ಹಾವಿನಲ್ಲೂ ಪತ್ತೆಯಾಯ್ತು ಕ್ಯಾನ್ಸರ್! – ಧಾರವಾಡದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಹಾವಿನಲ್ಲೂ ಪತ್ತೆಯಾಯ್ತು ಕ್ಯಾನ್ಸರ್! – ಧಾರವಾಡದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಧಾರವಾಡ: ಕ್ಯಾನ್ಸರ್ ಅಂದಾಗ ಎಲ್ಲರಿಗೂ ಒಂದು ರೀತಿಯ ಭಯ ಕಾಡುತ್ತದೆ. ಏಕೆಂದರೆ ಈ ಕಾಯಿಲೆ ಒಮ್ಮೆ ದೇಹ ಸೇರಿಕೊಂಡರೆ, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ ತಗಲುತ್ತದೆ. ಈ ಮಾರಣಾಂತಿಕ ಕಾಯಿಲೆಯಿಂದ ಬದುಕುಳಿದವರೆ ಅದೃಷ್ಟಶಾಲಿಗಳು. ಆದರೆ ಈಗ ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳಲ್ಲೂ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂಬುದನ್ನು ಕೇಳಿದ್ದೇವೆ. ಆದರೆ ಧಾರವಾಡದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಹಾವಿನಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ.

ಧಾರವಾಡದ ಪ್ರಾಣಿ ಪ್ರಿಯ ಹಾಗೂ ಪ್ರಾಣಿ ರಕ್ಷಕರಾಗಿರುವ ಸೋಮಶೇಖರ್ ಚೆನ್ನಶೆಟ್ಟಿ ಅವರಿಗೆ ಟ್ರಿಂಕೆಟ್ (ಆಭರಣ ಹಾವು) ಎಂಬ ಹಾವೊಂದು ಸಿಕ್ಕಿದೆ. ನೋಡಲು ಸುಂದರವಾಗಿದ್ದ ಹಾವಿನ ತಲೆ ಊದಿಕೊಂಡಿತ್ತು. ಈ ಹಾವನ್ನು ಕೃಷಿ ವಿವಿ ಪಶು ಚಿಕಿತ್ಸಾ ವಿಭಾಗಕ್ಕೆ ತಂದಿದ್ದು, ವೈದ್ಯ ಡಾ. ಅನಿಲಕುಮಾರ ಪಾಟೀಲ ಅವರು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಈ ಕೋಳಿ ಮರಿಗೆ ಎರಡಲ್ಲ, ನಾಲ್ಕು ಕಾಲು – ಅಪರೂಪದ ದೃಶ್ಯ

ತಪಾಸಣೆ ನಡೆಸುವ ವೇಳೆ ಹಾವಿಗೆ ಕ್ಯಾನ್ಸರ್ ಕಾರಕ ಗೆಡ್ಡೆಇರುವುದು ಖಚಿತವಾಗಿದೆ. ಬಳಿಕ ಹಾವಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಕ್ಯಾನ್ಸರ್ ಕಾರಕ ಗೆಡ್ಡೆಯನ್ನು ಹೊರತೆಗೆಯಲಾಗಿದೆ.

‘ಮನೆಯೊಂದರಲ್ಲಿ ಹಾವು ಸೇರಿಕೊಂಡಿರುವ ಬಗ್ಗೆ ತಮಗೆ ಕರೆ ಬಂದಿತ್ತು. ವಿಷಕಾರಿಯಲ್ಲದ ಟ್ರಿಂಕೆಟ್ ಹಾವನ್ನು ತಕ್ಷಣವೇ ರಕ್ಷಿಸಲಾಯಿತು. ಆ ಹಾವಿನ ತಲೆಯಲ್ಲಿ ಗೆಡ್ಡೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಡಾ. ಅನಿಲ್ ಕುಮಾರ್ ಪಾಟೀಲ್ ಅವರ ಬಳಿ ಕರೆದೊಯ್ಯಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್ ಕಾರಕ ಗೆಡ್ಡೆ ಹೊರತೆಗೆದಿದ್ದಾರೆ’ ಎಂದು ಪ್ರಾಣಿ ಪ್ರಿಯ ಸೋಮಶೇಖರ್ ಚೆನ್ನಶೆಟ್ಟಿ ಹೇಳಿದ್ದಾರೆ.

ಈ ಬಗ್ಗೆ ಡಾ. ಅನಿಲ್ ಕುಮಾರ ಪಾಟೀಲ್ ಅವರು ಮಾತನಾಡಿ, “ಹಾವುಗಳು ಸೂಕ್ಷ್ಮ ಜೀವಿಗಳಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಸವಾಲಿನ ವಿಷಯವಾಗಿದೆ.  ಈ ಹಾವಿಗೆ ತಲೆ ಹಾಗು ಕಣ್ಣಿನ ಭಾಗದಲ್ಲಿ ಗೆಡ್ಡೆ ಬೆಳವಣಿಗೆಯಾಗಿತ್ತು. ಇದನ್ನು ಹೊರತೆಗೆಯುವ ಶಸ್ತ್ರಚಿಕಿತ್ಸೆ ಸುಮಾರು ಒಂದು ಗಂಟೆ 30 ನಿಮಿಷಗಳ ಕಾಲ ನಡೆದಿದೆ. ಇದು ಅತ್ಯಂತ ಅಪಾಯ ಹೊಂದಿದ್ದ ಶಸ್ತ್ರಚಿಕಿತ್ಸೆಯಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಹಾವಿಗೆ ಇನ್ನೂ 2 ದಿನಗಳ ಕಾಲ ಡ್ರೆಸ್ಸಿಂಗ್ ಅಗತ್ಯವಿದ್ದು, ಕ್ಯಾನ್ಸರ್ ಗೆಡ್ಡೆ ಇದ್ದ ಭಾಗದಲ್ಲಿ ಮತ್ತೆ ಟ್ಯೂಮರ್ ಬೆಳವಣಿಗೆಯಾವುದೋ ಇಲ್ಲವೋ ಎಂಬುದನ್ನೂ ಗಮನಿಸಬೇಕಿದೆ ಎನ್ನುತ್ತಾರೆ ವೈದ್ಯರು.

suddiyaana