ಭೂಮಿಯಿಂದ ದೂರ ಹೋಗುತ್ತಿದ್ದಾನೆ ಚಂದ್ರ – ಸಂಶೋಧನೆಯಲ್ಲಿ ಬಯಲಾಯ್ತು ಅಂತರದ ಸತ್ಯ

ಭೂಮಿಯಿಂದ ದೂರ ಹೋಗುತ್ತಿದ್ದಾನೆ ಚಂದ್ರ – ಸಂಶೋಧನೆಯಲ್ಲಿ ಬಯಲಾಯ್ತು ಅಂತರದ ಸತ್ಯ

ಜಗತ್ತಿನಲ್ಲಿ ಪ್ರತಿಯೊಂದು ಸೃಷ್ಟಿಯ ಹಿಂದೆ ಹಲವಾರು ಸಿದ್ಧಾಂತಗಳು ಇವೆ. ಹಾಗೇ ಚಂದ್ರನ ಹುಟ್ಟಿನ ಬಗ್ಗೆಯೂ ಒಂದಿಷ್ಟು ಥಿಯರಿಗಳು ಹುಟ್ಟಿಕೊಂಡಿವೆ. 4.5 ಶತಕೋಟಿ ವರುಷಗಳ ಹಿಂದೆ ಅಂದರೆ ಸೌರಮಂಡಲದ ಸೃಷ್ಟಿಯ ನಂತರ ಅಂದಾಜು 50 ಕೋಟಿ ವರುಷಗಳ ಅವಧಿಯಲ್ಲಿ ಥಿಯಾ ಎಂಬ ಮಂಗಳ ಗಾತ್ರದ ಗ್ರಹವೂ ಮತ್ತು ಆರಂಭಿಕ ಭೂಮಿ ಅಂದರೆ ಯಂಗ್ ಅರ್ಥ್ ನಡುವಿನ ಘರ್ಷಣೆಯಿಂದ ಚಿಮ್ಮಿದ ವಸ್ತುವಿನಿಂದ ಚಂದ್ರನು ರೂಪುಗೊಂಡಿದ್ದಾನೆ ಎಂಬ ಒಂದು ಸಿದ್ಧಾಂತವೂ ಖಗೋಳ ವಲಯದಲ್ಲಿ ಜಾಸ್ತಿ ಜನಪ್ರಿಯದಲ್ಲಿದೆ.

ಭೂಮಿಯ ಮೇಲಿನ ಜೀವನವನ್ನ ಕಿಕ್ ಆಫ್ ಮಾಡುವಲ್ಲಿ ಚಂದ್ರನ ಪಾತ್ರ ಬಹಳಷ್ಟು ದೊಡ್ಡದು. ಹಾಗಾಗಿಯೇ ಚಂದ್ರನಿಗೆ ಭೂಮಿಯಲ್ಲಿ ವಿಶಿಷ್ಟ ಸ್ಥಾನ. ನಮ್ಮ ನಿದ್ರೆಯ ಚಕ್ರದಿಂದ ಹಿಡಿದು, ಖುತುಗಳ ಬದಲಾವಣೆ, ಹಾಗೇ ಸಮುದ್ರದಲ್ಲಿ ಉಂಟಾಗುವ ಉಬ್ಬರವಿಳಿತದಲ್ಲೂ ಚಂದ್ರನ ಅಸ್ತಿತ್ವವಿದೆ. ಹಾಗೇ ಚಂದ್ರನು ಭೂಮಿಯ ಸುತ್ತ ಸುತ್ತಲು ಒಂದು ಕಾರಣವಿದೆ. ಅದೂ ನಮ್ಮ ಗ್ರಹದ ಗುರುತ್ವಾಕರ್ಷಣ ಶಕ್ತಿಯಿಂದ ಎಳೆಯಲ್ಪಟ್ಟಿದೆ ಮತ್ತು  ಚಂದ್ರನು ತನ್ನ ಗುರುತ್ವಾಕರ್ಷಣ ಶಕ್ತಿಯಿಂದ ಭೂಮಿಯನ್ನ ಎಳೆಯುತ್ತಾನೆ. ಆದರೆ ಇತ್ತೀಚಿಗೆ ಹೊರಬಂದ ಹೊಸ ಸಂಶೋಧನೆಯ ಪ್ರಕಾರ ಚಂದ್ರನು ಭೂಮಿಯ ಹಿಡಿತದಿಂದ ಜಾರಿಕೊಳ್ಳುತ್ತಾ ಇದ್ದಾನೆ ಅಂದರೇ ಚಂದ್ರನು ಭೂಮಿಯಿಂದ ದೂರ ಹೋಗುತ್ತಾ ಇದ್ದಾನೆ.

ಇದನ್ನೂ ಓದಿ : 1986ರಲ್ಲಿ ನಾಪತ್ತೆಯಾಗಿದ್ದ ಪರ್ವತಾರೋಹಿಯ ಶವ ಪತ್ತೆ – 37 ವರ್ಷಗಳ ಬಳಿಕ ಮೃತದೇಹ ಪತ್ತೆಯಾಗಿದ್ದು ಎಲ್ಲಿ?

ಹಳೆಯ ಸಂಶೋಧನೆಗಳ ಪ್ರಕಾರ 2.46 ಶತಕೋಟಿ ವರ್ಷಗಳ ಹಿಂದೆ ಚಂದ್ರನು ಭೂಮಿಗೆ 60,000 ಕಿಲೋಮೀಟರ್ ಹತ್ತಿರದಲ್ಲಿದ್ದನು. ಹಾಗಾಗಿ ಭೂಮಿಯ ಆರಂಭದ ದಿನಗಳಲ್ಲಿ ಒಂದು ದಿನವೆಂದರೇ 17 ಗಂಟೆಗಳಾಗಿತ್ತು. ಭೂಮಿಯೂ ಚಂದ್ರನಿಗೆ ಹತ್ತಿರವಿದ್ದುದರಿಂದ ಮತ್ತು ತನ್ನ ವೇಗದ ತಿರುಗುವಿಕೆಯಿಂದ ಆ ಕಾಲದಲ್ಲಿ ಭೂಮಿಯೂ ಎರಡು ಸೂರ್ಯೋದಯ ಮತ್ತು ಎರಡು ಸೂರ್ಯಾಸ್ತಮಾನವನ್ನ ಕೂಡಾ ಕಂಡಿತ್ತು. ಮುಂದೆ ಅಂತರ ಹೆಚ್ಚಾಗುತ್ತಾ ದಿನಕ್ಕೆ ಒಂದು ಸೂರ್ಯೋದಯ ಮತ್ತು ಸೂರ್ಯಾಸ್ತಮಾನದವರೆಗೂ ಬ್ರಹ್ಮಾಂಡದಲ್ಲಿ ಬದಲಾವಣೆಯಾಗಿತ್ತು ಮತ್ತೂ ಅದುವೇ ಸ್ಥಿರವೆಂದು ನಂಬಲಾಗಿತ್ತು. ಆದರೆ ಈಗ ಚಂದ್ರ ಮತ್ತು ಭೂಮಿಯ ಅಂತರ ಹೆಚ್ಚುತ್ತಾ ಹೋಗುತ್ತಿದೆ ಎಂಬ ಹೊಸ ಸಂಶೋಧನೆಯೊಂದು ಹೊರಬಿದ್ದಿದೆ. 1969 ರಲ್ಲಿ ಅಪೋಲೋ ಮಿಷನ್ ಸಂದರ್ಭದಲ್ಲಿ ಪ್ರತಿಫಲಿತ ಫಲಕ ( reflective panels ) ಗಳನ್ನ  ಚಂದ್ರನಲ್ಲಿ ಸ್ಥಾಪಿಸಿದ್ದರು. ರಾಷ್ಟ್ರೀಯ ರೇಡಿಯೋ ಖಗೋಳ ವೀಕ್ಷಣಾಲಯದ (NRAO) ತಜ್ಞರು ಈ ಪ್ರತಿಫಲಿತ ಫಲಕಗಳು ಮತ್ತು ಭೂಮಿಯ ದೂರವನ್ನ ಅಧ್ಯಯನ ಮಾಡಿದಾಗ ಚಂದ್ರನು ಪ್ರತಿ ವರ್ಷಕ್ಕೆ 3.8 ಸೆಂಟಿ ಮೀಟರ್ ನಷ್ಟು ಭೂಮಿಯಿಂದ ದೂರ ಹೋಗುತ್ತಿದ್ದಾನೆ ಎಂದು ಕಂಡುಕೊಂಡಿದ್ದಾರೆ. ಹಾಗಾಗಿ ನಮ್ಮ ದಿನವೂ ಸಣ್ಣ ಮಟ್ಟಿನಲ್ಲಿ ದೀರ್ಘವಾಗುತ್ತಾ ಇದೆಯಂತೆ.

ಅಂದ ಹಾಗೇ ಇಂತದೊಂದು ಬೆಳವಣಿಗೆಗೆ ವೈಜ್ಞಾನಿಕ ವಿವರಣೆ ಇದೆ. ಅದನ್ನ ‘ಮಿಲಂಕೋವಿಚ್ ಚಕ್ರಗಳು’ (Milankovich cycles) ಎಂದು ಕರೆಯಲಾಗುತ್ತಿದೆ. ಮಿಲಂಕೋವಿಚ್ ಚಕ್ರಗಳು ಸೂರ್ಯನ ಸುತ್ತವಿರುವ ಭೂಮಿಯ ಕಕ್ಷೆಯಲ್ಲಿ ಸಂಭವಿಸುವ ಸಣ್ಣ ಬದಲಾವಣೆಗಳು, ಗ್ರಹವು ಪಡೆಯುವ ಸೂರ್ಯನ ಬೆಳಕನ್ನು ಬದಲಾಯಿಸುತ್ತದೆ. ಮಿಲಂಕೋವಿಚ್ ಚಕ್ರಗಳು ಈ ಹಿಂದೆ ಸಹರಾ ಮರುಭೂಮಿಯಲ್ಲಿ ಹಸಿರೀಕರಣದ ಅವಧಿಗೆ ಕಾರಣವಾಗಿತ್ತು ಮತ್ತು ಅವುಗಳ ಶಕ್ತಿಗಳು ಭೂಮಿಯ ಮೇಲಿನ ಸರೋವರಗಳ ಗಾತ್ರದ ಮೇಲೆ ಪ್ರಭಾವ ಬೀರುತ್ತವೆ ಎಂದು ತಿಳಿದುಬಂದಿದೆ. ಚಂದ್ರ ಮತ್ತು ಭೂಮಿಯ ನಡುವಿನ ಅಂತರವನ್ನು ಅಧ್ಯಯನ ಮಾಡಲು ಸಹ ಮಿಲಂಕೋವಿಚ್ ಚಕ್ರದ ಕಾನ್ಸೆಪ್ಟ್ ಬಳಕೆ ಮಾಡುತ್ತಾರೆ.

ಇದೂ ಭೂಮಿಯ ಹವಾಮಾನದ ಮೇಲೆ ಪ್ರಭಾವ ಬೀರುತ್ತದೆ. ಈ ಚಕ್ರಗಳ ಪರಿಣಾಮವನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕಾಗಿದ್ದರೂ, ಭೂಮಿಯ ಮೇಲೆ ಅದು ಬೀರಬಹುದಾದ ಗಮನಾರ್ಹ ಪರಿಣಾಮವೆಂದರೆ ಉಬ್ಬರವಿಳಿತದ ಬದಲಾವಣೆಗಳು. ಭೂಮಿಯ ಸಾಗರಗಳ ಮೇಲೆ ಚಂದ್ರನ ಗುರುತ್ವಾಕರ್ಷಣೆಯ ಎಳೆತವು ಉಬ್ಬರವಿಳಿತಗಳನ್ನು ಸೃಷ್ಟಿಸುತ್ತದೆ. ಆದರೆ ಚಂದ್ರನು ಭೂಮಿಯಿಂದ ಮತ್ತಷ್ಟು ದೂರ ಸರಿದಂತೆ, ಈ ಎಳೆತದ ಬಲವು ಕಡಿಮೆಯಾಗುತ್ತದೆ, ಇದು ಉಬ್ಬರವಿಳಿತದ ಮಾದರಿಗಳನ್ನು ಅವಲಂಬಿಸಿರುವ ಹಡಗು ಮತ್ತು ಮೀನುಗಾರಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಹಾಗಂತ ಚಂದ್ರನು ಭೂಮಿಯಿಂದ ದೂರ ಸರಿಯುತ್ತಿರುವ ವಿದ್ಯಮಾನವೂ ಇತ್ತೀಚಿನದ್ದಾ ಎನ್ನುವ ಕುರಿತಾಗಿ ಇನ್ನಷ್ಟೇ ಅಧ್ಯಯನವಾಗಬೇಕಾಗಿದೆ. ಏನಿದ್ದರೂ ಇದರ ಪರಿಣಾಮವೂ ಗೋಚರಿಸಲು ಇನ್ನೂ ಶತಕೋಟಿ ವರುಷಗಳು ಬೇಕಾಗಬಹುದು ಎಂಬುದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

suddiyaana