ಸಂಜು -ಅಭಿಷೇಕ್ ಓಪನರ್ಸ್- ವೈಭವ್ OUT, ಭುವಿಗೆ BIG ಚಾನ್ಸ್
ಪ್ಲೇಯಿಂಗ್ 11ನಲ್ಲಿ ಬಿಗ್ ಟ್ವಿಸ್ಟ್!

ಟಿ20 ವಿಶ್ವಕಪ್ ಫೈನಲ್ನ ಕಾದಾಟದ ಬಳಿಕ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿವೆ. ಐದು ಪಂದ್ಯಗಳ ಟಿ20 ಸರಣಿಯ ಮೊದಲ ನಾಳೆ ನಡೆಯಲಿದೆ. ಹಾಗಾದರೆ, ಮೊದಲ ಪಂದ್ಯಕ್ಕೆ ಪಿಚ್ ಹೇಗಿರಲಿದೆ? ಭಾರತ ತಂಡದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಬಹುದು? ಬಹಳ ದಿನಗಳ ಬಳಿಕ ತಂಡಕ್ಕೆ ಮರಳಿರುವ ಭುವನೇಶ್ವರ್ ಕುಮಾರ್ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳುತ್ತಾರಾ? ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತಾ?
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಗೆ ನಾಳೆಯಿಂದ ಆರಂಭ ಆಗಲಿದೆ. ಸರಣಿಯ ಮೊದಲ ಪಂದ್ಯ ಕ್ರೈಸ್ಟ್ ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದ್ದು, ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. ನ್ಯೂಜಿಲೆಂಡ್ನ ತವರು ಪಂದ್ಯಗಳ ಪ್ರಸಾರ ಹಕ್ಕು ಹೊಂದಿರುವ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಭಾರತದ ಅಭಿಮಾನಿಗಳು ಈ ಪಂದ್ಯವನ್ನು ನೇರವಾಗಿ ವೀಕ್ಷಿಸಬಹುದು. ಜೊತೆಗೆ ಸೋನಿಲಿವ್ ಆಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ.
ಇನ್ನೂ ಪಿಚ್ ವಿಚಾರಕ್ಕೆ ಬಂದ್ರೆ ಹ್ಯಾಗ್ಲಿ ಓವಲ್ ಮೈದಾನ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಉತ್ತಮವಾಗಿದ್ದರೂ, ಚೇಸಿಂಗ್ ಮಾಡುವ ತಂಡಗಳಿಗೆ ಕೊಂಚ ಹೆಚ್ಚು ಸಾಥ್ ನೀಡುತ್ತದೆ. ಇತ್ತೀಚಿನ ಟಿ20 ಅಂಕಿ-ಅಂಶಗಳನ್ನು ನೋಡಿದರೆ, ಇಲ್ಲಿ ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 159-162 ರನ್ ಆಗಿದೆ. ಇನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಶೇಕಡಾ 43ರಷ್ಟು ಪಂದ್ಯಗಳನ್ನಷ್ಟೇ ಗೆದ್ದುಕೊಂಡಿವೆ. ಇನ್ನೊಂದು ಪ್ರಮುಖ ಅಂಶವೆಂದರೆ, ಇಬ್ಬನಿ ಮತ್ತು ರಾತ್ರಿ ಪರಿಸ್ಥಿತಿಗಳು. ಎರಡನೇ ಇನಿಂಗ್ಸ್ನಲ್ಲಿ ಚೆಂಡು ಒದ್ದೆಯಾದರೆ ಬೌಲರ್ಗಳಿಗೆ ಹಿಡಿತ ಸಾಧಿಸುವುದು ಕಷ್ಟವಾಗಬಹುದು.
ಭಾರತ ತಂಡದಲ್ಲಿ ಯಾರಿಗೆಲ್ಲಾ ಅವಕಾಶ?
ಇನ್ನು ವೆಸ್ಟ್ ಇಂಡೀಸ್ ಎದುರಿನ ಐದೂ ಟಿ20 ಪಂದ್ಯಗಳಲ್ಲೂ ವೈಭವ್ ಸೂರ್ಯವಂಶಿಗೆ ಒಂದೇ ಒಂದು ಪಂದ್ಯದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಇದರ ಬೆನ್ನಲ್ಲೇ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಮತ್ತಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ ಕಿವೀಸ್ ಎದುರಿನ ಸರಣಿಯಲ್ಲೂ 15 ವರ್ಷದ ವೈಭವ್ ಸೂರ್ಯವಂಶಿಗೆ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿದೆ.
ಹೀಗಾದಲ್ಲಿ ಕಿವೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಕಣಕ್ಕಿಳಿದರೆ, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟ್ ಮಾಡಲಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಉಪನಾಯಕ ತಿಲಕ್ ವರ್ಮಾ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಟಾಪ್-5 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆಯಿದೆ.
ಇನ್ನು ಆಲ್ರೌಂಡರ್ಗಳಾಗಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ಅಕ್ಷರ್ ಪಟೇಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಇನ್ನು ನಮನ್ ಧೀರ್ಗೆ ವಿಶ್ರಾಂತಿ ಸಿಗಲಿದ್ದು, ಅವರ ಬದಲಿಗೆ ಶಿವಂ ದುಬೆ ಆಡುವ ಹನ್ನೊಂದರ ಬಳಗವನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಮೂವರು ಆಲ್ರೌಂಡರ್ಗಳು ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಫಿಕ್ಸ್ ಅಂತಲೇ ಹೇಳಬಹುದು.
ಇನ್ನು ವೆಸ್ಟ್ ಇಂಡೀಸ್ ಎದುರಿನ ಕೊನೆಯ ಟಿ20 ಪಂದ್ಯದ ಮೂಲಕ ಬರೋಬ್ಬರಿ 4 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಭುವಿ ಭಾರತ ವೇಗದ ದಾಳಿಯನ್ನು ಮುನ್ನಡೆಸಲಿದ್ದು, ಇವರಿಗೆ ಅರ್ಶದೀಪ್ ಸಿಂಗ್ ಹಾಗೂ ಪ್ರಿನ್ಸ್ ಯಾದವ್ ಸಾಥ್ ನೀಡಲಿದ್ದಾರೆ. ಅಂದಹಾಗೆ ನ್ಯೂಜಿಲೆಂಡ್ ಪಿಚ್ ವೇಗದ ಬೌಲಿಂಗ್ಗೆ ಹೆಚ್ಚಿನ ನೆರವು ನೀಡುತ್ತದೆ ಅನ್ನೋದ್ದನ್ನ ಬಿಡಿಸಿ ಹೇಳಬೇಕಿಲ್ಲ. ಭಾರತ ಸಂಭಾವ್ಯ ಪ್ಲೇಯಿಂದ್ 11 ನೋಡೋಣ ಬನ್ನಿ.
ಭಾರತದ ಸಂಭಾವ್ಯ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
ಅಭಿಷೇಕ್ ಶರ್ಮಾ
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್ (ನಾಯಕ)
ತಿಲಕ್ ವರ್ಮಾ
ನಮನ ಧೀರ್
ಶಿವಂ ದುಬೆ
ಅಕ್ಷರ್ ಪಟೇಲ್
ಭುವನೇಶ್ವರ್ ಕುಮಾರ್
ಪ್ರಿನ್ಸ್ ಯಾದವ್
ಅರ್ಶದೀಪ್ ಸಿಂಗ್
ಸೂರ್ಯವಂಶಿ ಮೇಲೆ ನ್ಯೂಜಿಲೆಂಡ್ ಕಣ್ಣು
ಇದೆಲ್ಲದರ ನಡುವೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ನ್ಯೂಜಿಲೆಂಡ್ ತಂಡ ವಿಶೇಷ ಗಮನ ಹರಿಸಿದೆ. ಜೇಕಬ್ ಡಫಿ, ವೈಭವ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ನ್ಯೂಜಿಲೆಂಡ್ನ ವೇಗಕ್ಕೆ ನೆರವಾಗುವ ಪಿಚ್ಗಳಲ್ಲಿ ಅವರನ್ನು ಕಟ್ಟಿಹಾಕಲು ಯೋಜನೆ ರೂಪಿಸಿರುವುದಾಗಿ ಹೇಳಿದ್ದಾರೆ. ಆದ್ರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇವರಿಗೆ ಚಾನ್ಸ್ ಸಿಗುತ್ತಾ ಇಲ್ವಾ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ನೋಡಿರಿ

