ಬಿಜೆಪಿಯಲ್ಲಿ ವಿಪಕ್ಷ ನಾಯಕನ ಕುರ್ಚಿಗೆ ₹110 ಕೋಟಿ ಫಿಕ್ಸ್ – ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್
ಸರ್ಕಾರ ರಚನೆಯಾಯ್ತು. ಅಧಿವೇಶನ ಆರಂಭವಾಯ್ತು. ಬಜೆಟ್ ಕೂಡ ಮಂಡನೆಯಾಯ್ತು. ಆದರೆ ವಿಪಕ್ಷ ನಾಯಕನ ಆಯ್ಕೆಗೆ ಮಾತ್ರ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡಲು ಬಿಜೆಪಿಯಲ್ಲಿ ಭಾರಿ ಕಸರತ್ತು ನಡೆಯುತ್ತಿದ್ದು, ಈಗಾಗಲೇ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ. ಇದರ ನಡುವೆ ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಡಾ.ಕೆ ಸುಧಾಕರ್ ಸವಾಲ್ ಸ್ವೀಕರಿಸಿದ ಪ್ರದೀಪ್ ಈಶ್ವರ್ – ದೇವರ ಮುಂದೆ ದೀಪ ಹಚ್ಚಲು ಸಿದ್ಧವೆಂದು ತಿರುಗೇಟು
ಸಚಿವ ಎಂ.ಬಿ ಪಾಟೀಲ್ ನೀಡಿರುವ ಹೇಳಿಕೆ ವಿಪಕ್ಷ ನಾಯಕನ ಆಯ್ಕೆಗೆ ಕೋಟಿ ಕೋಟಿ ಡೀಲ್ ನಡೆಯುತ್ತಿದ್ಯಾ ಎನ್ನುವ ಅನುಮಾನ ಹುಟ್ಟು ಹಾಕಿದೆ. ಈ ಮೂಲಕ ವಿರೋಧ ಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಎಂ.ಬಿ. ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. ಸಿಎಂ ಸ್ಥಾನ (CM Post) ಸೇಲ್ಗೆ ಇಟ್ಟ ಹಾಗೆ, ವಿಪಕ್ಷ ಸ್ಥಾನ ಇಟ್ಟಿರಬಹುದು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ವಿರೋಧ ಪಕ್ಷದ ಸ್ಥಾನಕ್ಕೆ 110 ಕೋಟಿ ಫಿಕ್ಸ್ ಮಾಡಿದ್ದಾರೋ ಏನೋ, ಯಾರಿಗೆ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ನಿಗದಿಯಾಗಿತ್ತು. ಈಗ ವಿಪಕ್ಷ ನಾಯಕನ ಸ್ಥಾನಕ್ಕೂ ಬಿಜೆಪಿ ನೂರಾರು ಕೋಟಿ ಕೊಡಬೇಕಾದ ಪರಿಸ್ಥಿತಿ ಇರಬಹುದೇನೋ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಸಚಿವರು, ನಮ್ಮ ಸರ್ಕಾರ ರಚನೆಯಾಗಿ ತಿಂಗಳಾದರೂ ಬಿಜೆಪಿ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ಅವರ ಘನತೆಗೆ ತಕ್ಕುದಾಗಿಲ್ಲ. ಕೇಂದ್ರ ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಅವರು ಬಡವರ ಹಸಿವು ನೀಗುವ ಯೋಜನೆ ಬಗ್ಗೆ ಹೀಗೆಲ್ಲ ಹಗುರವಾಗಿ ಮಾತನಾಡಬಾರದು. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಇವೆಲ್ಲವೂ ಇರುವುದು ಬಡವರ ಒಳಿತಿಗಾಗಿಯೇ ವಿನಾ ಶ್ರೀಮಂತರಿಗಲ್ಲ ಎಂದು ತಿರುಗೇಟು ನೀಡಿದರು. ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಕೊಡಲಾಗಿದೆ. ಈ ಯೋಜನೆಗಳಿಗೆ ಪ್ರಸ್ತುತ ಆರ್ಥಿಕ ವರ್ಷದ ಬಾಕಿ ಅವಧಿಗೆ 36 ಸಾವಿರ ಕೋಟಿ ರೂ. ಅಗತ್ಯವಿದೆ ಎಂದರು.