ಚೀನಾದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಮಕ್ಕಳ ಜೀವ ಹಿಂಡುತ್ತಿದೆ ಈ ನಿಗೂಢ ರೋಗ!

ಚೀನಾದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಮಕ್ಕಳ ಜೀವ ಹಿಂಡುತ್ತಿದೆ ಈ ನಿಗೂಢ ರೋಗ!

ಕೋವಿಡ್-19 ಬಿಕ್ಕಟ್ಟಿನಿಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿತ್ತು. ಎರಡು ವರ್ಷಗಳ ಕಾಲ ಜಗತ್ತಿನಾದ್ಯಂತ ಕೋಟ್ಯಂತರ ಜನರು ಪರದಾಡಿದ್ದಾರೆ. ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ದೇಶಗಳ ಆರ್ಥಿಕ ಸ್ಥಿತಿ ಇನ್ನೂ ಸಹಸ ಸ್ಥಿತಿಗೆ ಮರಳಿಲ್ಲ. ಇನ್ನು ಕೊರೊನಾ ತವರು ಚೀನಾದಲ್ಲಿ ಕೊರೊನಾದಿಂದಾಗಿ ಅಕ್ಷರಶಃ ನಲುಗಿ ಹೋಗಿತ್ತು. ಲೆಕ್ಕವಿಲ್ಲದಷ್ಟು ಮಂದಿ ಸಾವನ್ನಪ್ಪಿದ್ದರು. ಈ ಕೋವಿಡ್‌ ಸಾಂಕ್ರಾಮಿಕ ಒಂದೊಂದು ರೂಪಾಂತರ ಪಡೆದು ಅಲ್ಲಿನ ಜನರ ಜೀವ ಹಿಂಡುತ್ತಿದೆ. ಈ ಮಧ್ಯೆಯೇ ಚೀನಾಗೆ ಮತ್ತೊಂದು ಬರ ಸಿಡಿಲು ಎರಗಿದಂತಾಗಿದೆ. ಡ್ರ್ಯಾಗನ್‌ ರಾಷ್ಟ್ರದಲ್ಲಿ ಹೊಸ ರೋಗವು ದೊಡ್ಡ ಪ್ರಮಾಣದಲ್ಲಿ ಅಲ್ಲಿನ ಜನರನ್ನು ಕಾಡುತ್ತಿದೆ. ಇಲ್ಲಿನ ಶಾಲೆಗಳಲ್ಲಿ ನಿಗೂಢ ನ್ಯುಮೋನಿಯಾ ವೇಗವಾಗಿ ಹರಡುತ್ತಿದೆ. ಈ ಆತಂಕಕಾರಿ ಪರಿಸ್ಥಿತಿ ಕೋವಿಡ್ ಬಿಕ್ಕಟ್ಟಿನ ಆರಂಭದ ದಿನಗಳನ್ನು ನೆನಪಿಸುತ್ತದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉಗ್ರರ ವಿರುದ್ಧ ಎನ್‌ಕೌಂಟರ್‌ – ಕರ್ನಾಟಕದ ಯೋಧ ಸೇರಿ ನಾಲ್ವರು ಹುತಾತ್ಮ

ನಿಗೂಢ ನ್ಯುಮೋನಿಯಾ ಮಕ್ಕಳು ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಈ ನಿಗೂಢ ನ್ಯುಮೋನಿಯಾದಿಂದ ಬಳಲುತ್ತಿರುವ ಮಕ್ಕಳಲ್ಲಿ ಶ್ವಾಸಕೋಶದಲ್ಲಿ ಊತ ಮತ್ತು ಅಧಿಕ ಜ್ವರ ಸೇರಿದಂತೆ ಅಸಾಮಾನ್ಯ ಲಕ್ಷಣಗಳು ಕಂಡುಬರುತ್ತಿವೆ. ಕೆಮ್ಮು ಮತ್ತು ಜ್ವರ, ಆರ್‌ಎಸ್‌ವಿ ಮತ್ತು ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಲಕ್ಷಣಗಳು ಆ ಮಕ್ಕಳಲ್ಲಿ ಕಂಡುಬರುತ್ತಿಲ್ಲ. ಈಶಾನ್ಯಕ್ಕೆ 500 ಮೈಲುಗಳಷ್ಟು ದೂರದಲ್ಲಿರುವ ಬೀಜಿಂಗ್ ಮತ್ತು ಲಿಯಾನಿಂಗ್‌ನಲ್ಲಿರುವ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ದಾಖಲಿಸಲಾಗುತ್ತಿದೆ.

ಯಾವಾಗ ಆರಂಭವಾಯಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮೈಕೋಪ್ಲಾಸ್ಮಾ ನ್ಯುಮೋನಿಯಾ ಅಥವಾ ವಾಕಿಂಗ್ ನ್ಯುಮೋನಿಯಾ ಇರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದು, ಜನರು ಜಾಗರೂಕರಾಗಿರಲು ಸೂಚಿಸಿದೆ. ಇದರೊಂದಿಗೆ, ವಿಶ್ವ ಆರೋಗ್ಯ ಸಂಸ್ಥೆಯು ಮಕ್ಕಳಲ್ಲಿ ಹರಡುವ ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಚೀನಾದ ಆರೋಗ್ಯ ಅಧಿಕಾರಿಗಳನ್ನು ಕೇಳಿದೆ.

ಬೀಜಿಂಗ್‌ನ ಲಿಯಾನಿಂಗ್‌ನಲ್ಲಿರುವ ಮಕ್ಕಳ ಆಸ್ಪತ್ರೆಗಳು ಮಕ್ಕಳಿಂದ ತುಂಬಿವೆ. ಹಲವು ನಗರಗಳಲ್ಲಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ತಮ್ಮ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಬಗ್ಗೆ ಚಿಂತಿತರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈ ಉಸಿರಾಟದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಜನರು ವಿವಿಧ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿದೆ.

Shwetha M