ಲೋಕಸಭೆಯಿಂದ ರಾಹುಲ್ ಗಾಂಧಿ ಅನರ್ಹ – ವಯನಾಡಿನಲ್ಲಿ ‘ಬ್ಲ್ಯಾಕ್ ಡೇ’ ಆಚರಣೆ
‘ರಾಹುಲ್ ಗಾಂಧಿ ವಿರುದ್ಧ ಕ್ರಮ ರಾಜಕೀಯ ಪ್ರೇರಿತ’ – ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ್ದನ್ನು ಖಂಡಿಸಿ ವಯನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಬ್ಲ್ಯಾಕ್ ಡೇ ಆಚರಣೆ ಮಾಡಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಎನ್.ಡಿ ಅಪ್ಪಚ್ಚನ್ ಈ ವಿಚಾರ ತಿಳಿಸಿದ್ದಾರೆ. ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದ ಸಂಸದರಾಗಿದ್ದರು. ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಮಾತನಾಡಿ, ‘ರಾಹುಲ್ ಗಾಂಧಿ ಅವರ ವಿರುದ್ಧದ ಕ್ರಮ ರಾಜಕೀಯ ಪ್ರೇರಿತ ತರಾತುರಿಯಾಗಿದೆ. ಲೋಕಸಭೆಯ ಸೆಕ್ರೆಟರಿಯೇಟ್ ಕ್ರಮವನ್ನು ಕಾಂಗ್ರೆಸ್ ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ಎದುರಿಸಲಿದೆ. ರಾಹುಲ್ ಗಾಂಧಿ ಕಾನೂನು ಮಾರ್ಗದಲ್ಲಿ ಸಂಸದ ಸ್ಥಾನಕ್ಕೆ ಹಿಂತಿರುಗುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯರು ಬಿಜೆಪಿ ಸರ್ಕಾರ ಮತ್ತು ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ದೆಹಲಿಯ ಎಐಸಿಸಿ ಕಚೇಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್ ಮನುಸಿಂಘ್ವಿ, ಕಾನೂನಾತ್ಮಕ ಮತ್ತು ರಾಜಕೀಯವಾಗಿ ಈ ವಿಚಾರವನ್ನು ನೋಡಬೇಕು. ಕೇಂದ್ರ ಸರ್ಕಾರದ ನಡತೆಯಿಂದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇದೆ ಕಾರಣಕ್ಕೆ ರಾಹುಲ್ ಗಾಂಧಿ ಸದನದಲ್ಲಿ ಮತ್ತು ಹೊರಗಡೆ ಮಾತನಾಡುತ್ತಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಖಂಡನೆ
ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಖಂಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಸತ್ಯ ಹೇಳುವವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಸತ್ಯ ಮಾತಾಡುವುದನ್ನು ನಾವು ನಿಲ್ಲಿಸುವುದಿಲ್ಲ. ಪ್ರಜಾಪ್ರಭುತ್ವ ಉಳಿಸಲು ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ರಾಹುಲ್ ಅವರನ್ನು ಅನರ್ಹಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಸತ್ಯವನ್ನು ಮಾತನಾಡಲು ಮತ್ತು ಪ್ರಜಾಪ್ರಭುತ್ವದ ತತ್ವಗಳ ಪ್ರಕಾರ ಜನರ ಹಕ್ಕುಗಳಿಗಾಗಿ ಹೋರಾಡುವವರ ಬಾಯಿ ಮುಚ್ಚಿಸಲು ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ’ ಎಂದು ಆರೋಪಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ, ‘ಪ್ರಜಾಪ್ರಭುತ್ವದಲ್ಲಿ ಇಂದು ‘ಕರಾಳ ದಿನ’!, ಇಂದು “ಮಾತನಾಡುವ ಹಕ್ಕಿಗೆ” ಒಂದು “ಕಳಂಕ”!, ಇಂದು “ದೇಶಭ್ರಷ್ಟರು ಮತ್ತು ಬ್ಯಾಂಕ್ ವಂಚಕರು” ಎಂದು ಕರೆಯುವ “ಸಾವಿನ ಗಂಟೆ”!, Adani ಜೆಪಿಸಿಯನ್ನು ಕೇಳಿದ್ದಕ್ಕಾಗಿ ಇಂದು ಪ್ರಧಾನಿಯ ಕುರುಡು ಪ್ರತೀಕಾರದ ದಿನ!, ಇಂದು ಸತ್ಯಕ್ಕಾಗಿ ಹೋರಾಡುವ ಮತ್ತು ತಲೆಬಾಗದ ದಿನ’ ಎಂದು ಹೇಳಿದ್ದಾರೆ.