ಮಹೇಶ್ ಬಾಬು ತಂದೆ ‘ಸೂಪರ್ ಸ್ಟಾರ್’ ಕೃಷ್ಣ ಇನ್ನಿಲ್ಲ
ಅಮ್ಮನ ಸಾವಿನ ಬೆನ್ನಲ್ಲೇ ಅಪ್ಪನ ಕಳೆದುಕೊಂಡ ‘ಪ್ರಿನ್ಸ್’

ಮಹೇಶ್ ಬಾಬು ತಂದೆ ‘ಸೂಪರ್ ಸ್ಟಾರ್’ ಕೃಷ್ಣ ಇನ್ನಿಲ್ಲಅಮ್ಮನ ಸಾವಿನ ಬೆನ್ನಲ್ಲೇ ಅಪ್ಪನ ಕಳೆದುಕೊಂಡ ‘ಪ್ರಿನ್ಸ್’

ಹೈದರಾಬಾದ್: ಅಮ್ಮನ ಅಗಲಿಕೆಯ ನೋವಲ್ಲಿದ್ದ ನಟ ಮಹೇಶ್​ ಬಾಬು ಈಗ ತನ್ನ ತಂದೆ ‘ಸೂಪರ್ ಸ್ಟಾರ್’ ಕೃಷ್ಣ ಅವರನ್ನೂ ಕಳೆದುಕೊಂಡಿದ್ದಾರೆ. ಮಹೇಶ್‌ ಬಾಬು ತಂದೆ ಸೂಪರ್ ಸ್ಟಾರ್’ ಕೃಷ್ಣ ಘಟ್ಟನೇನಿ ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಸುಕಿನ ಜಾವ 4 ಗಂಟೆಗೆ ನಿಧನರಾದರು. ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃಷ್ಣ ಅವರಿಗೆ 80 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ:ಶೀಘ್ರದಲ್ಲೇ ಸೆಟ್ಟೇರಲಿದ್ಯಾ “ಆರ್ ಆರ್ ಆರ್ 2”-ರಾಜಮೌಳಿ ಹೇಳಿದ್ದೇನು?

350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕೃಷ್ಣ ಘಟ್ಟಮನೇನಿ ಅವರು ತೆಲುಗು ಚಿತ್ರರಂಗ ಕಂಡ ಸಿನಿದಿಗ್ಗಜರಾಗಿದ್ದರು. ಬಾಂಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಅಭಿಮಾನಿಗಳು ‘ಬಾಂಡ್ ಕೃಷ್ಣ’ ಎಂದು ಅಭಿಮಾನದಿಂದ ಕರೆಯುತ್ತಿದ್ದರು. 1965ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಕೃಷ್ಣ ಅವರು ನಂತರ ಸೂಪರ್ ಸ್ಟಾರ್ ಕೃಷ್ಣನಾಗಿ ತೆಲುಗು ಚಿತ್ರರಂಗವನ್ನು ಆಳಿದ್ದರು. ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಭಿಮಾನಿಗಳ ಪ್ರೀತಿ ಗಳಿಸಿದ್ದರು. ಪದ್ಮ ಭೂಷಣ, ನಂದಿ ಅವಾರ್ಡ್, ಫಿಲ್ಮ್​ ಫೇರ್​ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದ್ದವು. ಕೃಷ್ಣ ಅವರ ಅನೇಕ ಚಿತ್ರಗಳಲ್ಲಿ ಮಹೇಶ್​ ಬಾಬು ಬಾಲ ನಟನಾಗಿ ಅಭಿನಯಿಸಿದ್ದು ವಿಶೇಷವಾಗಿತ್ತು.

ಸೆಪ್ಟೆಂಬರ್​ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದರು. ಆ ಬಳಿಕ ಕೃಷ್ಣ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ವರ್ಷ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್​ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು. ತಾಯಿಯ ಸಾವಿನ ನೋವಿನಲ್ಲಿರುವಾಗಲೇ ಮಹೇಶ್ ಬಾಬು ಈಗ ತಂದೆಯನ್ನೂ ಕಳೆದುಕೊಂಡಿದ್ದು ಮನೆಯಲ್ಲಿ ಸಾವಿನ ಶೋಕ ಮಡುಗಟ್ಟಿದೆ.

suddiyaana