡವನಾದ್ರೂ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತನಾಗಬಹುದು. ಇತ್ತೀಚಿನ ದಿನಗಳಲ್ಲಿ ಲಾಟರಿ ಟಿಕೆಟ್ ಭಾರಿ ಸದ್ದು ಮಾಡುತ್ತಿದೆ. ಈ ಲಾಟರಿ ಟಿಕೆಟ್‌ಗಳು ಒಂದೇ ದಿನದಲ್ಲಿ ವ್ಯಕ್ತಿ ಹಣೆಬರಹವನ್ನು ಬದಲಾಯಿಸುತ್ತವೆ. ಲಾಟರಿ ಟಿಕೆಟ್ ಗೆದ್ದು ಕೋಟ್ಯಾಧಿಪತಿಗಳಾದವರು ಜಗತ್ತಿನಲ್ಲಿ ಅನೇಕ ಜನರಿದ್ದಾರೆ. ಇದೀಗ ಕರ್ನಾಟಕದ ವ್ಯಕ್ತಿಯೊಬ್ಬರು ಲಾಟರಿ ಟಿಕೆಟ್ ಖರೀದಿಸಿ ಲಕ್ಷಾಂತರ ರೂಪಾಯಿ ಗೆದ್ದಿದ್ದಾರೆ.
ಕೇರಳದಲ್ಲಿ ಅಲ್ಲಿನ ಸರ್ಕಾರವೇ ಲಾಟರಿ ನಡೆಸುತ್ತಿದೆ. ಇತ್ತೀಚೆಗೆ ಕೇರಳದಲ್ಲಿ ಓಣಂ ಹಬ್ಬ ಆಚರಿಸಲಾಗಿತ್ತು. ಈ ವೇಳೆ ಪ್ರತಿವರ್ಷದಂತೆ ಬಂಪರ್ ಲಾಟರಿ ಆಯೋಜಿಸಿತ್ತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಒಂದು ಟಿಕೆಟ್ಗೆ 500 ರೂ. ನಿಗದಿ ಮಾಡಲಾಗಿತ್ತು. ಸೆ. 22ರಂದು ಪ್ರಕಟವಾದ ಫಲಿತಾಂಶದಲ್ಲಿ ತಮಿಳುನಾಡಿನ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ. ಇದೇ ಓಣಂ ಲಾಟರಿಯಲ್ಲಿ ದಕ್ಷಿಣ ಕನ್ನಡದ ಉಪ್ಪಿನಂಗಡಿ ಮೂಲದ ಮೇಸ್ತ್ರಿಗೂ ಅದೃಷ್ಟ ಒಲಿದಿದೆ.
ಇದನ್ನೂ ಓದಿ:ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಪತ್ನಿ ಮೇಲೆ ಸಿಟ್ಟಾದ ಪತಿ – ಪೊಲೀಸ್ ಠಾಣೆಯಲ್ಲಿ ಕಂದಮ್ಮನನ್ನ ಕೊಲ್ಲಲು ಯತ್ನಿಸಿದ ಪಾಪಿ
ಉಪ್ಪಿನಂಗಡಿಯ ಇಳಂತಿಲ ನಿವಾಸಿ ಚಂದ್ರಯ್ಯ ಎಂಬುವರು ಕೇರಳದ ಕಾನತ್ತೂರು ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ದೇವಸ್ಥಾನದಲ್ಲಿಓಣಂ ಲಾಟರಿ ಟಿಕೆಟ್ ಖರೀದಿಸಿದ್ದರು. ಇದೀಗ ಲಾಟರಿಯಲ್ಲಿ ಚಂದ್ರಯ್ಯ ಅವರಿಗೂ ಅದೃಷ್ಟ ಒಲಿದಿದೆ. ಚಂದ್ರಯ್ಯ ಅವರು ಬರೋಬ್ಬರಿ 50 ಲಕ್ಷ ರೂ. ಬಹುಮಾನವನ್ನು ಗೆದ್ದಿದ್ದಾರೆ.
ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ 500 ರೂ. ಕೊಟ್ಟು ಚಂದ್ರಯ್ಯ ಟಿಕೆಟ್ ಖರೀದಿಸಿದ್ದರು. ಇದೀಗ ಬಂಪರ್ ಬಹುಮಾನ ಬಂದಿದ್ದು, ಚಂದ್ರಯ್ಯ ಅವರ ಬದುಕೇ ಬದಲಾಗಿದೆ. ಚಂದ್ರಯ್ಯ ಅವರು ಲಾಟರಿ ಗೆದ್ದ ಖುಷಿಯಲ್ಲಿದ್ದು, ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬ ಚಿಂತನೆಯಲ್ಲಿ ಮುಳುಗಿದ್ದಾರೆ.