ಜನವರಿ 22ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ಡ್ರೈ ಡೇ ಆಚರಣೆಗೆ ಆದೇಶ
2024ರ ಜನವರಿ 22. ಈ ದಿನ ಭಾರತದ ಪಾಲಿಗೆ ಐತಿಹಾಸಿಕ ದಿನವಾಗಲಿದೆ. ಕೋಟ್ಯಂತರ ಹಿಂದೂಗಳ ಆರಾಧ್ಯದೈವ ಶ್ರೀರಾಮ ಅಯೋಧ್ಯೆಯ ಗರ್ಭಗುಡಿಯಲ್ಲಿ ವಿರಾಜಮಾನನಾಗಲಿದ್ದಾನೆ. ಮರ್ಯಾದಾ ಪುರುಷೋತ್ತಮನ ಬಾಲರಾಮ ವಿಗ್ರಹ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಶತಕೋಟಿ ಭಾರತೀಯರು ಕಾತುರದಿಂದ ಕಾಯ್ತಿದ್ದಾರೆ. ಜನವರಿ 22ರ ದಿನವನ್ನ ಮತ್ತಷ್ಟು ಮಹತ್ವಪೂರ್ಣವಾಗಿಸಲು ಹಲವು ರಾಜ್ಯಗಳು ರಜೆ ಘೋಷಣೆ ಮಾಡಿವೆ. ಆ ದಿನ ಡ್ರೈ ಡೇ ಆಚರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಕೂಡ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಯಾವ್ಯಾವ ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ ಅನ್ನೋದನ್ನ ನೋಡೋಣ.
ಇದನ್ನೂ ಓದಿ: ಅಯೋಧ್ಯೆಯಲ್ಲಿ 108 ಅಡಿ ಉದ್ದದ ಅಗರಬತ್ತಿಗೆ ಅಗ್ನಿಸ್ಪರ್ಶ – ಒಂದೂವರೆ ತಿಂಗಳು ನಿರಂತರ ಉರಿಯಲಿದೆ ಈ ಅಗರಬತ್ತಿ!
- ಯುಪಿಯ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ರಜೆ, ಮದ್ಯದಂಗಡಿ ಬಂದ್
- ಮಧ್ಯಪ್ರದೇಶದಲ್ಲೂ ಸಿಎಂ ಮೋಹನ್ ಯಾದವ್ ಹಬ್ಬದಂತೆ ಆಚರಿಸಲು ಕರೆ
- ಜನವರಿ 22 ರಂದು ಶಾಲೆಗಳಿಗೆ ರಜೆ ಘೋಷಿಸಿದ್ದು, ಡ್ರೈ ಡೇ ಆಚರಣೆಗೆ ಆದೇಶ
- ಗೋವಾ ಸರ್ಕಾರ ಕೂಡ ಸರ್ಕಾರಿ ನೌಕರರು ಮತ್ತು ಶಾಲೆಗಳಿಗೆ ರಜೆ ಘೋಷಣೆ
- ಛತ್ತೀಸ್‌ಗಢ ರಾಜ್ಯ ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ
- ಹರಿಯಾಣದಲ್ಲೂ ಕೂಡ ಜನವರಿ 22 ರಂದು ಶಾಲೆಗಳನ್ನು ಮುಚ್ಚಲಾಗುತ್ತದೆ
ಉತ್ತರ ಪ್ರದೇಶದ ಅಯೋಧ್ಯೆಯಲ್ಲೇ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಹೀಗಾಗಿ ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಹಾಗೇ ಮದ್ಯದಂಗಡಿಗಳನ್ನು ಸಹ ಮುಚ್ಚಲಾಗುತ್ತದೆ. ಮಧ್ಯಪ್ರದೇಶದಲ್ಲೂ ಮುಖ್ಯಮಂತ್ರಿ ಮೋಹನ್ ಯಾದವ್ ಈ ದಿನವನ್ನು ಹಬ್ಬದಂತೆ ಆಚರಿಸಲು ಕರೆ ನೀಡಿದ್ದಾರೆ. ಜನವರಿ 22 ರಂದು ಶಾಲೆಗಳಿಗೆ ರಜೆ ಘೋಷಿಸಿದ್ದು, ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ಗೋವಾ ಸರ್ಕಾರ ಕೂಡ ಸರ್ಕಾರಿ ನೌಕರರು ಮತ್ತು ಶಾಲೆಗಳಿಗೆ ಜನವರಿ 22 ರಂದು ರಜೆ ಘೋಷಿಸಿದೆ. ಛತ್ತೀಸ್‌ಗಢ ರಾಜ್ಯ ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಎಂದು ಘೋಷಿಸಿದೆ. ಹರಿಯಾಣದಲ್ಲೂ ಕೂಡ ಜನವರಿ 22 ರಂದು ಶಾಲೆಗಳನ್ನು ಮುಚ್ಚಲಾಗುತ್ತದೆ.
ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಕೂಡ ರಜೆಯ ಆಫರ್ ನೀಡಲಾಗಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ವೇಳೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಹಿಂದೂ ನೌಕರರಿಗೆ ಎರಡು ಗಂಟೆಗಳ ಕಾಲ ವಿಶೇಷ ರಜೆ ನೀಡಲು ಮಾರಿಷಸ್ ಸರ್ಕಾರ ನಿರ್ಧರಿಸಿದೆ. ಹಾಗೇ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನೇರ ಪ್ರಸಾರಕ್ಕೆ ಅನುಮತಿ ನೀಡಲಾಗಿದೆ. ಇನ್ನು ಕರ್ನಾಟಕದಲ್ಲೂ ಕೂಡ ಜನವರಿ 22 ರಂದು ರಜೆ ನೀಡುವಂತೆ ಮನವಿ ಸಲ್ಲಿಸಲಾಗಿದೆ.
ಕರ್ನಾಟಕದಲ್ಲೂ ರಜೆ ಘೋಷಿಸಿ!
ರಾಮಮಂದಿರ ಲೋಕಾರ್ಪಣೆ ಐತಿಹಾಸಿಕ ಕ್ಷಣವಾಗಿದ್ದು, ಇದಕ್ಕೆ ಮಕ್ಕಳು ಸಾಕ್ಷಿಯಾಗಬೇಕು. ಇದಕ್ಕಾಗಿ ಹಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅದೇ ರೀತಿ ಜನವರಿ 22ರಂದು ಕರ್ನಾಟಕದಲ್ಲೂ ಶಾಲೆ – ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಆಗ್ರಹಿಸಲಾಗಿದೆ. ಶ್ರೀರಾಮ ಸೇನೆ ಮತ್ತು ಹಲವು ಹಿಂದೂ ಸಂಘಟನೆಗಳು ರಾಜ್ಯಪಾಲರಿಗೆ ಈ ಕುರಿತು ಮನವಿ ಸಲ್ಲಿಸಿವೆ. ಕರ್ನಾಟಕ ಹನುಮನ ನಾಡಾಗಿದೆ. ಜನವರಿ 22ರಂದು ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಒಂದು ಸಂದೇಶವನ್ನು ಸರ್ಕಾರ ಸಾರಬೇಕು. ಆ ಕ್ಷಣವನ್ನು ನಮ್ಮ ಮಕ್ಕಳು ಕಣ್ತುಂಬಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಆ ವೈಭವವನ್ನು ದಾಟಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಿನಿಮಾ, ಕ್ರಿಕೆಟ್ ಸೇರಿದಂತೆ ದೇಶ, ವಿದೇಶಗಳ ಗಣ್ಯ ವ್ಯಕ್ತಿಗಳಿಗೆ ಆಮಂತ್ರಣ ನೀಡಲಾಗಿದೆ. ಅದ್ರಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಒಬ್ಬರು. ಹೀಗಾಗಿ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ಕೂಡ ಒಂದು ದಿನದ ರಜೆ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಭಾರತದ ಅಗ್ರ ಬ್ಯಾಟ್ಸ್‌ಮನ್ ಈಗಾಗಲೇ ಬಿಸಿಸಿಐ ಅನುಮತಿಯನ್ನು ಸಹ ಕೋರಿದ್ದಾರೆ. ಒಟ್ಟಾರೆ ಜನವರಿ 22 ಭಾರತದ ಪಾಲಿಗೆ ಕೇವಲ ಐತಿಹಾಸಿಕ ಕ್ಷಣವಲ್ಲ. ಕೋಟ್ಯಂತರ ಭಾರತೀಯರ ಕನಸು ನನಸಾಗುವ ಕ್ಷಣ. ಈ ಗಳಿಗೆಯನ್ನ ಮತ್ತಷ್ಟು ವಿಶೇಷವಾಗಿಸಲು ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಆದ್ರೆ ಕರ್ನಾಟಕದಲ್ಲಿ ಇನ್ನೂ ನಿರ್ಧಾರ ಕೈಗೊಂಡಿಲ್ಲ.