ಮುಳ್ಳು ಹಂದಿ ಮರಿಗಳ ಬೇಟೆಗೆ ಚಿರತೆ ಸಂಚು – ಹೇಗಿದೆ ಪುಟಾಣಿಗಳಿಗೆ ಟೈಟ್ ಸೆಕ್ಯೂರಿಟಿ?

ಮುಳ್ಳು ಹಂದಿ ಮರಿಗಳ ಬೇಟೆಗೆ ಚಿರತೆ ಸಂಚು – ಹೇಗಿದೆ ಪುಟಾಣಿಗಳಿಗೆ ಟೈಟ್ ಸೆಕ್ಯೂರಿಟಿ?

ಜಗತ್ತು ವಿಸ್ಮಯಗಳ ಆಗರ. ಇಲ್ಲಿ ಪ್ರತಿಯೊಂದು ಜೀವಿಯೂ ಅದರದ್ದೇ ಆದ ವಿಶೇಷತೆಯಿಂದ ಕೂಡಿರುತ್ತದೆ. ಕೆಲವೊಂದು ಜೀವಿಗಳು ರಕ್ಷಣೆಗಾಗಿ ತಮ್ಮ ರೂಪವನ್ನೇ ಬದಲಾಯಿಸಿಕೊಳ್ಳುತ್ತವೆ. ಇನ್ನೂ ಕೆಲವು ತಮ್ಮ ಬಲಿಷ್ಠವಾದ ಹಲ್ಲು, ಬಲಿಷ್ಠವಾದ ಉಗುರುಗಳಿಂದ ಕ್ರೂರ ಪ್ರಾಣಿಗಳ ವಿರುದ್ದ ಹೋರಾಡುತ್ತವೆ. ಮುಳ್ಳು ಹಂದಿಗಳು ಕೂಡ ತಮ್ಮ ದೇಹದ ಮೇಲಿರುವ ಚೂಪಾದ ಮುಳ್ಳುಗಳಿಂದ ತಮ್ಮನ್ನ ರಕ್ಷಿಸಿಕೊಳ್ಳುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಮುಳ್ಳು ಹಂದಿಗಳು ತಮ್ಮ ಪುಟಾಣಿ ಮರಿಗಳನ್ನು ಚಿರತೆಯಿಂದ ರಕ್ಷಿಸಿರುವ ವಿಡಿಯೋವೊಂದು ವೈರಲ್ ಆಗಿದೆ.

ಇದನ್ನೂ ಓದಿ: ಚಳಿ ಅಲ್ವಾ… ನಂಗೂ ಶೀತ ಆಗಿದೆ… – ಘರ್ಜಿಸೋ “ಹುಲಿ”ರಾಯನ ನಾನ್ ಸ್ಟಾಪ್ ಸೀನು!

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲು ಸಕ್ರಿಯವಾಗಿರುತ್ತಾರೆ. ಹಾಗಾಗಿ ಸಾಕಷ್ಟು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಾಹು ಅವರು ಮುಳ್ಳುಹಂದಿ ಜೋಡಿಯೊಂದು ತನ್ನ ಮರಿಗಳನ್ನು ಹೇಗೆ ಚಿರತೆಯಿಂದ ರಕ್ಷಿಸಿಕೊಂಡಿತು ಎಂಬ ದೃಶ್ಯವನ್ನು ಹಂಚಿಕೊಂಡಿದ್ದಾರೆ.

ಎರಡು ಮುಳ್ಳುಹಂದಿಗಳು ತಮ್ಮ ಮರಿಗಳೊಂದಿಗೆ ರಸ್ತೆ ದಾಟುತ್ತಿರುವ ದೃಶ್ಯದ ಮೂಲಕ ವಿಡಿಯೋ ಆರಂಭವಾಗುತ್ತದೆ. ಈ ವೇಳೆ ಅಲ್ಲಿಗೆ ಬರುವ ಚಿರತೆ, ಮುಳ್ಳುಹಂದಿ ಮರಿಗಳನ್ನು ಬೇಟೆಯಾಡಲು ಯತ್ನಿಸುತ್ತದೆ. ಈ ಸಂದರ್ಭದಲ್ಲಿ ಎರಡು ದೊಡ್ಡ ಮುಳ್ಳುಹಂದಿಗಳು ಚಿರತೆಯನ್ನು ಎದುರಿಸುತ್ತವೆ. ಆದರೂ ಚಿರತೆ ಮುಳ್ಳು ಹಂದಿ ಮರಿಗಳ  ಮೇಲೆ ದಾಳಿ ಮಾಡಲು ಯತ್ನಿಸುತ್ತದೆ. ಆದರೆ, ಪೋಷಕ ಮುಳ್ಳುಹಂದಿಯ ಭದ್ರಕೋಟೆಯನ್ನು ದಾಟಲು ಇದಕ್ಕೆ ಸಾಧ್ಯವಾಗುವುದೇ ಇಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

` ಚಿರತೆಯಿಂದ ತಮ್ಮ ಮರಿಯನ್ನು ರಕ್ಷಿಸಲು ಮುಳ್ಳುಹಂದಿ ಪೋಷಕರು ಝಡ್‌ ಪ್ಲಸ್ ಭದ್ರತೆಯನ್ನು ಒದಗಿಸಿವೆ. ಧೈರ್ಯದಿಂದ ಹೋರಾಡಿವೆ ಮತ್ತು ಚಿರತೆ ತಮ್ಮ ಮರಿಯನ್ನು ಮುಟ್ಟಲು ಮಾಡುವ ಎಲ್ಲಾ ಪ್ರಯತ್ನವನ್ನು ವಿಫಲಗೊಳಿಸಿವೆ’ ಎಂಬ ಕ್ಯಾಪ್ಶನ್‌ನೊಂದಿಗೆ ಸುಪ್ರಿಯಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಚಿರತೆಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು ಎಂಬುದು ಸತ್ಯ. ಆದರೆ, ಕೆಲವೊಂದು ಸಲ ಚಿರತೆಗಳು ತಮ್ಮ ಪ್ರಯತ್ನದಲ್ಲಿ ಕೈಸೋಲುತ್ತವೆ. ಯಾಕೆಂದರೆ, ಎದುರಾಳಿ ಪ್ರಾಣಿಗಳಲ್ಲೂ ತಮ್ಮನ್ನು ರಕ್ಷಿಸುವ ಅದ್ಭುತ ಅಸ್ತ್ರಗಳೂ ಇರುತ್ತವೆ. ಅದಕ್ಕೆ ಸಾಕ್ಷಿ ಈ ದೃಶ್ಯ. ಇಲ್ಲಿ ಬೇಟೆಯ ಪ್ರಯತ್ನದ ಜತೆಗೆ ಪ್ರಾಣಿಗಳು ತಮ್ಮ ಮರಿಗಳನ್ನು ಹೇಗೆ ರಕ್ಷಿಸಿಕೊಳ್ಳುತ್ತವೆ ಎಂಬ ಅಂಶವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

suddiyaana