ದೇವಸ್ಥಾನವೂ ಅಲ್ಲ.. ಕಲಾವಿದನೂ ಕೆತ್ತನೆ ಮಾಡಲಿಲ್ಲ – ನದಿ ಪಕ್ಕದಲ್ಲಿರುವ ಸಾವಿರಾರು ಕಂಬಗಳ ಹಿಂದಿನ ಕಾರಣವೇ ನಿಗೂಢ

ದೇವಸ್ಥಾನವೂ ಅಲ್ಲ.. ಕಲಾವಿದನೂ ಕೆತ್ತನೆ ಮಾಡಲಿಲ್ಲ – ನದಿ ಪಕ್ಕದಲ್ಲಿರುವ ಸಾವಿರಾರು ಕಂಬಗಳ ಹಿಂದಿನ ಕಾರಣವೇ ನಿಗೂಢ

ನಮ್ಮ ರಾಜ್ಯದಲ್ಲಿ ಶಿಲ್ಪಕಲೆಯ ತಾಣಗಳು ಜನರ ಮನಸೆಳೆಯುತ್ತವೆ. ಅದರಲ್ಲೂ ಮೂಡಬಿದಿರೆಯಲ್ಲಿರೋ ಸಾವಿರ ಕಂಬಗಳ ಬಸದಿ ಮಾಡುವ ಮೋಡಿಯೇ ಬೇರೆ. ಬಸದಿಯಲ್ಲಿ ನಿರ್ಮಿಸಿರುವ ಸಾವಿರ ಕಂಬಗಳು ಶಿಲ್ಪ ಕಲಾಕಾರರ ಪ್ರತಿಭೆ, ತಾಳ್ಮೆ, ಇಚ್ಚಾಶಕ್ತಿಯ ಧ್ಯೋತಕ. ಒಪ್ಪವಾಗಿ ನಿರ್ಮಿಸಿರುವ ಈ ಸಾವಿರ ಕಂಬಗಳ ಬಸದಿ ನೋಡುವುದೇ ಚಂದ. ಜೊತೆಗೆ ನಮ್ಮ ರಾಜ್ಯದಲ್ಲಿ ಇಂಥಾದ್ದೊಂದು ಐತಿಹಾಸಿಕ ಬಸದಿ ಇರೋ ಬಗ್ಗೆ ಹೆಮ್ಮೆಯೂ ಮೂಡುತ್ತೆ. ಇದನ್ನ ನೋಡಲು ಪ್ರವಾಸಿಗರು ಮೂಡಬಿದರೆಯತ್ತ ಬರುತ್ತಲೇ ಇರುತ್ತಾರೆ. ಆದರೆ ಈ ಸ್ಥಳದಲ್ಲೂ ಸಾವಿರ ಕಂಬದ ಬಸದಿಯಲ್ಲಿರುವಂತಹ ಕಂಬಗಳಿವೆ. ಯಾವ ಕಲಾವಿದನ ಕೆತ್ತನೆಗೂ ಕಮ್ಮಿಯಿಲ್ಲದಂತಹ ಶಿಲಾ ಕಂಬಗಳಿವು. ಆದರೆ ಇದನ್ನು ಕೆತ್ತನೆ ಮಾಡಿದ್ದು ಯಾವುದೋ ಶಿಲ್ಪ ಕಲಾಕಾರನಲ್ಲ. ಇದು ಇರೋದು ಯಾವುದೋ ದೇವಸ್ಥಾನದಲ್ಲೂ ಅಲ್ಲ. ಇದನ್ನ ಯಾರೂ ಕಟ್ಟಿಸಿಯೂ ಇಲ್ಲ.. ಇದು ಪ್ರಕೃತಿದತ್ತ ವಿಸ್ಮಯ ತಾಣ. ನಿಸರ್ಗನಿರ್ಮಿತ ನಿಗೂಢ ಜಗತ್ತು.

ಇದನ್ನೂ ಓದಿ : ಬ್ಯಾಂಕಾಕ್‌ನಿಂದ ಬಂದವನ ಬ್ಯಾಗ್‌ನಲ್ಲಿತ್ತು ಮೊಸಳೆ, ಕಾಂಗರೂ ಸೇರಿ 234  ಅಪರೂಪದ ವನ್ಯಜೀವಿಗಳು!

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ದಕ್ಷಿಣದಲ್ಲಿ ಮೋನೋ ಕೌಂಟಿಯಲ್ಲಿ ಓವೆನ್ಸ್ ನದಿ ಹರಿಯುತ್ತೆ. ಇದರ ಬಳಿಯಲ್ಲಿರೋದೇ ಕ್ರೌಲಿ (Crowley) ಜಲಾಶಯ. 1941ರಲ್ಲಿ ಲಾಸ್ ಏಂಜಲೀಸ್ ನ ಹೆಸರಾಂತ ಕಂಪನಿಯೊಂದು ಇಲ್ಲಿ ಅಣೆಕಟ್ಟು ಕಟ್ಟುತ್ತೆ. ಕೃಷಿ ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಗಾಗಿ ಈ ಅಣೆಕಟ್ಟನ್ನ ನಿರ್ಮಿಸಲಾಗುತ್ತೆ. ಅಣೆಕಟ್ಟಿನ ಅಡಿಯಲ್ಲಿ ನಿಂತ ನೀರಿನ ಅಲೆಗಳು ದಡದಲ್ಲಿರೋ ಕಲ್ಲುಬಂಡೆಗಳ ಸಿಯೆರಾ ಪರ್ವತಶ್ರೇಣಿಗಳಿಗೆ ರಭಸದಿಂದ ಅಪ್ಪಳಿಸಿದಾಗ ತೆಳ್ಳಗಿದ್ದ ಪೊರೆಯಂತಿದ್ದ ಬಂಡೆಗಳು ಕರಗತೊಡಗಿದ್ವು. ಆಗ ಒಂದೊಂದಾಗೇ ಸ್ತಂಬಗಳು ಗೋಚರಿಸತೊಡಗಿದ್ವು.

ಇನ್ನು ಈ ಶಿಲಾಸ್ತಂಬಗಳ ಬಗ್ಗೆ ತಿಳಿದುಕೊಳ್ಳಲು ಅನೇಕ ಪುರಾತತ್ವ ಶಾಸ್ತ್ರಜ್ಞರು ಅಧ್ಯಯನ ನಡೆಸಿದ್ದಾರೆ. ಆದ್ರೆ, ಇವುಗಳು ಹೇಗೆ ಸೃಷ್ಟಿಯಾಗಿದ್ವು ಅನ್ನೋ ನಿಖರ ಕಾರಣ ಇಂದಿಗೂ ನಿಗೂಢ. ಜೊತೆಗೆ ಈ ಕಾಲ್ ಕಂಬಗಳು ಲಕ್ಷಾಂತರ ವರ್ಷಗಳ ಹಿಂದಿನವು ಅಂತಾ ಕೆಲ ಅಧ್ಯಯನಕಾರರು ತಿಳಿಸಿದ್ದಾರೆ. ಭೂಗರ್ಭ ಶಾಸ್ತ್ರಜ್ಞರು ಶಿಲೆಯ ಸ್ತಂಭಗಳ ಬಗ್ಗೆ ಆಳವಾದ ಶೋಧನೆಯನ್ನೂ ನಡೆಸಿದ್ದಾರೆ. ಈಗಿನ ಟೆಕ್ನಾಲಜಿ ಬಳಸಿಕೊಂಡು ಅನೇಕ ಪರೀಕ್ಷೆಗಳನ್ನ ನಡೆಸಿದ್ರೂ ಕೂಡಾ ಇದು ನಿಸರ್ಗದತ್ತವೇ ಹೊರತು ಇದನ್ನ ಯಾರು ನಿರ್ಮಿಸಿಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದಾರಂತೆ ಅಧ್ಯಯನಕಾರರು. ಇನ್ನೂ ಸ್ವಾರಸ್ಯಕರ ಸಂಗತಿ ಎಂದರೆ ಈ ಕಾಲ್ ಕಂಬಗಳ ನಿರ್ಮಾಣಕ್ಕೆ ಕಾರಣ ಜ್ವಾಲಾಮುಖಿ ಸ್ಫೋಟ ಅಂತಾನೂ ಹೇಳಲಾಗುತ್ತದೆ. ಲಕ್ಷಾಂತರ ವರ್ಷಗಳ ಹಿಂದೆ ಸಿಯೆರಾ ಪರ್ವತ ಶ್ರೇಣಿಗಳ ಶಿಖರದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿತ್ತು. ಸ್ಫೋಟದ ಬಳಿಕ ಟನ್ ಗಟ್ಟಲೆ ಬೂದಿ ಭೂಗರ್ಭದಿಂದ ಹೊರಚಿಮ್ಮಿ ನೂರಾರು ಎಕರೆ ಪ್ರದೇಶವನ್ನ ಆವರಿಸಿಕೊಂಡಿತ್ತು. ಜ್ವಾಲಾಮುಖಿಯ ಅಗ್ನಿಜ್ವಾಲೆಗೆ ಹಿಮದ ಗುಡ್ಡಗಳು ಕರಗಿ ನೀರಾಗಿ ಆ ಬೂದಿಗಳನ್ನೂ ಆವರಿಸಿಕೊಂಡು ಅಲ್ಲೊಂದು ಬೃಹತ್ ಪರ್ವತವೊಂದು ಸೃಷ್ಟಿಯಾಗಿತ್ತು. ಈ ಪರ್ವತದಂತೆ ಗೋಚರಿಸೋ ಕಲ್ಲುಗಳಿಗೆ ಕ್ರೌಲಿ ಸರೋವವರದ ಅಲೆಗಳು ಅಪ್ಪಳಿಸುತ್ತಲೇ ಇತ್ತು. ಇದ್ರ ಪರಿಣಾಮ ಅಲ್ಲಲ್ಲಿ ಮೃದುವಾಗಿರೋ ಭಾಗಗಳು ಭಾಗಶಃ ಕರಗುತ್ತಾ ಬಂದ್ವು. ಬೂದಿಯೊಂದಿಗೆ ಕಬ್ಬಿಣ ಮತ್ತು ಕೋಬಾಲ್ಟ್ ನಂತಾ ಖನಿಜಗಳ ಮಿಶ್ರಣ ಅಧಿಕವಾಗಿದ್ದ ಭಾಗಗಳು ಸ್ತಂಭಗಳ ರೂಪದಲ್ಲಿ ಗಟ್ಟಿಯಾಗಿ ನಿಂತವು ಅನ್ನೋದು ಅಧ್ಯಯನಕಾರರ ಅಭಿಪ್ರಾಯ.

ಇನ್ನೂ ಒಂದು ಸೋಜಿಗವೇನು ಗೊತ್ತಾ.. ಈ ಶಿಲಾ ಸ್ತಂಭಗಳು ಗಟ್ಟಿಯಾಗಿವೆ. ಯಾವುದರಿಂದಲೂ ಕತ್ತರಿಸಲು ಸಾಧ್ಯವಿಲ್ಲದಂತಾ ಸಾಮರ್ಥ್ಯಹೊಂದಿವೆ. ಸ್ತಂಬಗಳ ಒಳಭಾಗ ಟೊಳ್ಳು. ಆದ್ರೆ, ಯಾವುದೇ ಕಾರಣಕ್ಕೂ ತುಂಡಾಗದಷ್ಟು ಗಟ್ಟಿ. ಸಾಲು ಸಾಲು ನೋಡಿದಷ್ಟು ಸಾಕಾಗದಿರುವಷ್ಟು ಸಾವಿರ ಸಾವಿರ ಸ್ತಂಭಗಳು ನಮ್ಮನ್ನ ವಿಸ್ಮಿತಗೊಳಿಸುತ್ತಿವೆ. ಇಲ್ಲಿನ ಇನ್ನೊಂದು ವಿಶೇಷತೆ ಏನೆಂದರೆ ಕಣ್ಣಿಗೆ ಹಬ್ಬ ನೀಡೋ ಕಮಾನುಗಳು. ಒಂದರ ಮೇಲೊಂದು ಭಾಗಿದ ರೀತಿಯಲ್ಲಿ ನಿಂತಿರೋ ಕಂಬಗಳು ನಿಜಕ್ಕೂ ಸುಂದರ. ಈ ಕ್ರೌಲಿ ಸರೋವರಗಳ ಕಾಲ್ ಕಂಬಗಳು ಪ್ರವಾಸಿಗರ ನೆಚ್ಚಿನ ತಾಣ. ಜೊತೆಗೆ ಇಂದಿಗೂ ಭೂಗರ್ಭ ಶಾಸ್ತ್ರಜ್ಞರ ವಿಸ್ಮಯ ಜಾಗ. ಬೂದು ಬಣ್ಣದಲ್ಲಿ ಕಾಣೋ ಈ 5 ಸಾವಿರಗಳಷ್ಟಿರೋ ಈ ಶಿಲಾಸ್ತಂಭಗಳು ತಮ್ಮದೇ ರೋಚಕತೆ ಸೃಷ್ಟಿಸಿಕೊಂಡು ನೋಡುಗರನ್ನ ತನ್ನ ಅಂದಚೆಂದದಿಂದ ತನ್ನತ್ತ ಕೈಬೀಸಿ ಕರೆಯುತ್ತಿದೆ.

suddiyaana