ಒಲಿಂಪಿಕ್ಸ್ ಗೆ 5 ರಿಂಗ್ ಗಳು ಯಾಕೆ? – ಒಲಿಂಪಿಕ್ಸ್ ಚಿಹ್ನೆಯ ಅರ್ಥವೇನು?
ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಜುಲೈ 26 ರಿಂದ 33ನೇ ಒಲಿಂಪಿಕ್ಸ್ ಆರಂಭವಾಗಲಿದೆ. ಈ ಕ್ರೀಡಾಕೂಟದಲ್ಲಿ 206 ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 206 ದೇಶಗಳು ಒಲಿಂಪಿಕ್ಸ್ ಚಿಹ್ನೆಯ ಅಡಿಯಲ್ಲಿ ಕಣಕ್ಕಿಳಿಯಲಿವೆ. ಅಂದ್ಹಾಗೆ ಈ ಒಲಿಂಪಿಕ್ಸ್ ಚಿಹ್ನೆಯ ಅರ್ಥವೇನು? ಒಲಿಂಪಿಕ್ಸ್‌ಗೆ ಐದು ರಿಂಗ್ ಗಳು ಇರೋದು ಯಾಕೆ? ಇದ್ರ ಮಹತ್ವವೇನು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಾಡಿದ್ದುಣ್ಣೋ ಮಹರಾಯ – ಪಾಂಡ್ಯ MIಗೆ ಬಂದಿದ್ದೇ ತಪ್ಪಾಯ್ತಾ?
ಬಹುನಿರೀಕ್ಷಿತ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವೇದಿಕೆ ಸಜ್ಜಾಗಿದೆ. ಈ ಮಹಾ ಕ್ರೀಡಾಕೂಟ ಜುಲೈ 26 ರಂದು ಆರಂಭವಾಗಲಿದೆ. ಈ ಬಾರಿಯ ಉದ್ಘಾಟನಾ ಸಮಾರಂಭ ಕೊಂಚ ವಿಭಿನ್ನವಾಗಿರಲಿದೆ. ಇದು ಪ್ಯಾರಿಸ್ನ ಸೀನ್ ನದಿ ದಡದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವನ್ನು ಕ್ರೀಡಾಂಗಣದ ಬದಲು ನದಿದಡದಲ್ಲಿ ಆಯೋಜಿಸಲಾಗಿದೆ. ಹೀಗಾಗಿ ಈ ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ದೇಶಗಳ ಅಭಿಮಾನಿಗಳ ದೃಷ್ಟಿ ಇದೀಗ ಪ್ಯಾರಿಸ್ನತ್ತ ನೆಟ್ಟಿದೆ. ಅಂದ್ಹಾಗೆ 206 ದೇಶಗಳು ಒಲಿಂಪಿಕ್ಸ್ ಚಿಹ್ನೆಯ ಅಡಿಯಲ್ಲಿ ಕಣಕ್ಕೆ ಇಳಿಯುತ್ತವೆ. ಅಂದರೆ ಒಲಿಂಪಿಕ್ಸ್ ಧ್ಯೇಯವಾಕ್ಯಗಳೊಂದಿಗೆ ಒಪ್ಪಿತವಾಗಿರುವ ದೇಶಗಳಿಗೆ ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಹೀಗಾಗಿಯೇ ಪ್ರತಿ ಕ್ರೀಡಾಪಟುಗಳ ವಸ್ತ್ರದ ಮೇಲೆ ಒಲಿಂಪಿಕ್ ಚಿಹ್ನೆಯನ್ನು ಬಳಸಲಾಗುತ್ತದೆ. ಹೀಗೆ ಬಳಸಲಾಗುವ ಐದು ಬಣ್ಣದ ರಿಂಗ್ ಚಿಹ್ನೆಗೆ ವಿಶೇಷ ಅರ್ಥವಿದೆ.
ಹೌದು, ಪ್ರತಿ ಒಲಿಂಪಿಕ್ಸ್ ವೇಳೆಯು ಕಾಣಿಸಿಕೊಳ್ಳುವ ಒಲಿಂಪಿಕ್ ಧ್ವಜದಲ್ಲಿ ಐದು ವಿಭಿನ್ನ ಬಣ್ಣಗಳಿಂದ ಕೂಡಿದ ರಿಂಗ್ ಗಳನ್ನು ನೀವು ನೋಡಿರ್ತೀರಿ. ಧ್ವಜ್ದ ಎಡದಿಂದ ಬಲಕ್ಕೆ ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣಗಳನ್ನು ಬಳಸಲಾಗಿದೆ. ಈ ಐದು ಬಣ್ಣಗಳು ಮತ್ತು ರಿಂಗ್ಗಳು 5 ಜನವಸತಿಯ ಖಂಡಗಳನ್ನು ಪ್ರತಿನಿಧಿಸುತ್ತದೆ. ಆ ಖಂಡಗಳು ಯಾವುದಂದ್ರೆ, ಮೊದಲನೆಯದ್ದು ಆಫ್ರಿಕಾ, ಎರಡನೆಯದ್ದು ಅಮೆರಿಕ ಇದ್ರಲ್ಲಿ ಉತ್ತರ ಹಾಗೂ ದಕ್ಷಿಣ ಅಮೆರಿಕ ವನ್ನು ಒಂದು ಖಂಡವಾಗಿ ಪರಿಗಣಿಸಲಾಗಿದೆ. ಮೂರನೆಯದ್ದು ಏಷ್ಯಾ. ನಾಲ್ಕನೆಯದ್ದು ಯುರೋಪ್, ಐದನೆಯ ಖಂಡ ಓಷಿಯಾನಿಯಾ. ಪೆಸಿಫಿಕ್ ಸಾಗರದ ದ್ವೀಪಗಳ ಪ್ರದೇಶಕ್ಕೆ ಓಷಿಯಾನಿಯಾ ಎಂಬ ಹೆಸರಿನಿಂದ ಕರೆಯಲಾಗುತ್ತೆ.
ಇನ್ನು ಒಲಿಂಪಿಕ್ಸ್ ಧ್ವಜದ ರಿಂಗ್ಗೆ ಐದು ಬಣ್ಣಗಳನ್ನು ನೀಡಲಾಗಿದೆ. ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ಧ್ವಜಗಳಿಗೆ ಸಾಮಾನ್ಯವಾಗಿರುವ ಬಣ್ಣಗಳನ್ನು ಪ್ರತಿನಿಧಿಸಲು ಈ ಬಣ್ಣಗಳನ್ನು ಬಳಸಲಾಗಿದೆ. ಇದಾಗ್ಯೂ ನಿರ್ದಿಷ್ಟ ರಾಷ್ಟ್ರ ಅಥವಾ ಸಮುದಾಯವನ್ನು ಈ ಬಣ್ಣಗಳು ಪ್ರತಿನಿಧಿಸುವುದಿಲ್ಲ. ಬದಲಾಗಿ ಜನವಸತಿಯಿರುವ ಇದು ಐದು ಖಂಡಗಳ ಒಕ್ಕೂಟ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಪ್ರಪಂಚದಾದ್ಯಂತದ ಕ್ರೀಡಾಪಟುಗಳನ್ನು ಈ ಬಣ್ಣ ಮತ್ತು ಚಿಹ್ನೆ ಪ್ರತಿನಿಧಿಸುತ್ತದೆ.
ಇನ್ನು ಒಲಿಂಪಿಕ್ಸ್ ನ ಮೂಲ ಧ್ಯೇಯವಾಕ್ಯವೆಂದರೆ ಹೆಂಡಿಯಾಟ್ರಿಸ್ ಸಿಟಿಯಸ್, ಅಲ್ಟಿಯಸ್, ಫೋರ್ಟಿಯಸ್. ಅಂದರೆ ಲ್ಯಾಟಿನ್ ಭಾಷೆಯಲ್ಲಿ “ವೇಗ, ಉನ್ನತ, ಶಕ್ತಿಶಾಲಿ”. ಈ ಧ್ಯೇಯವಾಕ್ಯವನ್ನು 1924 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪರಿಚಯಿಸಲಾಯಿತು.
ಇದಾದ ಬಳಿಕ 2021 ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಧ್ಯೇಯವಾಕ್ಯವಾಗಿ ʼಜೊತೆಯಾಗಿ ಯನ್ನು ಸೇರಿಸಲಾಯಿತು. ಅದರಂತೆ ಇದೀಗ ಶತಮಾನದ ಬಳಿಕ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ವೇಗ, ಉನ್ನತ, ಶಕ್ತಿಶಾಲಿ ಮತ್ತು ಜೊತೆಯಾಗಿ ಎಂಬ ಧ್ಯೇಯ ವಾಕ್ಯದಲ್ಲಿ ಕ್ರೀಡಾಪಟುಗಳು ಕಣಕ್ಕಿಳಿಯುತ್ತಿದ್ದಾರೆ. ಟಿ20 ವಿಶ್ವಕಪ್ ಹಬ್ಬ ಮುಗಿದ ನಂತ್ರ ಕ್ರೀಡಾಭಿಮಾನಿಗಳು ಒಲಿಂಪಿಕ್ಸ್ ಹಬ್ಬವನ್ನ ಕಣ್ತುಂಬಿಕೊಳ್ಳಲು ಪ್ರಪಂಚದಾದ್ಯಂತ ಕಾತುರರಾಗಿದ್ದಾರೆ.