ಅಮೆರಿಕ + ಅದಾನಿ V/s ಚೀನಾ! ಶ್ರೀಲಂಕಾ ಗೆಲ್ಲಲು ದೊಡ್ಡಣ್ಣನ ದುಡ್ಡು – ಡ್ರ್ಯಾಗನ್ ಕೈ ತಪ್ಪುತ್ತಾ ದ್ವೀಪರಾಷ್ಟ್ರ?
ಭಾರತದ ಭೂಪಟಕ್ಕೆ ಸದಾ ಅಂಟಿಕೊಂಡಂತೇ ಕಾಣುವ ಪುಟ್ಟ ರಾಷ್ಟ್ರ ಶ್ರೀಲಂಕಾ. ಭಾರತದ ಧನುಷ್ಕೋಟಿಯಿಂದ ಕೇವಲ 18 ಮೈಲುಗಳಷ್ಟೇ ದೂರದಲ್ಲಿದೆ. 65,610 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಶ್ರೀಲಂಕಾದಲ್ಲಿ ಇರೋದೇ 2.22 ಕೋಟಿ. ಅಂದ್ರೆ ನಮ್ಮ ಕರ್ನಾಟಕಕ್ಕಿಂತ ಕಡಿಮೆ ವಿಸ್ತೀರ್ಣ, ಕರ್ನಾಟಕಕ್ಕಿಂತ ಕಡಿಮೆ ಜನಸಂಖ್ಯೆ. ಆದ್ರೆ ಇದೇ ಶ್ರೀಲಂಕಾ ಆರ್ಥಿಕ ಅದಃಪತನಕ್ಕೆ ತಲುಪಿದೆ. ಅಗತ್ಯ ವಸ್ತುಗಳ ಅಭಾವ, ರಾಜಕೀಯ ಬಿಕ್ಕಟ್ಟು, ಜನರ ದಂಗೆಯಲ್ಲಿ ಸಿಲುಕಿ ದ್ವೀಪ ರಾಷ್ಟ್ರ ಹೈರಾಣಾಗಿದೆ. ಪರಿಣಾಮ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಶ್ರೀಲಂಕಾ ಮೇಲೆ ಹಿಡಿತ ಸಾಧಿಸಲು ಬಿಲಿಯನ್ಗಟ್ಟಲೆ ಹೂಡಿಕೆ ಮಾಡುತ್ತಿವೆ. ಸಾಲದ ಹೊಳೆಯನ್ನೇ ಹರಿಸುತ್ತಿವೆ. ಅದ್ರಲ್ಲೂ ದ್ವೀಪರಾಷ್ಟ್ರವನ್ನ ಹತೋಟಿಗೆ ತೆಗೆದುಕೊಳ್ಳಲು ಭಾರತದ ಪರಮವೈರಿ ಡ್ರ್ಯಾಗನ್ ರಾಷ್ಟ್ರ ಚೀನಾ ನಾನಾ ಕಸರತ್ತು ಮಾಡ್ತಿದೆ. ಚೀನಾದ ಈ ತಂತ್ರಕ್ಕೆ ಅಮೆರಿಕ ಸೆಡ್ಡು ಹೊಡೆಯೋಕೆ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಅದಾನಿ ಗ್ರೂಪ್ ಗೆ ಭರ್ಜರಿ ಕೊಡುಗೆಯನ್ನೇ ಘೋಷಿಸಿದೆ.
ಆರ್ಥಿಕವಾಗಿ ಕುಗ್ಗಿ ಹೋಗಿರೋ ಶ್ರೀಲಂಕಾ ಮೇಲೆ ಚೀನಾ ಇನ್ನಿಲ್ಲದ ಪ್ರೀತಿ ತೋರಿಸ್ತಿದೆ. ಸಾಲ ಕೊಟ್ಟು ಲಂಕಾವನ್ನು ಶೂಲಕ್ಕೆ ಸಿಲುಕಿಸಲು ಸರ್ವ ಪ್ರಯತ್ನವನ್ನೂ ಮಾಡ್ತಿದೆ. ಈ ಮೂಲಕ ಭಾರತದ ಕೆಳಗೆ ನೆಲೆ ಮಾಡಿಕೊಳ್ಳಲು ಚೀನಾ ಹುನ್ನಾರ ನಡೆಸಿದೆ. ಮತ್ತೊಂದೆಡೆ ಭಾರತ ಕೂಡ ಶ್ರೀಲಂಕಾಗೆ ಸಹಾಯ ಮಾಡುತ್ತಿದೆ. ಒಂದ್ಕಡೆ ಇದು ಮಾನವೀಯತೆಯ ದೃಷ್ಟಿ ಹಾಗೂ ಲಂಕಾವನ್ನು ತನ್ನ ಪ್ರಭಾವದಲ್ಲಿ ಇರಿಸಿಕೊಳ್ಳುವ ತಂತ್ರವೂ ಆಗಿದೆ. 54 ಬಿಲಿಯನ್ ಡಾಲರ್ ಸಾಲ ಹೊಂದಿರುವ ಶ್ರೀಲಂಕಾಗೆ ಭಾರತ 4 ಬಿಲಿಯನ್ ಡಾಲರ್ ಹಣಕಾಸು ಸಹಾಯ ಒದಗಿಸಿದೆ. ಮಾತ್ರವಲ್ಲದೆ ಔಷಧ, ಅಹಾರ ಸಾಮಗ್ರಿ ಮತ್ತಿತರ ಸಹಾಯವನ್ನೂ ಕೊಡುತ್ತಿದೆ. ಆದ್ರೆ ದಿವಾಳಿಯಾಗಿರುವ ಲಂಕಾಗೆ ಎಷ್ಟು ಕೊಟ್ರೂ ಕಡಿಮೆಯೇ. ಇದೇ ಕಾರಣಕ್ಕೆ ಶ್ರೀಲಂಕಾ ಮೇಲೆ ಹಿಡಿತ ಸಾಧಿಸಲು ವಿಶ್ವದ ಬಲಿಷ್ಠ ರಾಷ್ಟ್ರಗಳು ನಾನಾ ದಾರಿಗಳನ್ನು ಹುಡುಕುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಚೀನಾ ಲಂಕಾವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳೋ ಸರ್ವಪ್ರಯತ್ನವನ್ನೂ ಮಾಡ್ತಿದೆ. ಆದ್ರೆ ಲಂಕಾ ಮೇಲಿನ ಚೀನಾ ಹಿಡಿತ ತಪ್ಪಿಸಲು ಅಮೆರಿಕ ಕೂಡ ಹೆಜ್ಜೆ ಇಟ್ಟಿದೆ. ಭಾರತದ ಶ್ರೀಮಂತ ಉದ್ಯಮಿ, ಬಿಲಿಯನೇರ್ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಕೊಲೊಂಬೋದಲ್ಲಿ ನಿರ್ಮಿಸುತ್ತಿರುವ ಟರ್ಮಿನಲ್ ಪ್ರಾಜೆಕ್ಟ್ ಗೆ ಸಾವಿರಾರು ಕೋಟಿ ಹಣವನ್ನ ನೀಡದಲು ಮುಂದಾಗಿದೆ.
ಇದನ್ನೂ ಓದಿ : ಯುದ್ಧ ನಿಲ್ಲಿಸುವ ಸಾಮರ್ಥ್ಯ ಮೋದಿಗಿದೆ ಎಂದ ಇರಾನ್ ಅಧ್ಯಕ್ಷ – ಗಾಜಾವನ್ನೇ ಸೀಳಿದ್ದೇಕೆ ಇಸ್ರೇಲ್ ಸೇನೆ?
ಶ್ರೀಲಂಕಾದ ಕೊಲಂಬೋ ಪೋರ್ಟ್ ನಲ್ಲಿ ಅದಾನಿ ಗ್ರೂಪ್ ನಿಂದ ನಡೆಯುತ್ತಿರುವ ಯೋಜನೆಗೆ ಅಮೆರಿಕ ಧನಸಹಾಯ ಮಾಡಲು ಮುಂದಾಗಿದೆ. ಈ ಪ್ರಾಜೆಕ್ಟ್ಗೆ 553 ಮಿಲಿಯನ್ ಡಾಲರ್ ಅಂದ್ರೆ ಭಾರತದ ಕರೆನ್ಸಿ ಪ್ರಕಾರ 4,600 ಕೋಟಿ ರೂಪಾಯಿ ಹಣ ನೀಡುವುದಾಗಿ ಘೋಷಿಸಿದೆ. ಅಮೆರಿಕದ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ ಧನಸಹಾಯ ಮಾಡಲು ನಿರ್ಧರಿಸಿದೆ. ಕೊಲಂಬೋ ಬಂದರಿನಲ್ಲಿ ವಿವಿಧ ಟರ್ಮಿನಲ್ ಗಳಿದ್ದು ಈಗಾಗಲೇ ಕೆಲವುಗಳನ್ನ ನಿರ್ಮಾಣ ಮಾಡಲಾಗಿದೆ. ಚೀನಾದ ಒಂದು ಕಂಪನಿ ಒಂದು ಟರ್ಮಿನಲ್ ನಿರ್ಮಾಣ ಮಾಡಿದೆ. ಅದಾನಿ ಗ್ರೂಪ್ ನಿಂದ ವೆಸ್ಟ್ ಕಂಟೇನರ್ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಈ ಪ್ರಾಜೆಕ್ಟ್ ಗೆ 553 ಮಿಲಿಯನ್ ಡಾಲರ್ ನಿಡೋದಾಗಿ ಡಿಎಫ್ ಸಿ ಘೋಷಣೆ ಮಾಡಿದೆ.
ಡಿಎಫ್‌ಸಿ ಅಮೆರಿಕ ಸರ್ಕಾರದ ಅಭಿವೃದ್ಧಿ ಆರ್ಥಿಕ ಸಂಸ್ಥೆಯಾಗಿದೆ. ಡಿಎಫ್‌ಸಿ ಖಾಸಗಿ ವಲಯದ ಸಹಾಭಾಗಿತ್ವವು ವಿಶ್ವದಲ್ಲಿನ ಅಭಿವೃದ್ಧಿಯಲ್ಲಿ ಎದುರಾಗುವ ನಿರ್ಣಾಯಕ ಸವಾಲುಗಳ ಎದುರಿಸಲು ಆರ್ಥಿಕ ಸಹಾಯ ಒದಗಿಸುತ್ತದೆ. ಇದು ಶಕ್ತಿ ಆರೋಗ್ಯ ಸೇವೆ, ಮೂಲ ಸೌಕರ್ಯ, ಕೃಷಿ ಮತ್ತು ಸಣ್ಣ ಉದ್ದಿಮೆ ಮತ್ತು ಹಣಕಾಸಿನ ಸೇವೆಗಳಂತಹ ಹಲವು ವಲಯದಲ್ಲಿ ಹೂಡಿಕೆ ಮಾಡುತ್ತದೆ. ಇದೇ ಮೊದಲ ಬಾರಿಗೆ ಅಮೆರಿಕ ಸರ್ಕಾರ ಇದರ ಒಂದು ಏಜೆನ್ಸಿ ಮೂಲಕ ಅದಾನಿ ಪ್ರಾಜೆಕ್ಟ್ಗೆ ಹೂಡಿಕೆ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೊಲೊಂಬೊದಲ್ಲಿನ ಬಂದರಿನಲ್ಲಿ ನೀರಿನಾಳದ ಶಿಪಿಂಗ್ ಕಂಟೈನರ್ ಟರ್ಮಿನಲ್ಗಳ ಅಭಿವೃದ್ಧಿಗೆ ಯುಎಸ್ ನಿಧಿಯು ಸಹಾಯ ಮಾಡುತ್ತದೆ. ಖಾಸಗಿ ವಲಯದ ಬೆಳವಣಿಗೆ ಸೌಲಭ್ಯ ಮತ್ತು ಆರ್ಥಿಕ ಪುನಶ್ವೇತನ ಜೊತೆಗೆ ಶ್ರೀಲಂಕಾದ ಆರ್ಥಿಕ ಚೇತರಿಕೆಗೆ ಸಹಾಯ ಮಾಡಲು ಸಹಕಾರಿಯಾಗಿದೆ. ಇದು ಕೇವಲ ಕೊಲೊಂಬೊಗೆ ಮಾತ್ರವಲ್ಲ, ದ್ವೀಪದೆಲ್ಲೆಡೆ ಇದು ನೇರ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡಲಿದೆ. ಇದು ಶ್ರೀಲಂಕಾದ ವ್ಯಾಪಾರ ಮತ್ತು ವಾಣಿಜ್ಯದ ಆರ್ಥಿಕ ವ್ಯವಸ್ಥೆಗೆ ಪ್ರೋತ್ಸಾಹಿಸಲಿದೆ.
ಈಗಾಗಲೇ ಅಮೆರಿಕ ಮೂಲದ ಈ ಡಿಎಫ್‌ಸಿ ಕೇವಲ ನಾಲ್ಕು ವರ್ಷದಲ್ಲಿ ಶ್ರೀಲಂಕಾದಾದ್ಯಂತ 20 ಮಿಲಿಯನ್ ಡಾಲರ್ ಅಂದ್ರೆ 166 ಕೋಟಿ ರೂಪಾಯಿ ಇದ್ದ ಹೂಡಿಕೆಯನ್ನ 1 ಬಿಲಿಯನ್ ಡಾಲರ್ ಅಂದ್ರೆ ಸುಮಾರು 8,300 ಕೋಟಿ ರೂಪಾಯಿಗೆ ಹೆಚ್ಚಿಸಿದೆ. ಡಿಎಫ್‌ಸಿ ಸಿಇಒ ನೇಥನ್ ಅವರು ಸರ್ಕಾರದ ಜೊತೆ ಮಾತನಾಡಿ ಶ್ರೀಲಂಕಾದೊಂದಿಗಿನ ಸಂಬಂಧವನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯುವ ಅವಕಾಶಗಳ ಬಗ್ಗೆ ಚರ್ಚಿಸಿರೋದಾಗಿ ಟ್ವೀಟ್ ಮಾಡಿದ್ದಾರೆ. ಕಳೆದ ಏಳು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ ಈಗ ನೆರೆ ರಾಷ್ಟ್ರಗಳ ನೆರವನ್ನೇ ಬಯಸುತ್ತಿದೆ. ಇದೇ ಕಾರಣಕ್ಕೆ ವಿದೇಶಗಳು ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದೆ. ಇದೇ ಕಾರಣಕ್ಕೆ ಭಾರತ ಮೂಲದ ಅದಾನಿ ಗ್ರೂಪ್ ಪ್ರಾಜೆಕ್ಟ್ ಗೆ ಅಮೆರಿಕ ಹಣ ನೀಡಲು ಮುಂದಾಗಿದೆ. ಅಷ್ಟಕ್ಕೂ ಏನಿದು ಟರ್ಮಿನಲ್ ಪ್ರಾಜೆಕ್ಟ್ ಅನ್ನೋ ಬಗ್ಗೆಯೂ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.
ಕೊಲಂಬೋ ಬಂದರಿನಲ್ಲಿ ವಿವಿಧ ಟರ್ಮಿನಲ್ ಗಳಿದ್ದು, ಕೆಲವುಗಳನ್ನ ನಿರ್ಮಾಣ ಮಾಡಲಾಗಿದೆ. ಅದಾನಿ ಗ್ರೂಪ್ ನಿಂದ ವೆಸ್ಟ್ ಕಂಟೇನರ್ ಟರ್ಮಿನಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಳೆದ ವರ್ಷದ ನವೆಂಬರ್ ನಲ್ಲಿ ಆರಂಭವಾದ ಟರ್ಮಿನಲ್ ಪ್ರಾಜೆಕ್ಟ್ ನ ಮೊದಲ ಹಂತವು 2024ರ ಮೂರನೇ ತ್ರೈಮಾಸಿಕದಲ್ಲಿ ಮುಕ್ತಾಯವಾಗಲಿದೆ. ಹಾಗೇ 2025ರ ವರ್ಷಾಂತ್ಯದೊಳಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ವೆಸ್ಟ್ ಟರ್ಮಿನಲ್ ಪ್ರಾಜೆಕ್ಟ್ ನ ಶೇಕಡಾ 51ರಷ್ಟು ಪಾಲನ್ನು ಅದಾನಿ ಗ್ರೂಪ್ ಹೊಂದಿದೆ. ಶ್ರೀಲಂಕಾದ ಇನ್ನೊಂದು ಖಾಸಗಿ ಸಂಸ್ಥೆ ಜಾನ್ ಕೀಲ್ಸ್ ಹೋಲ್ಡಿಂಗ್ಸ್ ಶೇಕಡಾ 34ರಷ್ಟು ಪಾಲುದಾರರಾಗಿದ್ದಾರೆ. ಉಳಿದ ಶೇರು ಸರ್ಕಾರಿ ಸ್ವಾಮ್ಯದ ಶ್ರೀಲಂಕಾ ಪೋರ್ಟ್ಸ್ ಅಥಾರಿಟಿ ಹೊಂದಿದೆ.
ಹಿಂದೂ ಮಹಾಸಾಗರದಲ್ಲಿನ ಅತ್ಯಂತ ದೊಡ್ಡದಾದ ಮತ್ತು ಬ್ಯುಸಿಯಾದ ಟ್ರಾನ್ಸ್‌ಶಿಪ್‌ಮೆಂಟ್ ಬಂದರು ಈ ಕೊಲೊಂಬೊ ಬಂದಾರಾಗಿದೆ. 2021ರಿಂದ ಶೇ90ರಷ್ಟು ಬಳಕೆಯೊಂದಿಗೆ ಇದು ಕಾರ್ಯ ನಿರ್ವಹಣೆ ಮಾಡುತ್ತಿದೆ. ಹೆಚ್ಚುವರಿ ಸಾಮರ್ಥ್ಯಕ್ಕಾಗಿ ಅಗತ್ಯ ಸಿಗ್ನಲಿಂಗ್ ಮಾಡುತ್ತಿದೆ. ಹೊಸ ಟರ್ಮಿನಲ್ ಪಶ್ಚಿಮ ಬಂಗಾಳದ ಬೆಳೆಯುತ್ತಿರುವ ಆರ್ಥಿಕತೆಗೆ ಬೆಂಬಲ ನೀಡಲಿದೆ. ಅಲ್ಲದೆ ಶ್ರೀಲಂಕಾವೂ ಜಗತ್ತಿನ ಸಾಗಣೆಯ ಪ್ರಮುಖ ಕೇಂದ್ರವಾಗಿದೆ. ಅರ್ಧದಷ್ಟು ಹಡಗುಗಳು ಸಾಗಣೆ ಈ ನೀರಿನ ಮಾರ್ಗವಾಗಿ ನಡೆಯಲಿದೆ. ವೆಸ್ಟ್ ಕಂಟೈನರ್ ಟರ್ಮಿನಲ್‌ನ ಶಿಪ್ಪಿಂಗ್ ಸಾಮರ್ಥ್ಯವನ್ನು ವಿಸ್ತರಿಸಲು ಡಿಎಫ್‌ಸಿ ಹಣ ನೀಡುತ್ತಿದೆ. ಆದ್ರಿಲ್ಲಿ ಅದಾನಿ ಗ್ರೂಪ್ ಗೆ ಅಮೆರಿಕ ಧನಸಹಾಯ ಮಾಡುತ್ತಿರುವ ಹಿಂದೆ ಬೇರೆಯದ್ದೇ ಉದ್ದೇಶ ಇದೆ. ದಕ್ಷಿಣ ಏಷ್ಯಾ ವಲಯದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವ ತಗ್ಗಿಸಲು ಈ ಒಪ್ಪಂದವು ಪರೋಕ್ಷವಾಗಿ ಸಹಾಯ ಮಾಡುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊಲಂಬೊದಲ್ಲಿ ತ್ಯಾಜ್ಯ ಕಂಟೈನರ್ ಟರ್ಮಿನಲ್ ಅಭಿವೃದ್ಧಿಪಡಿಸಲು ಅದಾನಿಗೆ ಅಮೆರಿಕ ಸರ್ಕಾರಿ ಸಂಸ್ಥೆ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಹಣ ನೀಡಲು ಮುಂದಾಗಿದೆ. ಏಷ್ಯಾದಲ್ಲಿ ಅತಿ ದೊಡ್ಡ ಮೂಲಸೌಕರ್ಯ ಹೂಡಿಕೆದಾರರಾಗಿ ಮುಂದುವರಿದಿದೆ. ಶ್ರೀಲಂಕಾದಲ್ಲಿ ಯುಎಸ್ ಮಾಡುತ್ತಿರುವುದು ವಿಶ್ವದ ಅತಿದೊಡ್ಡ ಮೂಲಸೌಕರ್ಯ ಹೂಡಿಕೆಯಾಗಿದೆ. ಇದು ಭಾರತ & ಶ್ರೀಲಂಕಾ ನಡುವೆ ಉತ್ತಮ ಸಮನ್ವಯವನ್ನು ಸುಗಮಗೊಳಿಸುವ ನಿರೀಕ್ಷೆ ಇದೆ. ಶ್ರೀಲಂಕಾದಲ್ಲಿ ಬಂದರು ಅಭಿವೃದ್ಧಿಪಡಿಸಲು ಗೌತಮ್ ಅದಾನಿಗೆ ಹಣ ನೀಡುವುದು ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವ ತಗ್ಗಿಸಲು ಸಹಾಯ ಮಾಡುತ್ತದೆ. ಚೀನಾ ಕಳೆದ ವರ್ಷ ಶ್ರೀಲಂಕಾದಲ್ಲಿ 2.2 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಇದು ದ್ವೀಪರಾಷ್ಟ್ರ ಶ್ರೀಲಂಕಾ ಪಾಲಿಗೆ ಅತಿ ದೊಡ್ಡ ವಿದೇಶಿ ನೇರ ಹೂಡಿಕೆಯಾಗಿತ್ತು. ಆದ್ರೆ ಚೀನಾದ ಹೂಡಿಕೆ ಶ್ರೀಲಂಕಾವನ್ನು ಸಾಲದ ಪರ್ವತದ ಸುಳಿಯಲ್ಲಿ ಸಿಲುಕಿಸುತ್ತಿದೆ. ಆರ್ಥಿಕತೆ ಮೇಲೆ ಗಂಭೀರ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅಮೆರಿಕ ಮೂಲದ ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಲದ ಸುಳಿಯಲ್ಲಿ ಬಿದ್ದಿರೋ ಶ್ರೀಲಂಕಾ ಈಗಾಗಲೇ ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅತೀವವಾಗಿ ಸಾಲ ಮಾಡಿಕೊಂಡಿದ್ದಾರೆ. ಆದರೆ ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾವನ್ನು ನೆಲೆಯಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ಮತ್ತೊಂದೆಡೆ ಶ್ರೀಲಂಕಾದ ಮೇಲೆ ಚೀನಾ ಕರಿನೆರಳು ಬೀಳಬಾರದು ಎಂದುಕೊಂಡಿದ್ದ ಅಮೆರಿಕ ಹಣಕಾಸಿಗೆ ಮುಂದಾಗಿದೆ. ಭಾರತವೂ ಹಾಗೆಯೇ ಆಗಬೇಕೆಂದು ಬಯಸಿದೆ. 2023 ರಲ್ಲಿ 9.3 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಅಮೆರಿಕ ಮೂಲದ ಡಿಎಫ್‌ಸಿ ಮುಂದಾಗಿದೆ. ಒಟ್ಟಾರೆ ಕುಸಿದಿರೋ ಶ್ರೀಲಂಕಾಗೆ ಹಣಕಾಸಿನ ನೆರವು ನೀಡೋ ಮೂಲಕ ಬಲಿಷ್ಠ ರಾಷ್ಟ್ರಗಳು ಹಿಡಿತ ಸಾಧಿಸಲು ಮುಂದಾಗುತ್ತಿವೆ. ಅಲ್ಲದೆ ವೈರಿ ರಾಷ್ಟ್ರಗಳ ನಡುವಿನ ಪೈಪೋಟಿಯೂ ಇದರಲ್ಲಿ ಎದ್ದು ಕಾಣುತ್ತಿದೆ. ಹೀಗಾಗಿ ಲಂಕಾದಲ್ಲಿ ಚೀನಾ ಬೇರು ಬಿಡುತ್ತಿರುವಾಗಲೇ ಅಮೆರಿಕ ಬೃಹದಾಕಾರವಾಗಿ ಬೆಳೆಯಲು ಹೂಡಿಕೆಯ ಅಸ್ತ್ರ ಹೂಡಿದೆ.