APEC ಶೃಂಗಸಭೆಯಲ್ಲೂ USA-China ಮುನಿಸು ಸ್ಫೋಟ – ಬೈಡನ್-ಕ್ಸಿ ಸರ್ವಾಧಿಕಾರಿ ಸಮರವೇಕೆ?
ಅಮೆರಿಕ ಹಾಗೂ ಚೀನಾ ವಿಶ್ವದ ಬಲಿಷ್ಠ ರಾಷ್ಟ್ರಗಳು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮಾತ್ರ ಎಣ್ಣೆ ಸೀಗೇಕಾಯಿ ಇದ್ದಂತಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಈ ಸಂಬಂಧ ಮತ್ತಷ್ಟು ಹಳಸಿದೆ. ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿರುವ ಹೇಳಿಕೆ ಚೀನಾ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಬೈಡನ್ ಸರ್ವಾಧಿಕಾರಿ ಎಂದು ಕರೆದಿದ್ದಾರೆ. ಎರಡನೇ ಬಾರಿಗೆ ಬೈಡನ್ ಸರ್ವಾಧಿಕಾರಿ ಪದ ಬಳಸಿರೋದು ಚೀನಾ ಪಿತ್ತ ನೆತ್ತಿಗೇರಿಸಿದೆ.
ಜಗತ್ತಿನ ಅತಿದೊಡ್ಡ ಉತ್ಪಾದಕ ರಾಷ್ಟ್ರ ಚೀನಾ ಆಗಿದ್ದರೆ ಅಮೆರಿಕ ಜಗತ್ತಿನಲ್ಲೇ ಅತಿಹೆಚ್ಚು ಉತ್ಪನ್ನಗಳನ್ನ ಆಮದು ಮಾಡಿಕೊಳ್ಳುವ ದೇಶ. ಹೀಗಾಗಿ ಎರಡೂ ದೇಶಗಳ ಮಧ್ಯೆ ಹಿಂದಿನಿಂದಲೂ ರಾಜತಾಂತ್ರಿಕ ಸಂಬಂಧ ದೊಡ್ಡ ಮಟ್ಟದಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಸಂಬಂಧ ಹಳಸತೊಡಗಿದೆ. ಅದ್ರಲ್ಲೂ ಜೋ ಬೈಡನ್ ಅಧಿಕಾರಕ್ಕೆ ಬಂದ ಮೇಲಂತೂ ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ. ಇತ್ತೀಚೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಮೆರಿಕ ಆಯೋಜಿಸಿದ್ದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಎರಡೂ ರಾಷ್ಟ್ರಗಳ ಅಧ್ಯಕ್ಷರು ಭಾಗಿಯಾಗಿದ್ದರು. ಜೋ ಬೈಡೆನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸುದೀರ್ಘ ಮಾತುಕತೆ ನಡೆಸಿದ್ದರು. ಆದ್ರೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇದ್ದಾಗ, ಸ್ವಲ್ಪ ಹಳಸಿದ್ದ 2 ದೇಶಗಳ ನಡುವಿನ ಸಂಬಂಧವು ಬೈಡನ್ ಕಾಲಘಟ್ಟದಲ್ಲಿ ಪಾತಾಳ ಸೇರಿದೆ ಎಂಬ ಆರೋಪವೂ ಇದೆ. ಇದರ ಹೊರತಾಗಿಯೂ ಅಪೆಕ್ ಶೃಂಗಸಭೆಯಲ್ಲಿ ಎರಡು ರಾಷ್ಟ್ರಗಳ ನಡುವೆ ಸುಮಾರು 4 ಗಂಟೆ ಕಾಲ ಚರ್ಚೆ ನಡೆದಿದೆ. ಉತ್ಪಾದನೆ ವಲಯ, ಆಮದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪರಸ್ಪರ ಮಾತನಾಡಿದ್ದಾರೆ. ಆದ್ರೆ ಈ ಚರ್ಚೆ ಬಳಿಕ ಜೋ ಬೈಡನ್ ಕೊಟ್ಟ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚೀನಾ ಅಧ್ಯಕ್ಷರು ಕೂಡ ಕೆರಳಿ ಕೆಂಡವಾಗಿದ್ದಾರೆ.
ಇದನ್ನೂ ಓದಿ : ಹಮಾಸ್ ಉಗ್ರರಿಗಾಗಿ ಮೂಲೆ ಮೂಲೆಯಲ್ಲೂ ಶೋಧ! – ಗಾಜಾದಲ್ಲಿ ಉಗ್ರ ಮುಖಂಡನ ಮನೆಯಲ್ಲಿ ಬಾಂಬ್ ಇಟ್ಟು ಉಡಾಯಿಸಿದ ಇಸ್ರೇಲ್
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದ್ದ ಏಷ್ಯಾ- ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಅಪೆಕ್ನ ಸದಸ್ಯ ರಾಷ್ಟ್ರಗಳ ನಾಯಕರು ಭಾಗಿಯಾಗಿದ್ದರು. ಸಭೆಯ ಅಂತ್ಯದಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದಾರೆ. ಜಿಂಗ್ ಪಿನ್ ಅವರನ್ನು ಈಗಲೂ ಸರ್ವಾಧಿಕಾರಿ ಎಂದು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ ‘ಹೌದು, ಅವರು ಸರ್ವಾಧಿಕಾರಿ’ ಎಂದು ಬೈಡನ್ ಹೇಳಿದ್ದಾರೆ. ಅವರು ಒಬ್ಬ ಸರ್ವಾಧಿಕಾರಿ, ಕಮ್ಯುನಿಸ್ಟ್ ದೇಶವನ್ನು ಮುನ್ನಡೆಸುತ್ತಿರುವ ವ್ಯಕ್ತಿ. ಚೀನಾ ಸರ್ಕಾರವು ನಮಗಿಂತ ಸಂಪೂರ್ಣ ವಿಭಿನ್ನವಾಗಿದೆ ಎಂದು ಬೈಡನ್ ಹೇಳಿದ್ದಾರೆ. ಕ್ಸಿ ಜಿನ್ಪಿಂಗ್ ವಿರುದ್ಧ 2ನೇ ಬಾರಿ ಬೈಡನ್ ಸರ್ವಾಧಿಕಾರಿ ಎಂಬ ಪದವನ್ನ ಬಳಸಿದ್ದಾರೆ. ಚೀನಾದ ಗೂಢಚಾರಿಕೆ ಬಲೂನು ಅಮೆರಿಕದಲ್ಲಿ ಸಿಕ್ಕಿದಾಗಲೂ ಸರ್ವಾಧಿಕಾರಿ ಎಂದು ಕರೆದಿದ್ದರು. ನಿಮ್ಮ ನಿಲುವಿನಲ್ಲಿ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ ಬೈಡನ್ ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದರ ಹೊರತಾಗಿಯೂ ಅಪೆಕ್ ಸಭೆಯಲ್ಲಿ ಚೀನಾ ಮತ್ತು ಅಮೆರಿಕ ನಾಯಕರು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಉನ್ನತ ಮಟ್ಟದ ಸೇನಾ ಸಂವಹನಕ್ಕೆ ಸಮ್ಮತಿ ಸೂಚಿಸಿದ್ದು, ಮಾದಕ ದ್ರವ್ಯದ ವಿರುದ್ಧದ ಹೋರಾಟ ಮತ್ತು ಕೃತಕ ಬುದ್ಧಿಮತ್ತೆಯ ಕುರಿತಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಸಭೆ ಮುಗಿದ್ರೂ ಎರಡೂ ರಾಷ್ಟ್ರಗಳ ನಡುವಿನ ಮುನಿಸು ಮಾತ್ರ ಶಮನವಾಗಿಲ್ಲ. ಸರ್ವಾಧಿಕಾರಿ ಎಂಬ ಬೈಡನ್ ಹೇಳಿಕೆಗೆ ಚೀನಾ ಖಡಕ್ ಪ್ರತಿಕ್ರಿಯೆ ನೀಡಿದೆ. ಬೈಡನ್ ಹೇಳಿಕೆ ಸಂಪೂರ್ಣ ತಪ್ಪು. ಇದು ಬೇಜವಾಬ್ದಾರಿಯುತವಾಗಿದೆ. ಅಮೆರಿಕ- ಚೀನಾ ಸಂಬಂಧಗಳನ್ನು ಹಾಳು ಮಾಡಲು ಹಾಗೂ ಪ್ರಚೋದಿಸಲು ಕೆಲವು ಗೌಪ್ಯ ಹಿತಾಸಕ್ತಿಯ ವ್ಯಕ್ತಿಗಳು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ. ಆದರೆ ಅದು ವಿಫಲವಾಗುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
APEC ಎಂದರೆ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ. ಪೆಸಿಫಿಕ್ ಮಹಾಸಾಗರದ ಸುತ್ತಲಿನ ಆರ್ಥಿಕತೆಗಳ ಸಮೂಹ. 1989 ರಲ್ಲಿ 12 ಸದಸ್ಯರೊಂದಿಗೆ ಪ್ರಾರಂಭವಾದ ಅಪೆಕ್ ನಲ್ಲಿ ಪ್ರಸ್ತುತ 21 ರಾಷ್ಟ್ರಗಳು ಸದಸ್ಯತ್ವ ಹೊಂದಿವೆ. ಅಮೆರಿಕ, ಚೀನಾ, ರಷ್ಯಾ, ಜಪಾನ್ ಮತ್ತು ಆಸ್ಟ್ರೇಲಿಯಾ, ಬ್ರೂನಿ, ಹಾಂಗ್ ಕಾಂಗ್, ನ್ಯೂಜಿಲೆಂಡ್, ಮಲೇಷ್ಯಾ, ವಿಯೆಟ್ನಾಂ, ಸಿಂಗಾಪುರ್ ಸೇರಿದಂತೆ 21 ರಾಷ್ಟ್ರಗಳು ಸದಸ್ಯತ್ವ ಪಡೆದಿವೆ. ಈ ಪ್ರದೇಶಗಳಲ್ಲಿ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ಗುರಿ ಹೊಂದಲಾಗಿದೆ. ಏಷ್ಯಾ-ಪೆಸಿಫಿಕ್ ನ ಪರಸ್ಪರ ಅವಲಂಬನೆಯನ್ನು ಹತೋಟಿಗೆ ತರಲು ಹಾಗೂ ಪ್ರಾದೇಶಿಕ ಆರ್ಥಿಕ ಏಕೀಕರಣದ ಮೂಲಕ ಹೆಚ್ಚಿನ ಅಭಿವೃದ್ಧಿಯನ್ನ ಸೃಷ್ಟಿಸಲು ಪ್ರಯತ್ನಿಸಲಾಗುತ್ತದೆ. APEC ಜಾಗತಿಕ GDP ಯ ಸುಮಾರು 62 ಪ್ರತಿಶತ ಹಾಗೂ ಜಾಗತಿಕ ವ್ಯಾಪಾರದ ಅರ್ಧದಷ್ಟು ಭಾಗವನ್ನು ಹೊಂದಿದೆ. ರಾಜತಾಂತ್ರಿಕತೆಯ ಜಗತ್ತಿನಲ್ಲಿ, ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಬಹಳಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಆದ್ರೆ ಭಾರತ ಮಾತ್ರ ಅಪೆಕ್ ಸದಸ್ಯ ರಾಷ್ಟ್ರವಾಗಿಲ್ಲ. 1991 ರಲ್ಲಿ ಭಾರತವು APEC ಗೆ ಸೇರಲು ಪ್ರಯತ್ನಿಸಿತು. ಗುಂಪಿನಲ್ಲಿದ್ದ ಬಹುಪಾಲು ಸದಸ್ಯರು ಭಾರತದ ಸೇರ್ಪಡೆಯ ಪರವಾಗಿದ್ದರು. ಭಾರತೀಯ ಆರ್ಥಿಕತೆಯು ಏಷ್ಯಾದ ಆರ್ಥಿಕತೆಯ ಕ್ರಿಯಾತ್ಮಕ ಭಾಗವಾಗಿರುವುದರಿಂದ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ವೇದಿಕೆಗೆ ಭಾರತ ಸೇರುವುದನ್ನ ಅಮೆರಿಕ ಕುಡ ಸ್ವಾಗತಿಸಿದೆ. ಆದರೆ ಕೆಲ ರಾಷ್ಟ್ರಗಳ ನಾಯಕರು ವಿರೋಧ ವ್ಯಕ್ತಪಡಿಸಿದರು.2016 ರಲ್ಲಿ, ಆಗಿನ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅಪೆಕ್ ಗೆ ಸೇರಲು ಪ್ರಯತ್ನಿಸಿದ್ದರು. ಆದ್ರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಭಾರತವು APEC ನ ವೀಕ್ಷಕನಾಗಿ ಉಳಿದಿದೆ. ಒಂದು ವೇಳೆ ಭಾರತ ಅಪೆಕ್ ನ ಸದಸ್ಯತ್ವ ಪಡೆದ್ರೆ ಭಾರತಕ್ಕೆ ಹಲವು ರೀತಿಯ ಲಾಭ ಆಗಲಿವೆ.
ಅಪೆಕ್ ಸದಸ್ಯನಾಗುವುದರಿಂದ ಭಾರತಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ. ನಿಕಟ ಆರ್ಥಿಕ ಸಂಬಂಧಗಳನ್ನು ಉತ್ತೇಜಿಸುವುದು, ವ್ಯಾಪಾರ ಮತ್ತು ಹೂಡಿಕೆಯನ್ನ ಹೆಚ್ಚಿಸಬಹುದಾಗಿದೆ. ಹಾಗೇ ಪ್ರಮುಖ ಆರ್ಥಿಕತೆಗಳಿಗೆ ಮಾರುಕಟ್ಟೆ ಪ್ರವೇಶವನ್ನು ತೆರೆಯುವ ಅವಕಾಶ ಸಿಗಲಿದೆ. ವ್ಯಾಪಾರದ ಕಾರ್ಯವಿಧಾನಗಳು ಮತ್ತು ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಮೂಲಕ APEC ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಇದ್ರಿಂದ ಭಾರತದ ರಫ್ತುಗಳ ಪ್ರಮಾಣವನ್ನ ಹೆಚ್ಚಿಸಿಕೊಳ್ಳಬಹುದು. ವಿದೇಶಿ ನೇರ ಹೂಡಿಕೆ ಮತ್ತು ಮೇಕ್ ಇನ್ ಇಂಡಿಯಾನಂತಹ ಯೋಜನೆಗಳಿಗೆ ಬೆಂಬಲ ಸಿಗಲಿದೆ. ವ್ಯಾಪಾರ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ವಹಿವಾಟು ವೆಚ್ಚ ಕಡಿಮೆ ಮಾಡಬಹುದು. ಮಾಹಿತಿ ತಂತ್ರಜ್ಞಾನ, ಔಷಧಗಳು, ಜೈವಿಕ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ತಂತ್ರಜ್ಞಾನ ವರ್ಗಾವಣೆಯೂ ಸುಗಮವಾಗಲಿದೆ.
ಹೀಗಾಗಿ ಭಾರತ ಕೂಡ ಅಪೆಕ್ ನ ಸದಸ್ಯ ರಾಷ್ಟ್ರವಾಗಲು ಪ್ರಯತ್ನಿಸುತ್ತಲೇ ಇದೆ. ಅದು ಈವರೆಗೂ ಸಾಧ್ಯವಾಗಿಲ್ಲ. ಆದ್ರೆ ಅಪೆಕ್ ಸದಸ್ಯ ನಾಯಕರ ಆತಂಕಕ್ಕೆ ಕಾರಣವಾಗಿರೋದು ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ. ಯಾಕಂದ್ರೆ ಚೀನಾ ಈಗಾಗಲೇ ಆರ್ಥಿಕವಾಗಿ ಮತ್ತು ಮಿಲಿಟರಿ ವಿಚಾರದಲ್ಲಿ ಸೂಪರ್ ಪವರ್ ರಾಷ್ಟ್ರವಾಗಿದೆ. ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ಸೌದಿ ಅರೇಬಿಯಾ ಮತ್ತು ಇರಾನ್ ನಿಂದ ಚೀನಾ ತೈಲವನ್ನು ಖರೀದಿಸುತ್ತದೆ. ಚೀನಾ ದೇಶ ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ದಿನನಿತ್ಯದ ಸಾಮಗ್ರಿಗಳು, ಆಟಿಕೆಗಳು, ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪನ್ನಗಳನ್ನು ಪ್ರವಾಹದಂತೆ ಯುರೋಪ್, ಅಮೆರಿಕ ಹಾಗೂ ಮೂರನೇ ಜಗತ್ತಿನ ದೇಶಗಳಿಗೆ ಕಳಿಸುತ್ತಿದೆ. ಮಾತ್ರವಲ್ಲದೆ ಬರ್ಮಾ, ಶ್ರೀಲಂಕಾ, ಪಾಕಿಸ್ತಾನ ಮುಂತಾದ ಬಡ ದೇಶಗಳಿಗೆ ಸಾಕಷ್ಟು ಸಾಲ ಕೊಟ್ಟು, ಅವುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಚೀನಾದ ಈ ಬಲಿಷ್ಠ ಹೆಜ್ಜೆ ಅಮೆರಿಕದ ಆತಂಕಕ್ಕೆ ಕಾರಣವಾಗಿದೆ. ಜಗತ್ತಿನ ಮೇಲಿನ ತನ್ನ ಹಿಡಿತ ಸಡಿಲವಾಗುತ್ತಿದೆ ಎಂಬ ಭಾವನೆ ಅಮೆರಿಕಗೆ ಮೂಡುತ್ತಿದೆ. ಹೀಗಾಗಿ ಚೀನಾ ಹಾಗೂ ಅಮೆರಿಕದ ನಡುವೆ ಶೀತಲ ಸಮರ ಮುಂದುವರಿಯುತ್ತಿದೆ. ಹಾಗೇನಾದ್ರೂ ಈ ಭಿಕ್ಕಟ್ಟು ಮುಂದುವರಿದಿದ್ದೇ ಆದಲ್ಲಿ ಭಾರತ ಸಹಜವಾಗಿ ಅಮೆರಿಕದ ಜೊತೆ ನಿಲ್ಲಬಹುದು. ಯಾಕೆಂದರೆ ಚೀನಾದ ಜೊತೆಗೆ ನಮ್ಮ ಸಂಬಂಧ ಅಷ್ಟಕ್ಕಷ್ಟೇ ಎನ್ನುವಂತಿದೆ. ಅಮೆರಿಕದಲ್ಲಿ ಭಾರತದ ಸೇವಾ ವಲಯದ ಲಕ್ಷಾಂತರ ಮಂದಿ ದುಡಿಯುತ್ತಿದ್ದು, ಎರಡೂ ದೇಶಗಳ ಆರ್ಥಿಕತೆಗಳು ಪರಸ್ಪರ ಪೂರಕವಾಗಿ ನಡೆಯುತ್ತಿವೆ. ಅಮೆರಿಕಕ್ಕೆ ಸಮಾನವಾದ ಮಿಲಿಟರಿ ಬಲ ಹೊಂದಿರುವ ಚೀನಾ, ಅದರಷ್ಟೇ ಬಲಿಷ್ಠವಾದ ಬಾಹ್ಯಾಕಾಶ ಸಾಮರ್ಥ್ಯ, ಬೆಂಬಲಿಗ ರಾಷ್ಟ್ರಗಳ ಪಡೆ ಇತ್ಯಾದಿಯನ್ನು ಹೊಂದಿದೆ. ಅಮೆರಿಕದ ಸಾಂಪ್ರದಾಯಿಕ ವೈರಿಗಳಾದ ಉತ್ತರ ಕೊರಿಯಾ, ಕ್ಯೂಬಾ, ಇರಾನ್ಗಳ ಜೊತೆಯೂ ಉತ್ತಮ ಸಂಬಂಧ ಹೊಂದಿದೆ. ಈ ಎಲ್ಲಾ ಕಾರಣಗಳಿಂದ ವಿಶ್ವದ ಬಲಿಷ್ಠ ರಾಷ್ಟ್ರಗಳ ನಡುವಿನ ವೈರತ್ವ ಇಡೀ ವಿಶ್ವವನ್ನೇ ಚಿಂತೆಗೀಡು ಮಾಡುತ್ತದೆ.