ತಾಲಿಬಾನ್ ಬೆನ್ನಿಗೆ ನಿಂತಿದ್ಯಾ ಭಾರತ? ದುಬೈ ಚರ್ಚೆ ಡಿಟೈಲ್ಸ್!
ಅಫ್ಘಾನ್ ಅಭಿವೃದ್ಧಿಗೆ ನೆರವು!
ಅಫ್ಘಾನ್ನಲ್ಲಿ ತಾಲಿಬಾನ್ ಆಡಳಿತ ಬಂದಾಗ ಪಾಕ್ ಖುಷಿ ಪಟ್ಟಿತ್ತು.. ತಾಲಿಬಾನ್ನಿಂದ ನಮ್ಗೆ ಪ್ಲೆಸ್ ಆಗುತ್ತೆ ಅಂದುಕೊಂಡಿತ್ತು.. ಆದ್ರೆ ತಾಲಿಬಾನ್ ಆಡಳಿತದಿಂದ ಭಾರತ ಮತ್ತು ಅಫ್ಘಾನ್ ಸಂಬಂಧ ಹಳಸಿ ಹೋಗುತ್ತೆ ಅಂತ ಅಂದಾಜು ಮಾಡಲಾಗಿತ್ತು. ಆದ್ರೆ ಈಗ ಎಲ್ಲಾ ಉಲ್ಟಾ ಆಗಿದ್ದು, ಪಾಕ್ ಮತ್ತು ತಾಲಿಬಾನ್ ನಡುವೆ ವಾರ್ ನಡೆಯುತ್ತಿದ್ರೆ, ಭಾರತ ಮತ್ತು ತಾಲಿಬಾನ್ ಸಂಬಂಧ ವೃದ್ಧಿಯಾಗುತ್ತಿದೆ.
ಇದನ್ನೂ ಓದಿ: ಕಾಲ್ತುಳಿತಕ್ಕೂ ಮೊದಲು ಆಗಿದ್ದೇನು? – TTD ಮೈಮರೆತಿದ್ದು ಎಲ್ಲಿ?
ದುಬೈನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಉನ್ನತ ಮಟ್ಟದ ಮಾತುಕತೆ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ತಿರುವು ನೀಡಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅಫ್ಘಾನಿಸ್ತಾನದ ಹಾಲಿ ವಿದೇಶಾಂಗ ಸಚಿವ ಮೌಲಾವಿ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿ, ಉನ್ನತ ಮಟ್ಟದ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಾನವೀಯ ನೆರವು, ಅಭಿವೃದ್ಧಿ ಮತ್ತು ಭದ್ರತೆಯ ವಿವಿಧ ಅಂಶಗಳನ್ನು ಚರ್ಚಿಸಲಾಗಿದೆ. ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ನಡೆದ ಈ ಮಹತ್ವದ ಸಭೆಯಲ್ಲಿ, ಭಾರತೀಯ ಮಾನವೀಯ ನೆರವು ಕಾರ್ಯಕ್ರಮಗಳನ್ನು ಮೌಲ್ಯಮಾಪನ ಮಾಡಿದ್ರು.
ಅಫ್ಘಾನ್ಗೆ ಭಾರತದ ನೆರವು
ಭಾರತವು ಇದುವರೆಗೆ 50,000 ಮೆಟ್ರಿಕ್ ಟನ್ ಗೋಧಿ
300 ಟನ್ ಔಷಧಗಳು, 27 ಟನ್ ಭೂಕಂಪ ಪರಿಹಾರ ಸಾಮಗ್ರಿ
40,000 ಲೀಟರ್ ಕೀಟನಾಶಕ, 100 ಮಿಲಿಯನ್ ಪೋಲಿಯೊ ಡೋಸ್
1.5 ಮಿಲಿಯನ್ ಡೋಸ್ ಕೋವಿಡ್ ಲಸಿಕೆ
11,000 ಶುಶ್ರೂಷಕ ರೋಗನಿರೋಧಕ ಕಾರ್ಯಕ್ರಮ
ಚಳಿಗಾಲದ ಚಿಕಿತ್ಸೆಗಾಗಿ 11,000 ಕಿಟ್ಗಳನ್ನು ಕಳುಹಿಸಿದೆ
ಅಫ್ಘಾನಿಸ್ತಾನದಲ್ಲಿನ ಮಾನವೀಯ ಬಿಕ್ಕಟ್ಟಿನ ದೃಷ್ಟಿಯಿಂದ ಭಾರತವು ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳಲ್ಲಿ ಪಾಲುದಾರನಾಗಲು ನಿರ್ಧರಿಸಿದೆ. ಅಫ್ಘಾನಿಸ್ತಾನದ ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳಿಗೆ ಈ ಹಂತವು ಮಹತ್ವದ್ದಾಗಿದೆ ಎನ್ನಲಾಗುತ್ತಿದೆ. ಅಫ್ಘಾನಿಸ್ತಾನದ ಆರೋಗ್ಯ ಮತ್ತು ನಿರಾಶ್ರಿತರ ಪುನರ್ವಸತಿಗೆ ಹೆಚ್ಚುವರಿ ನೆರವು ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಸಹಾಯಕ್ಕಾಗಿ ಅಫ್ಘಾನ್ ಟೀಂ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದೆ. ಅಷ್ಟೇ ಅಲ್ಲ ಈ ಸಹಕಾರದ ಅಡಿಯಲ್ಲಿ, ನಿರಾಶ್ರಿತರ ಪುನರ್ವಸತಿ ಮತ್ತು ಆರೋಗ್ಯ ಸೇವೆಗಳನ್ನು ಸುಧಾರಿಸಲು ಭಾರತವು ಅಫ್ಘಾನ್ಗೆ ಹೆಚ್ಚಿನ ನೆರವು ನೀಡಲಿದೆ. ಇದರೊಂದಿಗೆ ಅಫ್ಘಾನಿಸ್ತಾನದ ಯುವ ಪೀಳಿಗೆಯಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದರಿಂದ ಕ್ರೀಡಾ ಕ್ಷೇತ್ರದಲ್ಲಿ ವಿಶೇಷವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಬಲಪಡಿಸುವ ಯೋಜನೆಯನ್ನು ಸಹ ಮಾಡಲಾಗಿದೆ. ಅಫ್ಘಾನಿಸ್ತಾನದ ಅಭಿವೃದ್ಧಿಯ ಕಡೆಗೆ ತನ್ನ ಬದ್ಧತೆಯನ್ನು ಉಳಿಸಿಕೊಳ್ಳುವುದಾಗಿ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ಹೆಚ್ಚಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ. ಚಬಹಾರ್ ಬಂದರಿನ ಬಳಕೆಯನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಇದ್ರಿಂದ ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ಸಹಕಾರವನ್ನು ಉತ್ತೇಜಿಸುತ್ತದೆ, ಇದು ಎರಡೂ ದೇಶಗಳಿಗೆ ಪ್ರಯೋಜನ ಆಗಲಿದೆ. ಭಾರತ ತನ್ನ ಅಂತಾರಾಷ್ಟ್ರೀಯ ನೀತಿಗಳಲ್ಲಿ ಅಫ್ಘಾನಿಸ್ತಾನದೊಂದಿಗಿನ ಸಂಬಂಧಕ್ಕೆ ಆದ್ಯತೆ ನೀಡುತ್ತಿದೆ ಎಂಬುದನ್ನು ಉಭಯ ದೇಶಗಳ ನಡುವಿನ ಈ ಸಭೆ ಸಾಬೀತುಪಡಿಸಿದೆ. ಇನ್ನು ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿ ಮಾಡಿದ್ದಕ್ಕೆ ಭಾರತವು ಆಕ್ರೋಶ ವ್ಯಕ್ತಪಡಿಸಿತ್ತು. ಭಾರತವು ಅಫ್ಘಾನಿಸ್ತಾನಕ್ಕೆ ಮಾನವೀಯ ಮತ್ತು ಅಭಿವೃದ್ಧಿ ನೆರವು ನೀಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದನ್ನ ನೋಡಿದ ಪಾಕಿಸ್ತಾನಕ್ಕೆ ಊರಿವಂತೆ ಆಗಿದ್ದು ಮಾತ್ರ ಸುಳ್ಳಲ್ಲ..