ಹೃದಯಗಳ ಒಡೆಯ ಡಾ.ಸಿ.ಎನ್.ಮಂಜುನಾಥ್ – ಸತತ 17 ವರ್ಷಗಳ ಕಾಲ ನಿಸ್ವಾರ್ಥ ಸೇವೆ, ಜ. 31ರಂದು ಅವಧಿ ಮುಕ್ತಾಯ
ವೈದ್ಯರು ಅಂದ್ರೆ ದುಡ್ಡಿಗೆ ಪ್ರಾಮುಖ್ಯತೆ ಕೊಡ್ತಾರೆ. ಬಡರೋಗಿಗಳನ್ನ ಕಣ್ಣೆತ್ತಿಯೂ ನೋಡಲ್ಲ ಅನ್ನೋ ಅಪವಾದ ಇದೆ. ಆದ್ರೆ ಆ ಅಪವಾದವನ್ನ ಸುಳ್ಳು ಮಾಡಿದವವರು ಡಾ.ಸಿ.ಎನ್ ಮಂಜುನಾಥ್. ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್ ಎಂಬ ಧ್ಯೇಯವನ್ನ ಇಟ್ಟುಕೊಂಡು ಸಾವಿರಾರು ಬಡರೋಗಿಗಳ ಜೀವ ಉಳಿಸಿದ ಜೀವಧಾತ. ವೈದ್ಯಲೋಕದ ಪವಾಡಪುರುಷ ಅಂದ್ರೂ ತಪ್ಪಾಗಲ್ಲ. ನಾಡು ಕಂಡ ಅತ್ಯಂತ ಶ್ರೇಷ್ಠ ಮಟ್ಟದ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಅವರ ಸೇವಾವಧಿ ಜನವರಿ 31ಕ್ಕೆ ಮುಕ್ತಾಯಗೊಂಡಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರ ಅವಧಿ ಮುಗಿದಿದೆ. ಹೃದಯದ ಡಾಕ್ಟರ್ ಅಂತಾನೇ ಫೆಮಸ್ ಆಗಿರುವ ಡಾ.ಸಿ.ಎನ್.ಮಂಜುನಾಥ್ ಇಂದು ದೇಶವೇ ಹೆಮ್ಮೆ ಪಡುವಂಥ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ‘ಶಾಲಾ ಸಮಯ ಬದಲಾವಣೆ ಮಾಡಿ’ – ಡಾ. ಸಿ. ಎನ್ ಮಂಜುನಾಥ್ ಸಲಹೆ
17 ವರ್ಷಗಳ ನಿಸ್ವಾರ್ಥ ಸೇವೆ
ಸತತ 17 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿರುವ ಮಂಜುನಾಥ್ ಜನವರಿ 31ರಂದು ನಿವೃತ್ತಿ ಹೊಂದಿದ್ದಾರೆ. 1988ರಲ್ಲಿ ಜಯದೇವ ಆಸ್ಪತ್ರೆಯಲ್ಲಿ ಉಪನ್ಯಾಸಕರಾಗಿ ಸೇರಿದ ಡಾ. ಮಂಜುನಾಥ್ರ ಸಾಧನೆ ಇಂದು ವಿಶ್ವದ ಭೂಪಟದಲ್ಲಿ ಕಾಣುತ್ತಿದೆ. ಸಾಮಾನ್ಯ ಕುಟುಂಬದಿಂದ ಬಂದ ಅವರು ಬಡವರ, ನಿರ್ಗತಿಕರ ಧ್ವನಿಯಾಗಿದ್ದಾರೆ. ಕಡತಕ್ಕಿಂತ ಜೀವ ಮುಖ್ಯ, ಚಿಕಿತ್ಸೆ ಮೊದಲು-ಹಣ ಪಾವತಿ ನಂತರ ಎನ್ನುವುದು ಅವರ ಧೈಯವಾಕ್ಯ. ಹಲವು ಅವಮಾನ, ಸವಾಲುಗಳನ್ನು ಎದುರಿಸಿ 125 ಹಾಸಿಗೆ ಸಾಮರ್ಥ್ಯವಿದ್ದ ಸಾಮಾನ್ಯ ಆಸ್ಪತ್ರೆಯನ್ನು ವಿಶ್ವವೇ ತಿರುಗಿ ನೋಡುವಂತೆ ಕಟ್ಟಿ ಬೆಳೆಸಿದ್ದಾರೆ. ಮೊದಲು ಜಯದೇವ ಆಸ್ಪತ್ರೆ ಇದ್ದದ್ದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಂತರ ಬನ್ನೇರುಘಟ್ಟ ರಸ್ತೆಗೆ ಸ್ಥಳಾಂತರವಾಯಿತು. 2006ರಲ್ಲಿ ಡಾ. ಮಂಜುನಾಥ್ ಅದರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಾಗ, ಅದು ಅವ್ಯವಸ್ಥೆಯ ತಾಣವಾಗಿತ್ತು. ಬ್ಯಾಂಕಲ್ಲಿ 5 ಕೋಟಿ ನಿಧಿ ಇದ್ದರೆ, 6 ಕೋಟಿ ರೂಪಾಯಿ ಸಾಲ ಇತ್ತು. ಬಡವರ ಆರೋಗ್ಯ ನಿಧಿಯಲ್ಲಿ ಕೇವಲ 5 ಲಕ್ಷ ರೂಪಾಯಿ ಇತ್ತು. ಪ್ರಸ್ತುತ ಆ ನಿಧಿಯಲ್ಲಿ 150 ಕೋಟಿ ರೂ. ಇದೆ. ಅದರಿಂದ ಬರುವ ಬಡ್ಡಿಯಿಂದ ಬಡ ಹೃದ್ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನ ಜಿಲ್ಲೆ ಚೋಳೇನಹಳ್ಳಿಯಲ್ಲಿ 1957ರ ಸೆಪ್ಟೆಂಬರ್ 23ರಂದು ನಂಜಪ್ಪ ಮತ್ತು ಸೊಂಬಮ್ಮ ದಂಪತಿಯ ಮಗನಾಗಿ ಜನಿಸಿದವರು ಮಂಜುನಾಥ್. ಮೈಸೂರು ಮೆಡಿಕಲ್ ಕಾಲೇಜ್ನಲ್ಲಿ ಎಂಬಿಬಿಎಸ್ ಮುಗಿಸಿ, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಮಾಡಿ, ಮಣಿಪಾಲದಲ್ಲಿ ಡಿಎಂ ಕಾರ್ಡಿಯಾಲಜಿ ಪೂರೈಸಿದವರು. ವಿದ್ಯಾಭ್ಯಾಸದ ವೇಳೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರಿ ಡಾ. ಅನುಸೂಯ ಅವರನ್ನು ವಿವಾಹವಾಗಿದ್ದರು. ತಾವು ಮಾಜಿ ಪ್ರಧಾನಿಗಳ ಅಳಿಯನಾಗಿದ್ರೂ ಎಲ್ಲೂ ಕೂಡ ಅದನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡವರಲ್ಲ. ಹೀಗಾಗೇ ಜಯದೇವ ಅನ್ನೋ ಆಸ್ಪತ್ರೆ ಲಕ್ಷಾಂತರ ರೋಗಿಗಳ ಪಾಲಿಗೆ ದೇವಸ್ಥಾನವಾಗಿದೆ.
ಡಾ.ಮಂಜುನಾಥ್ ಅವಧಿಯಲ್ಲಿ 75 ಲಕ್ಷಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 4 ಲಕ್ಷ ಜನರಿಗೆ ಆಂಜಿಯೋಗ್ರಾಂ. ಆಂಜಿಯೋಪ್ಲಾಸ್ಟಿ, ಸ್ಟಂಟ್ ಅಳವಡಿಕೆಯಾಗಿದೆ. ಇಂದಿಗೂ ಪ್ರತಿದಿನ 1,200 ರಿಂದ 1,500 ಹೊರರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ. ಕಳೆದ ವರ್ಷ 6.55 ಲಕ್ಷಕ್ಕೂ ಹೆಚ್ಚು ಜನ ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 68,902 ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ. 5,500 ಜನರಿಗೆ ತೆರೆದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 3.78 ಲಕ್ಷ ಜನರಿಗೆ ಎಕೋ ಟೆಸ್ಟ್ ಮಾಡಲಾಗಿದೆ. ಸಂಸದೀಯ ಸ್ಥಾಯಿ ಸಮಿತಿ ಕೂಡ ಡಾ. ಮಂಜುನಾಥ್ ಕಾರ್ಯವೈಖರಿ ದೇಶಕ್ಕೆ ಮಾದರಿ, ಈ ಆಸ್ಪತ್ರೆಯನ್ನು ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಅನುಸರಿಸಬೇಕು ಎಂದು ಹೇಳಿದೆ. ಅನೇಕ ಗಣ್ಯರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಡಾ.ಮಂಜುನಾಥ್ ಅವರ ನಿಸ್ವಾರ್ಥ ಸೇವೆಯನ್ನ ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಸೇರಿದಂತೆ ಅನೇಕ ಪುರಸ್ಕಾರಗಳು ಸಿಕ್ಕಿವೆ. ಹಣಕ್ಕೆ ಯಾವತ್ತೂ ಬೆಲೆ ಕೊಡದ ಮಂಜುನಾಥ್ ಅವರು ಬಡರೋಗಿಗಳ ಪಾಲಿಗೆ ದೇವರೇ ಆಗಿದ್ದಾರೆ. ಹಣವಿಲ್ಲದೆ, ಸೂಕ್ತ ದಾಖಲಾತಿಗಳಿಲ್ಲದೆ ಚಿಕಿತ್ಸೆಗೆ ಬರುತ್ತಿದ್ದ ಹೃದ್ರೋಗಿಗಳು ಗುಣಮುಖರಾಗಿ ಅವರ ಕುಟುಂಬ ಸದಸ್ಯರೊಂದಿಗೆ ನಗುನಗುತ್ತಾ ಮನೆಗೆ ಹೋಗುವ ದೃಶ್ಯ ತನ್ನಲ್ಲಿ ಸಾರ್ಥಕತೆಯ ಭಾವ ಮೂಡಿಸುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಅವರ ಈ ಮಾತುಗಳೇ ಅವರ ವ್ಯಕ್ತಿತ್ವ ಎಂಥಾದ್ದು ಅನ್ನೋದನ್ನ ತೋರಿಸುತ್ತೆ. ಮುಂದೆ ಜಯದೇವ ಹೃದ್ರೋಗ ಸಂಸ್ಥೆಗೆ ಯಾರೇ ನಿರ್ದೇಶಕರಾದ್ರೂ ಡಾ.ಮಂಜುನಾಥ್ ಅವ್ರ ಧ್ಯೇಯವನ್ನ ಪಾಲಿಸಬೇಕಿದೆ. ಆಗ ಮಾತ್ರವೇ ಹೃದಯವಂತನಿಗೆ ನಾವು ನೀಡುವ ನಿಜವಾದ ಗೌರವ.