ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ – ಸರ್ಪಗಳ ಪೂಜೆ ಹಿಂದಿದೆ ರೋಮಾಂಚನಗೊಳಿಸುವ ಪುರಾಣ

ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ – ಸರ್ಪಗಳ ಪೂಜೆ ಹಿಂದಿದೆ ರೋಮಾಂಚನಗೊಳಿಸುವ ಪುರಾಣ

ನಮ್ಮ ಸನಾತನ ಧರ್ಮದಲ್ಲಿ ದೇವರನ್ನು ಸಮಗ್ರ ರೂಪದಲ್ಲಿ ಕಾಣುವ ಸಂಪ್ರದಾಯವಿದೆ. ಈ ಕಾರಣಕ್ಕಾಗಿ, ನಾವು ದೇವರನ್ನು ಪ್ರತಿಯೊಂದು ವಸ್ತುವಿನಲ್ಲಿ, ಗಿಡ – ಮರಗಳಲ್ಲಿ, ಜೀವಿಗಳಲ್ಲಿ ನೋಡುತ್ತೇವೆ ಮತ್ತು ಅವುಗಳನ್ನು ಪೂಜಿಸುತ್ತೇವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಅದುವೇ ನಾಗರ ಪಂಚಮಿ ಹಬ್ಬ. ಈ ಹಬ್ಬದಲ್ಲಿ ಸರ್ಪಗಳನ್ನು ದೇವರ ರೂಪವೆಂದು ಪರಿಗಣಿಸಿ ಪೂಜಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ಊರಿನ ಜಾತ್ರೆಗೆ, ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.

ಈ ಬಾರಿ ನಾಗರ ಪಂಚಮಿ ಹಬ್ಬವನ್ನು 2023 ರ ಆಗಸ್ಟ್ 21 ರಂದು ಅಂದರೆ ಸೋಮವಾರ ಆಚರಿಸಲಾಗುತ್ತಿದೆ.  ನಾಗ ಪಂಚಮಿಯನ್ನು ಶ್ರಾವಣ ಶುಕ್ಲದ ಐದನೇ ದಿನದಂದು ಆಚರಿಸಲಾಗುತ್ತದೆ. ನಾಗ ಪಂಚಮಿಯಂದು ನಾಗದೇವತೆಯೊಂದಿಗೆ ಶಿವನನ್ನು ಪೂಜಿಸುವುದರಿಂದರ ಜೀವನದಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಸೋಮವಾರದಂದು ಪಂಚಮಿ ಬರುವ ಕಾರಣ ಇದರ ಮಹತ್ವ ಹೆಚ್ಚಿದೆ. ಏಕೆಂದರೆ ಈ ದಿನ ಶ್ರಾವಣ ಸೋಮವಾರವಾಗಿದೆ. ಅಂದರೆ ಈ ದಿನ ಶಿವನನ್ನು ಪೂಜಿಸಲಾಗುತ್ತದೆ. ಇದೇ ದಿನ ನಾಗರ ಪಂಚಮಿ ಕೂಡ ಇರುವುದರಿಂದ ಇಬ್ಬರನ್ನೂ ಒಂದೇ ದಿನ ಪೂಜಿಸುವ ಮೂಲಕ ಭಕ್ತರು ಇಬ್ಬರ ಆಶೀರ್ವಾದವನ್ನು ಪಡೆಯುತ್ತಾರೆ.

ನಾಗ ಪಂಚಮಿಯಂದು ಜನರು ಹಾವಿನ ಮೂರ್ತಿಯನ್ನು ಪೂಜಿಸುತ್ತಾರೆ. ನಮಗೆ ಮತ್ತು ನಮ್ಮ ಕುಟುಂಬಕ್ಕೆ ನೋವುಂಟು ಮಾಡದಂತೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಆಶೀರ್ವದಿಸುವಂತೆ ಪ್ರಾರ್ಥಿಸುತ್ತಾರೆ. ನಾಗರ ಪಂಚಮಿ ಹಬ್ಬದ ದಿನದಂದು ಬೆಳಗ್ಗೆ ಸ್ನಾನ ಮಾಡಿ ಶುದ್ಧಿಯಾದ ನಂತರ ಲೋಹದ ಜೋಡಿ ಹಾವುಗಳನ್ನು (ಚಿನ್ನ, ಬೆಳ್ಳಿ ಅಥವಾ ತಾಮ್ರ) ಪೂಜಿಸಬೇಕು. ಧೂಪ, ದೀಪ, ನೈವೇದ್ಯ ಇತ್ಯಾದಿಗಳಿಂದ ಅಥವಾ ಷೋಡಶೋಪಚಾರದಿಂದ ಕೂಡ ಪೂಜೆಯನ್ನು ಮಾಡಬಹುದು. ಇದಾದ ನಂತರ ‘ಸರ್ಪಸೂಕ್ತ’ದಿಂದ ಪ್ರತಿಷ್ಠಾಪಿಸಲ್ಪಟ್ಟ ನಾಗಗಳಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು. ಪವಿತ್ರೀಕರಣದ ನಂತರ, ಕೆಲ ಮಂತ್ರಗಳನ್ನು ಪಠಿಸಬೇಕು.

ಇನ್ನು ನಾಗರ ಪಂಚಮಿಗೆ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ ಎಂಬ ನಂಬಿಕೆ ಇದೆ.

ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಕೆಲ ಮಾಹಿತಿಗಳು ಸಿಗುತ್ತದೆ. ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಆತನ ಒಂದು ಕಥೆಯನ್ನು ಹೇಳುತ್ತಾನೆ. ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ. ನಾಗರಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ.

suddiyaana