ಸೌರಮಂಡಲದಲ್ಲಿ ನಡೆಯಿತು ಅಪರೂಪದ ಚಮತ್ಕಾರ – ಖಗೋಳದ ಕೌತುಕತೆ ನಿಮಗೂ ಕಾಣುತ್ತೆ..!

ಸೌರಮಂಡಲದಲ್ಲಿ ನಡೆಯಿತು ಅಪರೂಪದ ಚಮತ್ಕಾರ – ಖಗೋಳದ ಕೌತುಕತೆ ನಿಮಗೂ ಕಾಣುತ್ತೆ..!

ಸೌರಮಂಡಲ ಹತ್ತು ಹಲವು ನಿಗೂಢಗಳ ಗೊಂಚಲು. ಇಲ್ಲಿ ನಡೆಯುವ ಕೌತುಕಗಳು ಅಚ್ಚರಿಯ ಜೊತೆಗೆ ಹತ್ತಾರು ಪ್ರಶ್ನೆಗಳನ್ನೂ ಮೂಡಿಸುತ್ತದೆ. ಗುರುವಾರ ರಾತ್ರಿ ಖಗೋಳ ವಿಸ್ಮಯಕ್ಕೆ ಅಂತರಿಕ್ಷ ಸಾಕ್ಷಿಯಾಗಿದೆ. ಚಂದ್ರ, (Moon) ಶುಕ್ರ (Venus) ಮತ್ತು ಗುರು (Jupiter) ಗ್ರಹಗಳು ಏಕಕಾಲದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಖಗೋಳಾಸಕ್ತರನ್ನು ಪುಳಕಗೊಳಿಸಿದೆ. ಮೂರೂ ಆಕಾಶಕಾಯಗಳು ಪರಸ್ಪರ ಒಟ್ಟಿಗೆ ಬರುತ್ತಿದ್ದಂತೆ ಆಕಾಶದಲ್ಲಿ ತ್ರಿಕೋನದಂತಹ ಆಕಾರ (Perfect Trifecta In Skies) ಸೃಷ್ಟಿಯಾಗಿದೆ. ಸೌರಮಂಡಲದಲ್ಲಿ ಪ್ರಕಾಶಮಾನವಾದ ಗ್ರಹಗಳು ಎಂದೇ ಕರೆಸಿಕೊಳ್ಳುವ ಶುಕ್ರ ಹಾಗೂ ಗುರುಗ್ರಹಗಳು, ಭೂಮಿಯ ಏಕೈಕ ಉಪಗ್ರಹವಾದ ಚಂದ್ರನ ಸಮೀಪದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿವೆ. ಸುಮಾರು 29 ಡಿಗ್ರಿಗಳ ಅಂತರವನ್ನು ಹೊಂದಿರುವ ಗ್ರಹಗಳು ಇತ್ತೀಚಿಗೆ ನಿಧಾನವಾಗಿ ಹತ್ತಿರಕ್ಕೆ ಸರಿಯುತ್ತಿದ್ದು, ಗುರುವಾರ ಕೇವಲ 9 ಡಿಗ್ರಿಯಷ್ಟು ಅಂತರಕ್ಕೆ ತಲುಪಿವೆ.

ಇದನ್ನೂ ಓದಿ : ಎಂಆರ್ ಐ ಸ್ಕ್ಯಾನ್ ವೇಳೆ ಗುಂಡೇಟು.. ವಕೀಲ ಸಾವು – ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣನಾ..!? 

ಫೆ.27ರಂದು ಇವುಗಳ ನಡುವಿನ ಅಂತರ 2.3 ಡಿಗ್ರಿಗೆ ತಲುಪಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದು, ಎರಡು ಗ್ರಹಗಳು ಸಮೀಪಕ್ಕೆ ಬಂದಿರುವ ಸಮಯದಲ್ಲೇ ಚಂದ್ರನೂ ಸಹ ಅವುಗಳ ಜೊತೆಗೆ ಕಾಣಿಸಿಕೊಂಡಿರುವುದು ಮತ್ತಷ್ಟು ಆಸಕ್ತಿಕರ ಎನಿಸಿದೆ. ಗುರುವಾರದ ವಿಶೇಷವನ್ನು ಮಿಸ್ ಮಾಡಿಕೊಂಡವರಿಗೆ ಮಾ.1ರಂದು ಮತ್ತೊಂದು ಅವಕಾಶ ಲಭಿಸಲಿದ್ದು, ಆ ದಿನ ಈ ಗ್ರಹಗಳು ಒಂದರ ಹಿಂದೊಂದು ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ವಿಶೇಷ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಎಂದು ಖಗೋಳ ತಜ್ಞರು ತಿಳಿಸಿದ್ದಾರೆ.

ವಿಶೇಷ ಅಂದರೆ ಈ ಗ್ರಹಗಳು ಒಂದರಿಂದ ಒಂದು ಲಕ್ಷಾಂತರ ಕಿಲೋ ಮೀಟರ್ ದೂರದಲ್ಲಿ ಇದ್ದರೂ ಕೂಡ ಭೂಮಿಯಿಂದ ನೋಡುವಾಗ ಜತೆ ಜತೆಗೆ ಇರುವಂತೆ ಕಾಣಿಸುತ್ತದೆ. ಪ್ರಪಂಚದಾದ್ಯಂತ ಅಸಂಖ್ಯಾತ ಜನರು ಆಕಾಶದಲ್ಲಿ ಕಾಣುವ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲು ಮನೆಯಿಂದ ಹೊರ ಬಂದು ಆಕಾಶ ಕಾಯಗಳನ್ನು ವೀಕ್ಷಿಸಿದರು. ಸೂರ್ಯ ಮತ್ತು ಚಂದ್ರನ ನಂತರ ಶುಕ್ರ ಗ್ರಹ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿದ್ದು, ಇದರ ಪ್ರಕಾಶ ಎಷ್ಟರ ಮಟ್ಟಿಗೆ ಹೊಳಪಿದೆ ಎಂದರೆ ಕೆಲವೊಮ್ಮೆ ಹಗಲು ಹೊತ್ತಿನಲ್ಲಿ ಕೂಡ ನಾವು ಆಕಾಶದಲ್ಲಿ ಗಮನಿಸಲು ಸಾಧ್ಯವಿದೆ.

ಇನ್ನು ಇಂತಹದೇ ವಿಸ್ಮಯವೊಂದು 2018ರ ಸೆಪ್ಟೆಂಬರ್‌ ತಿಂಗಳಲ್ಲಿ ನಡೆದಿತ್ತು. ಆ ದಿನ ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲು ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು. ತಜ್ಞರ ಪ್ರಕಾರ ವೈಜ್ಞಾನಿಕವಾಗಿ ಆ ವಿದ್ಯಮಾನವನ್ನು ಸೋಲಾರ್ ಹ್ಯಾಲೋ ಎಂದು ಕರೆಯುತ್ತಾರೆ. ಸೂರ್ಯನ ಕಿರಣಗಳು ಭೂಮಿಗೆ ಮೋಡಗಳನ್ನು ಹಾದು ಬರುವ ಮುನ್ನ ಈ ರೀತಿಯ ಏಳು ಬಣ್ಣದ ವೃತ್ತಾಕಾರದ ಉಂಗುರ ನಿರ್ಮಾಣವಾಗುತ್ತದೆ. ಭೂಮಿಯಿಂದ 20 ಸಾವಿರ ಅಡಿ ಎತ್ತರದ ವಾತಾವರಣದಲ್ಲಿ ಮೋಡದಲ್ಲಿನ ನೀರಿನ ಹನಿಗಳು ಸಾಂದ್ರಗೊಂಡು ಶೈತ್ತೀಕರಣವಾಗಿ ಮಂಜಿನ ಹರಳುಗಳಾಗಿರುತ್ತವೆ. ಈ ಗೋಳಾಕಾರದ ಮಂಜಿನ ಹರಳಿನ ಮೂಲಕ ಸೂರ್ಯನ ಬಿಳಿ ಬೆಳಕು ಹಲವು ಸಾರಿ ಪ್ರತಿಫಲಿಸಿ ವಕ್ರೀಭವನ ಮತ್ತು ಚದುರುವಿಕೆ ಉಂಟಾಗುತ್ತದೆ. ಇದರ ಪರಿಣಾಮ ಸೂರ್ಯನ ಸುತ್ತ 22 ಡಿಗ್ರಿ ವೃತ್ತಾಕಾರದಲ್ಲಿ ಈ ಬಗೆಯ ಕಾಮನ ಬಿಲ್ಲುಗಳು ಉಂಟಾಗುತ್ತವೆ ಎಂದು ಖಗೋಳ ವಿಜ್ಞಾನಿ ಹರೋನಹಳ್ಳಿ ಸ್ವಾಮಿ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ.

suddiyaana