₹30 ಕೋಟಿ ಆಫರ್.. – RCB ಬಿಡ್ತಾರಾ ವಿರಾಟ್ ಕೊಹ್ಲಿ?

 ₹30 ಕೋಟಿ ಆಫರ್.. – RCB ಬಿಡ್ತಾರಾ ವಿರಾಟ್ ಕೊಹ್ಲಿ?

10 ಫ್ರಾಂಚೈಸಿಗಳು.. ದೇಶ, ವಿದೇಶಗಳ ಸ್ಟಾರ್ ಆಟಗಾರರು. ಐಪಿಎಲ್ ಅನ್ನೋದು ಈಗ ಜಸ್ಟ್ ಟೂರ್ನಿಯಾಗಿ ಉಳಿದಿಲ್ಲ. ಕ್ರಿಕೆಟ್ ಜಗತ್ತಿಗೆ ಮಸ್ತ್ ಮನರಂಜನೆ ನೀಡೋ ಹಬ್ಬದಂತಾಗಿದೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇರೋ ಫ್ಯಾನ್ ಬೇಸ್ ಮತ್ಯಾವ ಕ್ರಿಕೆಟರ್ಗೂ ಇಲ್ಲ. ಅದ್ರಲ್ಲೂ ರೋಹಿತ್ ಮತ್ತು ಧೋನಿಗಿಂತ ವಿರಾಟ್ಗೆ ಇನ್ನೂ ಒಂದು ಕೈ ಜಾಸ್ತಿನೇ ಅಭಿಮಾನಿ ಬಳಗ ಇದೆ. ಆರ್ಸಿಬಿ ಅಂದ್ರೆ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಅಂದ್ರೆ ಆರ್ಸಿಬಿ ಎನ್ನುವಂತಾಗಿದೆ. ರನ್ ಮಿಷನ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಈ ಸಲ ಆಕ್ಷನ್‌ ಗೆ ಬರ್ತಾರಾ? ಐಪಿಎಲ್‌ ನಲ್ಲಿ 30 ಕೋಟಿ ಬಿಡ್ ಮಾಡೋಕೆ ರೆಡಿ ಇರೋ ಫ್ರಾಂಚೈಸಿ ಯಾವ್ದು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಾಲ್ಮೀಕಿ ಹಗರಣ ಕೇಸ್‌ ನ ದೋಷಾರೋಪ ಪಟ್ಟಿ ರೆಡಿ- ಎಸ್‌ಐಟಿ ಸಲ್ಲಿಸಿದ ಪಟ್ಟಿಯಲ್ಲಿ ನಾಗೇಂದ್ರ, ಬಸನಗೌಡ ದದ್ದಲ್ ಹೆಸರು ಮಿಸ್!

ವಿರಾಟ್ ಕೊಹ್ಲಿ. ಇದೊಂದು ಹೆಸರು ಸಾಕು. ಕ್ರಿಕೆಟ್ ಜಗತ್ತಿನ ಕೋಟಿ ಕೋಟಿ ಫ್ಯಾನ್ಸ್ ಥ್ರಿಲ್ ಆಗೋಕೆ. ಅದ್ರಲ್ಲೂ ಐಪಿಎಲ್ ಅಂತಾ ಬಂದ್ರೆ ಯಾವ ಫ್ರಾಂಚೈಸಿ, ಯಾವ ಟೀಂ ಅನ್ನೋದನ್ನೂ ನೋಡದೆ ಸಪೋರ್ಟ್ ಮಾಡ್ತಾರೆ. ನಮ್ಮ ಕರ್ನಾಟಕದ ಅಭಿಮಾನಿಗಳಂತೂ ಕೊಹ್ಲಿ ಅಂದ್ರೆ ತಲೆ ಮೇಲೆ ಹೊತ್ತು ಮೆರೆಸ್ತಾರೆ. ಸದ್ಯ 2025ರ ಐಪಿಎಲ್ಗೆ ಸಿದ್ಧತೆಗಳು ನಡೀತಿದ್ದು, ರೀಟೇನ್ ಮತ್ತು ಆರ್ಟಿಎಂ ರೂಲ್ಸ್ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ತಂಡದಲ್ಲಿ ಯಾರನ್ನ ಉಳಿಸಿಕೊಳ್ಬೇಕು. ಯಾರನ್ನ ರಿಲೀಸ್ ಮಾಡ್ಬೇಕು ಅನ್ನೋ ಲೆಕ್ಕಾಚಾರ ಕೂಡ ಜೋರಾಗಿದೆ. ಈಗಾಗ್ಲೇ ಕೆಲ ಫ್ರಾಂಚೈಸಿಗಳು ಇದಕ್ಕಾಗಿ ಬ್ಲ್ಯೂ ಪ್ರಿಂಟ್ಗಳನ್ನೂ ಸಹ ರೆಡಿ ಮಾಡಿಕೊಂಡಿವೆ. 18ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರೋಕೆ ಈಗಿನಿಂದಲೇ ತಂಡಗಳನ್ನ ಸ್ಟ್ರಾಂಗ್ ಮಾಡ್ತಿರೋ ಫ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೂ ಕಣ್ಣಿಟ್ಟಿವೆ. ಬಿಸಿಸಿಐ ನಿಯಮದಂತೆ ತಂಡಗಳಿಗೆ 3+1 ಅಥವಾ 4+2 ಸೂತ್ರ ಬರೋ ಸಾಧ್ಯತೆ ಇದೆ. ಅಂದ್ರೆ ಮೂರು ಅಥವಾ ನಾಲ್ವರು ಆಟಗಾರರನ್ನ ರೀಟೇನ್ ಮಾಡಿಕೊಂಡು ಒಬ್ಬರು ಅಥವಾ ಇಬ್ಬರು ಆಟಗಾರರನ್ನ ಆರ್ಟಿಎಂ ಕಾರ್ಡ್ ಬಳಸಿ ಸೇಫ್ ಮಾಡಿಕೊಳ್ಳೋ ಚಾನ್ಸ್ ಇದೆ. ಸದ್ಯದ ಮಾಹಿತಿ ಪ್ರಕಾರ ಫ್ರಾಂಚೈಸಿಗಳಿಗೆ ಸ್ಟಾರ್ ಆಟಗಾರರನ್ನ ಉಳಿಸಿಕೊಳ್ಳೋದೇ ಫಸ್ಟ್ ಪ್ರಿಯಾರಿಟಿ. ಈ ಪೈಕಿ ವಿರಾಟ್ ಕೊಹ್ಲಿ ಕೂಡ ಒಬ್ರು. ಬಟ್ ವಿರಾಟ್ ಕೊಹ್ಲಿ ಏನಾದ್ರೂ ಹರಾಜಿಗೆ ಬಂದ್ರೆ ಅವ್ರ ರೇಟ್ ಸಹ ರೈಸ್ ಆಗಲಿದೆ.

ವಿರಾಟ್ ಹರಾಜಿಗೆ ಬಂದ್ರೆ ₹30ಕೋಟಿಗೂ ಹೆಚ್ಚು ಬಿಡ್!

ವಿರಾಟ್ ಕೊಹ್ಲಿ ಅನ್ನೋ ಹೆಸ್ರಲ್ಲೇ ಅದೇನೋ ತಾಕತ್ತಿದೆ. ಕ್ರಿಕೆಟ್ ಜಗತ್ತಲ್ಲಿ ಸದ್ಯ ಈ ಹೆಸ್ರನ್ನ ಕೇಳದೇ ಇರೋ ಆಟಗಾರನೂ ಇಲ್ಲ. ಅಭಿಮಾನಿಯೂ ಇಲ್ಲ ಬಿಡಿ.  ಐಪಿಎಲ್ನಲ್ಲಿ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವುದು ಗ್ಯಾರಂಟಿ. ಒಂದು ವೇಳೆ ಕೆಲ ಪ್ರಮುಖ ಆಟಗಾರರು ಆಕ್ಷನ್ಗೆ ಏನಾದ್ರೂ ಎಂಟ್ರಿಯಾದ್ರೆ ಕೋಟಿ ಕೋಟಿ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ರನ್ ಮಷಿನ್ ವಿರಾಟ್ ಕೊಹ್ಲಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂಪಾಯಿಗೂ ಅಧಿಕ ಮೊತ್ತಕ್ಕೆ ಹರಾಜಾಗುವ ಲೆಕ್ಕಾಚಾರ ನಡೀತಿದೆ. ಸ್ವತಃ ಹೀಗಂತ ಆಕ್ಷನ್ ಎಕ್ಸ್ಪರ್ಟ್ ಹ್ಯೂ ಎಡ್ಮೀಡ್ಸ್ ಹೇಳಿದ್ದಾರೆ. ಎಡ್ಮೀಡ್ಸ್ 2018 ರಿಂದ 2022 ರವರೆಗೆ ಐಪಿಎಲ್ನಲ್ಲಿ ಹರಾಜುದಾರನಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ವಿಶ್ವದಾದ್ಯಂತ ಅವರು 2,500 ಕ್ಕೂ ಹೆಚ್ಚು ಹರಾಜುಗಳನ್ನು ನಡೆಸಿದ್ದಾರೆ. ಹೀಗೆ ಹಲವು ಹರಾಜುಗಳಲ್ಲಿ ಪಾಲ್ಗೊಂಡಿರುವ ಎಡ್ಮೀಡ್ಸ್ ಅವರ ಪ್ರಕಾರ, ಐಪಿಎಲ್ನ ಸ್ಟಾರ್ ಅಂದ್ರೆ ಅದು ವಿರಾಟ್ ಕೊಹ್ಲಿ. ವಿರಾಟ್ ಏನಾದ್ರೂ ಹರಾಜಿಗೆ ಬಂದ್ರೆ 30 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಸೇಲ್ ಆಗ್ತಾರೆ. ಈ ಮೂಲಕ ಕಿಂಗ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ ಎಡ್ಮೀಡ್ಸ್.

2008ರಲ್ಲಿ ₹12 ಲಕ್ಷ ರೂಪಾಯಿಗೆ ಆರ್ ಸಿಬಿ ಸೇರಿದ್ದ ವಿರಾಟ್!

ವಿರಾಟ್ ಕೊಹ್ಲಿ ಒಬ್ಬ ಲೆಜೆಂಡರಿ ಕ್ರಿಕೆಟರ್. ಹೀಗಿದ್ರೂ ಐಪಿಎಲ್ನಲ್ಲಿ ಬೇರೆ ಬೇರೆ ಆಟಗಾರರು ವಿರಾಟ್ಗಿಂತ ಜಾಸ್ತಿನೇ ಸಂಭಾವನೆ ಪಡೀತಿದ್ದಾರೆ. ಐಪಿಎಲ್ ಆರಂಭವಾದ 2008ರಲ್ಲಿ ಬೆಂಗಳೂರು ತಂಡಕ್ಕೆ 12 ಲಕ್ಷ ರೂಪಾಯಿಯೊಂದಿಗೆ ವಿರಾಟ್ ಕೊಹ್ಲಿ ಬೆಂಗಳೂರು ತಂಡಕ್ಕೆ ಜಾಯ್ನ್ ಆಗಿದ್ರು. ವಿರಾಟ್ರ ಮೂಲ ಬೆಲೆ 2 ಲಕ್ಷ ರೂಪಾಯಿ ಆಗಿತ್ತು. ಆಗಿನ ಡೆಲ್ಲಿ ಡೇರ್ಡೆವಿಲ್ಸ್ ಭಾರತ U19 ವಿಶ್ವಕಪ್ ವಿಜೇತ ನಾಯಕ ವಿರಾಟ್ ಕೊಹ್ಲಿಯನ್ನು ಹರಾಜಿನಲ್ಲಿ ಖರೀದಿಸಲು ನಿರ್ಧಾರ ಮಾಡಿತ್ತು. ಆದ್ರೆ ಅಂದಿನ ಬೆಂಗಳೂರು ಫ್ರಾಂಚೈಸಿ ಮಾಲೀಕ ವಿಜಯ್ ಮಲ್ಯ ವಿರಾಟ್ರನ್ನ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದ್ರು. ಅಂದಿನಿಂದ್ಲೂ ಕೂಡ ವಿರಾಟ್ ಬೆಂಗಳೂರು ತಂಡ ಬಿಟ್ಟು ಹೊರಗೆ ಕಾಲಿಟ್ಟಿಲ್ಲ. ಒಂದೇ ಒಂದು ಹರಾಜಿನಲ್ಲೂ ಕಾಣಿಸಿಕೊಂಡಿಲ್ಲ. ಅಲ್ದೇ ಐಪಿಎಲ್ ಇತಿಹಾಸದಲ್ಲಿ ಡೇ ಒನ್ನಿಂದ 17 ವರ್ಷಗಳ ಕಾಲ ಒಂದೇ ತಂಡದ ಪರ ಆಡಿದ ಆಟಗಾರ ಎಂಬ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ಐಪಿಎಲ್ 2009 ಮತ್ತು 2010 ರಲ್ಲಿ 12 ಲಕ್ಷ ರೂಪಾಯಿ ಮೊತ್ತದಲ್ಲಿ ಆಡಿದರು. ಬಳಿಕ ಐಪಿಎಲ್ 2011 ರ ಮೆಗಾ-ಹರಾಜಿನ ಮೊದಲು ವಿರಾಟ್ ಅವರನ್ನು ಉಳಿಸಿಕೊಂಡ ಆರ್ಸಿಬಿ 8.28 ಕೋಟಿ ರೂಪಾಯಿ ಸಂಭಾವನೆ ಹೆಚ್ಚಿಸಿತ್ತು.

2013ರಲ್ಲಿ ಕ್ಯಾಪ್ಟನ್.. ₹12.5 ಕೋಟಿ ರೂಪಾಯಿಗೆ ಸಂಭಾವನೆ ಹೆಚ್ಚಳ!

2013ರಲ್ಲಿ ಬೆಂಗಳೂರು ತಂಡದ ಕ್ಯಾಪ್ಟನ್ಸಿ ವಹಿಸಿಕೊಂಡ ವಿರಾಟ್ ಕೊಹ್ಲಿಗೆ ಐಪಿಎಲ್ 2014 ರ ಮೆಗಾ-ಹರಾಜಿನ ಮೊದಲು ವೇತನವನ್ನ ಮತ್ತೊಮ್ಮೆ ಹೆಚ್ಚಿಸಲಾಗಿತ್ತು. 12.5 ಕೋಟಿ ರೂಪಾಯಿ ನೀಡಲಾಯ್ತು.  ಬಳಿಕ  ಐಪಿಎಲ್ 2018 ರ ಮೆಗಾ-ಹರಾಜಿನ ಮೊದಲು ಆರ್ಸಿಬಿ ಫ್ರಾಂಚೈಸಿ ಕೊಹ್ಲಿಯವ್ರನ್ನ 17 ಕೋಟಿ ರೂಪಾಯಿಗೆ ಉಳಿಸಿಕೊಂಡಾಗ ವಿರಾಟ್ ದಾಖಲೆ ಸೃಷ್ಟಿಸಿದರು. ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರನಾಗಿದ್ರು. ಬಳಿಕ 2021  ಐಪಿಎಲ್ ಬಳಿಕ ವಿರಾಟ್ ಆರ್ಸಿಬಿ ನಾಯಕತ್ವದಿಂದ ಕೆಳಗಿಳಿದಾಗ ಅವರ ಮೊತ್ತವನ್ನು 15 ಕೋಟಿ ರೂಪಾಯಿಗೆ ಇಳಿಕೆ ಮಾಡಲಾಗಿತ್ತು. ಸದ್ಯ 2024ರ ಟೂರ್ನಿಯಲ್ಲೂ ಕೂಡ ವಿರಾಟ್ ಸಂಭಾವನೆ 15 ರೂಪಾಯಿಯೇ ಮುಂದುವರಿದಿತ್ತು. ಬಟ್ ಈಗ ವಿರಾಟ್ ಏನಾದ್ರೂ ಮೆಗಾ ಆಕ್ಷನ್ಗೆ ಬರ್ತೀನಿ ಅಂಥಾ ಮನಸ್ಸು ಮಾಡಿದ್ರೆ 30 ಕೋಟಿಗೂ ಹೆಚ್ಚು ಬಿಡ್ ಮಾಡೋಕೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕಾಯ್ತಿದೆ. ಈ ಹಿಂದೆಯೇ ನೀತಾ ಅಂಬಾನಿ ಕೇಳಿದಷ್ಟು ಹಣ ಕೊಟ್ಟು ಖರೀದಿ ಮಾಡೋಕೆ ರೆಡಿ ಇದ್ರು. ವಿರಾಟ್ ಕೊಹ್ಲಿಯವ್ರ ಮುಂದೆ ಈ ಪ್ರಸ್ತಾವನೆಯನ್ನೂ ಇಟ್ಟಿದ್ರು. ಆದ್ರೆ ವಿರಾಟ್ ಮಾತ್ರ ಬೆಂಗಳೂರು ತಂಡದೊಂದಿಗಿನ ನಿಷ್ಠೆ ಮರೆತು ಯಾವತ್ತೂ ಹಣಕ್ಕೆ ಆಸೆ ಪಟ್ಟವರೇ ಅಲ್ಲ.

ಐಪಿಎಲ್ ಇತಿಹಾಸದಲ್ಲಿ 2 ಬಾರಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ!

ವಿರಾಟ್ ಕೊಹ್ಲಿ ಕಂಡ್ರೆ ಯಾಕೆ ಫ್ರಾಂಚೈಸಿಗಳು ಬಾಯಿ ಬಿಡ್ತಾವೆ ಅನ್ನೋಕೆ ಕಾರಣ ವಿರಾಟ್ರ ಅದ್ಭುತ ಪ್ರದರ್ಶನ. ಅನುಭವಿ ಆಟಗಾರನಾಗಿರುವ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಿಂತ್ರೆ ರನ್ಗಳ ಸುರಿಮಳೆ ಆಗುತ್ತೆ. 2024 ರ ಟೂರ್ನಿಯಲ್ಲೂ ಅದು ಪ್ರೂವ್ ಆಗಿತ್ತು. ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಐಪಿಎಲ್ 2024ರಲ್ಲಿ ಆಡಿದ 15 ಪಂದ್ಯಗಳಲ್ಲಿ 741 ರನ್ಗಳೊಂದಿಗೆ ಆವೃತ್ತಿಯನ್ನು ಮುಗಿಸಿದ್ದ ವಿರಾಟ್, ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಹಾಗೇ ಕೊಹ್ಲಿ 2016ರ ಆವೃತ್ತಿಯಲ್ಲಿ ಮೊದಲ ಬಾರಿಗೆ 973 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದು ಇನ್ನೂ ಐಪಿಎಲ್ನ ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ. ಇದಕ್ಕೂ ಮೊದ್ಲು ಡೇವಿಡ್ ವಾರ್ನರ್ 3 ಬಾರಿ ಮತ್ತು ಕ್ರಿಸ್ ಗೇಲ್ 2 ಸಲ ಐಪಿಎಲ್ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ.

ಸತತ  8 ಆವೃತ್ತಿಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಒಮ್ಮೆಯೂ ಪ್ರಶಸ್ತಿಗೆ ಮುತ್ತಿಡೋಕೆ ಸಾಧ್ಯವಾಗಿಲ್ಲ. 17 ವರ್ಷಗಳಿಂದ ತಂಡಕ್ಕಾಗಿ ಆಡ್ತಿರೋ ಚಾಂಪಿಯನ್ ಪಟ್ಟಕ್ಕೇರೋ ಕನಸು ಕನಸಾಗೇ ಉಳಿದಿದೆ. ಪ್ರತೀ ಬಾರಿ ಆರ್ಸಿಬಿ ತಂಡ ಟೂರ್ನಿಯಿಂದ ಹೊರ ಬಿದ್ದಾಗ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಿಗ್ಗಜರೇ ಬೇರೆ ತಂಡ ಸೇರಿ ಅಂತಾ ಸಜೇಷನ್ ಕೊಡ್ತಾರೆ. ಆದ್ರೆ ವಿರಾಟ್ ಯಾವತ್ತೂ ಅಂಥಾ ಕೆಲ್ಸ ಮಾಡಿಲ್ಲ. ಹಣಕ್ಕಿಂತ ಬೆಂಗಳೂರು ಫ್ರಾಂಚೈಸಿ ಮತ್ತು ಅಭಿಮಾನಿಗಳ ಪ್ರೀತಿಯೇ ದೊಡ್ಡದು ಅಂತಾ ತಂಡಕ್ಕಾಗಿ ಆಡ್ತಿದ್ದಾರೆ. ಅಲ್ದೇ ಕೊಹ್ಲಿ ನಾಯಕತ್ವದಲ್ಲಿ ತಂಡದ ಜನಪ್ರಿಯತೆ ಉತ್ತುಂಗಕ್ಕೇರಿದೆ. ಹೀಗಾಗಿ ಐಪಿಎಲ್ ಅಂದ್ರೆ ಆರ್ಸಿಬಿ ಅನ್ನೋವಷ್ಟರ ಮಟ್ಟಿಗೆ ದೇಶಾದ್ಯಂತ ಕ್ರೇಜ್ ಇದೆ. ಭಾರತ ಬಿಡಿ ಹೊರ ದೇಶಗಳ ಜನ ಕೂಡ ಕನ್ನಡ ಭಾಷೆ ಬರದಿದ್ರೂ ಈ ಸಲ ಕಪ್ ನಮ್ದೇ ಅನ್ನೋ ಸಾಲನ್ನ ಹೇಳ್ತಾರೆ. ಆರ್ಸಿಬಿಗೆ ಇಷ್ಟು ದೊಡ್ಡ ಫ್ಯಾನ್ಸ್ ಬೇಸ್ ಇರೋಕೆ ಮೇನ್ ರೀಸನ್ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ರು. ಹೀಗಾಗಿ ಈ ಬಾರಿಯೂ ಐಪಿಎಲ್ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ಆರ್ಸಿಬಿ ವಿರಾಟ್ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಸೋ ವಿರಾಟ್ಗಾಗಿ ಕೋಟಿ ಕೋಟಿ ಸುರಿಯೋಕೆ ರೆಡಿ ಇರೋ ಫ್ರಾಂಚೈಸಿಗಳಿಗೆ ಮತ್ತೊಮ್ಮೆ ನಿರಾಸೆ ಆಗಲಿದೆ.

ಒಟ್ನಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ನಡೆಸುವ ಈ ಟೂರ್ನಿಯಿಂದ ಮಂಡಳಿಯ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಬರುತ್ತದೆ. ಆಟಗಾರರು ಮಾತ್ರವಲ್ಲದೆ ಫ್ರಾಂಚೈಸ್ಗಳು ಕೂಡಾ ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡುತ್ತದೆ. ಆಟಗಾರರ ಮೇಲೆಯೂ ಇಲ್ಲಿ ಹಣದ ಹೊಳೆ ಹರಿಸಲಾಗುತ್ತೆ. ಇದೇ ಕಾರಣಕ್ಕೆ ವಿದೇಶಗಳ ಪ್ಲೇಯರ್ಸ್ ಕೂಡ ಐಪಿಎಲ್ ಆಡೋಕೆ ಮುಗಿ ಬೀಳ್ತಾರೆ. 2024ರ ಐಪಿಎಲ್ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರು ಭಾರತೀಯ ಆಟಗಾರರಿಗಿಂತ ಹೆಚ್ಚು ಬಿಡ್ ಮಾಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಪಂಜಾಬ್ ಕಿಂಗ್ಸ್ನ ಸ್ಯಾಮ್ ಕರಣ್ ಕೂಡ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಭಾರತೀಯ ಆಟಗಾರರ ಪೈಕಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ 17 ಕೋಟಿ ರೂಪಾಯಿ ಪಡೆಯುವ ಮೂಲಕ ನಂಬರ್ 1 ಸ್ಥಾನದಲ್ಲಿದ್ದಾರೆ. 2022ರಲ್ಲಿ ಲಕ್ನೋ ತಂಡ ಅವರನ್ನು 17 ಕೋಟಿ ರೂ.ಗೆ ಖರೀದಿಸಿತ್ತು. ಸೋ ಹಣಕ್ಕಿಂತ ಆಟ ಮುಖ್ಯ ಅನ್ನೋ ಕ್ರಿಕೆಟರ್ ಕೊಹ್ಲಿ. ಇದಕ್ಕಾಗಿಯೇ ಬೆಂಗಳೂರು ಫ್ರಾಂಚೈಸಿಯಲ್ಲೇ ಉಳ್ಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *