ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿಗಲ್ವಾ ಅನುಮತಿ? – ಕಾರಣ ಏನು ಗೊತ್ತಾ?
ರಾಮನಗರ: ರಾಮದೇವರ ಬೆಟ್ಟ. ಈ ಹೆಸರು ಈಗ ರಾಜ್ಯದೆಲ್ಲೆಡೆ ಚಿರಪರಿಚಿತ. ರಾಮದೇವರ ಬೆಟ್ಟದಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಿ ದಕ್ಷಿಣ ಅಯೋಧ್ಯೆಯನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. ಈ ವಿಚಾರವಾಗಿ ರಾಮನಗರ ಜಿಲ್ಲಾಡಳಿತ ದೇವಸ್ಥಾನದ ಸರ್ವೆ ವರದಿಯನ್ನು ಸಹ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಆದ್ರೆ ಇದೀಗ ಈ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ಸಿಗೋದು ಅನುಮಾನ ಅಂತಾ ಹೇಳಲಾಗುತ್ತಿದೆ.
ಇದನ್ನೂ ಓದಿ: ರಾಮನಗರದಲ್ಲಿ ಅಯೋಧ್ಯೆ ಮಾದರಿಯ ರಾಮಮಂದಿರ ನಿರ್ಮಾಣ ಹೇಳಿಕೆ – ಹೆಚ್.ಡಿ ದೇವೇಗೌಡ, ಡಿಕೆಶಿ ಕಿಡಿ
ರಾಮದೇವರ ಬೆಟ್ಟವು ಉದ್ದಕೊಕ್ಕಿನ ರಣಹದ್ದುಗಳ ಆವಾಸಸ್ಥಾನವಾಗಿದೆ. ಅಳಿವಿನ ಅಂಚಿನಲ್ಲಿ ಇರುವ ಪ್ರಭೇದಗಳಲ್ಲಿ ಒಂದಾಗಿರುವ ಈ ಹದ್ದುಗಳ ರಕ್ಷಣೆಗಾಗಿ 2012ರಲ್ಲಿ ಕೇಂದ್ರ ಸರ್ಕಾರವು ಈ ಬೆಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಹೀಗಾಗಿ ಯಾವುದೇ ಕಾಮಗಾರಿಗೆ ಮುನ್ನ ಪೂರ್ವಾನುಮತಿ ಕಡ್ಡಾಯವಾಗಿದೆ. ಸಿಕ್ಕರೂ ಸುತ್ತಲಿನ ಬಂಡೆಗಳನ್ನು ಒಡೆಯಲು, ಹೊಸ ರಸ್ತೆ ನಿರ್ಮಿಸಲು ಅವಕಾಶ ಇರುವುದಿಲ್ಲ’ ಎಂದು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಟ್ಟದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 17 ಎಕರೆಗೂ ಹೆಚ್ಚು ಜಾಗ ಇದ್ದು, ಅಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಈಚೆಗೆ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಸುತ್ತ ಬರೀ ಬಂಡೆಗಳು ತುಂಬಿದೆ, ಅಷ್ಟು ಪ್ರಮಾಣದ ಜಾಗವೇ ಅಲ್ಲಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಮಂದಿರ ನಿರ್ಮಾಣ ಸಂಬಂಧ ಅಗತ್ಯ ಅನುಮತಿ ಕೋರಿ ಅರಣ್ಯ ಇಲಾಖೆಗೆ ಈದುವರೆಗೂ ಅಧಿಕೃತವಾಗಿ ಯಾವುದೇ ಪ್ರಸ್ತಾವ ಸಲ್ಲಿಕೆ ಆಗಿಲ್ಲ. ಪ್ರವಾಸೋದ್ಯಮ ಇಲಾಖೆ ಒಂದು ಪತ್ರ ಬರೆದು ಸುಮ್ಮನಾಗಿದೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ರಾಮದೇವರ ಬೆಟ್ಟಕ್ಕೆ ಅನತಿ ದೂರದಲ್ಲಿರುವ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ 270 ಮೀಟರ್ ಎತ್ತರದ ಬೃಹತ್ ಬಂಡೆಯಲ್ಲಿ ವಿಶ್ವದಲ್ಲೇ ಅತಿ ಎತ್ತರದ, 217 ಮೀಟರ್ ಬುದ್ಧನ ಏಕಶಿಲಾ ಪ್ರತಿಮೆ ನಿರ್ಮಾಣಕ್ಕೆ 2005ರಲ್ಲಿ ಪ್ರಯತ್ನ ಕೂಡ ನಡೆದಿತ್ತು. ಆದರೆ ಇದಕ್ಕೆ ಪರಿಸರಪ್ರಿಯರು ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿ ಪ್ರತಿಮೆ ನಿರ್ಮಾಣ ಆದದ್ದೇ ಆದಲ್ಲಿ ರಣಹದ್ದುಗಳು, ಕರಡಿ, ಚಿರತೆ ಹಾಗೂ ಆನೆಗಳ ಓಡಾಟಕ್ಕೆ ಅಡಚಣೆ ಆಗಲಿದೆ ಎಂದು ಆಕ್ಷೇಪಿಸಿದ್ದರು. ಇದರಿಂದಾಗಿ ಯೋಜನೆ ಅಷ್ಟಕ್ಕೆ ನಿಂತಿತು. ಅಷ್ಟೇ ಅಲ್ಲದೇ ಹಿಂದೊಮ್ಮೆ ಬೆಟ್ಟದ ಬುಡದಲ್ಲಿ ರೆಸಾರ್ಟ್ ನಿರ್ಮಾಣ ವಿರೋಧಿಸಿ ಸ್ಥಳೀಯರು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ನಂತರದಲ್ಲಿ ರೆಸಾರ್ಟ್ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿತ್ತು.