Pendrive ಪ್ರಜ್ವಲ್ ಗೆ ಸೋಲಿನ ಶಾಕ್ – ಹಾಸನದಲ್ಲಿ ಶ್ರೇಯಸ್ ಪಟೇಲ್ ಭರ್ಜರಿ ಗೆಲುವು

Pendrive ಪ್ರಜ್ವಲ್ ಗೆ ಸೋಲಿನ ಶಾಕ್ – ಹಾಸನದಲ್ಲಿ ಶ್ರೇಯಸ್ ಪಟೇಲ್ ಭರ್ಜರಿ ಗೆಲುವು

ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಹಾಸನದಲ್ಲಿ ಕೈ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಸತತ 25 ವರ್ಷಗಳ ಬಳಿಕ ಹಾಸನ ಕಾಂಗ್ರೆಸ್ ವಶವಾಗಿದೆ. ಪೆನ್‌ಡ್ರೈವ್ ಪ್ರಜ್ವಲ್ ಹೀನಾಯವಾಗಿ ಸೋಲು ಕಂಡಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರ ಇಡೀ ರಾಷ್ಟ್ರಾದ್ಯಂತ ಸದ್ದು ಮಾಡಿದ ಕ್ಷೇತ್ರ. ರಾಜ್ಯದ 28 ಕ್ಷೇತ್ರಗಳಲ್ಲಿ ಹಾಸನವು ಈ ಬಾರಿ ಅತಿ ಹೆಚ್ಚು ಗಮನ ಸೆಳೆದಿತ್ತು. ಅದಕ್ಕೆ ಕಾರಣವೂ ಇದೆ. ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್‌ ಪ್ರಕರಣ ಲೋಕಸಭೆ ಚುನಾವಣೆಯ ನಡುವೆ ಭಾರತ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಹೀಗಾಗಿ ಕ್ಷೇತ್ರದ ಫಲಿತಾಂಶ ಏನಾಗಬಹುದು ಎಂದು ಇಡೀ ದೇಶವೇ ಎದುರು ನೋಡ್ತಿತ್ತು. ಕೊನೆಗೂ ಈ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಪೆನ್​​ಡ್ರೈವ್ ಪ್ರಜ್ವಲ್​ಗೆ ಸೋಲಿನ ಪಾಠ ಕಲಿಸುವ ಮೂಲಕ ಕಾಂಗ್ರೆಸ್​ನ ಶ್ರೇಯಸ್ ಪಟೇಲ್ ವಿಕ್ಟರಿ ಗಳಿಸಿದ್ದಾರೆ.

ಹಾಸನ ಕ್ಷೇತ್ರ ಹಲವು ಕಾರಣಗಳಿಂದ ದೇಶದ ಗಮನ ಸೆಳೆದಿತ್ತು. ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್​. ಡಿ. ದೇವೇಗೌಡರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಇದು. ಆದ್ರೆ 2019ರಲ್ಲಿ ತಮ್ಮ ಮೊಮ್ಮಗ ಪ್ರಜ್ವಲ್​ಗೆ ಕ್ಷೇತ್ರತ್ಯಾಗ ಮಾಡಿ ತುಮಕೂರಿಗೆ ವಲಸೆ ಹೋಗಿದ್ದರು. ಆದ್ರೆ ತುಮಕೂರಿನಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ರು. ದೊಡ್ಡಗೌಡ್ರ ಕುಟುಂಬಕ್ಕೆ ರಾಜಕೀಯ ನೆಲೆ ಒದಗಿಸಿದ ಕ್ಷೇತ್ರ ಹಾಸನ. ಮತ್ತೊಂದೆಡೆ ಜೆಡಿಎಸ್​ಗೆ ಎದುರಾಳಿ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಯಕರಾದ ಜಿ. ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ರು. ಶ್ರೇಯಸ್ ಕೂಡ ರಾಜಕೀಯ ಹಿನ್ನೆಲೆಯುಳ್ಳವರು. ಹಾಗಾಗಿ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿತ್ತು. ಇನ್ನು ಸಾಕಷ್ಟು ಹಗ್ಗಜಗ್ಗಾಟದ ನಡುವೆಯೂ ಟಿಕೆಟ್​ ಪಡೆದು ಕಣಕ್ಕಿಳಿದ ಪ್ರಜ್ವಲ್‌ ರೇವಣ್ಣ, ಮತದಾನದ ಬಳಿಕ ಏನೆಲ್ಲ ಎದುರಿಸಿದರು ಅನ್ನೋದು ಗೊತ್ತೇ ಇದೆ. ಯಾಕಂದ್ರೆ ಮತದಾನದ ಹೊತ್ತಿಗೆ ಹಾಸಲನಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವ್ರ ರಾಸಲೀಲೆ ವಿಡಿಯೋಗಳು ಸಂಚಲನ ಸೃಷ್ಟಿಸಿದ್ದವು. ಏಪ್ರಿಲ್ 26ರಂದು ಮೊದಲ ಹಂತದ ಮತದಾನದ ಬಳಿಕ ವಿದೇಶಕ್ಕೆ ಎಸ್ಕೇಪ್ ಆಗಿದ್ದ ಪ್ರಜ್ವಲ್ ಬಳಿಕ 34 ದಿನಗಳ ಕಾಲ ಅಲ್ಲೇ ತಲೆ ಮರೆಸಿಕೊಂಡಿದ್ರು. ಎಸ್​ಐಟಿ ತನಿಖೆಗೂ ಹಾಜರಾಗದೆ ಕಣ್ಣಾಮುಚ್ಚಾಲೆ ಆಡ್ತಿದ್ರು. ಕೊನೆಗೆ ಮೇ 31ರಂದು ಬೆಂಗಳೂರಿಗೆ ಬಂದು ಲಾಕ್ ಆಗಿದ್ರು. ಜೂನ್ 6ರವರೆಗೆ ಪ್ರಜ್ವಲ್ ಎಸ್​ಐಟಿ ವಶದಲ್ಲೇ ಇದ್ದಾರೆ. ಹೀಗಾಗಿ ಹಾಸನ ಕ್ಷೇತ್ರದಲ್ಲಿ ಫಲಿತಾಂಶ ಏನಾಗುತ್ತೆ ಅಂತಾ ಬರೀ ರಾಜ್ಯ ಮಾತ್ರವಲ್ಲ ಇಡೀ ದೇಶವೇ ಎದುರು ನೋಡ್ತಿತ್ತು. ಚುನಾವಣಾ ಘೋಷಣೆಯಾದ ದಿನದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ರೋಡ್​ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು.

ಬಿಜೆಪಿ-ಜೆಡಿಎಸ್ ಮೈತ್ರಿಯ ಅರ್ಭರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆದಿಯಾಗಿ ಭರ್ಜರಿ ಪ್ರಚಾರ ನಡೆಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ​ ಶ್ರೇಯಸ್ ಪಟೇಲ್ ಪರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇನ್ನು ಹಾಸನದಲ್ಲಿ ಬೆಳಗ್ಗೆ 8ಗಂಟೆಯಿಂದಲೇ ಮತಎಣಿಕೆ ನಡೆಸಲಾಗಿತ್ತು. ಆದ್ರೆ ಪ್ರಜ್ವಲ್ ಮತ್ತು ಶ್ರೇಯಸ್ ನಡುವೆ ಆರಂಭದಿಂದಲೇ ಹಾವು ಏಣಿಯಂತೆ ಸಾಗಿತ್ತು. ಕೊನೆಗೂ ಶ್ರೇಯಸ್ ಪಟೇಲ್ ಗೆದ್ದು ಬೀಗಿದ್ದಾರೆ. ಇನ್ನು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಮತ್ತು ಚಿಕ್ಕಮಗಳೂರಿನ ಕಡೂರು ವಿಧಾನಸಭಾ ಕ್ಷೇತ್ರ ಸೇರಿ 8 ಕ್ಷೇತ್ರಗಳು ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಕಡೂರು, ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಹಾಸನ, ಹೊಳೆನರಸೀಪುರ, ಶ್ರವಣಬೆಳಗೊಳ ಮತ್ತು ಅರಕಲಗೂಡಿನಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇನ್ನು ಬೇಲೂರು ಮತ್ತು ಸಕಲೇಶಪುರದಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ.

 

suddiyaana