ಅಮೆಜಾನ್ ಅರಣ್ಯ ಸರ್ವನಾಶ..!- ವಿಶ್ವದ ದೊಡ್ಡ ನದಿ ಖಾಲಿ ಖಾಲಿ..!
ಭೂಲೋಕದ ಶ್ವಾಸಕೋಶಕ್ಕೆ ಕಂಟಕ.. ಮನುಷ್ಯ ಜೀವಿಸಲು ಅಸಾಧ್ಯ
ಅಮೆಜಾನ್ ಕಾಡು.. ಇದರ ಬಗ್ಗೆ ಕೇಳಿರದವರೇ ಇಲ್ಲ. ದಕ್ಷಿಣ ಅಮೆರಿಕದ ಒಂಬತ್ತು ದೇಶಗಳನ್ನು ವ್ಯಾಪಿಸಿರುವ ವಿಶ್ವದ ಅತಿದೊಡ್ಡ ಕಾಡು. ಭೂಲೋಕದ ಶ್ವಾಸಕೋಶ ಎಂದೇ ಬಿಂಬಿತವಾಗಿರುವ ಮಳೆಕಾಡು.. ಇಂತಹ ದೃತ್ಯಕಾಡಿಗೆ ಕಂಟಕ ಎದುರಾಗಿದೆ. ಭೀಕರ ಬರಗಾಲ, ಅರಣ್ಯ ನಾಶದಿಂದ ಸಂಕಷ್ಟ ಎದುರಾಗಿದೆ..
ಇದನ್ನೂ ಓದಿ:ನೀವು ನಿತ್ಯವೂ ಸ್ನಾನ ಮಾಡುತ್ತೀರಾ? – ನಿಮ್ಮ ದೇಹಕ್ಕೆ ಹಾನಿ ಅಂತಿದ್ದಾರೆ ತಜ್ಞರು!
ನಿಜಕ್ಕೂ ಮಾನವನಿಂದ ಪ್ರಕೃತಿ ಹಾಳಾಗುತ್ತೆ ಅನ್ನೋದನ್ನ ಅಮೆಜಾನ್ ಕಾಡೇ ಬೆಸ್ಟ್ ಎಕ್ಸಾಂಪಲ್.. ಕಳೆದ ನಾಲ್ಕು ದಶಕಗಳಲ್ಲಿ ಅಮೆಜಾನ್ ಅರಣ್ಯ ನಾಶವು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅರಣ್ಯ ನಾಶದಿಂದಾಗಿ ಪ್ರಕೃತಿಗೆ ಅಪಾರ ಹಾನಿ ಸಂಭವಿಸಿದೆ. 88 ಮಿಲಿಯನ್ ಹೆಕ್ಟೇರ್ ಅರಣ್ಯ ನಾಶವಾಗಿದೆ. ಸಿಹಿ ನೀರಿನ ಪೈಕಿ ಕೇವಲ ಅಮೆಜಾನ್ ಕಾಡಿನ ಭಾಗದಲ್ಲೇ ಶೇಕಡಾ 20ರಷ್ಟು ಸಂಗ್ರಹವಾಗಿದೆ. ಹೀಗಾಗಿ ಅಮೆಜಾನ್ ಕಾಡು ಮನುಷ್ಯರಿಗೆ ಸಾಕಷ್ಟು ಮುಖ್ಯ. ಅಷ್ಟೇ ಅಲ್ಲ, ಭೂಮಿಯ ಆಮ್ಲಜನಕದಲ್ಲಿ ಶೇ.20 ರಷ್ಟು ಆಮ್ಲಜನಕ ಅಮೆಜಾನ್ ಕಾಡಿನಿಂದಲೇ ಸಿಗುತ್ತದೆ. ಜಗತ್ತಿನ ಅತಿದೊಡ್ಡ ಉಷ್ಣ ವಲಯದ ಮಳೆಕಾಡು 5.5 ಮಿಲಿಯನ್ ಚದರ ಕಿಲೋ ಮೀಟರ್ನಷ್ಟು ಹರಡಿದೆ.. ಈ ದೊಡ್ಡ ಕಾಡಿಗೆ ಆಪತ್ತು ಎದುರಾಗಿದೆ.
ಜರ್ಮನಿ, ಫ್ರಾನ್ಸ್ ದೇಶಗಳಷ್ಟು ವಿಸ್ತೀರ್ಣದ ಕಾಡೇ ನಾಶವಾಗಿ ಹೋಗಿದೆ. ದಕ್ಷಿಣ ಅಮೆರಿಕದಲ್ಲಿರುವ ಅಮೆಜಾನ್ ಅರಣ್ಯಪ್ರದೇಶ 40 ಸಾವಿರ ಸಸ್ಯ ಪ್ರಭೇದ, 1300 ಪಕ್ಷಿ ಪ್ರಭೇದ, 2200 ಜಾತಿಯ ವಿವಿಧ ಮೀನುಗಳು, 427 ವಿಧದ ಸಸ್ತನಿಗಳು, 430 ಜಾತಿಯ ಉಭಯಚರ, 380 ಸರಿಸೃಪ, 2.5 ಮಿಲಿಯನ್ ವಿವಿಧ ರೀತಿಯ ಕೀಟಗಳನ್ನು ಒಳಗೊಂಡಿದೆ. ಇಡೀ ಜಗತ್ತಿನಲ್ಲಿರುವ ಜೀವಿಗಳಲ್ಲಿ ಶೇ.10ರಷ್ಟು ಜೀವಿಗಳಿಗೆ ಆಶ್ರಯಧಾತ ಎನಿಸಿದೆ. ಇಡೀ ವಿಶ್ವದಲ್ಲಿ ಬಳಸುವ ಔಷಧದ ನಾಲ್ಕರಲ್ಲಿ ಒಂದು ಭಾಗ ಇದೇ ಅಮೆಜಾನ್ ಅರಣ್ಯದ ವಸ್ತುಗಳಿಂದಲೇ ಸಿದ್ಧವಾಗುತ್ತದೆ. ಜಗತ್ತಿನ 9 ದೇಶಗಳಲ್ಲಿ ಅಮೆಜಾನ್ ಅರಣ್ಯಪ್ರದೇಶ ವ್ಯಾಪಿಸಿದೆ.
ಬ್ರೆಜಿಲ್ನಲ್ಲಿಯೇ ಶೇ.60ರಷ್ಟು ಭಾಗ ಅರಣ್ಯ ಹೊಂದಿರುವ ಇಂತಹ ಬೃಹತ್ ಭೂಲೋಕದ ಶ್ವಾಸಕೋಶಕ್ಕೆ ಇದೀಗ ಆಪತ್ತು ಎದುರಾಗಿದೆ. ಸರಾಸರಿಗಿಂತ ಕಡಿಮೆ ಮಳೆ, ನಿಯಂತ್ರಿಸಲಾಗದ ಕಾಡ್ಗಿಚ್ಚು, ಹವಾಮಾನ ಬದಲಾವಣೆ, ಸತತ ಬರಗಾಲದಿಂದ ತತ್ತರಿಸಿರುವ ಬ್ರೆಜಿಲ್ನ ಮನೌಸ್ ನಲ್ಲಿರುವ ನದಿಯ ಬಂದರು 122 ವರ್ಷಗಳಷ್ಟು ಕೆಳಮಟ್ಟಕ್ಕೆ ತಲುಪಿದೆ. ಇದರಿಂದಾಗಿ ಜಲಮಾರ್ಗವೂ ಕಿರಿದಾಗಿದ್ದು, ಧಾನ್ಯ ರಫ್ತು, ಅಗತ್ಯ ವಸ್ತುಗಳ ಪೂರೈಕೆ ಮೇಲೂ ಪರಿಣಾಮ ಬೀರಿದೆ.. ಪ್ರಸ್ತುತ ಇರುವ ಬರಗಾಲವು ಅಮೆಜಾನ್ ನದಿಗಳನ್ನು ಕೆಲವು ದಶಕಗಳಲ್ಲೆ ಅತ್ಯಂತ ಕಡಿಮೆ ಮಟ್ಟದ್ದಾಗಿದ್ದು, ನದಿಯ ದಡದಲ್ಲಿ ವಾಸಿಸುವ ಸುಮಾರು 47 ಮಿಲಿಯನ್ ಜನರ ಜೀವನಶೈಲಿಯನ್ನೆ ಬದಲಾಯಿಸಿದೆ. ಇದರೊಂದಿಗೆ ಬ್ರೆಜಿಲ್, ಈಕ್ವೆಡಾರ್, ಕೊಲಂಬಿಯಾ, ಬೊಲಿವಿಯಾ, ಅರ್ಜೆಂಟೀನಾ, ಪರಾಗ್ವೆ ಮತ್ತು ಪೆರುಗಳಲ್ಲಿ ಕಾಣಿಸುವ ಬೆಂಕಿಯು ನಿಯಂತ್ರಣಕ್ಕೆ ಸಿಗುವುದಿಲ್ಲ ಎನ್ನಲಾಗಿದೆ. ಜೊತೆಗೆ ಈಕ್ವೆಡಾರ್ ದೇಶವು ಕಳೆದ ಆರು ದಶಕಗಳಲ್ಲಿ ಭೀಕರ ಜಲವಿದ್ಯುತ್ ಶಕ್ತಿಯ ಕೊರತೆಯನ್ನು ಎದುರಿಸುತ್ತಿದ್ದು, ಅಲ್ಲಿನ 24 ಪ್ರಾಂತ್ಯಗಳಲ್ಲಿ 20 ಪ್ರಾಂತ್ಯಗಳನ್ನು ರೆಡ್ ಅಲರ್ಟ್‌ನಲ್ಲಿ ಇರಿಸಲಾಗಿದೆ.
ಅಮೆಜಾನ್ ನದಿಯ ಉಪನದಿಯಾಗಿರುವ ರಿಯೋ ನಿಗ್ರೂ ನದಿ ಬಂದರು ಸಾಮಾನ್ಯವಾಗಿ 22 ಮೀಟರ್ ಎತ್ತರಕ್ಕೆ ತುಂಬಿ ಹರಿಯುತ್ತಿತ್ತು. ಇದೀಗ 12.66 ಮೀಟರ್ಗಳಿಗೆ ಕುಸಿದಿದೆ. ಇದರಿಂದ 1902ರ ಬಳಿಕ ಮತ್ತೆ ನದಿ ನೀರಿನ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ. ಅಷ್ಟೇ ಅಲ್ಲ ಬ್ರೆಜಿಲ್ನ ಮುಖ್ಯ ವಿದ್ಯುತ್ ಮೂಲವಾದ ಜಲವಿದ್ಯುತ್ ಸ್ಥಾವರಗಳು ಬಂದ್ ಆಗುವ ಸ್ಥಿತಿಗೆ ತಲುಪಿವೆ. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಅಮೆಜಾನ್ ಅರಣ್ಯಪ್ರದೇಶದ ನದಿಗಳಲ್ಲಿ ನೀರಿನ ಮಟ್ಟ ಏರಿಕೆ, ಇಳಿಕೆ ಸಹಜವಾದರೂ ಇತ್ತೀಚಿನ ಪರಿಸ್ಥಿತಿ ಆತಂಕ ಹುಟ್ಟಿಸಿದೆ ಅಂತಾರೆ ತಜ್ಞರು. ಇಂತಹ ಸ್ಥಿತಿಗೆ ಅತಿಯಾದ ಮಾನವನ ಚಟುವಟಿಕೆಯೇ ಕಾರಣ ಅನ್ನೋದು ತಜ್ಞರ ವಾದ. ಅಮೆಜಾನ್ ಪ್ರದೇಶವು ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬರಲು 2026ರವರೆಗೆ ಕಾಯಬೇಕಂತೆ..
ಜಗತ್ತಿಗೆ ಭೀಕರ ಪರಿಣಾಮ ಉಂಟು ಮಾಡುತ್ತೆ ಬ್ರೆಜಿಲ್ ಕಾಡ್ಗಿಚ್ಚು..!
ಇನ್ನು ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ಪ್ರಮುಖ ನಗರಗಳನ್ನು ಕೆಟ್ಟ ವಾತವರಣಕ್ಕೆ ದೂಡಿದ್ದು, ಕೆಲವೊಮ್ಮೆ ಕಾಡ್ಗಿಚ್ಚು ಅರ್ಜೆಂಟೀನಾ ಮತ್ತು ಉರುಗ್ವೆಯ ಗಡಿಯುದ್ದಕ್ಕೂ ಹರಡಿದೆ. ಇದು ಪ್ರಸ್ತುತ ವಿಶ್ವದ ಜೀವವೈವಿಧ್ಯತೆಯ ಗಮನಾರ್ಹ ಶೇಕಡಾವಾರು ಪ್ರದೇಶವನ್ನು ಹೊಂದಿರುವ ಪ್ರದೇಶಕ್ಕೆ ಮಾತ್ರವಲ್ಲದೇ ಇಡಿ ಜಗತ್ತಿಗೆ ಭೀಕರ ಪರಿಣಾಮವನ್ನು ಉಂಟು ಮಾಡುತ್ತದೆ. ಅಮೆಜಾನ್ ಮಳೆಕಾಡು ಹವಾಮಾನ ಬದಲಾವಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ. ಬ್ರೆಜಿಲ್ನ ಶೇ.80ರಷ್ಟು ಅರಣ್ಯ ಪ್ರದೇಶ ಕಾಡ್ಗಿಚ್ಚಿನ ಹೊಗೆಯಿಂದ ಆವೃತವಾಗಿದೆ. ಬೆಂಕಿಯಿಂದಾಗಿ ಬೊಲಿಮಿಯಾ ರಾಷ್ಟ್ರೀಯ ವಿಪತ್ತು ಘೋಷಿಸಿದೆ.. ಹೀಗೆ ಎಲ್ಲವೂ ನಾಶವಾಗಿ ಹೋಗಿದೆ. ಅಮೆಜಾನ್ ಮಳೆಕಾಡು ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಜಗತ್ತು ಬೇಗ ಅಲರ್ಟ್ ಆಗಬೇಕಿದೆ. ಇಲ್ಲವಾದರೆ ಮುಂದೆ ಮನುಷ್ಯರು ಉಸಿರಾಡುವ ಗಾಳಿಗೂ ಬರ ಎದುರಾಗಿ, ನೀರಿಗೂ ಸಮಸ್ಯೆ ಉಂಟಾಗಿ ಜನರು ಬದುಕಲು ಪರದಾಡಬೇಕಾಗುವುದು.