4 ದುಬೈ ಟ್ರಿಪ್.. 47 ಬಾರಿ ಲಾಗ್‌ಇನ್! – ಮಹುವಾ ಉಚ್ಛಾಟನೆ ಅಸಲಿಯತ್ತೇನು?
ಮಹುವಾ ಮೊಯಿತ್ರಾ..ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಅತ್ಯಂತ ಪವರ್ಫುಲ್ ಲೀಡರ್. ಸಂಸದರಾಗಿದ್ದ ಮಹುವಾ ಮೊಯಿತ್ರಾ ರಗಡ್ ಮಾತಿನಲ್ಲೇ ಸಂಚಲನ ಸೃಷ್ಟಿಸುತ್ತಿದ್ರು. ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೆರೆಯುತ್ತಿದ್ರು. ಅದ್ರಲ್ಲೂ ಅದಾನಿ ವಿಚಾರದಲ್ಲಂತೂ ಮೊಹುವಾ ಮೊಯಿತ್ರಾ ನೀಡಿರೋ ಸ್ಟೇಟ್ಮೆಂಟ್ಗಳು ಭಾರಿ ಸದ್ದು ಮಾಡಿತ್ತು. ಆದ್ರೀಗ ಮಹುವಾ ಮೊಯಿತ್ರಾ ತಮ್ಮ ಸಂಸದ ಸ್ಥಾನವನ್ನೇ ಕಳೆದುಕೊಂಡಿದ್ದಾರೆ. ಸಂಸದ ಸ್ಥಾನದಿಂದ ಉಚ್ಛಾಟನೆಗೊಂಡಿದ್ದಾರೆ. ಸಂಸತ್ನಿಂದ ಮಹುವಾ ಮೊಯಿತ್ರಾರನ್ನ ಹೊರಕ್ಕೆ ಹಾಕಲಾಗಿದೆ. ಸದ್ಯಕ್ಕೆ ಮೊಹುವಾ ಮೊಯಿತ್ರಾಗೆ ಸಂಸತ್ ಪ್ರವೇಶ ಇಲ್ಲ. ಅಷ್ಟಕ್ಕೂ ಟಿಎಂಸಿ ಸಂಸದೆ ವಿಚಾರದಲ್ಲಿ ಆಗಿದ್ದೇನು? ಉಚ್ಛಾಟನೆಗೆ ನಿಜವಾದ ಕಾರಣವೇನು? ತಮ್ಮನ್ನ ಉಚ್ಛಾಟನೆ ಮಾಡಿರೋದಕ್ಕೆ ಟಿಎಂಸಿ ನಾಯಕಿ ಹೇಳಿರೋದೇನು? ಮಹುವಾ ಮೊಯಿತ್ರಾ ಮುಂದಿರುವ ಆಪ್ಷನ್ಗಳೇನು? ಅವರ ಮುಂದಿನ ನಡೆ ಏನಿರಬಹುದು? ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪ್ರಶ್ನೆಗಾಗಿ ನಗದು ಪ್ರಕರಣ – ಮಹುವಾ ಮೊಯಿತ್ರಾ ಸಂಸತ್ತಿನಿಂದ ಉಚ್ಚಾಟನೆ
ಕೆಲ ತಿಂಗಳ ಹಿಂದೆ ಮಹುವಾ ಮೊಯಿತ್ರಾ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ಸಂಸತ್ನಲ್ಲಿ ಪ್ರಶ್ನೆ ಕೇಳೋದಕ್ಕೆ ಹಣ ಪಡೆದಿದ್ದಾರೆ ಅನ್ನೋದು. ಕ್ಯಾಶ್ ಫಾರ್ ಕ್ವಾರಿ. ಮೊಹುವಾ ಮೊಯಿತ್ರಾ ಹಣ ಪಡೆದು ಸಂಸತ್ನಲ್ಲಿ ಪ್ರಶ್ನೆಗಳನ್ನ ಕೇಳಿದ್ದಾರೆ ಅನ್ನೋ ಆರೋಪದಲ್ಲಿ ತಗ್ಲಾಕ್ಕೊಂಡಿದ್ರು. ಇದಕ್ಕೆ ಸಂಬಂಧಿಸಿ ತನಿಖೆ ನಡೆಸೋಕೆ ಸಂಸತ್ ನೈತಿಕ ಸಮಿತಿಯೊಂದನ್ನ ರಚಿಸಲಾಗಿತ್ತು. ಈ ಸಮಿತಿ ತನಿಖೆ ನಡೆಸಿ, ನೀಡಿರುವ ವರದಿ ಆಧಾರದ ಮೇರೆಗೆ ಮೊಹುವಾ ಮೊಯಿತ್ರಾರನ್ನ ಸಂಸದ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ. ಆದ್ರೆ ಈ ಇಡೀ ಪ್ರಹಸನಕ್ಕೆ ಸಂಬಂಧಿಸಿ ಈಗ ದೊಡ್ಡ ಹೈಡ್ರಾಮವೇ ಶುರುವಾಗಿದೆ.
ಇಡೀ ಪ್ರಹಸನ ಆರಂಭವಾಗಿದ್ದು 2023ರ ಅಕ್ಟೋಬರ್ 14ರಂದು. ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೆಹದ್ರಾಯಿ ತನಿಖಾ ಸಂಸ್ಥೆ ಸಿಬಿಐಗೆ ಒಂದು ದೂರು ನೀಡ್ತಾರೆ. ಮತ್ತು ದೂರಿನ ಕಾಪಿಯನ್ನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೀಡಿ, ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ವಿಚಾರವನ್ನ ಪ್ರಸ್ತಾಪಿಸುವಂತೆ ಮನವಿ ಮಾಡ್ತಾರೆ. ಇಲ್ಲಿ ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೆಹದ್ರಾಯಿ ದೂರು ನೀಡಿರೋದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ. ಈ ದೂರಿನ ಆಧಾರದ ಮೇಲೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಲೋಕಸಭೆಯಲ್ಲಿ ಮಾತನಾಡ್ತಾರೆ. ಮೊಹುವಾ ಮೊಯಿತ್ರಾ ದುಬೈ ಮೂಲದ ಉದ್ಯಮಿ ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ. ಹಣ ಮತ್ತು ಬೆಲೆ ಬಾಳುವ ಗಿಫ್ಟ್ಗಳನ್ನ ಪಡೆದು ಮೋದಿ ಸರ್ಕಾರ ಮತ್ತು ಅದಾನಿ ವಿರುದ್ಧ ಸಂಸತ್ನಲ್ಲಿ ಪ್ರಶ್ನೆಗಳನ್ನ ಕೇಳಿದ್ದಾರೆ. ಮೊಹುವಾ ಮೊಯಿತ್ರಾ ಮೋದಿ ಸರ್ಕಾರದ ವಿರುದ್ಧ ಕ್ರಿಮಿನಲ್ ಪಿತೂರಿ ಮಾಡಿದ್ದಾರೆ. ಸಂಸದೀಯ ಸವಲತ್ತನ್ನ ಉಲ್ಲಂಘಿಸಿದ್ದಾರೆ ಅಂತಾ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಬಾಂಬ್ ಸಿಡಿಸ್ತಾರೆ. ಈ ವಿಚಾರವಾಗು ದುಬೆ ದೂರ ಕೂಡ ನೀಡ್ತಾರೆ. ನಂತರ ಮೊಹುವಾ ಮೊಯಿತ್ರಾ ವಿರುದ್ಧದ ಆರೋಪದ ತನಿಖೆ ನಡೆಸೋಕೆ ಅಂತಾನೆ ನೈತಿಕ ಸಮಿತಿಯನ್ನ ರಚಿಸಲಾಗುತ್ತೆ. ಈ ಸಮಿತಿ ಮೊಹಿತ್ರಾ ವಿರುದ್ಧ ದೂರು ನೀಡಿದ್ದ ವಕೀಲ ಜೈ ಅನಂತ್ ದೆಹದ್ರಾಯಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಮೊಹುವಾ ಮೊಯಿತ್ರಾಗೆ ಸಮನ್ಸ್ ಜಾರಿ ಮಾಡುತ್ತೆ.
ಇವೆಲ್ಲದ್ರ ಮಧ್ಯೆ ಉದ್ಯಮಿ ದರ್ಶನ್ ಹಿರಾನಂದಾನಿ ಇನ್ನೊಂದಷ್ಟು ಸ್ಫೋಟಕ ಅಂಶಗಳನ್ನ ಬಹಿರಂಗಪಡಿಸ್ತಾರೆ. ಮೊಹುವಾ ಮೊಯಿತ್ರಾ ತನ್ನ ಸಂಸದೀಯ ಗುರುತುಗಳನ್ನ ಅಂದ್ರೆ ಸಂಸತ್ ಸದಸ್ಯರಿಗೆ ನೀಡಲಾಗುವ ವೆಬ್ ಪೋರ್ಟಲ್ ವಿಳಾಸ, ಅದ್ರ ಲಾಗ್ ಇನ್ ಐಡಿ, ಪಾಸ್ವರ್ಡ್ ಇವೆಲ್ಲವನ್ನೂ ನನ್ನ ಜೊತೆ ಶೇರ್ ಮಾಡಿದ್ದಾರೆ ಅಂತಾ ದರ್ಶನ್ ಹಿರಾನಂದಾನಿ ಹೇಳ್ತಾರೆ. ನಿಮಗೆ ಗೊತ್ತಿರಲಿ, ಯಾವಾಗಲೂ ಸಂಸತ್ ಸದಸ್ಯರು ಕೇಳುವ ಪ್ರಶ್ನೆ ಬಗ್ಗೆ ಸ್ಪೀಕರ್ಗೆ ಮೊದಲೇ ಮಾಹಿತಿ ಇರುತ್ತೆ. ಆ ಪ್ರಶ್ನೆಯನ್ನ ತಮಗೆ ನೀಡಲಾಗುವ ವೆಬ್ ಪೋರ್ಟಲ್ ಮೂಲಕ ಸಂಸದರು ಸ್ಪೀಕರ್ಗೆ ಕಳುಹಿಸ್ತಾರೆ. ಆದ್ರೆ ಮಹುವಾ ಮೊಯಿತ್ರಾ ತಮ್ಮ ವೆಬ್ ಪೋರ್ಟಲ್ ಲಾಗ್ ಇನ್ ಐಡಿ, ಪಾಸ್ವರ್ಡ್ನ್ನ ದರ್ಶನ್ ಹಿರಾನಂದಾನಿ ಜೊತೆ ಹಂಚಿಕೊಂಡಿದ್ರಿಂದ ಖುದ್ದು ಹಿರಾನಂದನಿ ಮೋದಿ ಸರ್ಕಾರ ಮತ್ತು ಅದಾನಿ ವಿರುದ್ಧ ಮಹುವಾ ಮೊಯಿತ್ರಾ ಐಡಿ ಮೂಲಕ ಪ್ರಶ್ನೆಗಳನ್ನ ಸ್ಪೀಕರ್ಗೆ ಕಳುಹಿಸಬಹುದಾಗಿತ್ತು. ಈ ವಿಚಾರವನ್ನ ಹಿರಾನಂದನಿಯೇ ಒಪ್ಪಿಕೊಂಡಿದ್ದು, ಹೌದು ನಾನು ದುಬೈನಲ್ಲಿದ್ದುಕೊಂಡು ಮಹುವಾ ಮೊಯಿತ್ರಾ ಐಡಿ ಮೂಲಕ ಪ್ರಶ್ನೆಗಳನ್ನ ಕಳುಹಿಸಿದ್ದೇನೆ ಅಂತಾ ಸಂಸತ್ ನೈತಿಕ ಸಮಿತಿ ಮುಂದೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
2019 ರಲ್ಲಿ ಸಂಸದರಾದ ಬಳಿಕ ಮೊಯಿತ್ರಾ ಕೇಂದ್ರ ಸರ್ಕಾರಕ್ಕೆ ಸುಮಾರು 61 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪೈಕಿ 50 ಪ್ರಶ್ನೆಗಳು ಗೌತಮ್ ಅದಾನಿ ಅವರ ವ್ಯವಹಾರ, ಸರ್ಕಾರದೊಂದಿಗಿನ ಒಪ್ಪಂದದ ಬಗ್ಗೆಯೇ ಆಗಿತ್ತು. ತಮ್ಮ ಕ್ಷೇತ್ರದ ಬಗ್ಗೆ ಮಹುವಾ ಮೊಯಿತ್ರಾ ಒಂದೇ ಒಂದು ಪ್ರಶ್ನೆ ಕೇಳಿರಲಿಲ್ಲ. ಹಾಗೆಯೇ 2019ರ ಜನವರಿ 1ರಿಂದ 2023 ಸೆಪ್ಟೆಂಬರ್ 30ರ ಅವಧಿಯಲ್ಲಿ ಮೊಯಿತ್ರಾ ದುಬೈ ಮತ್ತು ಯುಎಇಗೆ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಈ ವೇಳೆ ದುಬೈನಿಂದಲೇ ಮೊಯಿತ್ರಾರ ಸಂಸದೀಯ ವೆಬ್ ಪೋರ್ಟಲ್ ಲಾಗ್ ಇನ್ ಐಡಿಯನ್ನ 47 ಬಾರಿ ಆಪರೇಟ್ ಮಾಡಲಾಗಿದ್ಯಂತೆ. ಆದ್ರೆ, ಮಹುವಾ ಮೊಯಿತ್ರಾ ಮಾತ್ರ ತಮ್ಮ ವಿರುದ್ಧದ ಆರೋಪಗಳನ್ನ ಡೇ ವನ್ನಿಂದಲೂ ತಳ್ಳಿ ಹಾಕ್ತಾನೆ ಇದ್ರು. ಆದ್ರೆ ಈ ಬಗ್ಗೆ ತನಿಖೆಗೆ ರಚನೆಯಾಗ ಸಂಸತ್ನ ನೈತಿಕ ಸಮಿತಿ ಅಕ್ಟೋಬರ್ 31ಕ್ಕೆ ತಮ್ಮ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸಂಸದೆ ಮೊಯಿತ್ರಾಗೆ ಸಮನ್ಸ್ ಜಾರಿ ಮಾಡಿತ್ತು. ಆದ್ರೆ ಮೊಯಿತ್ರಾ ಮಾತ್ರ ಅಂದು ತಮಗೆ ಬಂದ ಸಮನ್ಸ್ನ್ನ ಧಿಕ್ಕರಿಸಿದ್ರು, ನೈತಿಕ ಸಮಿತಿ ಮುಂದೆ ಹಾಜರಾಗಲೇ ಇಲ್ಲ. ನನಗೆ ನೀಡಲಾಗಿದ್ದ ಸಮನ್ಸ್ ನನ್ನ ಬಳಿಗೆ ತಲುಪೋ ಮುನ್ನ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಸಮಿತಿಯ ಮುಖ್ಯಸ್ಥರು ಮಾಧ್ಯಮದಲ್ಲೇ ಸಮನ್ಸ್ನ್ನ ಅನೌನ್ಸ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ದೂರಿನ ಪತ್ರ ಮತ್ತು ಅಫಿಡವಿಟ್ ನನ್ನ ಬಳಿಗೆ ತಲುಪೋ ಮುನ್ನ ವೇ ಮಾಧ್ಯಮಗಳಲ್ಲಿ ಲೀಕ್ ಆಗಿವೆ. ಅದಾನಿ ಗ್ರೂಪ್ನ್ನ ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಮಾಡಲಾಗಿರೋ ಷಡ್ಯಂತ್ರ ಅನ್ನೋದಕ್ಕೆ ಇವೇ ಸಾಕ್ಷಿ ಅಂತಾ ಹೇಳಿ ನೈತಿಕ ಸಮಿತಿಯ ಸಮನ್ಸ್ನ್ನ ಮಹುವಾ ಮೊಯಿತ್ರಾ ಧಿಕ್ಕರಿಸಿದ್ರು.
ನಂತರ ನವೆಂಬರ್ 2ರಂದು ನೈತಿಕ ಸಮಿತಿ ಮುಂದೆ ಹಾಜರಾಗೋಕೆ ಮಹುವಾ ಮೊಯುತ್ರಾ ಒಪ್ಪಿಕೊಳ್ತಾರೆ. ಅದ್ರೆ ಸಭೆಯ ಮಧ್ಯದಲ್ಲೇ ಹೊರ ನಡೀತಾರೆ. ಬಳಿಕ, ಸಮಿತಿ ಸದಸ್ಯರ ಪ್ರಶ್ನೆ ವನ್ ಸೈಡೆಡ್ ಆಗಿದ್ವು. ನನ್ನನ್ನ ಸಿಕ್ಕಿಸಿ ಹಾಕಬೇಕು ಅಂತಾ ಉದ್ದೇಶಪೂರ್ವಕವಾಗಿಯೇ ಪ್ರಶ್ನೆಗಳನ್ನ ಕೇಳಿದ್ರು ಅಂತಾ ಸ್ಪೀಕರ್ಗೆ ಪತ್ರ ಬರೀತಾರೆ. ಅತ್ತ ನೈತಿಕ ಸಮಿತಿ ಮಹುವಾ ಮೊಯಿತ್ರಾ ತನಿಖೆಗೆ ಸಹಕರಿಸ್ತಾ ಇಲ್ಲ. ನಾವು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸ್ತಾ ಇಲ್ಲ ಅಂತಾ ಆರೋಪಿಸುತ್ತೆ. ಇದಾಗಿ ನವೆಂಬರ್ 10ರಂದು ಸಂಸತ್ ನೈತಿಕ ಸಮಿತಿ ತನ್ನ 479 ಪುಟಗಳ ವರದಿಯನ್ನ ಸ್ಪೀಕರ್ಗೆ ಸಬ್ಮಿಟ್ ಮಾಡುತ್ತೆ. ಈ ರಿಪೋರ್ಟ್ನಲ್ಲಿ ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಮಹುವಾ ಮೊಯಿತ್ರಾ ಸಂಸತ್ನಲ್ಲಿ ಪ್ರಶ್ನೆಗಳನ್ನ ಕೇಳಿದ್ದಾರೆ ಅಂತಾ ಉಲ್ಲೇಖವಾಗಿರುತ್ತೆ.
ಡಿಸೆಂಬರ್ 8ಕ್ಕೆ ನೈತಿಕ ಸಮಿತಿಯ ವರದಿಯನ್ನ ಸಂಸತ್ನಲ್ಲಿ ಮಂಡಿಸಲಾಗುತ್ತೆ. ಈ ವೇಳೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತೆ. ದೊಡ್ಡ ಹೈಡ್ರಾಮವೇ ನಡೆಯುತ್ತೆ. ಟಿಎಂಸಿ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರು ನೈತಿಕ ಸಮಿತಿಯ ವರದಿ ಮೇಲೆ ಸಂಸತ್ನಲ್ಲಿ ಚರ್ಚೆ ನಡೆಸಬೇಕು ಅಂತಾ ಪಟ್ಟು ಹಿಡಿಯುತ್ತವೆ. ಆದ್ರೆ ಯಾವುದೇ ಚರ್ಚೆಗೆ ಸ್ಪೀಕರ್ ಅವಕಾಶ ಕೊಡೋದಿಲ್ಲ. ಈವನ್ ಆರೋಪಕ್ಕೆ ಒಳಗಾಗಿರುವ ಮಹುವಾ ಮೊಯಿತ್ರಾಗೂ ತಮ್ಮ ಕಡೆಯಿಂದ ಸ್ಪಷ್ಟನೆ ನೀಡೋಕೆ, ತಮ್ಮನ್ನ ತಾವು ಡಿಫೆಂಡ್ ಮಾಡೋಕೆ ಚಾನ್ಸ್ ಸಿಗೋದಿಲ್ಲ. ಅಂತಿಮವಾಗಿ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮಹುವಾ ಮೊಯಿತ್ರಾರನ್ನ ಉಚ್ಛಾಟನೆ ಮಾಡೋಕೆ ಮೋಷನ್ ಮೂವ್ ಮಾಡ್ತಾರೆ. ಧ್ವನಿ ಮೂಲಕ ವೋಟಿಂಗ್ ನಡೆಯುತ್ತೆ. ಅನೈತಿಕ ನಡವಳಿಕೆ ಅನ್ನೋ ಆಧಾರದ ಮೇಲೆ ಮಹುವಾ ಮೊಯಿತ್ರಾರನ್ನ ಸಂಸದ ಸ್ಥಾನದಿಂದ ಉಚ್ಛಾಟನೆ ಮಾಡಲಾಗುತ್ತೆ.
ಆ್ಯಕ್ಚುವಲಿ ಇಲ್ಲಿ ಮಹುವಾ ಮೊಯಿತ್ರಾ ಅನೈತಿಕ ನಡವಳಿಕೆ ಅನ್ನೋದ್ರ ಮೇಲೆ ಉಚ್ಛಾಟನೆಗೊಮಡಿರೋದು. ಇಲ್ಲಿ ಅನೈತಿಕ ಚಟುವಟಿಕೆ ಅಂದ್ರೆ ಮೊಯಿತ್ರಾ ಅವರು ತಮ್ಮ ಲಾಗ್ ಇನ್ ಐಡಿಯನ್ನ ಉದ್ಯಮಿ ಹಿರಾನಂದಾನಿ ಜೊತೆ ಶೇರ್ ಮಾಡಿಕೊಂಡು, ಅವರ ಮೂಲಕ ಸ್ಪೀಕರ್ಗೆ ಪ್ರಶ್ನೆಗಳನ್ನ ಕಳುಹಿಸಿ. ಆ ಪ್ರಶ್ನೆಗಳನ್ನ ಲೋಕಸಭೆಯಲ್ಲಿ ಮೊಯಿತ್ರಾ ಎತ್ತಿದ್ದಾರೆ ಅನ್ನೋ ವಿಚಾರಕ್ಕೆ ಈಗ ಅನೈತಿಕ ನಡವಳಿಕೆ ಅಡಿ ಸಂಸದ ಸ್ಥಾನದಿಂದ ಉಚ್ಛಾಟನೆಗೊಂಡಿದ್ದಾರೆ. ಆದ್ರೆ ಪ್ರಶ್ನೆ ಕೇಳಿರೋದಕ್ಕೆ ಹಣ ಪಡೆದಿದ್ದೇನೆ, ಗಿಫ್ಟ್ ಪಡೆದಿದ್ದೇನೆ ಅನ್ನೋ ಆರೋಪವನ್ನ ನೈತಿಕ ಸಮಿತಿಗೆ ಸಾಬೀತುಪಡಿಸೋಕೆ ಸಾಧ್ಯವಾಗಿಲ್ಲ. ಇದು ಕಾಂಗಾರೂ ಕೋರ್ಟ್ ಜಡ್ಜ್ಮೆಂಟ್ ಅಂತಾ ಆರೋಪಿಸಿದ್ದಾರೆ. ಹಾಗೆಯೇ ಲೋಕಸಭೆಯಲ್ಲಿ ಈ ಬಗ್ಗೆ ನನಗೆ ಮಾತನಾಡೋಕೂ ಅವಕಾಶ ನೀಡಿಲ್ಲ ಅಂತಾ ಕಿಡಿ ಕಾರಿದ್ದಾರೆ. ಈ ಹಿಂದೆ 2005ರಲ್ಲಿ ಯುಪಿಎ ಸರ್ಕಾರವಿದ್ದಾಗ ಹಣಕ್ಕಾಗಿ ಪ್ರಶ್ನೆ ಕೇಳಿದ ಆರೋಪದ ಅಡಿ 10 ಮಂದಿ ಸಂಸದರು ಇದೇ ರೀತಿ ಉಚ್ಛಾಟನೆಗೊಂಡಿದ್ರು. ಆಗಲೂ ಅಷ್ಟೇ, ಯಾವುದೇ ಸಂಸದರಿಗೆ ಮಾತನಾಡೋಕೆ ಅವಕಾಶ ನೀಡಿಲ್ಲ. ಇದೇ ನಿಯಮವನ್ನ ಈಗಲೂ ಪಾಲಿಸಲಾಗಿದೆ ಅಂತಾ ಬಿಜೆಪಿ ನಾಯಕರು ಸಮರ್ಥಿಸಿಕೊಳ್ತಾ ಇದ್ದಾರೆ.
ಇಲ್ಲಿ ಮಹುವಾ ಮೊಯಿತ್ರಾ ವಿಚಾರದಲ್ಲಿ ಇನ್ನೊಂದು ಸಂಗತಿಯನ್ನ ಹೇಳಲೇಬೇಕು. ಈ ಹಿಂದೆ ಮೋದಿ ಸರ್ನೇಮ್ ವಿಚಾರದಲ್ಲಿ ರಾಹುಲ್ ಗಾಂಧಿಯನ್ನ ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿತ್ತು. ಹೀಗಾಗಿ ರಾಹುಲ್ಗೆ ಸುಮಾರು 8 ವರ್ಷಗಳ ಕಾಲ ಸಂಸತ್ ಪ್ರವೇಶಿಸೋದು ಬಿಡಿ ಚುನಾವಣೆಗೆ ಸ್ಪರ್ಧಿಸೋಕೆ ಅವಕಾಶವಿರಲಿಲ್ಲ. ಆದ್ರೆ, ಬಳಿಕ ಹೈಕೋರ್ಟ್ ರಾಹುಲ್ ಅನರ್ಹತೆ ಆದೇಶವನ್ನ ರದ್ದು ಮಾಡಿತ್ತು. ಈಗ ಮತ್ತೆ ಸಂಸದ ಸ್ಥಾನವನ್ನ ರಾಹುಲ್ ಮರಳಿ ಪಡೆದಿದ್ದಾರೆ. ಆದ್ರೆ ಇಲ್ಲಿ ಮಹುವಾ ಮೊಯಿತ್ರಾ ಅನರ್ಹರಾಗಿಲ್ಲ. ಅವರನ್ನ ಸಂಸದ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ. ಅಂದ್ರೆ ಈ ಲೋಕಸಭಾ ಅವಧಿಗಷ್ಟೇ ಮಹುವಾ ಮೊಹೊತ್ರಾ ಸಂಸತ್ ಪ್ರವೇಶಿಸುವಂತಿಲ್ಲ. ಆದ್ರೆ ಚುನಾವಣೆಗೆ ಸ್ಪರ್ಧಿಸೋಕೆ ಯಾವುದೇ ಅಡ್ಡಿಯಾಗೋದಿಲ್ಲ. ಇನ್ನು 5 ತಿಂಗಳುಗಳಲ್ಲಿ ನಡೆಯೋ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ, ಗೆದ್ರೆ ಸಂಸತ್ ಪ್ರವೇಶಿಸಬಹುದು.
ಅಂತೂ ಗೌತಮ್ ಅದಾನಿ ವಿಚಾರವನ್ನ ಎತ್ತಿ ಮೋದಿ ಸರ್ಕಾರದ ವಿರುದ್ಧ ಪದೇ ಪದೆ ಗುಡುಗುತ್ತಿದ್ದ ಮಹುವಾ ಮೊಯಿತ್ರಾ ಸದ್ಯಕ್ಕಂತೂ ಸಂಸತ್ನಲ್ಲಿ ಸದ್ದು ಮಾಡೋಕೆ ಆಗೋದಿಲ್ಲ. ಇಷ್ಟು ದಿನ ಲೋಕಸಭೆಯಲ್ಲಿ ಹೋರಾಡುತ್ತಿದ್ದ ಉಚ್ಛಾಟಿತ ಸಂಸದೆ ಇನ್ನೀಗ ಕೋರ್ಟ್ನಲ್ಲಿ ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ. ಮಹುವಾ ಮೊಯಿತ್ರಾ ಸಂಸದ ಸ್ಥಾನ ಕಳೆದುಕೊಂಡಿರೋದ್ರಿಂದ ಬಿಜೆಪಿ ನಾಯಕರಂತೂ ಸದ್ಯಕ್ಕೆ ಸ್ವಲ್ಪ ನಿಟ್ಟುಸಿರು ಬಿಟ್ಟಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ.