ರೋಹಿತ್, ಕೊಹ್ಲಿಗೆ ರೆಸ್ಟ್ ನೀಡ್ಬೇಕಿತ್ತಾ? – ಜಿದ್ದಿಗೆ ಬಿದ್ದು ಮುಗ್ಗರಿಸಿದ್ರಾ ಗಂಭೀರ್?
IND Vs SL.. ಕ್ರಿಕೆಟರ್ಸ್ ಸಿಟ್ಟಾಗಿದ್ದೇಕೆ?
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿದ್ದ ಟೀಮ್ ಇಂಡಿಯಾ ಏಕದಿನದಲ್ಲಿ ಕಂಪ್ಲೀಟ್ ಪಲ್ಟಿ ಹೊಡೆದಿದೆ. ಮೊದಲ ಒನ್ ಡೇ ಮ್ಯಾಚ್ನಲ್ಲೇ ಟೀಂ ಇಂಡಿಯಾಗೆ ಬಿಸಿ ಮುಟ್ಟಿಸಿದ್ದ ಸಿಂಹಳೀಯರು ಎರಡನೇ ಪಂದ್ಯದಲ್ಲಂತೂ ಬ್ಯಾಟರ್ಗಳನ್ನೇ ಬೇಟೆಯಾಡಿ ಗೆದ್ದು ಬೀಗಿದ್ರು. ಸೋ ಈಗ ಮೂರು ಪಂದ್ಯಗಳ ಪೈಕಿ 1 ಮ್ಯಾಚ್ ಡ್ರಾ ಆಗಿದ್ದು 2ನೇ ಇನ್ನಿಂಗ್ಸ್ನಲ್ಲಿ ಲಂಕಾ ಗೆದ್ದಿದೆ. 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರವೇ ಸರಣಿ ಸಮಬಲವಾಗುತ್ತೆ. ಇಲ್ಲದಿದ್ರೆ 2 ದಶಕದ ಬಳಿಕ ಮೊದಲ ಬಾರಿಗೆ ಭಾರತದ ಎದುರು ಲಂಕಾ ಒನ್ ಡೇ ಸಿರೀಸ್ನಲ್ಲಿ ಗೆದ್ದು ಬೀಗಲಿದೆ. ಲಂಕಾ ವಿರುದ್ಧ ಭಾರತದ ಕಳಪೆ ಪ್ರದರ್ಶನಕ್ಕೆ ಭಾರತದ ಮಾಜಿ ಕ್ರಿಕೆಟಿಗರು ಕೋಚ್ ಗೌತಮ್ ಗಂಭೀರ್ ವಿರುದ್ಧ ಸಿಟ್ಟಾಗಿದ್ದಾರೆ. ಹಠಕ್ಕೆ ಬಿದ್ದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನ ಸರಣಿಗೆ ಕರೆಸಿಕೊಂಡಿದ್ದ ಗಂಭೀರ್ ಸಾಲು ಸಾಲು ಪ್ರಶ್ನೆಗಳನ್ನ ಎದುರಿಸುವಂತಾಗಿದೆ. ಅಷ್ಟಕ್ಕೂ ಜಿದ್ದಿಗೆ ಬಿದ್ದು ಗಂಭೀರ್ ಸೋತ್ರಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Sha’Carri ಚೆಂದಕ್ಕೆ ಜಲಸ್ ಯಾಕೆ..? – ನೈಲ್ ಆರ್ಟ್, ಟ್ಯಾಟೂ, ಹೇರ್ ಸ್ಟೈಲ್
ಶ್ರೀಲಂಕಾ ಸರಣಿಯಿಂದ ಟೀಂ ಇಂಡಿಯಾದ ಹೆಡ್ಕೋಚ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿರೋ ಗೌತಮ್ ಗಂಭೀರ್ಗೆ ಆರಂಭದಲ್ಲೇ ಬಿಗ್ ಶಾಕ್ ಎದುರಾಗಿದೆ. ಟಿ-20 ಸರಣಿ ಗೆದ್ರೂ ಏಕದಿನ ಸರಣಿ ಸವಾಲಾಗಿ ಕಾಡ್ತಿದೆ. ಸಿರೀಸ್ ಗೆಲ್ಲೋದಿರ್ಲಿ ಈಗ ಸಮಬಲ ಸಾಧಿಸೋದೇ ಕಷ್ಟವಾಗಿದೆ. ಮೊದಲ ಪಂದ್ಯವವನ್ನ ತಮ್ಮ ಕೈಯ್ಯಾರೇ ಬಿಟ್ಟುಕೊಟ್ಟ ಟೀಂ ಇಂಡಿಯಾ ಪ್ಲೇಯರ್ಸ್ ಎರಡನೇ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೂ ಮುಟ್ಟೋಕೆ ಆಗ್ಲಿಲ್ಲ. ಲಂಕಾ ಸ್ಪಿನ್ನರ್ಸ್ ಆರ್ಭಟಕ್ಕೆ ಕ್ರೀಸ್ನಲ್ಲಿ ನಿಲ್ಲೋಕೂ ಒದ್ದಾಡಿದ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ಮೊದಲ ಮತ್ತು ಎರಡನೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅಬ್ಬರಿಸಿದ್ದು ಬಿಟ್ರೆ ಉಳಿದವ್ರೆಲ್ಲಾ ಫ್ಲ್ಯಾಪ್ ಶೋ ತೋರಿಸಿದ್ರು. ಹೊಸಬರನ್ನೇ ಇಟ್ಟುಕೊಂಡು ಜಿಂಬಾಬ್ವೆ ಮತ್ತು ಲಂಕಾ ಟಿ-20 ಸರಣಿ ಗೆದ್ದ ಭಾರತ ಈಗ ಅನುಭವಿ ಮತ್ತು ಸ್ಟಾರ್ ಆಟಗಾರರೇ ಇದ್ರೂ ಏಕದಿನದಲ್ಲಿ ಗೆಲ್ಲೋಕೆ ಆಗ್ತಿಲ್ಲ. ಇಂಥಾ ಸಂಪತ್ತಿಗೆ ವಿರಾಟ್ ಮತ್ತು ರೋಹಿತ್ರನ್ನ ತಂಡಕ್ಕೆ ಯಾಕೆ ತಂದ್ರಿ ಅಂತಾ ಮಾಜಿ ಕ್ರಿಕೆಟಿಗರೇ ಗಂಭೀರ್ರನ್ನ ಪ್ರಶ್ನೆ ಮಾಡ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಬೌಲರ್ ಆಶಿಶ್ ನೆಹ್ರಾ ಕೂಡ ಗಂಭೀರ್ ತಂತ್ರದ ವಿರುದ್ಧ ಹರಿಹಾಯ್ದಿದ್ದಾರೆ.
ರೋಹಿತ್ & ಕೊಹ್ಲಿ ಯಾಕೆ ಬೇಕಿತ್ತು?
ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿದಿದ್ರು. ಗೌತಮ್ ಗಂಭೀರ್ ನೂತನ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ರು. ಲಂಕಾ ಸರಣಿಯೇ ಗಂಭೀರ್ಗೆ ಮೊದಲ ಸರಣಿ ಆಗಿತ್ತು. ಹೀಗಾಗಿ ಟಿ-20 ಹಾಗೇ ಏಕದಿನ ಸರಣಿಗಳನ್ನ ಗೆದ್ದು ತಮ್ಮ ಹೊಸ ಕರಿಯರ್ನ ಶುಭಾರಂಭಕ್ಕೆ ಪ್ಲ್ಯಾನ್ ಮಾಡಿದ್ರು. ಅದ್ರಂತೆ ಸೂರ್ಯಕುಮಾರ್ಗೆ ಟಿ-20ಐ ಕ್ಯಾಪ್ಟನ್ಸಿ ಕಟ್ಟಿದ್ರು. ಮತ್ತೊಂದ್ಕಡೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅದಾಗಲೇ ಟಿ-20ಐ ಫಾರ್ಮೇಟ್ಗೆ ವಿದಾಯ ಘೋಷಣೆ ಮಾಡಿದ್ರಿಂದ ಲಂಕಾ ವಿರುದ್ಧದ ಏಕದಿನ ಸರಣಿಯಿಂದ ರಿಲೀಫ್ ಕೊಡಬೇಕು ಎಂದು ಕೇಳಿದ್ರು. ಬಟ್ ಇದಕ್ಕೆ ಒಪ್ಪದ ಗಂಭೀರ್, ಹಠಕ್ಕೆ ಬಿದ್ದು ರೋಹಿತ್ ಮತ್ತು ವಿರಾಟ್ರನ್ನ ಏಕದಿನ ಸರಣಿಗೆ ಕರೆಸಿಕೊಂಡಿದ್ರು. ಆದ್ರೀಗ ಇಬ್ಬರು ದಿಗ್ಗಜರನ್ನೇ ಇಟ್ಟುಕೊಂಡು ತಂಡ ಗೆಲ್ಲೋಕೆ ಆಗದಿದ್ದಕ್ಕೆ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟರ್ಸ್ ಸಿಟ್ಟಾಗಿದ್ದಾರೆ. ಗಂಭೀರ್ ಅವರ ತಂತ್ರಗಾರಿಕೆ ಸರಿಯಾಗಿಲ್ಲ. ಈ ಸರಣಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬದಲಿಗೆ ಬೇರೆ ಆಟಗಾರರನ್ನೇ ಬಳಸಿಕೊಳ್ಳಬೇಕಿತ್ತು. ಅವರಿಬ್ಬರಿಗೆ ಇನ್ನಷ್ಟು ವಿಶ್ರಾಂತಿ ನೀಡಬೇಕಿತ್ತು. ಇಬ್ಬರು ಹಿರಿಯ ಆಟಗಾರರ ಜಾಗದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗಬೇಕಿತ್ತು ಎಂದಿದ್ದಾರೆ. ಆದ್ರೆ ಈ ವಾದವನ್ನ ಕಂಪ್ಲೀಟ್ ಆಗಿ ಒಪ್ಪೋಕೂ ಕೂಡ ಸಾಧ್ಯ ಇಲ್ಲ ಬಿಡಿ. ಯಾಕಂದ್ರೆ ಟೀಂ ಇಂಡಿಯಾ ಏಕದಿನ ಸರಣಿಯ 2 ಪಂದ್ಯಗಳಲ್ಲಿ ಅಷ್ಟೋ ಇಷ್ಟೋ ಪ್ರದರ್ಶನ ತೋರಿದೆ ಅಂದ್ರೆ ಅದಕ್ಕೆ ಕಾರಣ ರೋಹಿತ್ ಶರ್ಮಾ. ವಿರಾಟ್ ಕೊಹ್ಲಿ ರನ್ ಗಳಿಸೋಕೆ ಪರದಾಡಿದ್ರೂ ಕೂಡ ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಲ್ಲಿ 47 ಎಸೆತಗಳಲ್ಲಿ 58 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ 24 ರನ್ ಗಳಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಗಳಿಸಿದ್ದರು. ಕೊಹ್ಲಿ 19 ಎಸೆತಗಳಲ್ಲಿ 14 ರನ್ ಗಳಿಸಿ ಔಟ್ ಆಗಿದ್ದಾರೆ. ಮೊದಲ ಏಕದಿನ ಪಂದ್ಯ ಟೈ ಆದರೆ, ಎರಡನೇ ಪಂದ್ಯದಲ್ಲಿ 32 ರನ್‌ಗಳ ಅಂತರದಿಂದ ಭಾರತ ಸೋತಿದೆ. ಇಲ್ಲಿ ಇಬ್ಬರೂ ಕೂಡ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಟಿ-20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲಂಕಾ ಏಕದಿನ ಸರಣಿಗೆ ಮರಳಿದ್ರು. ಹೊಸಬರ ಜೊತೆ ಟಿ-20 ಸರಣಿಗಳನ್ನ ಗೆದ್ದಿರೋ ಭಾರತ ಏಕದಿನವನ್ನೂ ವಾಷ್ ಔಟ್ ಮಾಡುತ್ತೆ ಅನ್ಕೊಂಡಿದ್ರು. ಬಟ್ ಈಗ ಲೆಕ್ಕಾಚಾರಗಳೆಲ್ಲಾ ಕೈ ಕೊಡ್ತಿದ್ದು ಸರಣಿ ಸಮಬಲ ಸಾಧಿಸಿದ್ರೆ ಸಾಕಪ್ಪ ಎನ್ನುವಂತಾಗಿದೆ. 27 ವರ್ಷಗಳ ಬಳಿಕ ಭಾರತದ ಎದುರು ಲಂಕಾ ಗೆಲುವು ಸಾಧಿಸೋ ನಿರೀಕ್ಷೆಯಲ್ಲಿದೆ. ಹೀಗಾಗಿ ವಿರಾಟ್ ಮತ್ತು ರೋಹಿತ್ರನ್ನ ತಂಡಕ್ಕೆ ಕರೆತರೋ ಬದಲು ಹೊಸಬರನ್ನೇ ಇಟ್ಟುಕೊಂಡು ಏಕದಿನದಲ್ಲೂ ಆಡಿಸಬಹುದಿತ್ತು ಅಂತಾ ಮಾಜಿ ಕ್ರಿಕೆಟರ್ಸ್ ಕಿಡಿ ಕಾರುತ್ತಿದ್ದಾರೆ.