‘ವಿಕ್ರಮ್ ಎಸ್ ರಾಕೆಟ್’ ಯಶಸ್ವೀ ಉಡಾವಣೆ
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ರಾಕೆಟ್ ಕಂಪನಿಗಳ ಪ್ರವೇಶ
ಭಾರತದಲ್ಲೂ ಈಗ ಖಾಸಗಿ ಸಂಸ್ಥೆಯಿಂದ ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆಯ ಪ್ರಕ್ರಿಯೆಗೆ ದೊಡ್ಡ ಯಶಸ್ಸು ಸಿಕ್ಕಿದೆ. ಇದೇ ಮೊದಲ ಬಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ವಿಕ್ರಂ ಎಸ್ ರಾಕೆಟ್ ಯಶಸ್ವಿಯಾಗಿ ತನ್ನ ಗುರಿ ತಲುಪಿದೆ.
ಬಾಹ್ಯಾಕಾಶದಲ್ಲಿ ತಮ್ಮ ಅಸ್ತಿತ್ವ ಸ್ಥಾಪಿಸಲು ಬಾಹ್ಯಾಕಾಶ ಅಧ್ಯಯನ ಸಂಸ್ಥೆಗಳ ಜೊತೆ ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡುತ್ತಾ ಹೊಸ ಹೊಸ ಅಧ್ಯಯನ ನಡೆಸುವ ಪ್ರಕ್ರಿಯೆ ಅಮೆರಿಕಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಈ ಮೊದಲೇ ಆರಂಭವಾಗಿತ್ತು. ಎಲಾನ್ ಮಸ್ಕ್ ಒಡೆತನದ ಸ್ಪೇಸ್ X ಈಗಾಗಲೇ ಹಲವು ರಾಕೆಟ್ಗಳನ್ನು ಬಾಹ್ಯಾಕಾಶ ಅಧ್ಯಯನಕ್ಕೆಂದು ಉಡಾವಣೆ ಮಾಡಿದೆ. ಸ್ಪೇಸ್ ಟೂರಿಸಂನಲ್ಲಿ ಸ್ಪೇಸ್ X ಮತ್ತು ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ಕಂಪನಿಗಳು ಇತಿಹಾಸ ಸೃಷ್ಟಿಸಿವೆ. ಸದ್ಯ ಇದೇ ಹಾದಿಯಲ್ಲಿ ಭಾರತ ಸಾಗುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ರಾಕೆಟ್ ಕಂಪನಿಗಳ ಪ್ರವೇಶ ಆರಂಭವಾಗಿದೆ.
ಇದನ್ನೂ ಓದಿ : 12 ಬಾರಿ ಕ್ಯಾನ್ಸರ್ ಕಾಡಿದರೂ ಗೆದ್ದ ಮಹಿಳೆ..!- 2ರಿಂದ 36 ವರ್ಷದವರೆಗೆ ಕ್ಯಾನ್ಸರ್ ವಿರುದ್ಧ ಕಾದಾಟ..!
ಸ್ಕೈರೂಟ್ ಏರೋಸ್ಪೇಸ್ನವರು ನಿರ್ಮಿಸಿರುವ ‘ವಿಕ್ರಮ್ ಎಸ್ ರಾಕೆಟ್’ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಶುಕ್ರವಾರದಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ರಾಕೆಟ್ ಉಡಾವಣೆ ಮಾಡಿದ ದೇಶದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಸ್ಕೈ ರೂಟ್ ಸಂಸ್ಥೆ ಪಾತ್ರವಾಗಿದೆ. ಶ್ರೀ ಹರಿಕೋಟಾದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ವಿಕ್ರಮ್ ಎಸ್ ರಾಕೆಟ್’ ಅನ್ನು ಉಡಾವಣೆ ಮಾಡಲಾಗಿದೆ.
ಅಂದ ಹಾಗೇ ವಿಕ್ರಮ್ ಎಸ್, ಭಾರತದ ಬಾಹ್ಯಾಕಾಶ ಅಧ್ಯಯನ ಯೋಜನೆಯ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಗೌರವಾರ್ಥವಾಗಿ ಇಟ್ಟ ಹೆಸರಾಗಿದ್ದು ಈ ಉಡಾವಣೆಗೆ ‘ಪ್ರಾರಂಭ್ ಮಿಷನ್’ ಎಂದು ಹೆಸರಿಡಲಾಗಿತ್ತು. ಈ ಪ್ರಾರಂಭ್ ಮಿಷನ್ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಮುನ್ನುಡಿ ಬರೆದಯಲಾಗಿದೆ. ವಿಕ್ರಮ್ ಎಸ್, ವಿಕ್ರಮ್ ಸೀರೀಸ್ ಉಡಾವಣೆಯ ಮೊದಲ ಹಂತವಾಗಿದ್ದು, ಮುಂದಿನ ವರ್ಷ ಉಡಾವಣೆಯಾಗುವ ವಿಕ್ರಮ್ 1 ರಾಕೆಟ್ ಗೆ ತಯಾರಿಯಾಗಿದೆ.
ಈ ಬೆಳವಣಿಗೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಇಸ್ರೋ, ‘ಅಭಿನಂದನೆಗಳು, ಪ್ರಾರಂಭ್ ಮಿಷನ್ ಅನ್ನು ಯಶಸ್ವಿಯಾಗಿ ಸಾಧಿಸಿದ್ದೇವೆ ‘ ಎಂದೂ ಪ್ರಕಟಿಸಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಐತಿಹಾಸಿಕ ಉಡಾವಣೆಗೆ ಸಾಕ್ಷಿಯಾಗಿದ್ದರು.
ರಾಕೆಟ್ ನಿರ್ಮಾಣ, ರಾಕೆಟ್ ಉಡಾವಣೆ, ಉಪಗ್ರಹ ನಿರ್ಮಾಣ ಸೇರಿದಂತೆ ಇತರ ಕಾರ್ಯಗಳನ್ನು ಖಾಸಗಿಯವರು ನೀಡಬಹುದಾಗಿದ್ದು, ಈ ಮೂಲಕ ಸಂಶೋಧನೆ, ಅಭಿವೃದ್ಧಿಯಲ್ಲೂ ಭಾಗಿಯಾಗಬಹುದು ಎಂದೂ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಶಿವನ್ ಕರೆ ನೀಡಿದ್ದಾರೆ. ಅಂದ ಹಾಗೇ ವಿಕ್ರಮ್ ಎಸ್ ರಾಕೆಟ್ ಅನ್ನು 80 ಕಿಮೀ ಎತ್ತರಕ್ಕೆ ತಲುಪಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ವಿಕ್ರಮ್-ಎಸ್ 89.5 ಕಿಮೀ ಎತ್ತರಕ್ಕೆ ತಲುಪಿದ್ದು, ತನ್ನ ಎಲ್ಲ ಗುರಿಗಳನ್ನು ಈಡೇರಿಸಿದೆ ಎಂದು ಸ್ಕೈ ರೂಟ್ ಸಂಸ್ಥೆ ತಿಳಿಸಿದೆ. ‘ಪ್ರಾರಂಭ್’ ಹೆಸರಿನ ಯೋಜನೆಯಲ್ಲಿ ಆಂಧ್ರಪ್ರದೇಶ ಮೂಲದ ಎನ್ ಸ್ಪೇಸ್ ಟೆಕ್ ಇಂಡಿಯಾ, ಚೆನ್ನೈ ಮೂಲದ ಸ್ಟಾರ್ಟ್ಅಪ್ ಸ್ಪೇಸ್ ಕಿಡ್ಸ್ ಹಾಗೂ ಆರ್ಮೆನಿಯಾದ ಬಜೂಮ್ ಕ್ಯೂ ಸ್ಪೇಸ್ ರೀಸರ್ಚ್ ಲ್ಯಾಬ್ ನಿರ್ಮಿಸಿರುವ ಮೂರು ಪೇಲೋಡ್ಗಳನ್ನು ಬಾಹ್ಯಾಕಾಶಕ್ಕೆ ಸಾಗಿಸಲಾಗಿದೆ. ಮೂರು ಹಂತಗಳ ಸಾಲಿಡ್ ಮೋಟಾರ್ ರಾಕೆಟ್, ಸುಮಾರು 80 ಕೆಜಿಯಷ್ಟು ತೂಕದ ಪೇಲೋಡ್ಗಳನ್ನು ಸಾಗಿಸಿದೆ.