ಜಾತಿ ಜನಗಣತಿ ವರದಿ ವಿಳಂಬದ ಹಿಂದಿದೆ ರಾಜಕೀಯ ಮೇಲಾಟ – ಸಿದ್ದರಾಮಯ್ಯಗೆ ಕನಸಿನ ಕೂಸೇ ಮುಳ್ಳು?
ರಾಜ್ಯ ರಾಜಕೀಯದಲ್ಲೀಗ ಜಾತಿಗಣತಿ ಜಟಾಪಟಿ ಜೋರಾಗಿದೆ. 2015ರಲ್ಲಿ ನಡೆಸಲಾಗಿದ್ದ ಜಾತಿ ಜನಗಣತಿಯ ವರದಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸುನಾಮಿ ಎಬ್ಬಿಸುತ್ತಿದೆ. ಸಿಎಂ ಹಾಗೂ ಡಿಸಿಎಂ ನಡುವೆಯೇ ಪರ, ವಿರೋಧದ ಅಲೆ ಎದ್ದಿದ್ದು ರಾಜ್ಯದಲ್ಲಿ ಕಂಪನ ಸೃಷ್ಟಿಸಿದೆ. 8 ವರ್ಷಗಳ ಹಿಂದೆಯೇ ಸಿದ್ಧವಾಗಿದ್ದ ಜಾತಿಗಣತಿ ವರದಿಯನ್ನು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಹಾಗೂ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸ್ವೀಕಾರ ಮಾಡಿರಲಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಕಾಂತರಾಜು ಆಯೋಗದ ವರದಿಯನ್ನು ಸ್ವೀಕಾರ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಆದರೆ ಇದಕ್ಕೆ ರಾಜ್ಯದ ಪ್ರಬಲ ಜಾತಿಗಳೆಂದೇ ಹೇಳಿಕೊಂಡು ಬಂದಿರುವ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯ ತೀವ್ರ ವಿರೋಧ ಮಾಡುತ್ತಿದೆ. ಒಕ್ಕಲಿಗರ ಸಭೆಯಲ್ಲಿ ಸ್ವತಃ ಸರ್ಕಾರದ ಭಾಗವಾಗಿರುವ ಡಿಸಿಎಂ ಹಾಗೂ ಸಚಿವರು ಸಹಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಬಿಹಾರ ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆಯಾಗ್ತಿದ್ದಂತೆ ಕರ್ನಾಟಕದಲ್ಲೂ ಜಾತಿಗಣತಿ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಸಲಿಗೆ ಜಾತಿಗಣತಿ ಅನ್ನೋದೇ ಸಿದ್ದರಾಮಯ್ಯನವರ ಕನಸಿನ ಕೂಸು. 2013ರಲ್ಲಿ ತಾವು ಸಿಎಂ ಆಗಿದ್ದಾಗ ಹಠ ಹಿಡಿದು ಜಾತಿಗಣತಿ ಮಾಡಲು ಸಮಿತಿ ರಚಿಸಿದ್ದರು. ಆದ್ರೀಗ ತಮ್ಮದೇ ನಿರ್ಧಾರವನ್ನ ಸ್ವೀಕರಿಸಲು ಹಿಂದೆ ಮುಂದೆ ನೋಡುವಂತಾಗಿತ್ತು. ಸಿದ್ದರಾಮಯ್ಯನವರೇ ಹೇಳಿರುವಂತೆ 162 ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ಈ ಗಣತಿಗಾಗಿ ಖರ್ಚು ಮಾಡಲಾಗಿತ್ತು. ಜಾತಿಗಣತಿಯನ್ನು ಸರ್ಕಾರ ಅಂಗೀಕರಿಸಿದಲ್ಲಿ ಇಡೀ ರಾಜ್ಯದ ರಾಜಕೀಯ ಮೇಲಾಟವೇ ತಲೆಕೆಳಗಾಗಲಿದೆ. ಯಾಕಂದ್ರೆ ಜಾತಿಗಣತಿ ವರದಿ ಬಿಡುಗಡೆ ಮಾಡೋದನ್ನ ಡಿಸಿಎಂ ಡಿ.ಕೆ ಶಿವಕುಮಾರ್ ಆದಿಯಾಗಿ ಬಲಿಷ್ಠ ಸಮುದಾಯಗಳ ನಾಯಕರು ವಿರೋಧ ಮಾಡ್ತಿದ್ದಾರೆ, ಇನ್ನುಸಿಎಂ ಸಿದ್ದರಾಮಯ್ಯ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಜಾತಿ ಜನಗಣತಿ ವರದಿಗೆ ಪ್ರಬಲ ವಿರೋಧ ಇದ್ದರೂ, ವರದಿ ಜಾರಿ ಅಚಲ ಎಂದು ತಿರುಗೇಟು ನೀಡಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಅಂಕಿಅಂಶ ಸಿಕ್ಕಿಲ್ಲ, ಇನ್ನೂ ಕೆಡವೆಡೆ ಡಾಟಾ ಸಂಗ್ರಹ ಆಗ್ಬೇಕು. ಸಂಗ್ರಹಿಸಿದ್ದ ದತ್ತಾಂಶಗಳ ಟ್ಯಾಲಿ ಸರಿಯಾಗಿ ಆಗಿಲ್ಲ. ಟ್ಯಾಲಿ ಮತ್ತೊಮ್ಮೆ ಮಾಡ್ತಿದ್ದೇವೆ. ಸಾಫ್ಟ್ವೇರ್ ಸ್ವಲ್ಪ ಸಮಸ್ಯೆಯಾಗಿದೆ ಅಂತ ನಾನಾ ಸಬೂಬು ಹೇಳಿಕೊಂಡೇ ಬಂದಿದ್ದರು. ಈ ಸಬೂಬುಗಳ ನಡುವೆಯೇ ಸಿದ್ದರಾಮಯ್ಯ ಸರ್ಕಾರದ ಅವಧಿಯೇ ಮುಗಿದುಹೋಗಿತ್ತು.
ಇದನ್ನೂ ಓದಿ : ಮುಂಬೈ ದಾಳಿಕೋರ LeT ಉಗ್ರ ಸಂಘಟನೆ ನಿಷೇಧಿಸಿದ ಇಸ್ರೇಲ್ – ಭಾರತಕ್ಕಾಗಿ ಪಾಕಿಸ್ತಾನಕ್ಕೆ ಪೆಟ್ಟು..?
ಇನ್ನು ಕರ್ನಾಟಕದಲ್ಲಿ ಹಿಂದಿನಿಂದ್ಲೂ ಎರಡು ಸಮುದಾಯಗಳನ್ನೇ ಪ್ರಬಲ ಎಂದು ಬಿಂಬಿಸಲಾಗುತ್ತಿದೆ. ಈ ಎರಡು ಜಾತಿಗಳ ಸುತ್ತಲೇ ರಾಜಕೀಯ ಮೇಲಾಟಗಳು ನಡೆಯುತ್ತಲೇ ಬಂದಿವೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕರ್ನಾಟಕದಲ್ಲಿ ಪ್ರಬಲ ಎಂದೇ ಆಳುವ ವರ್ಗವಾಗಿ ಬೆಳೆದಿವೆ. ಲಿಂಗಾಯತ ಸಮುದಾಯ ಇದುವರೆಗೂ ತಮ್ಮದು ರಾಜ್ಯದ ಶೇ. 18ರಷ್ಟು ಜನಸಂಖ್ಯೆ ಎಂದೇ ಹೇಳಿಕೊಳ್ತಿದೆ. ಇನ್ನು ಒಕ್ಕಲಿಗರು ನಾವು ಸುಮಾರು 12 ಪರ್ಸೆಂಟ್ ಇದ್ದೇವೆ ಅಂತಾರೆ. ಇವೆರಡರ ಹೊರತಾಗಿ ಕುರುಬ ಸಮುದಾಯ ಕೂಡ ತನ್ನದೇ ಆದ ಪ್ರಾಬಲ್ಯದ ಲೆಕ್ಕ ಹೇಳುತ್ತಿದೆ. ಆದರೆ ಜಾತಿಗಣತಿಯ ವೇಳೆ ಸೋರಿಕೆಯಾದ ಮಾಹಿತಿ ಬೇರೆಯದ್ದೇ ಕಥೆ ಹೇಳ್ತಿದೆ. 2016ರ ಏಪ್ರಿಲ್ ತಿಂಗಳಿನಲ್ಲಿ ಜಾತಿಗಣತಿಯ ಅಂಕಿಅಂಶ ಸೋರಿಕೆಯಾಗಿತ್ತು. ಇದರ ಮೂಲಕ ಲಿಂಗಾಯತರೇನೂ ರಾಜ್ಯದಲ್ಲಿ ಜನಸಂಖ್ಯೆ ಆಧಾರದಲ್ಲಿ ನಂ.1 ಅಲ್ಲ.. ಅವರಿಗಿಂತ ಮುಸ್ಲಿಮರ ಜನಸಂಖ್ಯೆ ಜಾಸ್ತಿಯಿದೆ ಎಂದು ತೋರಿಸುವ ಪ್ರಯತ್ನ ಸಾಗಿತ್ತು. ಈ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆಯ ಆಧಾರದಲ್ಲಿ ಮೊದಲ ಸ್ಥಾನದಲ್ಲಿರುವುದು ಪರಿಶಿಷ್ಟ ಜಾತಿ. 2015ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ರಾಜ್ಯದ ಅಂದಿನ ಜನಸಂಖ್ಯೆಯ ಆಧಾರದಲ್ಲಿ ಯಾವ ಜಾತಿಗಳ ಜನಸಂಖ್ಯೆಯೇ ಅಚ್ಚರಿ ಮೂಡಿಸಿದೆ.
ಪರಿಶಿಷ್ಟ ಜಾತಿಯಲ್ಲಿ 1.08 ಕೋಟಿ, ಪರಿಶಿಷ್ಟ ಪಂಗಡದಲ್ಲಿ 40.45 ಲಕ್ಷ ಜನಸಂಖ್ಯೆ ಇದ್ದಾರೆ. ಮುಸ್ಲಿಮರು 70 ಲಕ್ಷ ಇದ್ದು, ಲಿಂಗಾಯತರು 65 ಲಕ್ಷ, ಒಕ್ಕಲಿಗರು 60 ಲಕ್ಷ ಇದೆ ಎನ್ನಲಾಗಿದೆ. ಇನ್ನು ಕುರುಬರು 45 ಲಕ್ಷ, ಈಡಿಗ 15 ಲಕ್ಷ, ಬೆಸ್ತ 15 ಲಕ್ಷ, ಬ್ರಾಹ್ಮಣ 14 ಲಕ್ಷ ಗೊಲ್ಲ, ಉಪ್ಪಾರ ಹಾಗೂ ಕ್ರೈಸ್ತ ಸಮುದಾಯದವರು ಸುಮಾರು ತಲಾ 10 ಲಕ್ಷ ಜನಸಂಖ್ಯೆ ಇದ್ದಾರೆ. ಉಳಿದಂತೆ ಮಡಿವಾಳ, ಅಲೆಮಾರಿ, ಅರೆ ಅಲೆಮಾರಿಗಳು ತಲಾ 6 ಲಕ್ಷ ಇದ್ರೆ ಕುಂಬಾರ, ಸವಿತಾ ಸಮಾಜದವರು ತಲಾ 5 ಲಕ್ಷ ಇದ್ದಾರೆ.
ಇಲ್ಲಿ 2015ರಲ್ಲೇ ಜಾತಿ ಗಣತಿ ನಡೆದ್ರೂ 2018ರ ವರೆಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿರಲಿಲ್ಲ. ಹೀಗಾಗಿ ಅಂದಿನ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾಂತರಾಜುರ ಅವಧಿಯನ್ನ ಮತ್ತೆ 3 ವರ್ಷಗಳ ಕಾಲ ವಿಸ್ತರಣೆ ಮಾಡಿತ್ತು. ನಂತ್ರ 2018ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಈ ವೇಳೆಯೂ ಜಾತಿಗಣತಿ ವರದಿಯನ್ನ ಸ್ವೀಕರಿಸಲು ಹೆಚ್.ಡಿ ಕುಮಾರಸ್ವಾಮಿ ಆಸಕ್ತಿ ತೋರಲಿಲ್ಲ. ಬಳಿಕ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಆ ಬಳಿಕ ಜಾತಿಗಣತಿ ವರದಿ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು. 2020ರ ನವೆಂಬರ್ ನಲ್ಲಿ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪನವರ ಆದೇಶದಂತೆ ಮಾಜಿ ಸಂಸದ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಇದೀಗ ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಿದ್ದಂತೆ ಜಾತಿಗಣತಿ ವರದಿ ಮತ್ತೆ ಮುನ್ನಲೆಗೆ ಬಂದಿದೆ. ಇದರ ನಡುವೆ ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶ ಆಧರಿಸಿ ಸಿದ್ಧಪಡಿಸಿದ್ದ ವರದಿಯ ಮೂಲಪ್ರತಿ ಆಯೋಗದ ಕಚೇರಿಯಿಂದಲೇ ನಾಪತ್ತೆಯಾಗಿದೆ. ಮೂಲಪ್ರತಿ ನಾಪತ್ತೆಯ ಬೆನ್ನಲ್ಲೇ, ಕಾಂತರಾಜು ನೇತೃತ್ವದ ಆಯೋಗ ನಡೆಸಿದ್ದ ಜಾತಿಗಣತಿಗೆ ದತ್ತಾಂಶಗಳನ್ನು ವಿಶ್ಲೇಷಿಸಿ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದಲ್ಲಿ ಆಯೋಗ ವರದಿ ಸಿದ್ಧಪಡಿಸುತ್ತಿದೆ. ಕಾಂತರಾಜು ನೇತೃತ್ವದ ಆಯೋಗ ಸಿದ್ಧಪಡಿಸಿದ್ದ ವರದಿಯ ಮೂಲಪ್ರತಿ ನಾಪತ್ತೆ ಆಗಿರುವುದು ಮತ್ತು ಅದೇ ದತ್ತಾಂಶಗಳನ್ನು ಬಳಸಿಕೊಂಡು 10 ವರ್ಷಗಳ ಬಳಿಕ ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಹೊಸ ವರದಿ ಸಿದ್ಧಪಡಿಸಲು ಮುಂದಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೊಸತಾಗಿ ಸಿದ್ದಪಡಿಸುವ ವರದಿಗೆ ಕಾನೂನು ರಕ್ಷಣೆ ಸಿಗಬಹುದೇ ಎಂಬ ಪ್ರಶ್ನೆಯೂ ಮೂಡುತ್ತಿದೆ.
ಕಾಂತರಾಜು ನೇತೃತ್ವದ ಆಯೋಗ 2015ರಲ್ಲಿ ಸಿದ್ಧಪಡಿಸಿದ್ದ ವರದಿಯನ್ನು ಆಯೋಗದ ಕಚೇರಿಯಲ್ಲಿ ನಾಲ್ಕು ಮುಚ್ಚಿದ ಪೆಟ್ಟಿಗೆಗಳಲ್ಲಿ ಭದ್ರವಾಗಿ ಇಡಲಾಗಿತ್ತು. ಆದ್ರೆ ಅಲ್ಲಿಂದಲೇ ಮುಖ್ಯ ವರದಿಯ ಮೂಲ ಅಂದ್ರೆ ಹಸ್ತ ಪ್ರತಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಲಭ್ಯವಿರುವ ಆ ಮೂಲಪ್ರತಿಯ ಮುದ್ರಿತ ಅಥವಾ ನಕಲು ಪ್ರತಿ ಅಂದ್ರೆ ಜೆರಾಕ್ಸ್ ಕಾಪಿಯಲ್ಲಿ ಅಂದಿನ ಅಧ್ಯಕ್ಷ ಕಾಂತರಾಜು ಮತ್ತು ಎಲ್ಲ ಸದಸ್ಯರ ಸಹಿಗಳು ಇವೆ. ಆದರೆ, ಅಂದಿನ ಸದಸ್ಯ ಕಾರ್ಯದರ್ಶಿ ಎನ್.ವಿ. ಪ್ರಸಾದ್ ಅವರ ಹೆಸರಷ್ಟೇ ನಮೂದಿಸಲಾಗಿದ್ದು, ಸಹಿ ಇಲ್ಲದಿರುವುದು ಬಹಿರಂಗವಾಗಿದೆ. ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹಾಗೂ ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ ಅವರು 2021ರ ಆಗಸ್ಟ್ 26ರಂದು ಮುಚ್ಚಿದ ಪೆಟ್ಟಿಗೆಗಳನ್ನು ತೆರೆದಾಗ, ಅಂಕಿಅಂಶಗಳನ್ನು ಒಳಗೊಂಡ ಮುದ್ರಿತ ಪ್ರತಿಗಳೂ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.) Gfx Voice
ಹೀಗಾಗಿ 2021ರ ಅಕ್ಟೋಬರ್ 5ರಂದೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಜಯಪ್ರಕಾಶ ಹೆಗ್ಡೆ ಪತ್ರ ಬರೆದಿದ್ದರು. ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಡ್ ಬಾಕ್ಸ್ ನಲ್ಲಿ ಲಭ್ಯ ಇಲ್ಲ. ಅಲ್ಲದೆ, ಮುದ್ರಿತ ಮುಖ್ಯ ವರದಿಯ ಪ್ರತಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿಯೂ ಇಲ್ಲ. ಹೀಗಾಗಿ, ಹಸ್ತಪ್ರತಿಯನ್ನು ತಕ್ಷಣ ಆಯೋಗದ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟನೆ ಕೋರಿದ್ದರು. ಆ ಬಳಿಕ, ಕಾಂತರಾಜು ನೇತೃತ್ವದ ಆಯೋಗ ನಡೆಸಿದ್ದ ಸಮೀಕ್ಷೆಯ ಅಂಕಿಅಂಶಗಳನ್ನು ಆಧರಿಸಿ, ತಜ್ಞರ ನೆರವು ಪಡೆದು ವರದಿ ತಯಾರಿಸುವಂತೆ ಹಾಲಿ ಆಯೋಗಕ್ಕೆ ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು. ಇದರ ನಡುವೆ ಹಾಲಿ ಆಯೋಗದ ಅಧಿಕಾರಾವಧಿ ಮುಗಿಯುತ್ತಾ ಬಂದಿದೆ.
ಸದ್ಯ ಹಾಲಿ ಆಯೋಗದ ಅಧಿಕಾರದ ಅವಧಿ ನವೆಂಬರ್ 26 ರಂದು ಮುಕ್ತಾಯವಾಗುತ್ತಿದೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನವೆಂಬರ್ 22ರಂದು ಪತ್ರ ಬರೆದಿರುವ ಜಯಪ್ರಕಾಶ ಹೆಗ್ಡೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ತಯಾರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ವರದಿಯನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಸಲ್ಲಿಸಲು ಕಾಲಾವಕಾಶ ಬೇಕಾಗಿದೆ. ಹೀಗಾಗಿ ಹಾಲಿ ಆಯೋಗವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ. ಅಸಲಿಗೆ 2015ರಲ್ಲಿ ಕಾಂತರಾಜು ಆಯೋಗ ಸಿದ್ಧಪಡಿಸಿದ್ದ ವರದಿಯ ಮೂಲ ಪ್ರತಿ ಇಲ್ಲ. ಅದರ ಮುದ್ರಿತ ಪ್ರತಿ ಆಯೋಗದ ಅಧ್ಯಕ್ಷರ ಬಳಿ ಇದೆ. ಹೀಗಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಿದ್ಧಪಡಿಸುತ್ತಿರುವ ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯ ಅಧ್ಯಯನಕ್ಕಾಗಿ ಸಂಪುಟ ಉಪ ಸಮಿತಿ ರಚಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಜಾತಿ ಜನಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಪ್ರಕಟಿಸಿದ್ದಾರೆ. ವರದಿಯನ್ನು ಸ್ವೀಕರಿಸಿದ ಬಳಿಕ ಸಂಪುಟ ಉಪ ಸಮಿತಿಯಿಂದ ಅಧ್ಯಯನ ವರದಿ ಪಡೆದು ಅನುಷ್ಠಾನಕ್ಕೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
2015ರಲ್ಲೇ ಜಾತಿಗಣತಿಗೆ ಸಮಿತಿ ರಚನೆ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ 180 ಕೋಟಿ ರೂಪಾಯಿ ಹಣವನ್ನ ಮೀಸಲಿಟ್ಟಿತ್ತು. ಇದಕ್ಕಾಗಿ 162 ಕೋಟಿ ರೂಪಾಯಿ ಹಣ ಕೂಡ ಖರ್ಚಾಗಿತ್ತು. ಕಾಂತರಾಜು ನೇತೃತ್ವದ ಸಮಿತಿ 40 ದಿನಗಳ ಕಾಲ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿತ್ತು. ಪ್ರತಿಯೊಬ್ಬರಿಗೂ ಜಾತಿ, ಲಿಂಗ, ಧರ್ಮ, ಅಸ್ತಿ-ಪಾಸ್ತಿ ಎಲ್ಲವೂ ಸೇರಿ ಗಣತಿ ವೇಳೆ 55 ಪ್ರಶ್ನೆ ಕೇಳಲಾಗಿತ್ತು. 40 ದಿನ ಸಮೀಕ್ಷೆ ಆದ ಮೇಲೆ ಕೂಲಂಕಷವಾಗಿ ಅಂಕಿಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿತ್ತು. ಆದ್ರೆ ವರದಿ ತಯಾರಿಸಿದ್ದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲೇ ಇಲ್ಲ. 2018ಕ್ಕೆ ಕಾಂತರಾಜು ಅವಧಿ ಮುಕ್ತಾಯವಾದ್ರೂ ಸರ್ಕಾರ ಮತ್ತೆ 3 ವರ್ಷಗಳ ಕಾಲ ಅವಧಿಯನ್ನ ವಿಸ್ತರಣೆ ಮಾಡಿತ್ತು. ಅಂದ್ರೆ 6 ವರ್ಷಗಳ ಕಾಲ ಕಾಂತರಾಜು ಆಯೋಗದ ಅಧ್ಯಕ್ಷರಾಗಿಯೇ ಇದ್ರು. ಇವರ ಕಾಲಾವಧಿಯಲ್ಲಿ ಹಲವು ಸಿಎಂಗಳು ಬಂದು ಹೋದ್ರೂ ವರದಿ ಸಲ್ಲಿಕೆ ಮಾಡುವ ಗೋಜಿಗೇ ಹೋಗಲಿಲ್ಲ. ಸರ್ಕಾರ ಸಮಯ ಕೊಡುತ್ತಿಲ್ಲ, ಸ್ವೀಕಾರ ಮಾಡುತ್ತಿಲ್ಲ ಎಂದೇ ಕಾಲಹರಣ ಮಾಡಿದ್ರು. ಅಸಲಿಗೆ ಒಂದು ಆಯೋಗದ ಅಧ್ಯಕ್ಷರಾಗಿ ಕಾಂತರಾಜು ರನ್ನ ಆಯ್ಕೆ ಮಾಡಿದ ಮೇಲೆ ಜಾತಿಗಣತಿ ನಡೆಸಿದ್ದ ಅವರು ವರದಿಯನ್ನ ಸಲ್ಲಿಕೆ ಮಾಡುವುದು ಅವರ ಜವಾಬ್ದಾರಿ ಆಗಿತ್ತು. ಒಂದು ವೇಳೆ ಸರ್ಕಾರ ವರದಿಯನ್ನ ಸ್ವೀಕಾರ ಮಾಡದಿದ್ದರೂ ರಾಜ್ಯಪಾಲರಿಗೆ ಕೊಡುವ ಅವಕಾಶವೂ ಇತ್ತು. ಆದರೂ ಆ ಕೆಲಸವನ್ನ ಮಾಡಲೇ ಇಲ್ಲ. ಈ ಮೂಲಕ ತಮ್ಮ ಅಧಿಕಾರ ಪೂರ್ಣವಾಗುವವರೆಗೂ ವಿಳಂಬ ನೀತಿಯನ್ನೇ ತೋರಿರುವುದು ಇಲ್ಲಿ ಎದ್ದು ಕಾಣುತ್ತದೆ.
ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ 2015ರ ಏಪ್ರಿಲ್-ಮೇ ತಿಂಗಳಿನಲ್ಲಿ 162 ಕೋಟಿ ರೂ ಖರ್ಚಿನಲ್ಲಿ ಜಾತಿಗಣತಿ ನಡೆದಿದ್ದು, ಸಮೀಕ್ಷಾ ವರದಿ ಸಿದ್ಧವಾಗಿದೆ. ಆದರೆ ಆ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು ಇದುವರೆಗೂ ಸರ್ಕಾರಕ್ಕೆ ಸಲ್ಲಿಸಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಈ ನಾಲ್ವರು ಸಿಎಂಗಳು ಸಹ ವರದಿ ಸ್ವೀಕರಿಸದ ಕಾರಣ ಅದು ಆಯೋಗದ ಬಳಿಯೇ ಉಳಿದುಕೊಂಡಿದೆ ಎನ್ನಲಾಗಿದೆ. ಇನ್ನು ಜಾತಿಗಣತಿ ವರದಿ ಕಾಣೆಯಾದ ಮೇಲೆ ಮಾತನಾಡಿದ್ದ ಕಾಂತರಾಜು, ಮೂಲ ಪ್ರತಿ ಕಾಣೆಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. 2019ರಲ್ಲಿ ನಾನು ವರದಿ ಕೊಟ್ಟಿದ್ದು, ನಾನು ಇದ್ದಾಗ ಮೂಲಪ್ರತಿ ಇತ್ತು. ಇದು ಜಾತಿಗಣತಿ ಅಲ್ಲ, ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಎಂದು ಹೇಳಿದ್ದರು.
ಒಂದರಿಂದ 6 ನೇತರಗತಿವರೆಗೆ ವಿದ್ಯಾಬ್ಯಾಸ ಹೊಂದಿದವರು, 6ರಿಂದ 10ನೇ ಕ್ಲಾಸ್ವರೆಗೆ ಓದಿದವರು, ಪಿಯು, ಪದವಿ, ತಾಂತ್ರಿಕ ಶಿಕ್ಷಣ ಪಡೆದವರು, ಶಾಲೆಯಿಂದ ಹೊರಗುಳಿದವರು ಎಂದು ಶೈಕ್ಷಣಿಕ ಸ್ಥಿತಿಗತಿಯ ಜೊತೆಗೆ ಸಾಮಾಜಿಕ ನೆಲೆಯಲ್ಲಿ ಅಸ್ಪಶ್ಯತೆ ಅನುಭವಿಸುತ್ತಿರುವವರು, ಜಾತಿಯ ಅಪಮಾನಕ್ಕೆ ಗುರಿಯಾದವರು, ಅನಿಷ್ಠ ಮಲಹೊರುವ ಪದ್ದತಿಗೆ ದೂಡಲ್ಪಟ್ಟವರು, ಕುಲಕಸುಬು ಮಾಡುತ್ತಿರುವವರು, ಅದರಿಂದ ದೂರ ಸರಿದವರು, ಕುಲಕಸುಬಿನಿಂದಾಗಿ ಆರೋಗ್ಯ ಸಮಸ್ಯೆಗೆ ತುತ್ತಾದವರು ಹೀಗೆ ವಿವಿಧ ಅಳತೆಗೋಲಿನ ಆಧಾರದಲ್ಲಿ ಇಲ್ಲಿ ಜಾತಿಗಳ ಅಂಕಿ ಅಂಶಗಳನ್ನ ಕಲೆ ಹಾಕಲಾಗಿತ್ತು. ಹೀಗೆ ಹಲವು ಮಾನದಂಡಗಳ ಆಧಾರದ ಮೇಲೆ ಸಿದ್ಧವಾಗಿದ್ದ ವರದಿಯ ಮೂಲಪ್ರತಿ ನಾಪತ್ತೆಯಾಗಿದೆ. ಇದೀಗ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಆಯೋಗ ಜೆರಾಕ್ಸ್ ಕಾಪಿಗಳನ್ನೇ ಅಧ್ಯಯನ ನಡೆಸಿ ಮತ್ತೆ ವರದಿ ಸಿದ್ಧಪಡಿಸಲು ಮುಂದಾಗಿದೆ. ಆಯೋಗದ ವರದಿಯ ಆಧಾರದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳು ಹಾಗೂ ದುರ್ಬಲವಾಗಿರುವ ಸಮುದಾಯಗಳನ್ನು ಗುರುತಿಸುವ ಹೊಣೆಯನ್ನು ಸಂಪುಟ ಉಪ ಸಮಿತಿಗೆ ವಹಿಸುವ ಸಾಧ್ಯತೆ ಇದೆ. ಎಲ್ಲ ಸಮುದಾಯಗಳಲ್ಲಿರುವ ಪ್ರಬಲರು ಮತ್ತು ದುರ್ಬಲರಿಗೆ ಪ್ರತ್ಯೇಕವಾದ ಯೋಜನೆಗಳನ್ನು ರೂಪಿಸುವ ಕುರಿತೂ ಶಿಫಾರಸು ನೀಡುವಂತೆ ಉಪ ಸಮಿತಿಯನ್ನು ಕೋರುವ ಚಿಂತನೆ ನಡೆದಿದೆ. ಆದ್ರೆ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ಅಸ್ತ್ರ ಹೂಡಿದ್ದರೂ ಕೂಡ ಈಗಲೇ ಅದನ್ನ ಸ್ವೀಕಾರ ಮಾಡಿ ಬಿಡುಗಡೆ ಮಾಡುವ ಮನಸ್ಥಿತಿಯಲ್ಲೂ ಅವರಿಲ್ಲ. ಯಾಕಂದ್ರೆ ಪ್ರಬಲ ಜಾತಿಗಳೆಂದೇ ಕರೆಸಿಕೊಳ್ಳುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ತೀವ್ರ ಪ್ರತಿರೋಧ ಒಡ್ಡುತ್ತಿವೆ. ಡಿಸಿಎಂ ಡಿಕೆಶಿ ಆದಿಯಾಗಿ ಸಂಪುಟದ ಕೆಲ ನಾಯಕರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗೇನಾದ್ರೂ ಹಠಕ್ಕೆ ಬಿದ್ದು ಜಾತಿಗಣತಿ ಬಿಡುಗಡೆ ಮಾಡಿದ್ದೇ ಆದ್ರೆ ರಾಜಕೀಯದಲ್ಲಿ ಏನು ಬೇಕಾದ್ರೂ ಆಗುವ ಸಾಧ್ಯತೆ ಇದೆ. ಹೀಗಾಗಿ ವರದಿ ಸಿದ್ಧಪಡಿಸಲು ಮೂರು ತಿಂಗಳ ಗಡುವು ನೀಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆವರೆಗೂ ಜಾತಿಗಣತಿ ವಿಚಾರ ವಿಳಂಬನೀತಿ ತೋರುವ ಸಾಧ್ಯತೆ ಇದೆ. ಆದ್ರೆ ತಣ್ಣಗಿದ್ದ ಜಾತಿಗಣತಿ ವಿಚಾರವನ್ನ ಕೆಣಕಿ ಸಿಎಂ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿರೋದಂತೂ ಸುಳ್ಳಲ್ಲ.