ಗುಜರಾತ್ ಜೈಂಟ್ಸ್‌ಗೆ ಎರಡನೇ ಗೆಲುವು – ಕೈಗೆ ಬಂದ ಪಂದ್ಯ ಕಳೆದುಕೊಂಡ ಡೆಲ್ಲಿ

ಗುಜರಾತ್ ಜೈಂಟ್ಸ್‌ಗೆ ಎರಡನೇ ಗೆಲುವು – ಕೈಗೆ ಬಂದ ಪಂದ್ಯ ಕಳೆದುಕೊಂಡ ಡೆಲ್ಲಿ

 ಗೆಲ್ಲುವ ಪಂದ್ಯವನ್ನ ಡಿಸಿ ಕೈ ಚೆಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಕೊನೆಯ ಓವರ್‌ನಲ್ಲಿ ಗೆಲ್ಲಲು 7 ರನ್‌ ಅವಶ್ಯಕತೆ ಇತ್ತು. ಈ ವೇಳೆ ಡೆಲ್ಲಿ 3 ವಿಕೆಟ್‌ ಕಳೆದುಕೊಂಡು 203 ರನ್‌ ಸೇರಿಸಿತ್ತು. 20ನೇ ಓವರ್‌ನಲ್ಲಿ ಸೋಫಿಯಾ ಡಿವೈನ್‌ ಬಿಗುವಿನ ದಾಳಿ ನಡೆಸಿದರು. ಶಿಸ್ತು ಬದ್ಧ ದಾಳಿ ನಡೆಸಿದ ಡಿವೈನ್ 2 ವಿಕೆಟ್‌ ಪಡೆದು ಬೀಗಿದರು. ಅಲ್ಲದೆ ಕೇವಲ 2 ರನ್‌ ನೀಡಿ ಗುಜರಾತ್‌ ಜೈಂಟ್ಸ್‌ ಮೊದಲ ಗೆಲುವಿನ ಹೀರೋಯಿನ್ ರೀತಿ ಮಿಂಚಿದರು. ಇವರು ಡೆಲ್ಲಿ ಕ್ಯಾಪಿಟಲ್ಸ್‌ ತೆಕ್ಕೆಯಲ್ಲಿದ್ದ ಜಯವನ್ನು ಕಸಿದು ಶಾಕ್‌ ನೀಡಿದರು. ಗುಜರಾತ್ ಜೈಂಟ್ಸ್‌ ಎರಡನೇ ಗೆಲುವಿನ ನಗೆ ಬೀರಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಇದನ್ನೂ ಓದಿ: RCBಯ LOYAL ಪ್ಲೇಯರ್ ಕೊಹ್ಲಿ – ಧೋನಿ, ರೋಹಿತ್ ಐಕಾನಿಕ್ ಸ್ಟಾರ್ಸ್

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿತ್ತು. ಕೊನೆಯ ಓವರ್‌ನಲ್ಲಿ ಭರವಸೆಯ ಆಟಗಾರರಾದ ಲಾರಾ ವೋಲ್ವಾರ್ಡ್ ಹಾಗೂ ಜೆಮಿಮಾ ರೊಡ್ರಿಗಸ್‌ ಅವರು ಕ್ರೀಸ್‌ನಲ್ಲಿ ಇದ್ದರು. ಸ್ಟ್ರೈಕ್‌ ರೋಟೇಟ್‌ ಮಾಡುತ್ತಾ ಸಿಂಗಲ್ ಆಡಿದ್ರೂ ಪಂದ್ಯ ಗೆಲ್ಲಬಹುದಿತ್ತು. ಆದರೆ ಬಿಗ್ ಶಾಟ್‌ಗಳನ್ನು ಬಾರಿಸಲು ಹೋಗಿ ಡೆಲ್ಲಿ ಬ್ಯಾಟರ್‌ಗಳು ವಿಕೆಟ್ ನೀಡಿ ಕೈ ಚೆಲ್ಲಿದರು. ಅಲ್ಲದೆ ಲೀಗ್‌ನಲ್ಲಿ ಎರಡನೇ ಸೋಲು ಕಂಡಿತು.

210 ರನ್‌ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭರವಸೆಯ ಆಟಗಾರ್ತಿ ಶಫಾಲಿ ವರ್ಮಾ (14) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಲಿಜೆಲ್ ಲೀ ಹಾಗೂ ಲಾರಾ ವೋಲ್ವಾರ್ಡ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆಯನ್ನು ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಈ ಜೋಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವುದಲ್ಲದೇ ವಿಕೆಟ್‌ ಬೀಳದಂತೆ ಕಾಯ್ದುಕೊಂಡಿತು. 2ನೇ ವಿಕೆಟ್‌ಗೆ ಲಿಜೆಲ್ ಲೀ ಹಾಗೂ ಲಾರಾ ವೋಲ್ವಾರ್ಡ್ ಜೊತೆಗೂಡಿ 55 ಎಸೆತಗಳಲ್ಲಿ 90 ರನ್‌ ಜೊತೆಯಾಟದ ಕಾಣಿಕೆ ನೀಡಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಲಿಜೆಲ್ ಲೀ 86 ರನ್‌ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರು 12 ಬೌಂಡರಿ, 3 ಸಿಕ್ಸರ್ ಬಾರಿಸಿದರು. ಕೊನೆಯ ವರೆಗೂ ಹೋರಾಡಿದ ಲಾರಾ ವೋಲ್ವಾರ್ಡ್ 38 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 77 ರನ್‌ ಬಾರಿಸಿ ಔಟ್ ಆದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಕಲೆ ಹಾಕಿ ಸೋಲು ಕಂಡಿತು.

Kishor KV