ಮಂಡ್ಯದಲ್ಲೇ ಕಬ್ಬು, ಭತ್ತಕ್ಕಿಲ್ಲ ಕೆಆರ್ ಎಸ್ ನೀರು – ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿಯೇ ಕಾವೇರಿ ವಿವಾದ ಉದ್ವಿಘ್ನ ಯಾಕೆ..?

ಮಂಡ್ಯದಲ್ಲೇ ಕಬ್ಬು, ಭತ್ತಕ್ಕಿಲ್ಲ ಕೆಆರ್ ಎಸ್ ನೀರು – ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿಯೇ ಕಾವೇರಿ ವಿವಾದ ಉದ್ವಿಘ್ನ ಯಾಕೆ..?

ಕರ್ನಾಟಕದಲ್ಲಿ ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ಕೆಆರ್ ಎಸ್ ನಿಂದ ನೀರು ಹರಿಸುತ್ತಿರುವುದನ್ನ ಖಂಡಿಸಿ ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಬಂದ್ ಗೂ ಕರೆ ನೀಡಲಾಗುತ್ತಿದೆ. ಅಷ್ಟಕ್ಕೂ ಕಾವೇರಿ ನೀರು ಕರುನಾಡಿಗೆ ಎಷ್ಟು ಅಗತ್ಯ ಅನ್ನೋದು ಈ ಪ್ರತಿಭಟನೆಗಳಿಂದ ಗೊತ್ತಾಗುತ್ತದೆ. ರೈತರ ಜೀವನಾಡಿ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ದಿನೇ ದಿನೆ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ಭತ್ತ, ಕಬ್ಬು ಬೆಳೆದಿರುವ ರೈತರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಾಮಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಬರದ ಛಾಯೆ – ಸರಳ ಮತ್ತು ಅರ್ಥಪೂರ್ಣ ದಸರಾ ಆಚರಣೆಗೆ ಸರ್ಕಾರ ನಿರ್ಧಾರ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕೆಆರ್ ಎಸ್ ಡ್ಯಾಂ ಕಟ್ಟಲಾಗಿದೆ. ಶೇ.50 ನೀರಾವರಿ, ಶೇ.50 ರಷ್ಟು ಮಳೆಯಾಶ್ರಿತ ಪ್ರದೇಶ ಇದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಹುತೇಕ ರಾಗಿ ಪ್ರಮುಖ ಬೆಳೆಯಾಗಿದ್ದು, ಕೊಳವೆಬಾವಿ ಕೊರೆಸಿಕೊಂಡಿರುವ ರೈತರು ಹೂ, ವಿವಿಧ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. ನೀರಾವರಿ ಪ್ರದೇಶದಲ್ಲಿ ಸಂಪೂರ್ಣವಾಗಿ ಕಬ್ಬು ಮತ್ತು ಭತ್ತ ಮುಖ್ಯ ಬೆಳೆಯಾಗಿದೆ. ಇದೀಗ ನೀರಿನ ಕೊರತೆಯಿಂದ ನೀರಾವರಿ ಪ್ರದೇಶದ ರೈತರಲ್ಲಿಆತಂಕ ಮನೆ ಮಾಡಿದೆ. ಕಾವೇರಿ ಕಣಿವೆ ಪ್ರದೇಶದಲ್ಲಿ ಸ್ವಲ್ಪ ಮಳೆಯಿಂದ ಕೆಆರ್‌ಎಸ್‌ ಅಣೆಕಟ್ಟೆ ಅಲ್ಪಮಟ್ಟಿಗೆ ಭರ್ತಿಯಾದ ಹಿನ್ನೆಲೆಯಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ರೈತರು ಒಂದು ಬೆಳೆ ಕಬ್ಬು, ಭತ್ತವನ್ನು ಬೆಳೆದುಕೊಳ್ಳಬಹುದು ಎಂದು ನಿಟ್ಟುಸಿರು ಬಿಟ್ಟಿದ್ದರು. ಜತೆಗೆ ಜಿಲ್ಲಾಉಸ್ತುವಾರಿ ಸಚಿವರು ಸಹ ಅಧಿಕಾರಿಗಳೊಂದಿಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಬೆಳೆಗಾಗಿ ವಿಸಿ ನಾಲೆ ಸೇರಿದಂತೆ ಜಿಲ್ಲೆಯ ಎಲ್ಲಾ ನಾಲೆಗಳಿಗೂ 4 ಕಟ್ಟು ನೀರು ಹರಿಸುವುದಾಗಿ ಭರವಸೆ ನೀಡಿದ್ದರು.

ರೈತರು ತರಾತುರಿಯಲ್ಲಿ ಕಬ್ಬು ಮತ್ತು ಭತ್ತ ಬಿತ್ತನೆ ಕಾರ್ಯ ನಡೆಸಿದರು. ಆದರೀಗ ಮಳೆ ಪ್ರಮಾಣವು ದಿಢೀರ್‌ ಕುಸಿತಗೊಂಡು ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಕಡಿಮೆಯಾಯಿತು. ಜತೆಗೆ ತಮಿಳುನಾಡಿಗೆ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ನೀರಿನ ಮಟ್ಟ 97 ಅಡಿಗೆ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರದ ಸಾಧ್ಯತೆ ಎದುರಾಗಿದೆ. ಈ ವರ್ಷ ಕೂಡ ಆಗಸ್ಟ್ 14 ರಂದು, ತಮಿಳುನಾಡು ಸರ್ಕಾರವು ಕರ್ನಾಟಕವು ತನ್ನ ಜಲಾಶಯಗಳಿಂದ 24,000 ಘನ ಅಡಿಗಳಷ್ಟು (ಕ್ಯೂಸೆಕ್ಸ್) ನೀರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮತ್ತು ಅಂತರರಾಜ್ಯ ಗಡಿಯಲ್ಲಿರುವ ಬಿಳಿಗುಂಡ್ಲುವಿನಲ್ಲಿ ನಿಗದಿತ ಪ್ರಮಾಣದ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯನ್ನು ಕೋರಿತು. ಅಲ್ಲಿಂದ ವಿವಾದ ಮತ್ತೆ ಮುನ್ನೆಲೆಗೆ ಬಂತು.

ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್, ಸೆಪ್ಟೆಂಬರ್​ ಅವಧಿಯಲ್ಲಿ ಕಾವೇರಿ ವಿವಾದ (Cauvery river water sharing dispute) ಮುನ್ನೆಲೆಗೆ ಬರುತ್ತದೆ. ಈ ವರ್ಷ ರಾಜ್ಯದಲ್ಲಿ ಬರ ಪರಿಸ್ಥಿತಿ ಉದ್ಭವಿಸಿರುವುದರಿಂದ ಹಾಗೂ ತಮಿಳುನಾಡಿಗೆ ನೀರು ಬಿಡಬೇಕಾದ ಅನಿವಾರ್ಯತೆಗೆ ಸರ್ಕಾರ ಸಿಲುಕಿರುವುದರಿಂದ ಮತ್ತೆ ಪ್ರತಿಭಟನೆಗಳು ‘ಕಾವೇರಿ’ವೆ. 2016ರಲ್ಲಿ ಕೂಡ ಪ್ರತಿಭಟನೆಗಳು ತಾರಕಕ್ಕೇರಿದ್ದವು. ಆಗಲೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು! ಇದೀಗ ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಈ ಮಧ್ಯೆ, ಕಾವೇರಿ ಜಲಾನಯನ ಪ್ರದೇಶಗಳಲ್ಲೂ ಮಳೆ ಕೊರತೆ ಇದೆ. ಕೆಆರ್​ಎಸ್ ಜಲಾಶಯದ ಒಳ ಹರಿವು ಕಡಿಮೆಯಾಗಿದ್ದು, ಹೊರ ಹರಿವು ಹೆಚ್ಚಾಗಿರುವುದು ಮಂಡ್ಯ, ಮದ್ದೂರು, ಮೈಸೂರು ಭಾಗದ ರೈತರಲ್ಲಿ, ಈ ಪ್ರದೇಶಗಳ ಹಾಗೂ ಬೆಂಗಳೂರಿನ ನಿವಾಸಿಗಳಲ್ಲಿ ಆತಂಕ್ಕೆ ಕಾರಣವಾಗಿದೆ.

ತಮಿಳುನಾಡಿಗೆ ನೀರು ಬಿಡಲು ಕಾವೇರಿ ಜಲಾನಯನ ಪ್ರದೇಶದ ಮೇಲಿನ ರಾಜ್ಯವಾದ ಕರ್ನಾಟಕಕ್ಕೆ ಮಾಸಿಕ ವೇಳಾಪಟ್ಟಿ ಜಾರಿಯಲ್ಲಿದೆ. ವೇಳಾಪಟ್ಟಿಯ ಪ್ರಕಾರ, ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಜೂನ್​​ನಿಂದ ಮುಂದಿನ ವರ್ಷ ಮೇ ವರೆಗೆ ಒಟ್ಟು 177.25 ಟಿಎಂಸಿಯನ್ನು ಲಭ್ಯವಾಗುವಂತೆ ಮಾಡಬೇಕು. ಈ ಪ್ರಮಾಣದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ 123.14 ಟಿಎಂಸಿ ನೀಡಬೇಕಾಗಿದೆ. ಯಾವಾಗಲೂ ಈ ಅವಧಿಯಲ್ಲಿ ಕಾವೇರಿ ಸಮಸ್ಯೆಯು ಉಲ್ಬಣಗೊಳ್ಳುತ್ತದೆ. ಮುಂಗಾರು ಅವಧಿಯಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾದಾಗ ಸಮಸ್ಯೆ ಹೆಚ್ಚಾಗುತ್ತದೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ 2007 ರ ಆದೇಶಕ್ಕೆ ಸಂಬಂಧಿಸಿ 2018 ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್​ ತೀರ್ಪು ನೀಡಿದ ನಂತರ, ತೀರ್ಪಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸ್ಥಾಪಿಸಲಾಯಿತು. ಅದಾಗಿ ನಾಲ್ಕು ತಿಂಗಳ ನಂತರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಅನ್ನು ಸ್ಥಾಪಿಸಲಾಯಿತು. ಅಂದಿನಿಂದ, ಪರಿಸ್ಥಿತಿಯನ್ನು ಅವಲೋಕಿಸಲು ಎರಡು ಸಂಸ್ಥೆಗಳು ಸಭೆಗಳನ್ನು ನಡೆಸುತ್ತಿವೆ.

 

Shantha Kumari