ಆಕಾಶದಲ್ಲಿ ಬೆಳ್ಳಿಯಂತೆ ಹೊಳೆಯಲಿದ್ದಾನೆ ಶುಕ್ರ! – ಯಾವಾಗ ನೋಡಬೇಕು? ಏನು ವಿಶೇಷ?

ಆಕಾಶದಲ್ಲಿ ಬೆಳ್ಳಿಯಂತೆ ಹೊಳೆಯಲಿದ್ದಾನೆ ಶುಕ್ರ! – ಯಾವಾಗ ನೋಡಬೇಕು? ಏನು ವಿಶೇಷ?

ಪಶ್ಚಿಮ ಆಕಾಶದಲ್ಲಿ ಸುಮಾರು 19 ತಿಂಗಳಿಗೊಮ್ಮೆ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುವ ಶುಕ್ರಗ್ರಹ ಮಂಗಳವಾರ ಭೂಮಿಯ ಅತೀ ಸಮೀಪದಲ್ಲಿ ಅಂದರೆ 43 ಡಿಗ್ರಿ ಎತ್ತರದಲ್ಲಿ ಕಾಣಿಸಲಿದೆ ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ಮಾಹಿತಿ ನೀಡಿದ್ದಾರೆ.

ಮೇ 30 ರಿಂದ ಜುಲೈ ಅಂತ್ಯದವರೆಗೂ ಶುಕ್ರಗ್ರಹದ ಹೊಳಪು ಕಾಣಲಿದ್ದು, ಆಗಸ್ಟ್ ಆರಂಭದಲ್ಲಿ ಕಣ್ಮರೆಯಾಗುತ್ತದೆ. ಮೇ 30ರಿಂದ ಭೂಮಿಗೆ ಸಮೀಪಿಸಲಿದೆ. ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ ಶುಕ್ರಗ್ರಹ ತನ್ನ ಪ್ರಭೆ ಹೆಚ್ಚಿಸಿಕೊಳ್ಳುತ್ತಾ ಜುಲೈ 7ರಂದು ಅತಿ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಇದನ್ನೂ ಓದಿ: ಮರೆಯಾಗುತ್ತಿದೆ ಶನಿಗ್ರಹದ ವಿಶಿಷ್ಟ ‘ಉಂಗುರ’!

ಶುಕ್ರ ಈಗ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿದೆ. ಆಗಸ್ಟ್ 8ರ ಹೊತ್ತಿಗೆ 4 ಕೋಟಿ ಕಿ.ಮೀ ವರೆಗೆ ಭೂಮಿ ಬಳಿ ಸಮೀಪಿಸುತ್ತದೆ. ಹೀಗೆ ಹತ್ತಿರದಿಂದ ಶುಕ್ರ ಗ್ರಹ ಕಾಣಿಸಲು ಪ್ರಮುಖ ಕಾರಣ,  ಸೂರ್ಯನಿಂದ ಬುಧ ಸುಮಾರು 6 ಕೋಟಿ, ಶುಕ್ರ 11 ಕೋಟಿ ಕಿ.ಮೀ.ಯಾದರೆ ಭೂಮಿ 15 ಕೋಟಿ ಕಿ.ಮೀ. ದೂರವಿದೆ. ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಾಯಂಕಾಲ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ. ಆಕಾಶದಲ್ಲಿ ಸೂರ್ಯಾಸ್ತದ ನಂತರ ಕೆಲ ಗಂಟೆಯವರೆಗೆ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಶುಕ್ರ ಹಾಗೂ ಬುಧ 27 ಡಿಗ್ರಿ ಎತ್ತರದಲ್ಲಿ ಹಾಗೂ ಕೆಲಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕಾಣಿಸುತ್ತದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.

ಸೂರ್ಯನಿಂದ ಶುಕ್ರ ಸದಾ ಒಂದೇ ದೂರದಲ್ಲಿರುತ್ತದೆ. ಆದರೆ ಭೂಮಿ ಹಾಗೂ ಶುಕ್ರಗ್ರಹದ ದೂರ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಸುಮಾರು 19 ತಿಂಗಳಿಗೊಮ್ಮೆ ಶುಕ್ರಗ್ರಹ ಅತೀ ಸಮೀಪದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

2025 ರ ಜನವರಿಯಲ್ಲಿ ಶುಕ್ರಗ್ರಹ 26 ಕೋಟಿ ಕಿ.ಮೀ. ದೂರದಲ್ಲಿ ಗೋಚರಿಸಲಿದೆ. ಗ್ರಹಗಳಲ್ಲಿ ಬರೀಗಣ್ಣಿನಿಂದ ನೋಡಲು ಶುಕ್ರನೇ ಚೆಂದ. ಸುಮಾರು ಶೇ.95 ಇಂಗಾಲದ ಆಕ್ಸೈಡ್ಗಳ ವಾತಾವರಣ, ಸ್ವಲ್ಪ ರಂಜಕದ ಡೈಆಕ್ಸೈಡ್ಗಳಿಂದ ಅತಿ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿ ಫಲಿಸುವುದರಿಂದ ಶುಕ್ರ ಫಳ ಫಳ ಹೊಳೆಯುತ್ತದೆ. ದೂರದರ್ಶಕದಲ್ಲೀಗ ಶುಕ್ರ ಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗಿರುತ್ತದೆ. ಆ.8ರಿಂದ 19ರವರೆಗೆ ಸೂರ್ಯನಿಗೆ ನೇರ ಬಂದು ನಿಂತಾಗ ಅಸ್ತವಾಗಲಿದ್ದು, ನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಗೋಚರವಾಗಲಿದೆ ಎಂದು ಡಾ.ಎ.ಪಿ.ಭಟ್ ಹೇಳಿದ್ದಾರೆ.

suddiyaana