ಶತಾಯುಷಿ ಅಮ್ಮನಿಗೆ ಪ್ರಧಾನಿ ಮೋದಿಯಿಂದ ಅಂತಿಮ ವಿದಾಯ

ಶತಾಯುಷಿ ಅಮ್ಮನಿಗೆ ಪ್ರಧಾನಿ ಮೋದಿಯಿಂದ ಅಂತಿಮ ವಿದಾಯ

ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್​​ನ ಅಹಮದಾಬಾದ್​ನಲ್ಲಿ ಶುಕ್ರವಾರ ನಿಧನರಾದರು.

ಹೀರಾಬೆನ್ ಅವರಿಗೆ 100 ವರ್ಷ ವಯಸ್ಸಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು  ನಗರದ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಮುಂಜಾನೆ 3.39 ಗಂಟೆಗೆ ನಿಧನರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದ ನಿವಾಸದಲ್ಲಿ ತಾಯಿ ಹೀರಾಬೆನ್ ಅವರಿಗೆ ನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ತಮ್ಮ ಸಹೋದರರೊಂದಿಗೆ ತಾಯಿಯ ಪಾರ್ಥೀವ ಶರೀರವನ್ನು ಹೆಗಲ ಮೇಲೆ ಹೊತ್ತು ಅಂತಿಮ ಯಾತ್ರೆಯಲ್ಲಿ ಸಾಗಿದರು. ಹೀರಾಬೆನ್ ಅವರ ಅಂತ್ಯಕ್ರಿಯೆ ಗಾಂಧಿನಗರದ ಸೆಕ್ಟರ್ 30 ರುದ್ರಭೂಮಿಯಲ್ಲಿ ನಡೆಯಿತು. ಪ್ರಧಾನಿ ಮೋದಿ ಅವರು ತಾಯಿಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.

ತಾಯಿ ನಿಧನದ ಕುರಿತು ಭಾವುಕವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ. ತಾಯಿಯಲ್ಲಿ ತಾನು ಯಾವಾಗಲೂ ಆ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ. ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ ಅಂತ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ತಾಯಿಯ 100 ನೇ ವರ್ಷದ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧತೆಯಿಂದ ಜೀವನ ಮಾಡಿ. ಅಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಜೀವನವನ್ನು ಪರಿಶುದ್ಧತೆಯಿಂದ ಬದುಕಿರಿ, ಎಂದು ಅವರು ಹೇಳಿದ್ದರು ಅಂತ ಪ್ರಧಾನಿ ತಾಯಿಯ ಮಾತುಗಳನ್ನು ಸ್ಮರಿಸಿಕೊಂಡಿದ್ದಾರೆ.

ಹೀರಾಬೆನ್ ಮೋದಿ ಅವರು ಆಸ್ಪತ್ರೆಗೆ ದಾಖಲಾಗಿದ್ದಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ತಮ್ಮ ತಾಯಿಯನ್ನು ಭೇಟಿಯಾಗಲು  ಆಸ್ಪತ್ರೆಗೆ ತೆರಳಿದ್ದರು. ತಾಯಿಯನ್ನು ಭೇಟಿ ಮಾಡಿ, 1 ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಇದ್ದರು.

ಹೀರಾಬೆನ್ ಮೋದಿ ಅವರು ಪ್ರಧಾನಿ ಮೋದಿಯವರ ಕಿರಿಯ ಸಹೋದರ ಪಂಕಜ್ ಮೋದಿ ಜೊತೆ ಗಾಂಧಿನಗರ ಬಳಿಯ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ತಾಯಿಯನ್ನು ತುಂಬಾ ಹಚ್ಚಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗುಜರಾತ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಮ್ಮನನ್ನು ಭೇಟಿಯಾಗಿ, ಜೊತೆಯಲ್ಲೇ ತಿಂಡಿ ತಿಂದು, ಖುಷಿಯಿಂದ ಸಮಯ ಕಳೆದು ಬರುತ್ತಿದ್ದರು.

ಹೀರಾಬೆನ್ ಮೋದಿ ಅವರು 2022ರ ಜೂನ್ 18ರಂದು 100ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರು ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿ ತಾಯಿಗೆ ಶುಭಾಶಯ ತಿಳಿಸಿ, ಆಶೀರ್ವಾದ ಪಡೆದಿದ್ದರು. ತಾಯಿಯ ಪಾದ ತೊಳೆದು ಪೂಜಿಸಿದ್ದರು.

ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ನಿಧನಕ್ಕೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​​, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ತಾಯಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೇನ್ ಮೋದಿ ಅವರ ನೂರು ವರ್ಷಗಳ ಹೋರಾಟದ ಜೀವನವು ಭಾರತೀಯ ಆದರ್ಶಗಳ ಸಂಕೇತವಾಗಿದೆ’ ಎಂದು ಬರೆದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ  ಎಂದಿದ್ದಾರೆ.

suddiyaana