ಸಿಲಿಕಾನ್‌ ಸಿಟಿಯಲ್ಲಿ ಟ್ರಾಫಿಕ್‌ ಕಿರಿಕಿರಿ – ವಾಹನ ದಟ್ಟಣೆ ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ ಮೊರೆ ಹೋದ ಪೊಲೀಸರು!

ಸಿಲಿಕಾನ್‌ ಸಿಟಿಯಲ್ಲಿ ಟ್ರಾಫಿಕ್‌ ಕಿರಿಕಿರಿ – ವಾಹನ ದಟ್ಟಣೆ ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ ಮೊರೆ ಹೋದ ಪೊಲೀಸರು!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್‌ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸದಾ ಒಂದಲ್ಲ ಒಂದು ರೀತಿಯ ಯೋಜನೆಗಳನ್ನೂ ರೂಪಿಸುತ್ತಲೇ ಇದೆ. ಆದರೂ ಕೂಡ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತಿಲ್ಲ. ಇದೀಗ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಗರದ ಪೊಲೀಸರು ಕೃತಕ ಬುದ್ಧಿಮತ್ತೆ, ಮ್ಯಾಪ್​​ ಎಪಿಐಗಳು, ಎಮೋಜಿ ಸ್ಪೀಡ್ ಅಲರ್ಟ್ ಡಿಸ್​​​ಪ್ಲೇಗಳು ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲು ಚಿಂತನೆ ನಡೆಸುತ್ತಿದ್ದಾರೆ.

ಬೆಂಗಳೂರು ನಗರ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣಾ ಯೋಜನೆಯ ಭಾಗವಾಗಿ ನಗರ ಪೊಲೀಸರು ವಾಹನ ದಟ್ಟಣೆ ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ, ಮ್ಯಾಪ್​​ ಎಪಿಐಗಳು, ಎಮೋಜಿ ಸ್ಪೀಡ್ ಅಲರ್ಟ್ ಡಿಸ್​​​ಪ್ಲೇಗಳು ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲು ಚಿಂತನೆ ನಡೆಸುತ್ತಿದ್ದಾರೆ. ಹೊರ ವರ್ತುಲ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ ಮತ್ತು ಹೊಸೂರು ರಸ್ತೆಯಂತಹ 20 ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಲು ಕೃತಕ ಬುದ್ಧಿಮತ್ತೆ ಆಧಾರಿತ ಸರ್ಚ್ ಇಂಜಿನ್ ಅನ್ನು ಬಳಸಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತ ವ್ಯಕ್ತಿ – ಆಫೀಸ್‌ ಬೇಗ ತಲುಪಲು ಹೀಗಾ ಮಾಡೋದು?  

ಮೂಲಗಳ ಪ್ರಕಾರ, ಯೋಜನೆಗೆ ಆಯ್ಕೆಯಾದ ಸಂಸ್ಥೆಯು ಎಐ ಆಧಾರಿತ ಸರ್ಚ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲಿದೆ. ಅದು ಟ್ರಾಫಿಕ್ ಅನ್ನು ನಿರ್ವಹಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಲಿದೆ. ಸರ್ಚ್ ಇಂಜಿನ್‌ನ ಡೇಟಾವು ಟ್ರಾಫಿಕ್ ಮಾದರಿಗಳು, ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳನ್ನು ಅರ್ಥಮಾಡಿಕೊಳ್ಳಲು ಪೊಲೀಸರಿಗೆ ಸಹಾಯ ಮಾಡಲಿದೆ. ಡೇಟಾವು ಪೊಲೀಸರಿಗೆ ಕ್ರಿಯಾ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಸಂಭವನೀಯ ದಟ್ಟಣೆಯ ಸ್ಥಳಗಳ ಬಗ್ಗೆ ಪ್ರಯಾಣಿಕರಿಗೆ ತಿಳಿಸಲು ಸಹಾಯ ಮಾಡುತ್ತದೆ.

ಯೋಜನೆಗೆ ಆಯ್ಕೆಯಾದ ಸಂಸ್ಥೆಯು ಮ್ಯಾಪ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಿದೆ. ಅದು ಮರ ಬೀಳುವಿಕೆ, ಅಪಘಾತಗಳು, ವಾಹನಗಳ ಸ್ಥಗಿತ, ನೀರು ನಿಂತಿರುವುದು ಮತ್ತು ಇತರ ದಟ್ಟಣೆಗೆ ಕಾರಣವಾಗುವ ಅಂಶಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿದೆ. ಇದನ್ನು ಬಳಸಿಕೊಂಡು ಪ್ರಯಾಣಿಕರಿಗೆ ವಾಟ್ಸಾಪ್, ಟೆಲಿಗ್ರಾಮ್ ಇತ್ಯಾದಿಗಳ ಮೂಲಕ ಟ್ರಾಫಿಕ್ ಬಗ್ಗೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.

20 ಹೆಚ್ಚಿನ ಸಂಚಾರ ದಟ್ಟಣೆಯ ಕಾರಿಡಾರ್‌ಗಳಲ್ಲಿ ಎಮೋಜಿ ಡಿಸ್​ಪ್ಲೇಗಳನ್ನು ಸ್ಥಾಪಿಸಲಾಗುವುದು. ಡಿಸ್​ಪ್ಲೇಗಳು ಗಂಟೆಗೆ 5 ರಿಂದ 199 ಕಿಲೋಮೀಟರ್​ ವರೆಗಿನ ವೇಗವನ್ನು ತೋರಿಸುತ್ತವೆ. ಡಿಸ್​ಪ್ಲೇಗಳ ಪತ್ತೆ ವ್ಯಾಪ್ತಿಯು 5 ರಿಂದ 300 ಮೀಟರ್ ಆಗಿರುತ್ತದೆ ಮತ್ತು ಪ್ರದರ್ಶನ ಗೋಚರತೆ 300 ಮೀಟರ್‌ಗಳಿಗಿಂತ ಹೆಚ್ಚು ಇರಲಿದೆ. ವರದಿಗಳ ಪ್ರಕಾರ, ಅತಿವೇಗದ ವಾಹನಗಳಿಗೆ ಕೆಂಪು ಮುಖದ ಎಮೋಜಿ ಮತ್ತು ವೇಗದ ಮಿತಿಯಲ್ಲಿ ಚಾಲನೆ ಮಾಡುವ ವಾಹನಗಳಿಗೆ ಹಸಿರು ಎಮೋಜಿಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ವರದಿಯಾಗಿದೆ.

ಟ್ರಾಫಿಕ್ ಕಣ್ಗಾವಲುಗಾಗಿ 12 ಪ್ರಮುಖ ಸ್ಥಳಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ PTZ ಕ್ಯಾಮೆರಾಗಳನ್ನು ಅಳವಡಿಸಲು ಸಂಚಾರ ಪೊಲೀಸರು ಯೋಜಿಸಿದ್ದಾರೆ. ಮೂರು ಡ್ರೋನ್‌ಗಳನ್ನು ಸಹ ಬಳಸಲಾಗುವುದು ಮತ್ತು ಇನ್ನೂ ಐದು ಡ್ರೋನ್‌ಗಳನ್ನು ಶೀಘ್ರದಲ್ಲೇ ಖರೀದಿಸಲಾಗುವುದು ಎಂದು ಪೊಲೀಸರು ಹೇಳಿರುವುದಾಗಿ ವರದಿ ತಿಳಿಸಿದೆ.

Shwetha M