ಜೈಲಿನ ಆವರಣದಲ್ಲೇ ಗ್ಯಾಂಗ್ ಸ್ಟರ್ ಹತ್ಯೆ ಕೇಸ್ – ಮೂಕ ಪ್ರೇಕ್ಷಕರಾಗಿದ್ದ 7 ಪೊಲೀಸ್ ಸಿಬ್ಬಂದಿ ಸಸ್ಪೆಂಡ್!
ಗ್ಯಾಂಗ್ ಸ್ಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಉಂಟಾಗಿದೆ. ಜೈಲಿನ ಆವರಣದಲ್ಲೇ ಗ್ಯಾಂಗ್ ಸ್ಟರ್ ನ ಇರಿದು ಕೊಲೆ ಮಾಡಿದ್ರೂ ಕೂಡ ಪೊಲೀಸರು ಮೂಕ ಪ್ಷೇಕ್ಷಕರಾಗಿದ್ದರು. ಇದೇ ಕಾರಣಕ್ಕೆ ಈಗ 7 ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ.
ಕುಖ್ಯಾತ ಗ್ಯಾಂಗ್ಸ್ಟರ್ ತಿಲ್ಲು ತಾಜ್ಪುರಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಿಶೇಷ ಪೊಲೀಸ್ (ಟಿಎನ್ಎಸ್ಪಿ) ನ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ತಿಹಾರ್ ಜೈಲಿನ ಆವರಣದಲ್ಲಿ ತಿಲ್ಲು ತಾಜ್ಪುರಿಯನನ್ನು ದುಷ್ಕರ್ಮಿಗಳು ಹತ್ಯೆ ಮಾಡುತ್ತಿದ್ದಾಗ ಅಲ್ಲಿಯೇ ಕರ್ತವ್ಯ ನಿಯೋಜನೆಯಲ್ಲಿದ್ದ ತಮಿಳುನಾಡು ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಇದೇ ಕಾರಣಕ್ಕಾಗಿ ಕರ್ತವ್ಯಲೋಪ ಆರೋಪದ ಮೇರೆಗೆ 7 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿ ತಮಿಳುನಾಡಿಗೆ ವಾಪಸ್ ಕಳುಹಿಸಲಾಗಿದೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ದೆಹಲಿ ಕಾರಾಗೃಹಗಳ ಮಹಾನಿರ್ದೇಶಕ ಸಂಜಯ್ ಬೇನಿವಾಲ್ ತನ್ನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಪೊಲೀಸರಿಗೆ ಪತ್ರ ಬರೆದಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ತಮಿಳುನಾಡು ಪೊಲೀಸರನ್ನ ಅಮಾನತು ಮಾಡಲಾಗಿದೆ. ತಮ್ಮ ಸಿಬ್ಬಂದಿಯ ಕಡೆಯಿಂದ ಆಪಾದಿತ ನಿರ್ಲಕ್ಷ್ಯದ ಬಗ್ಗೆ ಟಿಎನ್ಎಸ್ಪಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅವರು ತಮ್ಮ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಕೇರಳದಲ್ಲಿ ಬೋಟ್ ಮುಳುಗಿ ಮೃತಪಟ್ಟವರ ಸಂಖ್ಯೆ 22ಕ್ಕೇರಿಕೆ – ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಂದ ಸಂತಾಪ ಸೂಚನೆ
ತಮಿಳುನಾಡು ಪೊಲೀಸ್ ಇಲಾಖೆ ಈಗ ತನ್ನ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಮತ್ತು ಅವರನ್ನು ಹಿಂದಕ್ಕೆ ಕರೆಸಿಕೊಂಡಿದೆ. ಘಟನೆ ನಡೆದ ಸೆಲ್ ಸಂಖ್ಯೆ 8ರಲ್ಲಿ ಟಿಎನ್ಎಸ್ಪಿ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಟಿಎನ್ಎಸ್ಪಿ ತಿಹಾರ್ ಜೈಲಿನ ಆವರಣದಲ್ಲಿ ಭದ್ರತೆಯನ್ನು ಒದಗಿಸುತ್ತದೆ. ಆದರೆ ಅಂದು ನಡೆದ ಹತ್ಯಾ ಪ್ರಕರಣದಲ್ಲಿ ಈ 7 ಪೊಲೀಸ್ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು. ಇದಕ್ಕೆ ಪುಷ್ಟಿ ನೀಡುವ ಕೆಲ ಸಿಸಿಟಿವಿ ವಿಡಿಯೋಗಳು ಕೂಡ ತಮಿಳುನಾಡು ಪೊಲೀಸ್ ವರಿಷ್ಠಾಧಿಕಾರಿಗಳ ಕೈ ಸೇರಿತ್ತು. ಹೀಗಾಗಿ 7 ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ.
ಕಳೆದ ಮಂಗಳವಾರ ಬೆಳಗ್ಗೆ ಹೆಚ್ಚಿನ ಭದ್ರತೆ ನಡುವೆಯೂ ಜೈಲಿನೊಳಗೆ ಗೋಗಿ ಗ್ಯಾಂಗ್ನ ನಾಲ್ವರು ಸದಸ್ಯರು ತಾಜ್ಪುರಿಯ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ತಾಜ್ ಪುರಿಯನ್ನ ಸೆರೆಮನೆಯ ಭದ್ರತಾ ಸಿಬ್ಬಂದಿ ಕೊಂಡೊಯ್ಯುತ್ತಿದ್ದಾಗ ಆರೋಪಿಗಳು ಎರಡನೇ ಬಾರಿಗೆ ದಾಳಿ ನಡೆಸಿ ಆತನಿಗೆ ಚಾಕು ಇರಿದಿದ್ದರು. ದಾಳಿಕೋರರು ದರೋಡೆಕೋರರ ಮೇಲೆ ದಾಳಿ ನಡೆಸುತ್ತಿರುವಾಗ ಭದ್ರತಾ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿ ಉಳಿದಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿತ್ತು.