ನ್ಯೂಜಿಲೆಂಡ್ & ಆಸೀಸ್ ಸೋಲು ಮರೆಸ್ತಾರಾ – ಇಂಗ್ಲೆಂಡ್ ವಿರುದ್ಧ ಹೇಗಿದೆ ಭಾರತದ ರೆಕಾರ್ಡ್ಸ್?

ನ್ಯೂಜಿಲೆಂಡ್ & ಆಸೀಸ್ ಸೋಲು ಮರೆಸ್ತಾರಾ – ಇಂಗ್ಲೆಂಡ್ ವಿರುದ್ಧ ಹೇಗಿದೆ ಭಾರತದ ರೆಕಾರ್ಡ್ಸ್?

ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಭಾರತದ ಇತ್ತೀಚಿನ ಟೆಸ್ಟ್ ರೆಕಾರ್ಡ್ಸ್ ನೋಡಿದಾಗ ಕಳೆದ ಎರಡೂ ಪಂದ್ಯಗಳನ್ನ ಸೋತಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ತವರಿನಲ್ಲಿ ನ್ಯೂಜಿಲೆಂಡ್‌ ಹಾಗೂ ತವರಿನಾಚೆ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಕಂಡಿದ್ದ ಸೋಲುಗಳ ಕಹಿ ನೆನಪುಗಳನ್ನ ಕಳೆಯಬಹುದು. 2023-25ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಭಾರತವನ್ನು ಆ ಎರಡು ಸರಣಿಗಳ ಸೋಲು ಕಂಗೆಡಿಸಿತ್ತು. ಫೈನಲ್ ಆಡುವ ಆಸೆಯನ್ನೂ ಕಸಿದಿತ್ತು. ಸೋ ಈ ಕಹಿಯನ್ನು ಇಂಗ್ಲೆಂಡ್‌ ಸರಣಿಯಲ್ಲಿ ಗೆಲ್ಲುವ ಮೂಲಕ ಕಮ್ ಬ್ಯಾಕ್ ಮಾಡುವ ಅವಕಾಶ ಭಾರತ ತಂಡಕ್ಕೆ ಸಿಕ್ಕಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತ ತಂಡ 18 ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಸೋ ಈ ಬಾರಿ ಇಂಗ್ಲೆಂಡ್‌ನಲ್ಲಿ ಸರಣಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಈವರೆಗೂ ಇಂಗ್ಲೆಂಡ್‌ ನೆಲದಲ್ಲಿ ಭಾರತ 19 ಬಾರಿ ಟೆಸ್ಟ್‌ ಸರಣಿ ಆಡಿದೆ. ಇದರಲ್ಲಿ ಇಂಗ್ಲೆಂಡ್‌ 14ರಲ್ಲಿ ಗೆದ್ದಿದ್ದರೆ, ಭಾರತ 3ರಲ್ಲಿ ಮಾತ್ರ ಜಯ ಗಳಿಸಿದೆ. ಉಳಿದ ಎರಡು ಸರಣಿಗಳು ಡ್ರಾಗೊಂಡಿವೆ. 2007ರಲ್ಲಿ ಕೊನೆ ಬಾರಿ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದಿದ್ದ ತಂಡ, 2021-2022ರ ಕೊನೆ ಸರಣಿಯಲ್ಲಿ 2-2 ಡ್ರಾ ಮಾಡಿಕೊಂಡಿತ್ತು. 1932ರಿಂದ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡುತ್ತಿದೆ. ಆದ್ರೆ ಇಂಗ್ಲೆಂಡ್ ನಲ್ಲಿ ಟೆಸ್ಟ್ ಗೆಲ್ಲೋದು ಭಾರತ ಪಾಲಿಗೆ ಕಬ್ಬಿಣದ ಕಡೆಲೆಯೇ ಆಗಿದೆ.

ಇದನ್ನೂ ಓದಿ : 7 ವಾರ.. 8 ಜನ ದಿಢೀರ್ ನಿವೃತ್ತಿ – RO-KO, ಮ್ಯಾಕ್ಸಿ, ಕ್ಲಾಸೆನ್ ಗುಡ್ ಬೈ

ಭಾರತಕ್ಕೆ ಇಂಗ್ಲೆಂಡ್ ಸವಾಲ್!

136 ಸಲ ಮುಖಾಮುಖಿ, ಭಾರತ 35, ಇಂಗ್ಲೆಂಡ್ 51 ಮ್ಯಾಚ್

1932ರಿಂದ ಈವರೆಗೂ ಇಂಗ್ಲೆಂಡ್‌ ನಲ್ಲಿ 67 ಟೆಸ್ಟ್‌ ಪಂದ್ಯ

9 ಟೆಸ್ಟ್‌ ಗೆಲುವು, 36 ಟೆಸ್ಟ್‌ ನಲ್ಲಿ ಇಂಗ್ಲೆಂಡ್‌ ಜಯ, 22 ಪಂದ್ಯ ಡ್ರಾ

ಭಾರತಕ್ಕೆ ಇಂಗ್ಲೆಂಡ್‌ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ನಾಯಕರು ಮೂವರು

1971ರಲ್ಲಿ ಅಜಿತ್‌ ವಾಡೇಕರ್‌, 1986ರಲ್ಲಿ ಕಪಿಲ್‌ ದೇವ್‌, 2007ರಲ್ಲಿ ದ್ರಾವಿಡ್‌

ಗಿಲ್‌ ಮೊದಲ ಬಾರಿ ಟೆಸ್ಟ್‌ ತಂಡದ ನಾಯಕತ್ವ, ಬಹುತೇಕರಿಗೆ ಮೊದಲ ಸರಣಿ

ಭಾರತದ 18 ಆಟಗಾರರ ಪೈಕಿ 10 ಮಂದಿ ಇದೇ ಮೊದಲ ಬಾರಿ ಟೆಸ್ಟ್‌

ಕಳೆದ ವರ್ಷ ಫೈನಲ್‌ ಅಂಚಿನಲ್ಲಿ ಎಡವಿದ್ದ ಭಾರತ ತಂಡಕ್ಕೆ ಡಬ್ಲ್ಯೂಟಿಸಿ ಗುರಿ

ಬೆನ್‌ ಸ್ಟೋಕ್ಸ್‌ ನಾಯಕತ್ವದ ಇಂಗ್ಲೆಂಡ್‌ ತಂಡದಲ್ಲಿ ಅನುಭವಿಗಳು ಹೆಚ್ಚಿದ್ದು, ತವರಿನ ಕ್ರೀಡಾಂಗಣದ ಲಾಭ ಪಡೆದು ಡಾಮಿನೇಟ್ ಮಾಡಬಹುದು. 36 ಶತಕ ಒಳಗೊಂಡಂತೆ 13000+ ರನ್‌ಗಳ ಸರದಾರ ಜೋ ರೂಟ್‌ ಬ್ಯಾಟಿಂಗ್‌ ಆಧಾರಸ್ತಂಭವಾಗಿದ್ದಾರೆ. ಜ್ಯಾಕ್‌ ಕ್ರಾವ್ಲಿ, ಓಲಿ ಪೋಪ್‌, ಹ್ಯಾರಿ ಬ್ರೂಕ್, ಬೆನ್‌ ಡಕೆಟ್‌, ಜೆಮೀ ಸ್ಮಿತ್‌ ಕೂಡಾ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಕ್ರಿಸ್‌ ವೋಕ್ಸ್‌ ಜೊತೆ ಬ್ರೈಡನ್‌ ಕಾರ್ಸ್‌, ಜೋಶ್‌ ಟಂಗ್‌, ಶೊಯಿಬ್‌ ಬಶೀರ್‌ ಭಾರತವನ್ನ ಕಾಡ್ತಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಮತ್ತೊಂದು ಸ್ಪೆಷಾಲಿಟಿ ಅಂದ್ರೆ ಇಷ್ಟು ದಿನ ಇದನ್ನ ಪಟೌಡಿ ಸರಣಿ ಎನ್ನಲಾಗ್ತಿತ್ತು. ಆದ್ರೆ ಈಗ ಹೆಸರನ್ನು ಬದಲಿಸಲಾಗಿದೆ. ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ ಎಂದು ಮರು ನಾಮಕರಣ ಮಾಡಲಾಗಿದೆ. ಹೊಸ ಟ್ರೋಫಿಯನ್ನು ಕ್ರಿಕೆಟ್ ಜಗತ್ತಿನ ಇಬ್ಬರು ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಌಂಡರ್ಸನ್ ಅನಾವರಣಗೊಳಿಸಿದ್ದಾರೆ. ಟ್ರೋಫಿಯು ತೆಂಡೂಲ್ಕರ್ ಅವರ ಐಕಾನಿಕ್ ಕವರ್ ಡ್ರೈವ್ ಮತ್ತು ಆಂಡರ್ಸನ್ ಅವರ ಸಿಗ್ನೇಚರ್ ಬೌಲಿಂಗ್ ಆಕ್ಷನ್ ಮತ್ತು ಇಬ್ಬರ ಕೆತ್ತಿದ ಸಹಿಗಳ ಚಿತ್ರಣವನ್ನು ಒಳಗೊಂಡಿದೆ. ಸಚಿನ್ ಹಾಗೂ ಆ್ಯಂಡರ್ಸನ್ ಗೌರವಾರ್ಥವಾಗಿ ಹೆಸರು ಬದಲಾಯಿಸಲಾಗಿದೆ.

Shantha Kumari