ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದೇ ಇಲ್ಲ! – ಚರ್ಚೆಗೆ ಗ್ರಾಸವಾಯ್ತು ಚೀನಾ ವಿಜ್ಞಾನಿ ಹೇಳಿಕೆ
ಭಾರತದ ಚಂದ್ರಯಾನ -3 ಯಶಸ್ಸು ಕಂಡಿದೆ. ಭಾರತದ ಸಾಧನೆಗೆ ಈಗ ವಿಶ್ವದಾದ್ಯಂತ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇಸ್ರೋ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಆದರೆ ಇದೀಗವ ಚೀನಾ ಇದಕ್ಕೆ ಕ್ಯಾತೆ ತೆಗೆದಿದೆ. ಭಾರತ ಚಂದ್ರನ ದಕ್ಷಿಣ ಧ್ರುವಕ್ಕೆ ತೆರಳಿಲ್ಲ ಎಂದು ಡ್ರ್ಯಾಗನ್ ರಾಷ್ಟ್ರ ಆರೋಪಿಸಿದೆ.
ಚಂದ್ರನ ಅಧ್ಯಯನಕ್ಕೆ ಇಸ್ರೋ ರವಾನಿಸಿದ ಚಂದ್ರಯಾನ- 3 ನೌಕೆಯು ಉದ್ದೇಶಿದ ಸ್ಥಳದಲ್ಲಿ ಅಡೆತಡೆ ಇಲ್ಲದೆ ಇಳಿಯುವ ಮೂಲಕ, ಐತಿಹಾಸಿಕ ಸಾಧನೆ ಮಾಡಿತ್ತು. ಮಾತ್ರವಲ್ಲದೆ, ಅದರಲ್ಲಿನ ರೋವರ್ ಹಾಗೂ ಲ್ಯಾಂಡರ್ ಸಾಧನಗಳು ತಮಗೆ ವಹಿಸಿದ್ದ ಹೊಣೆಗಾರಿಕೆಯನ್ನು ನಿಭಾಯಿಸಿವೆ. ಅವುಗಳು ಸಾಕಷ್ಟು ಮಾಹಿತಿ ಹಾಗೂ ಚಿತ್ರಗಳನ್ನು ಕೂಡ ಕಳುಹಿಸಿವೆ. ದಕ್ಷಿಣ ಧ್ರುವದ ಮೇಲೆ ಸೂರ್ಯ ರಶ್ಮಿ ಮರೆಯಾದ ಬಳಿಕ ನೌಕೆಯ ಸಾಧನಗಳು ತಟಸ್ಥಗೊಂಡಿದ್ದವು. ಈಗ ಅಲ್ಲಿ ಸೂರ್ಯನ ಬೆಳಕು ಮತ್ತೆ ಬೀಳತೊಡಗಿ ವಾರ ಕಳೆದಿದೆ. ಆದರೆ ಪ್ರಜ್ಞಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಅನ್ನು ಪುನಶ್ಚೇತನಗೊಳಿಸುವ ವಿಜ್ಞಾನಿಗಳ ಪ್ರಯತ್ನ ಯಶಸ್ವಿಯಾಗಿಲ್ಲ. ಅದರ ನಡುವೆ ಚೀನಾ ಚಂದ್ರ ಯೋಜನೆಯ ಪಿತಾಮಹ ಎಂದು ಕರೆಯಲ್ಪಡುವ ಉಯಾಂಗ್ ಝಿಯಾನ್ ಚಂದ್ರಯಾನ 3 ಯೋಜನೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಭಾರತದ ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿಯಾಗಲೀ, ಅಥವಾ ಅದರ ಸಮೀಪದಲ್ಲಾಗಲೀ ಇಳಿದಿಲ್ಲ ಎಂದು ಜಿಯುವಾನ್ ಪ್ರತಿಪಾದಿಸಿದ್ದಾರೆ. ಇದು ವಿಶ್ವದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಚಂದ್ರಯಾನಗಿಂತ, ಸೂರ್ಯಯಾನ ಕಂಪ್ಲೀಟ್ ಭಿನ್ನ! -ಲಾಗ್ರೇಂಜ್ ಪಾಯಿಂಟ್ ತಲುಪಲು ನೌಕೆ ಎಷ್ಟು ದಿನ ತೆಗೆದುಕೊಳ್ಳುತ್ತೆ?
“ಚಂದ್ರಯಾನ- 3ರ ಲ್ಯಾಂಡಿಂಗ್ ಜಾಗವು ಚಂದ್ರನ ದಕ್ಷಿಣ ಧ್ರುವವಲ್ಲ, ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ಅಲ್ಲ, ಅಥವಾ ಅಂಟಾರ್ಕ್ಟಿಕ್ ಧ್ರುವ ಪ್ರದೇಶದಲ್ಲಿಯೂ ಅಲ್ಲ” ಎಂದು ಚೀನಾ ವಿಜ್ಞಾನ ಅಕಾಡೆಮಿಯ ಸದಸ್ಯರಾಗಿರುವ ಜಿಯುವಾನ್, ಅಕಾಡೆಮಿಯ ಅಧಿಕೃತ ಸೈನ್ಸ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.
ಜಿಯುವಾನ್ ವಾದ ಏನು?
ಚಂದ್ರನ ದಕ್ಷಿಣ ಧ್ರುವ ಯಾವ ರೀತಿ ಇರುತ್ತದೆ ಎಂದು ಅವರು ಪರಿಗಣಿಸಿದ್ದಾರೋ, ಅದರ ಆಧಾರದಲ್ಲಿ ಈ ಭಿನ್ನ ಗ್ರಹಿಕೆಯ ವಾದವನ್ನು ಮುಂದಿಟ್ಟಿದ್ದಾರೆ. ಭೂಮಿಯ ದಕ್ಷಿಣ ಧ್ರುವವನ್ನು ದಕ್ಷಿಣದ 66.5 ಮತ್ತು 90 ಡಿಗ್ರಿ ನಡುವಿನ ಯಾವುದೇ ಭಾಗ ಎಂದು ವ್ಯಾಖ್ಯಾನಿಸಲಾಗುತ್ತದೆ. ಅದರ ಆವರ್ತನದ ಅಕ್ಷವು ಸೂರ್ಯನಿಗೆ ಸುಮಾರು 23.5 ಡಿಗ್ರಿ ಕೋನದಲ್ಲಿ ಇರುತ್ತದೆ. ಚಂದ್ರನ ಬಾಗುವಿಕೆಯು ಕೇವಲ 1.5 ಡಿಗ್ರಿ ಇರುವುದರಿಂದ ಧ್ರುವ ಪ್ರದೇಶವು ಹೆಚ್ಚು ಚಿಕ್ಕದಾಗಿರುತ್ತದೆ ಎಂದು ಜಿಯುವಾನ್ ವಾದಿಸಿದ್ದಾರೆ. ಚಂದ್ರನ ದಕ್ಷಿಣ ಧ್ರುವ 80- 90 ಡಿಗ್ರಿ ಇರಬಹುದು ಎಂದು ನಾಸಾ ಪರಿಗಣಿಸಿದ್ದರೆ, ಜಿಯುವಾನ್ ಅದು 88.5 ರಿಂದ 90 ಡಿಗ್ರಿವರೆಗೆ ಮಾತ್ರವೇ ಇದೆ ಎಂದು ಪರಿಗಣಿಸಿದ್ದಾಗಿ ತಿಳಿಸಿದ್ದಾರೆ.
ಚಂದ್ರನ ಮೇಲೆ ನೌಕೆ ಇಳಿಸಿದ ನಾಲ್ಕನೆಯ ಹಾಗೂ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸಾಧನೆಯನ್ನು ನಾಸಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿದಂತೆ ಬೇರೆ ಯಾವುದೇ ದೇಶ ಅನುಮಾನಿಸಿಲ್ಲ. ಯಾವ ದೇಶಕ್ಕೂ ಸಾಧ್ಯವಾಗದ ಕಾರ್ಯವನ್ನು ಮಾಡಿರುವ ಭಾರತದ ವಿಜ್ಞಾನಿಗಳನ್ನು ಈ ಸಂಸ್ಥೆಗಳು ಶ್ಲಾಘಿಸಿವೆ. ಚಂದ್ರನ ಸಮೀಪದ ಅಂದಾಜು 70 ಡಿಗ್ರಿ ಅಕ್ಷಾಂಶದಲ್ಲಿ ಚಂದ್ರಯಾನ- 3 ಇಳಿಯಲಿದೆ ಎಂದು ಭಾರತ ಆರಂಭದಿಂದಲೂ ಸ್ಪಷ್ಟವಾಗಿ ತಿಳಿಸಿತ್ತು.
ಭಾರತಕ್ಕೆ ಹಾಂಕಾಂಗ್ ವಿಜ್ಞಾನಿ ಬೆಂಬಲ
ಚೀನಾ ವಿಜ್ಞಾನಿ ಜಿಯುವಾನ್ ಅವರ ವಾದವನ್ನು ಹಾಂಕಾಂಗ್ ವಿವಿಯ ಬಾಹ್ಯಾಕಾಶ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿ ತಿರಸ್ಕರಿಸಿದ್ದಾರೆ. “ರೋವರ್ ಅನ್ನು ದಕ್ಷಿಣ ಧ್ರುವದ ಸಮೀಪ ಇಳಿಸಿದ ಬಳಿಕ, ದಕ್ಷಿಣ ಧ್ರುವ ಪ್ರದೇಶ ಎಂದು ವ್ಯಾಖ್ಯಾನಿಸಿದ ಜಾಗದ ವ್ಯಾಪ್ತಿಗೇ ಸೇರುತ್ತದೆ. ಇದು ಈಗಾಗಲೇ ದೊಡ್ಡ ಸಾಧನೆಯಾಗಿದೆ. ಈ ಕಾರಣಕ್ಕಾಗಿ ಭಾರತದಿಂದ ಯಾವ ಹೆಗ್ಗಳಿಕೆಯನ್ನೂ ಕಿತ್ತುಕೊಳ್ಳಲಾಗದು” ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ಗೆ ವಿಜ್ಞಾನಿ ಕ್ವೆಂಟಿನ್ ಪಾರ್ಕರ್ ತಿಳಿಸಿದ್ದಾರೆ.