ಲಾಟರಿಯಲ್ಲಿ ಗೆದ್ದ ಹಣವನ್ನು ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೀಡಲು ಮುಂದಾದ ಬಾಣಸಿಗ
ಒಡಿಶಾದ ಬಾಲಸೋರ್ ನಲ್ಲಿ ನಡೆದ ಭೀಕರ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ತ್ರಿವಳಿ ಅವಘಡದಲ್ಲಿ 288 ಮಂದಿ ಸಾವನ್ನಪ್ಪಿದ್ದರು. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ಇಲ್ಲೊಬ್ಬರು ವ್ಯಕ್ತಿ ತಮಗೆ ಸಿಕ್ಕ ಲಾಟರಿ ಹಣವನ್ನು ಅಲ್ಲಿನ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಗುಜರಾತ್ ನಲ್ಲಿ ವಿನಾಶ ಸೃಷ್ಟಿಸುತ್ತಿದೆ ಬಿಪರ್ ಜಾಯ್ ಚಂಡಮಾರುತ – ಕರ್ನಾಟಕದಲ್ಲೂ ಜನರ ನೆಮ್ಮದಿ ಕಸಿದ ಸೈಕ್ಲೋನ್
ಅಬುಧಾಬಿಯಲ್ಲಿ ನೆಲೆಸಿರುವ ಒಡಿಶಾದ ಜಸ್ಪುರ್ ಮೂಲದ ಬಾಣಸಿಗ ಸಹಜನ್ ಮೊಹಮ್ಮದ್ ಎಂಬುವವರು ತಾವು ಈಚೆಗೆ ಲಾಟರಿಯಲ್ಲಿ ಗೆದ್ದ ಹಣದಿಂದ ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
ಕೆಲ ದಿನಗಳ ಹಿಂದೆ ಬಾಣಸಿಗ ಸಹಜನ್, ಡ್ರೀಮ್ ಐಲ್ಯಾಂಡ್ ಸ್ಕ್ರ್ಯಾಚ್ಕಾರ್ಡ್ ಆಟದಲ್ಲಿ 20 ಸಾವಿರ ದಿರ್ಹಾಂ (4, 48, 885 ರೂಗಳನ್ನು) ಬಹುಮಾನವಾಗಿ ಗೆದ್ದಿದ್ದರು. ಇದೀಗ ಈ ಲಾಟರಿಯ ಹಣದಿಂದ ಬಾಲಸೋರ್ ದುರಂತದ ಸಂತ್ರಸ್ತರಿಗೆ ಸಹಾಯ ಮಾಡಲಿದ್ದಾರೆ.
ಈ ಕುರಿತು ಮಾತನಾಡಿರುವ ಸಹಜನ್ ಅದೃಷ್ಟವಶಾತ್ ಭೀಕರ ರೈಲು ಅಪಘಾತದಲ್ಲಿ ನನ್ನ ಪರಿಚಿತ ವ್ಯಕ್ತಿಗಳು ಯಾರು ಇರಲಿಲ್ಲ. ದುರಂತದಲ್ಲಿ ನನ್ನ ಗ್ರಾಮದವರು ಕೆಲವರು ಗಾಯಗೊಂಡಿದ್ದಾರೆ. ನಾನು ಮೊದಲು ಅವರಿಗೆ ಸಹಾಯ ಮಾಡುತ್ತೇನೆ. ಜೂನ್ 25ರಂದು ನಾನು ನನ್ನ ತವರಿಗೆ ಮರಳುತ್ತಿದ್ದು, ದುರಂತದ ಸಂತ್ರಸ್ತರಿಗೆ ಸಹಾಯ ಮಾಡುವುದರ ಜೊತೆಗೆ ಉಳಿದ ಹಣವನ್ನು ಮನೆ ಉಪಯೋಗಕ್ಕೆ ಉಪಯೋಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.