ಅನಾಥವಾಗಿದ್ದ ಚಿರತೆ ಮರಿಗೆ ಆರೈಕೆ – ಬೆಳೆದು ನಿಂತ್ಮೇಲೆ ಕಾಡಿಗೆ ಬಿಡಲು ಅಧಿಕಾರಿಗಳಿಗೆ ಚಿಂತೆ!
ಪ್ರಾಣಿ, ಪಕ್ಷಿಗಳ ಅನಾಥ ಮರಿಗಳನ್ನು, ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ರಕ್ಷಿಸಿ ಅವುಗಳಿಗೆ ಚಿಕಿತ್ಸೆ ನೀಡುತ್ತಾರೆ. ಬಳಿಕ ಅವುಗಳು ಸಂಪೂರ್ಣ ಗುಣಮುಖವಾಗುವವರೆಗೆ ಅವುಗಳನ್ನು ತಮ್ಮ ಬಳಿಯೇ ಇರಿಸುತ್ತಾರೆ. ಈ ಉಪಕಾರವನ್ನು ಪ್ರಾಣಿಗಳನ್ನು ಎಂದಿಗೂ ಮರೆಯುವುದಿಲ್ಲ. ಇದಕ್ಕೆ ಸಾಕ್ಷಿಯಾಗಿ ಆರೀಫ್ ಮತ್ತು ಸಾರಸ್ ಕೊಕ್ಕರೆಯ ಕತೆ ನಮ್ಮ ಮುಂದೆ ಇದೆ. ಇಲ್ಲೂ ಕೂಡ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗೆ ಮನುಷ್ಯರಿಂದ ತಾಯಿ ಪ್ರೀತಿ ಸಿಕ್ಕಿದೆ. ಇದೀಗ ಆ ಮರಿಯನ್ನು ಕಾಡಿಗೆ ಬಿಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ: ಪಿಂಚಣಿ ಪಡೆಯಲು ತಾಯಿಯ ಶವವನ್ನು 6 ವರ್ಷ ಇಟ್ಟುಕೊಂಡಿದ್ದ ಭೂಪ! – ಆಮೇಲೆ ಏನಾಯ್ತು ಗೊತ್ತಾ?
ಹೌದು, ಮಹಾರಾಷ್ಟ್ರದ ಪಿಪಾರಿ ಮೇಘೆ ಪ್ರದೇಶದ ಆರ್ವಿ ರಸ್ತೆಯಲ್ಲಿರುವ ‘ಕರುಣಾಶ್ರಮ’ ಪ್ರಾಣಿಗಳ ಆರೈಕೆ ಕೇಂದ್ರಕ್ಕೆ ತುಂಬಾ ಪ್ರಸಿದ್ಧಿ ಪಡೆದಿದೆ. ಇಲ್ಲಿ ಈವರೆಗೆ ನೂರಾರು ಪ್ರಾಣಿಗಳನ್ನು ಆರೈಕೆ ಮಾಡಿ ಸಧೃಡವಾದ ಬಳಿಕ ಸ್ವತಂತ್ರವಾಗಿ ಜೀವಿಸುವ ಸಲುವಾಗಿ ಕಾಡಿಗೆ ಬಿಡಲಾಗುತ್ತದೆ. ಸುಮಾರು ಒಂದೂವರೆ ವರ್ಷದ ಹಿಂದೆ ವಾಶಿಮ್ ಅರಣ್ಯ ಇಲಾಖೆಯ ಸಿಬ್ಬಂದಿ ತಾಯಿಯಿಂದ ಬೇರ್ಪಟ್ಟ 6 ದಿನದ ಚಿರತೆ ಮರಿಯನ್ನು ಗಮನಿಸಿದ್ದರು. ಮೂರು ದಿನಗಳ ಕಾಲ ತಾಯಿಯ ಹುಡುಕಾಟ ಮಾಡಿದ್ದರೂ ಪತ್ತೆಯಾಗಿರಲಿಲ್ಲ. ನಂತರ ಆ ಮರಿಯನ್ನು ಕರುಣಾಶ್ರಮ ಆರೈಕೆ ಕೇಂದ್ರಕ್ಕೆ ನೀಡಿ ಆರೈಕೆ ಮಾಡುವಂತೆ ಸೂಚಿಸಲಾಗಿತ್ತು.
ತಾಯಿಯ ಅನಾಥವಾಗಿದ್ದ ಚಿರತೆ ಮರಿಯನ್ನು ಕರುಣಾಶ್ರಮಕ್ಕೆ ಕರೆತಂದು ಆರೈಕೆ ಮಾಡಲಾಗಿತ್ತು. ಆ ಚಿರತೆ ಮರಿಗೆ ಜಗ್ಗು ಎಂದು ಹೆಸರಿಡಲಾಗಿತ್ತು. ಮರಿ ಸಿಕ್ಕ ಆರಂಭದಲ್ಲಿ ಪಶುವೈದ್ಯರು ಪರೀಕ್ಷಿಸಿದಾಗ ಅದಕ್ಕೆ ನ್ಯುಮೋನಿಯಾ ಬಂದಿತ್ತು. 15 ದಿನಗಳ ಚಿಕಿತ್ಸೆಯ ನಂತರ ಜಗ್ಗುಗೆ ದೃಷ್ಟಿದೋಷ ಉಂಟಾಗಿತ್ತು. ನಂತರ ಕರುಣಾಶ್ರಮದ ಉತ್ತಮ ಮಟ್ಟದ ಚಿಕಿತ್ಸೆಯಿಂದ ದೃಷ್ಟಿಯೂ ಬಂದು ಆರೋಗ್ಯವಂತವಾಗಿ ಬೆಳೆದಿದೆ.
ಕರುಣಾಶ್ರಮ ಆರೈಕೆ ಕೇಂದ್ರದ ಪ್ರೀತಿ ಮತ್ತು ಕಾಳಜಿಗೆ ಮನಸೋತ ಜಗ್ಗು ಅಲ್ಲಿನ ಮೆಂಬರ್ ಆಗಿಬಿಟ್ಟಿದೆ. ಇದೀಗ ಈ ಜಗ್ಗು ಚಿರತೆ ಬೆಳೆದು ನಿಂತಿದ್ದು, ಕಾಡಿಗೆ ಹೋಗಲು ಸಜ್ಜಾಗಿದೆ. ಆದರೆ ಸದ್ಯ ಒಂದೂವರೆ ವರ್ಷ ಪ್ರಾಯದ ಈ ಚಿರತೆಯನ್ನು ಕಾಡಿಗೆ ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಈ ಮರಿ ಜನಿಸಿದ ಆರಂಭದಿಂದಲೂ ಮನುಷ್ಯರ ಜತೆಗೇ ಬದುಕಿ ಅಭ್ಯಾಸವಾಗಿದೆ. ಈಗ ಏಕಾಏಕಿ ಕಾಡಿಗೆ ಬಿಟ್ಟರೆ ಅದಕ್ಕೂ ದಾರಿ ತೋಚದಂತಾಗಬಹುದು. ಅಥವಾ ಮನುಷ್ಯರಿಗೂ-ಜಗ್ಗುವಿಗೂ ಮಾರಕವಾಗಬಹುದು ಎಂದು ಕರುಣಾಶ್ರಮದ ಸಿಬ್ಬಂದಿ ಹೇಳುತ್ತಿದ್ದಾರೆ.