ಕರ್ನಾಟಕದಾದ್ಯಂತ ಇಂದೂ ಮಳೆ ಸಾಧ್ಯತೆ – ಅಕಾಲಿಕ ಮಳೆಗೆ ತತ್ತರಿಸಿದ ಅನ್ನದಾತ

ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಅಲಿಕಲ್ಲು ಸಹಿತ ಮಳೆ ಸುರಿಯುತ್ತಿದ್ದು, ಅಕಾಲಿಕ ಮಳೆಗೆ ರೈತರು ತತ್ತರಿಸಿ ಹೋಗಿದ್ದಾರೆ. ಇಂದು ಕೂಡ ಕರ್ನಾಟಕದಾದ್ಯಂತ ಮಳೆಯಾಗುವ ಮುನ್ಸೂಚನೆ ಇದೆ. ಗರಿಷ್ಠ ತಾಪಮಾನವು 33°C ಮತ್ತು ಕನಿಷ್ಠ ತಾಪಮಾನವು 21°C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ 32°C ಮತ್ತು ಕನಿಷ್ಠ 19°C ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಹಗಲಿನಲ್ಲಿ ಹಗುರ ಮಳೆಯ ಮುನ್ಸೂಚನೆ ಇದ್ದು, ರಾತ್ರಿಯ ವೇಳೆ ಆಕಾಶವು ತಿಳಿಯಾಗಿರಲಿದೆ. ಇನ್ನು ನಗರದ ಕೆಲವು ಭಾಗಗಳಲ್ಲಿ ಸಾಯಂಕಾಲ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ರಾಯಚೂರು ತೀವ್ರ ಬಿಸಿಲಿನ ನಡುವೆಯೂ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನವು 37°C ಆಸುಪಾಸಿನಲ್ಲಿರಬಹುದು. ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್‌ನ್ಯೂಸ್! – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ!
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. ಇನ್ನು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನವು ಇತರ ಜಿಲ್ಲೆಗಳಿಗಿಂತ ಕಡಿಮೆ ಇರಲಿದೆ. ಹಾವೇರಿ ಮತ್ತು ಚಿತ್ರದುರ್ಗ ಭಾಗಗಳಲ್ಲಿ ಹಗಲು ಬಿಸಿಲು ತೀವ್ರವಾಗಿರಲಿದ್ದು, ಸಂಜೆಯ ಹೊತ್ತಿಗೆ ಆಕಾಶ ಮೋಡದಿಂದ ಕೂಡಿರುತ್ತದೆ.

ನೋಡಿರಿ

