ಭಾರತದ ಮೊದಲ ಮಹಿಳಾ ಮಾವುತೆ ಪದ್ಮಶ್ರೀ ಪ್ರಶಸ್ತಿ – ರಾಜವಂಶದಲ್ಲಿ ಹುಟ್ಟಿದ್ರೂ ಮಾವುತೆ ಆಗಿದ್ದು ಯಾಕೆ?
2024ನೇ ಸಾಲಿನ ಪದ್ಮ ಪ್ರಶಸ್ತಿಯ ಗೌರವ 132 ಮಂದಿಗೆ ಘೋಷಣೆ ಮಾಡಲಾಗಿದೆ. ಈ ಬಾರಿ ಅಪರೂಪದ ಸಾಧಕರೊಬ್ಬರಿಗೆ ಪ್ರಶಸ್ತಿ ಲಭಿಸಿದೆ. ದೇಶದ ಮೊಟ್ಟ ಮೊದಲ ಮಹಿಳಾ ಮಾವುತೆಗೆ ಪದ್ಮ ಪ್ರಶಸ್ತಿ ಸಂದಿದೆ. ‘ಹಸ್ತಿ ಕನ್ಯಾ’ ಎಂದೇ ಪ್ರಸಿದ್ಧಿ ಪಡೆದಿರುವ ಪರ್ಬತಿ ಬರುವಾ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಇವರು ಅಸ್ಸಾಂ ಮೂಲದವರಾಗಿದ್ದಾರೆ.
ಪರ್ಬತಿ ಬರುವಾ ಅವರು ಅಸ್ಸಾಂನ ಜಮೀನ್ದಾರರ ಕುಟುಂಬದಲ್ಲಿ ಜನಿಸಿದ್ದಾರೆ. ಅಸ್ಸಾಂನ ಗೌರಿಪುರದ ರಾಜವಂಶದ ಕುಟುಂಬಕ್ಕೆ ಸೇರಿದ್ದ ಬರುವಾ ಅವರು ಪ್ರಕೃತಿಶ್ ಚಂದ್ರ 9 ಮಕ್ಕಳಲ್ಲಿ ಒಬ್ಬರು. ಬರುವಾ ಅವರು ಬಾಲ್ಯದಿಂದಲೂ ಆನೆ, ಕುದುರೆ ಮುಂತಾದ ದೊಡ್ಡ ದೊಡ್ಡ ಪ್ರಾಣಿಗಳ ಜೊತೆಗೆ ಆಟವಾಡುತ್ತಾ ತಮ್ಮ ಬಾಲ್ಯ ಕಳೆದಿದ್ದಾರೆ. ರಕ್ತಗತವಾಗಿ ತನ್ನಲ್ಲಿ ಬಂದ ತಂದೆಯ ಗುಣಗಳನ್ನೇ ಬೆಳೆಸಿಕೊಂಡು ಹೋದ ಬರುವಾ ಅವರು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾ ಅವುಗಳ ಗುಣಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿತರು. ಆಕೆ ತನ್ನ 14ನೇ ವಯಸ್ಸಿಗೆ ಆನೆಗಳನ್ನು ಪಳಗಿಸುವುದು ಹೇಗೆ ಅಂತಾ ಅರ್ಥ ಮಾಡಿಕೊಂಡಿದ್ದರು. ಇದು ಆಕೆಗೆ ತಂದೆಯಿಂದ ಬಂದ ಬಳುವಳಿ ಎಂದೇ ಹೇಳಬಹುದಾಗಿದೆ.
ಇದನ್ನೂ ಓದಿ: ಮೇರು ಕಲಾವಿದ ಅನಂತ್‌ನಾಗ್ ಅವರಿಗೆ ಈ ಬಾರಿಯೂ ಇಲ್ಲ ಪದ್ಮ ಪ್ರಶಸ್ತಿ – ಕನ್ನಡ ಚಿತ್ರರಂಗದ ಬಗ್ಗೆ ಯಾಕೆ ನಿರ್ಲಕ್ಷ್ಯ?
ಆನೆಗಳ ಮೇಲಿನ ಪ್ರೀತಿಯಿಂದಾಗಿ ಬರುವಾ ಅವರು ಐಷಾರಾಮಿ ಜೀವನವನ್ನು ತ್ಯಜಿಸಿದ್ರು. ರಾಜ ಕುಟುಂಬದಲ್ಲಿ ಜನಿಸಿದ್ದರು ಕೂಡ ಆಕೆ ತನ್ನಾಸೆಯಂತೆ ಬದುಕುವುದಕ್ಕಾಗಿ ದಿಂಬು ಹಾಸಿಗೆ ಇಲ್ಲದ ಟೆಂಟ್‌ನಲ್ಲಿ ಬದುಕಲು ಶುರು ಮಾಡಿದ್ದರು. ಟೂತ್‌ಪೇಸ್ಟ್ ಬದಲಿಗೆ ಬೂದಿ ಬಳಸುವವರೆಗೆ ಆಕೆ ಸರಳ ಜೀವನವನ್ನು ಮೈಗೂಡಿಸಿಕೊಂಡಿದ್ದರು.
ಬರುವಾ ಅವರಿಗೆ ಪರ್ಬತಿ ಎಂಬ ಹೆಸರು ಬರುವುದಕ್ಕೂ ಕಾರಣವಿದೆ. ಆನೆಗಳ ಮೇಲೆ ಈಕೆ ತೋರುತ್ತಿದ್ದ ತಾಯಿಯಂತ ಪ್ರೀತಿಯನ್ನು ನೋಡಿದ ಮೇಲೆ ಜನ ಈಕೆಯನ್ನು ಪರ್ಬತಿ ಎಂದು ಕರೆಯಲು ಶುರು ಮಾಡಿದರು. ಪರ್ಬತಿ ಎಂದರೆ ದೇವ ಗಣೇಶನ ತಾಯಿ ಪಾರ್ವತಿ. ಹಲವು ಕಡೆ ಇವರು ಆನೆಗಳನ್ನು ರಕ್ಷಿಸಿ ಮನುಷ್ಯರು ಹಾಗೂ ಆನೆಗಳ ನಡುವಣ ಸಂಘರ್ಷವನ್ನು ತಪ್ಪಿಸಿದ್ದಾರೆ. 40 ವರ್ಷಗಳ ಹಿಂದೆ ಶುರುವಾದ ಇವರ ಈ ಪ್ರಯಾಣದಲ್ಲಿ ಹಲವರು ಆನೆಗಳನ್ನು ರಕ್ಷಿಸಿ ಪಳಗಿಸಿರುವ ಇವರಿಗೆ ಹಾತಿ ಕಿ ಪಾರಿ ಎಂಬ ಖ್ಯಾತಿಯೂ ಇದೆ.