ಮೂರನೇ ಬಾರಿ ಮೋದಿ ಪ್ರಧಾನಿ ಆಗ್ತಾರಾ..? – ಬಿಜೆಪಿ ಟಾರ್ಗೆಟ್ ಎಷ್ಟು..?

ರಾಮಮಂದಿರ ಲೋಕಾರ್ಪಣೆಯನ್ನ ಇಡೀ ಭಾರತ ಹಬ್ಬದಂತೆ ಸೆಲೆಬ್ರೇಟ್ ಮಾಡ್ತಿದೆ. ಮತ್ತೊಂದೆಡೆ ಲೋಕಸಭಾ ಚುನಾವಣಾ ಸಮರಕ್ಕೆ ಕೆಲವೇ ವಾರಗಳು ಬಾಕಿ ಉಳಿದಿವೆ. ಇದನ್ನೇ ಅಸ್ತ್ರ ಮಾಡಿಕೊಳ್ಳೋಕೆ ಬಿಜೆಪಿ ಪಡೆ ಭರ್ಜರಿ ಸಿದ್ಧತೆ ನಡೆಸಿದೆ. ಬಿಜೆಪಿಗೆ ಟಕ್ಕರ್ ಕೊಡಲು ಇಂಡಿಯಾ ಹೆಸರಲ್ಲಿ ಮಹಾಮೈತ್ರಿಕೂಟ ರಚಿಸಿಕೊಂಡು ವಿಪಕ್ಷಗಳು ಒಗ್ಗಟ್ಟಿನ ತಂತ್ರ ಹೂಡಿವೆ. ಈ ಜಟಾಪಟಿ ನಡುವೆಯೇ ಬಿಜೆಪಿ 2024ರ ಲೋಕಸಭಾ ಚುನಾವನೆಗೆ ಘೋಷವಾಕ್ಯ ಬಿಡುಗಡೆ ಮಾಡಿದೆ. ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂಬ ಘೋಷವಾಕ್ಯದೊಂದಿಗೆ ಅಖಾಡಕ್ಕಿಳಿಯೋಕೆ ಮುಂದಾಗಿದೆ. ಅಷ್ಟಕ್ಕೂ ಈ ಘೋಷವಾಕ್ಯದ ಉದ್ದೇಶ ಏನು..? ಬಿಜೆಪಿ ಟಾರ್ಗೆಟ್ ಎಷ್ಟು..? ಮೂರನೇ ಬಾರಿ ಮೋದಿ ಪ್ರಧಾನಿ ಆಗ್ತಾರಾ..? ವಿಪಕ್ಷಗಳ ಒಗ್ಗಟ್ಟು ವರ್ಕೌಟ್ ಆಗುತ್ತಾ..? ಈ ಬಗೆಗಿನ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹ್ಯಾಟ್ರಿಕ್ ಬಾರಿಸಿ ಮತ್ತೆ ಪ್ರಧಾನಿಯಾಗುತ್ತಾರಾ ನರೇಂದ್ರ ಮೋದಿ – ಲೋಕಸಭಾ ಚುನಾವಣೆಯತ್ತ ಎಲ್ಲರ ಚಿತ್ತ
2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಹಿಂದಿನ ಎರಡು ಚುನಾವಣೆಗಳಲ್ಲೂ ಘೋಷವಾಕ್ಯದೊಂದಿಗೆ ಪ್ರಚಾರ ನಡೆಸಿತ್ತು. ಇದೀಗ ಅದೇ ಸ್ಟ್ರಾಟಜಿಯನ್ನ 2024ರ ಲೋಕಸಭಾ ಚುನಾವಣೆಗೂ ಬಳಸಲು ಮುಂದಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಳು ಹತ್ತಿರವಾಗುತ್ತಿದ್ದರೆ ಬಿಜೆಪಿ ನಾಯಕರು ಭರ್ಜರಿ ಪ್ರಚಾರವನ್ನೂ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ದೇಶದ ಎಲ್ಲ ಭಕ್ತರನ್ನು ಸಂಪರ್ಕಿಸುವ ಯೋಜನೆ ರೂಪಿಸಲಾಗಿದೆ. ರಾಮಮೂರ್ತಿ ಪ್ರತಿಷ್ಠಾಪನೆ ಆಗುವ ಜನವರಿ 22ರಂದು ಬಿಜೆಪಿ ಕಾರ್ಯಕರ್ತರು ದೇಶದಲ್ಲಿ ದೀಪಾವಳಿಯಂತಹ ವಾತಾವರಣವನ್ನು ಸೃಷ್ಟಿಸಬೇಕು ಎಂದು ಸೂಚನೆ ನೀಡಲಾಗಿದೆ. ಹಾಗೂ ಈ ಬಾರಿಯ ಚುನಾವಣೆಯಲ್ಲಿ 400 ಸ್ಥಾನಗಳನ್ನ ಗೆಲ್ಲುವ ಗುರಿಯನ್ನ ಇಟ್ಟುಕೊಳ್ಳಲಾಗಿದೆ.
ಮೂರನೇ ಸಲ ಮೋದಿ?
ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್ ಅನ್ನೋ ಘೋಷ ವಾಕ್ಯ ಬಳಸಲು ನಿರ್ಧರಿಸಿದೆ. ಅಂದ್ರೆ ಮೂರನೇ ಬಾರಿ ಮೋದಿ ಸರ್ಕಾರ, ಈ ಬಾರಿ ಬಿಜೆಪಿ ದಾಟಲಿದೆ 400 ಸ್ಥಾನ ಎಂಬ ಹೊಸ ಘೋಷದೊಂದಿಗೆ ಚುನಾವಣೆಗೆ ಇಳಿಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬಳಿಕ ಈ ಘೋಷಣೆಗಳನ್ನು ಅಂತಿಮಗೊಳಿಸಲಾಗಿದೆ. ಶೀಘ್ರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಹಂತಗಳಲ್ಲಿ ಬಿಜೆಪಿ ಸಂಚಾಲಕರು ಮತ್ತು ಸಹ ಸಂಚಾಲಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. 2014ರಲ್ಲಿ ಅಚ್ಛೇದಿನ್ ಆನೇ ವಾಲೆ ಹೈ ಅಂದ್ರೆ ಒಳ್ಳೆಯ ದಿನಗಳು ಬರಲಿವೆ ಎಂಬ ಘೋಷವಾಕ್ಯ ಇತ್ತು. 2019ರಲ್ಲಿ ರ ಲೋಕಸಭಾ ಚುನಾವಣೆ ವೇಳೆ ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಅಂದ್ರೆ ಮತ್ತೊಂದು ಬಾರಿ ಮೋದಿ ಸರ್ಕಾರ ಎನ್ನುವ ಘೋಷವಾಕ್ಯ ಬಳಸಲಾಗಿತ್ತು.
ಇದೀಗ ಮತ್ತೊಂದು ಘೋಷವಾಕ್ಯದೊಂದಿಗೆ ಮೋದಿ ನೇತೃತ್ವದ ಬಿಜೆಪಿ ಪಕ್ಷ ಬರೋಬ್ಬರಿ 400 ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿಕೊಂಡಿದೆ. ಉತ್ತರ ಭಾರತದಲ್ಲಿ ನಿರೀಕ್ಷೆಯಂತೆ ಗೆಲ್ಲುವ ಸಾಧ್ಯತೆಯೂ ಇದೆ. ಆದ್ರೆ ಬಿಜೆಪಿ ಪಾಲಿಗೆ ಮೊದ್ಲಿಂದಲೂ ಕೂಡ ದಕ್ಷಿಣ ಭಾರತ ಕಬ್ಬಿಣದ ಕಡಲೆಯೇ ಆಗಿದೆ. ಪ್ರಾದೇಶಿಕ ಪಕ್ಷಗಳು ಹೆಚ್ಚು ಪ್ರಾಬಲ್ಯವಾಗಿವೆ. ಇದೇ ಕಾರಣಕ್ಕೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಬಲವರ್ಧನೆಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಐದು ದಕ್ಷಿಣದ ರಾಜ್ಯಗಳಿಂದ 129 ಲೋಕಸಭಾ ಸ್ಥಾನಗಳಲ್ಲಿ ಕೇವಲ 29 ರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಈ ಪೈಕಿ ಕರ್ನಾಟಕದಲ್ಲೇ 25 ಸ್ಥಾನಗಳು ಅನ್ನೋದು ಇಲ್ಲಿ ಗಮನಾರ್ಹ.
ಟಾರ್ಗೆಟ್ ದಕ್ಷಿಣ ಕರ್ನಾಟಕ!
ಕರ್ನಾಟಕ ಹೊರತುಪಡಿಸಿ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಿಜೆಪಿ ಅಷ್ಟೇನು ಹಿಡಿತ ಹೊಂದಿಲ್ಲ. ಹೀಗಿದ್ರೂ ಕೂಡ ಐದು ರಾಜ್ಯಗಳಿಂದ ರಾಜ್ಯಗಳಿಂದ ಕನಿಷ್ಠ 40 ರಿಂದ 50 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಗುರಿಯಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ 25 ಸ್ಥಾನಗಳಲ್ಲಿ ಬಿಜೆಪಿ ಸಂಸದರೇ ಇದ್ದಾರೆ. ಹೀಗಾಗಿ ಅಷ್ಟೂ ಕ್ಷೇತ್ರಗಳನ್ನ ಉಳಿಸಿಕೊಳ್ಳೋಕೆ ಕಸರತ್ತು ನಡೆಯುತ್ತಿವೆ. ಇದೇ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಂತಹ ರಾಷ್ಟ್ರ ಮಟ್ಟದ ನಾಯಕರು ಲೋಕಸಭಾ ಚುನಾವನೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚೆಚ್ಚು ಪ್ರಚಾರ ನಡೆಸಲು ನಿರ್ಧರಿಸಿದ್ದಾರೆ. ಹಾಗೂ ಮುಂಬರುವ ಎರಡು ತಿಂಗಳಲ್ಲಿ ಅಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ಹೊಸ ವಿಮಾನ ನಿಲ್ದಾಣ ಸೇರಿದಂತೆ 20,000 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಮಂಗಳವಾರ ಪ್ರಧಾನಿ ಚಾಲನೆ ನೀಡಿದ್ದರು. ಬುಧವಾರ ಕೇರಳದ ತ್ರಿಶೂರ್‌ನಲ್ಲಿ ಬೃಹತ್ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ನಡೆಸಿದ್ದಾರೆ. ಈ ಮೂಲಕ ವೋಟ್ ಬ್ಯಾಂಕ್ ಭದ್ರಮಾಡಿಕೊಳ್ತಿದ್ದಾರೆ.
ಜೊತೆಗೆ 2014ರಿಂದ ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಿದ್ದು, ಮೋದಿಯವರ 10 ವರ್ಷದ ಆಡಳಿತ ಕಾರ್ಯವೈಖರಿಯ ಕುರಿತು ನಮೋ ಆ್ಯಪ್‌ನಲ್ಲಿ ಜನಮನ ಸಮೀಕ್ಷೆ ಆರಂಭಿಸಲಾಗಿದೆ. ಜನರು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜನರಿಗೆ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಈ ಸಮೀಕ್ಷೆ ಆರಂಭಿಸಲಾಗಿದೆ. ಸಮೀಕ್ಷೆಯಲ್ಲಿ ಆಡಳಿತದ ಕಾರ್ಯವೈಖರಿ, ನಾಯಕತ್ವ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕ್ಷೇತ್ರವಾರು ಸಮಸ್ಯೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.