ಕರ್ನಾಟಕದಲ್ಲಿ ಸೊನ್ನೆ, ನಾಗ್ಪುರದಲ್ಲಿ ವಿನ್ – ಮೋದಿ ದುರ್ಬೀನಿಗೆ ಕಂಡಿದ್ದೇನು?

ಕರ್ನಾಟಕದಲ್ಲಿ ಸೊನ್ನೆ, ನಾಗ್ಪುರದಲ್ಲಿ ವಿನ್ – ಮೋದಿ ದುರ್ಬೀನಿಗೆ ಕಂಡಿದ್ದೇನು?

ಕ್ರಿಕೆಟ್‌ನಲ್ಲಿ 4- 0 ಅಂದ್ರೆ ವೈಟ್‌ವಾಶ್. ರಾಜಕೀಯದಲ್ಲಿ 4-0 ಅಂದ್ರೆ? ಒಂದು ಕಡೆ ಪಟಾಕಿ, ಇನ್ನೊಂದು ಕಡೆ “ಆತ್ಮಾವಲೋಕನ ಸಭೆ”. ದೇಶದ ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಹೇಳ್ತೇನೆ. ಈ ಫಲಿತಾಂಶದಲ್ಲಿ ಕರ್ನಾಟಕದಲ್ಲಿ ಮತದಾರರು ಕಾಂಗ್ರೆಸ್‌ಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ, ಬಿಜೆಪಿ ಜೆಡಿಎಸ್‌ ನಲ್ಲಿ ಸಂಭ್ರಮ  ಹೇಳತೀರದಾಗಿದೆ. ದೋಸ್ತಿ ನಾಯಕರಿಗೆ 2028ರ ಚುನಾವಣೆ ಭವಿಷ್ಯ ಈಗ್ಲೇ ಕಣ್ಣೆದುರು ಪಲ್ಟಿ ಹೊಡ್ಕೊಂಡು ಕುಣಿದಾಡ್ತಾ ಇರುವಂತೆ ಕಾಣ್ತಿದೆ..

ಮೊದಲು ಲೆಕ್ಕ ನೋಡೋಣ. ಕರ್ನಾಟಕದಲ್ಲಿ ಒಟ್ಟು ನಾಲ್ಕು ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಕರ್ನಾಟಕದಲ್ಲಿ ಗೆದ್ದ NDA

ಪಕ್ಷ                    ಬಿಜೆಪಿ–ಜೆಡಿಎಸ್ (NDA)            ಕಾಂಗ್ರೆಸ್

ಗೆದ್ದ ಸ್ಥಾನ               4                                              0

 

NDA ಪಾಳಯದಲ್ಲಿ ಗೆಲುವಿನ ಸಂಭ್ರಮ ಇದ್ದರೆ, ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಇದನ್ನು ಕಾಂಗ್ರೆಸ್‌ಗೆ “ಭಾರೀ ಮುಖಭಂಗ” ಎಂದೇ ಬಣ್ಣಿಸಲಾಗುತ್ತಿದೆ. ಇಲ್ಲಿ ಒಂದು ವಿಷಯ ಗಮನಿಸಿ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರೋದು ಕಾಂಗ್ರೆಸ್. ಸರ್ಕಾರ ನಿಮ್ಮದು, ಮಂತ್ರಿಗಳು ನಿಮ್ಮವರು, ಯೋಜನೆಗಳ ಪೋಸ್ಟರ್‌ಗಳೂ ನಿಮ್ಮವೇ. ಆದರೂ ಸ್ಕೋರ್‌ಬೋರ್ಡ್ ಮಾತ್ರ ಸೊನ್ನೆ.

ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿರಬಹುದು. ಆದರೆ ವಿಧಾನ ಪರಿಷತ್‌ನಲ್ಲಿ ಗೆಲುವಿನ ಗ್ಯಾರಂಟಿ ಮಾತ್ರ ಕಾಂಗ್ರೆಸ್‌ ಕೈ ಸೇರಲಿಲ್ಲ.”ಫಲಿತಾಂಶದ ನಂತರ ಕಾಂಗ್ರೆಸ್ ಕಚೇರಿಯಲ್ಲಿ ಎರಡೇ ವಿಷಯ ಸಿಗುತ್ತೆ ಅಂತಾರೆ. ಒಂದು ಟೀ, ಇನ್ನೊಂದು “ಹೈಕಮಾಂಡ್‌ಗೆ ವರದಿ ಕಳಿಸುತ್ತೇವೆ” ಅನ್ನೋ ಹೇಳಿಕೆ, ಸೋಲಿಗೆ ಯಾರು ಹೊಣೆ ಅಂತ ಕೇಳಿದರೆ, ಪ್ರತಿ ಬಣವೂ ಬೆರಳು ಮಾಡೋದು ಪಕ್ಕದ ಬಣದ ಕಡೆಗೆ!

ಅದಕ್ಕೆ ಹೇಳೋದು “ಗೆದ್ದಾಗ ಎಲ್ಲರೂ ಅಪ್ಪಂದಿರು, ಸೋಲು ಮಾತ್ರ ಯಾರಿಗೂ ಬೇಡದ ಅನಾಥ.”

ನಿನ್ನೆ ಮೊನ್ನೆವರೆಗೂ ಮೈತ್ರಿ ಆದ್ರೂ ಒಳಗೊಳಗೇ ಅಸಮಾಧಾನ ಹೊಂದಿದ್ದವರು ನಿನ್ನೆಯಿಂದ ಒಂದೇ ವೇದಿಕೆ ಮೇಲೆ ಸಿಹಿ ಹಂಚುತ್ತಿದ್ದಾರೆ. ರಾಜಕೀಯದಲ್ಲಿ ಮೈತ್ರಿ ಅಂದ್ರೆ ಅರೇಂಜ್ಡ್ ಮ್ಯಾರೇಜ್ ಇದ್ದ ಹಾಗೆ. ಪ್ರೀತಿ ನಿಧಾನವಾಗಿ ಬರುತ್ತೆ, ಆದರೆ ಸೀಟು ಮಾತ್ರ ನಾವೇ ಗೆಲ್ಲಬೇಕು ಎಂಬ ಕಾತರದಿಂದ ಕೂಡಿರುತ್ತೆ  ಅದಕ್ಕೆ ಹೇಳೋದು “ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ. ಶಾಶ್ವತ ಅಂದ್ರೆ ಕುರ್ಚಿ ಮಾತ್ರ.”

2028ಕ್ಕೆ ಅಧಿಕಾರಕ್ಕೆ ದೋಸ್ತಿ?

ಪರಿಷತ್ ಗೆಲುವು ಅಂದ್ರೆ ವಿಧಾನಸಭೆ ಗೆದ್ದ ಹಾಗಲ್ಲ. ಸೆಮಿಫೈನಲ್ ಗೆದ್ದ ತಕ್ಷಣ ಟ್ರೋಫಿ ಕೈಗೆ ಬರೋದಿಲ್ಲ! ಹಾಗಿದ್ದರೂ ದೋಸ್ತಿ ನಾಯಕರ ಪ್ರಕಾರ ಅವರೇ 2028ರಲ್ಲಿ ಅಧಿಕಾರಕ್ಕೆ ಬರುತ್ತಾರಂತೆ.. ಅವರ ಹೇಳ್ತಿರುವ ಮ್ಯಾಜಿಕ್‌ ನಂಬರ್‌ 164 ಸೀಟುಗಳು.. ಅಂದ್ರೆ ಈಗಿರುವ 224 ಸೀಟುಗಳಲ್ಲಿ ಅರವತ್ತು ಸೀಟು ಬಿಟ್ಟರೆ ಉಳಿದೆಲ್ಲಾ ಕಡೆಗಳಲ್ಲಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಗಳೇ ಗೆಲ್ತಾರೆ ಎಂಬ ವಿಶ್ವಾಸದಲ್ಲಿ ಓಡಾಡ್ತಾ ಇದ್ದಾರೆ.

ಬಿಜೆಪಿ ಕೋಟೆಯಲ್ಲಿ ಕೈಗೆ ಗೆಲುವು

ಈಗ ಕಥೆಯ ಟ್ವಿಸ್ಟ್‌ಗೆ ಬರೋಣ. ಕರ್ನಾಟಕದಲ್ಲಿ ಕೈ ಖಾಲಿಯಾದ ಕಾಂಗ್ರೆಸ್, ಮಹಾರಾಷ್ಟ್ರದ ನಾಗ್ಪುರದಲ್ಲಿ ಗೆಲುವು ಸಾಧಿಸಿದೆ. ನಾಗ್ಪುರ ಅಂದ್ರೆ ಸಾಮಾನ್ಯ ಊರಲ್ಲ. ಆರ್‌ಎಸ್‌ಎಸ್ ಮುಖ್ಯ ಕಚೇರಿ ಇರೋ ನಗರ. ಬಿಜೆಪಿಯ ಸೈದ್ಧಾಂತಿಕ ತವರು ಅಂತಲೇ ಕರೆಯಲಾಗುತ್ತೆ. ಅಂಥ ಕೋಟೆಯಲ್ಲೇ ಕಾಂಗ್ರೆಸ್ ಧ್ವಜ ಹಾರಿಸಿದೆ. ಈನಾವು ಈಗ ದೇಶದ 4 ರಾಜ್ಯದ ರಿಸಲ್ಟ್ ಒಟ್ಟಿಗೆ  ನೋಡಿಕೊಂಡು ಬರೋಣ.

ಕರ್ನಾಟಕದಲ್ಲಿ ಒಟ್ಟು ನಾಲ್ಕು ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದಿದ್ದು,  ಬಿಜೆಪಿ JDS  ನಾಲ್ಕಕ್ಕೆ ನಾಲು ಸೀಟ್ ಗೆದ್ದಿವೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ವಿಪಕ್ಷ ಇದನ್ನು 2028ರ ವಿಧಾನಸಭಾ ಚುನಾವಣೆಯ ಮುನ್ನೋಟ ಎಂದು ಹೇಳುತ್ತಿದೆ.

 ಉತ್ತರ ಪ್ರದೇಶ (11 ಸೀಟುಗಳು)

 

ಒಟ್ಟು 5 ಸ್ನಾತಕ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ 3 ಸ್ಥಾನಗಳನ್ನು ಗೆದ್ದು ಮುನ್ನಡೆ ಸಾಧಿಸಿದೆ. ಶಿಕ್ಷಕರ ಕ್ಷೇತ್ರಗಳನ್ನೂ ಸೇರಿಸಿದರೆ, ಉತ್ತರ ಪ್ರದೇಶದ ಒಟ್ಟು 11 ವಿಧಾನ ಪರಿಷತ್ ಸ್ಥಾನಗಳಲ್ಲಿ ಬಿಜೆಪಿ 6 ಮತ್ತು ಸಮಾಜವಾದಿ ಪಕ್ಷ 5 ಸ್ಥಾನಗಳನ್ನು ಗೆದ್ದಿವೆ. ವಾರಣಾಸಿ ಶಿಕ್ಷಕರ ಸೀಟು ಸಮಾಜವಾದಿ ಪಕ್ಷಗೆ. ಇದು ಪ್ರಧಾನಿ ಮೋದಿ ಅವರ ಲೋಕಸಭಾ ಕ್ಷೇತ್ರ. ಲಕ್ನೋ ಮತ್ತು ಅಲಹಾಬಾದ್-ಝಾನ್ಸಿ ಸ್ನಾತಕ ಕ್ಷೇತ್ರಗಳಲ್ಲೂ ಸಮಾಜವಾದಿ ಪಕ್ಷವೇ ಗೆದ್ದಿದೆ. ಇದರಿಂದ 2027ರ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಉತ್ಸಾಹ ತೋರಿಸುತ್ತಿದೆ.

 ಬಿಹಾರ – 8 ಸೀಟು

ಇನ್ನೂ ಬಿಹಾರದಲ್ಲಿ ಒಟ್ಟು 8 ಕ್ಷೇತ್ರವಿದ್ದು ಅದರಲ್ಲಿ  ಬಿಜೆಪಿ: 3 ಜೆಡಿಯು: 1 ಆರ್‌ಜೆಡಿ: 1 ಜನ್ ಸುರಾಜ್ ಪಕ್ಷ: 1 ಒಂದು ಸೀಟ್ ಗೆದ್ದಿದೆ. ನೋಡಿ  ಪ್ರಶಾಂತ್ ಕಿಶೋರ್ ಪಕ್ಷ ಮೊದಲ ಬಾರಿ ವಿಧಾನ ಪರಿಷತ್‌ಗೆ ಪ್ರವೇಶಮಾಡಿದೆ. ಇನ್ನೂ ಸ್ವತಂತ್ರರು  ಎರಡು ಸೀಟ್ ಗೆದ್ದಿದ್ದಾರೆ. )

ಮಹಾರಾಷ್ಟ್ರ (5 ಸೀಟುಗಳು) 

ಇನ್ನೂ ಮಹಾರಾಷ್ಟ್ರದಲ್ಲಿ ಒಟ್ಟು 5 ಕ್ಷೇತ್ರಕ್ಕೆ ಎಲೆಕ್ಷನ್ ನಡೆದಿದೆ.  ಇದ್ರಲ್ಲಿ ಮಹಾಯುತಿ (ಬಿಜೆಪಿ+ಶಿವಸೇನಾ+ಎನ್‌ಸಿಪಿ): 2 ಸೀಟ್ ಗೆದ್ದರೇ  ಮಹಾ ವಿಕಾಸ್ ಅಘಾಡಿ: 3 ಸೀಟ್ ಗೆದ್ದಿದೆ. ಇಲ್ಲಿ ನೋಡಿ ನಾಗಪುರ ಸ್ನಾತಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ವಂಜಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯನ್ನು 3,271 ಮತಗಳಿಂದ ಸೋಲಿಸಿದರು. ಇದು ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ನಿತಿನ್ ಗಡ್ಕರಿ ಅವರ ಸ್ವಂತ ಪ್ರದೇಶ ಇಲ್ಲಿ ಕಾಂಗ್ರೆಸ್ ಗೆದ್ದು ಬಿಗಿದೆ.

ಇದೆಲ್ಲಾ ನೋಡಿದಾಗ ತವರಿನಲ್ಲಿ ಸೋತು, ಎದುರಾಳಿಯ ಅಂಗಳದಲ್ಲಿ ಗೆದ್ದ ತಂಡದ ರೀತಿಯಾಗಿ ಸದ್ಯ ಕಾಂಗ್ರೆಸ್‌ನ ಪರಿಸ್ಥಿತಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈಗ ಗೊಂದಲದಲ್ಲಿದ್ದಾರೆ. ಅಳಬೇಕಾ, ನಗಬೇಕಾ? ಅದಕ್ಕೇ ಅರ್ಧ ಪಟಾಕಿ ಹೊಡೆದು, ಅರ್ಧ ಸ್ವೀಟು ತಿನ್ನುವ ಸ್ಥಿತಿಯಲ್ಲಿದ್ದಾರೆ.. ದೇಶದ ನಾಲ್ಕು ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆದ ವಿಧಾನಪರಿಷತ್‌ನ 28 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿರೋದು ಕೇವಲ ಒಂದು ಸ್ಥಾನ ಮಾತ್ರ.. ಆದ್ರೆ ಈ ಗೆದ್ದಿರುವ   ನಾಗಪುರ  ಕ್ಷೇತ್ರ ಮಾತ್ರ.. ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿ ಇರುವ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವೀಸ್‌ ಅವರ ತವರೂರು ನಾಗ್ಪುರದಲ್ಲಿ ಅನ್ನೋದೇ ಕಾಂಗ್ರೆಸ್‌ ಪಾಲಿಗೆ ತಡವಾಗಿ ಹೊಡೆದ ಬಂಪರ್‌ ಲಾಟರಿಯಂತಿದೆ.. ಆದ್ರೆ ಕಾಂಗ್ರೆಸ್‌ಗೆ ಈ ಲಾಟರಿ ಹೊಡೆಯೋದಿಕ್ಕೂ ಮೊದ್ಲೇ ಪ್ರಧಾನಿ ಮೋದಿಯವರು ಎಂಎಲ್‌ಸಿ ಎಲೆಕ್ಷನ್‌ಗೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಒಂದು ಪೋಸ್ಟ್‌ ಹಾಕಿದ್ದಾರೆ.

ಕಾಂಗ್ರೆಸ್ ಕಾಲೆಳೆದ ಮೋದಿ

ನಾಲ್ಕು ರಾಜ್ಯದಲ್ಲಿ ಎಲೆಕ್ಷನ್ ಆದ ಮೇಲೆ ಮೋದಿ ಕಾಂಗ್ರೆಸ್ ಕಾಳೆಯುವ ಕೆಲಸ ಮಾಡಿದ್ದಾರೆ. ನಾಲ್ಕು ದೊಡ್ಡ ರಾಜ್ಯಗಳ 28 ಸೀಟುಗಳಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ. ಕಾಂಗ್ರೆಸ್ ಎಷ್ಟು ಗೆದ್ದಿತು?” ಎಂದು ಕಣ್ಣಿಗೆ ದುರ್ಬೀನು ಹಾಕಿ ನೋಡುತ್ತಿರುವ ಇಮೋಜಿ ಬಳಸಿ, ಲೇವಡಿ ಮಾಡಿದ್ದಾರೆ.

ಇನ್ನೂ ಫಲಿತಾಂಶ ಬಂದಾಗ ನಾಗ್ಪುರದಲ್ಲಿ ಕಾಂಗ್ರೆಸ್‌ ಗೆಲುವು ದಾಖಲಿಸಿದೆ.. ಇದರಿಂದಾಗಿ ಮೋದಿಯವರ ದುರ್ಬೀನಿನಲ್ಲಿ ನಾಗ್ಪುರದ ಸೀಟು ಕಾಣಿಸಿರಬಹುದು.  ಜೊತೆಗೆ ಖುದ್ದು ಪ್ರಧಾನಿ ಮೋದಿಯವರು ಪ್ರತಿನಿಧಿಸುವ ವಾರಾಣಾಸಿ ಕ್ಷೇತ್ರದಲ್ಲಿ ಬಿಜೆಪಿಯ ಸೋಲು ಮತ್ತು ಸಮಾಜವಾದಿ ಪಕ್ಷದ ಗೆಲವೂ ಕಂಡಿರಬಹುದು ಅಂತ ವಿರೋಧ ಪಕ್ಷಗಳು ವ್ಯಂಗ್ಯವಾಡುತ್ತಿವೆ.. ಈ ಫಲಿತಾಂಶದಿಂದ ಮೂರು ಪಾಠಗಳು ಸಿಗುತ್ತವೆ:

 

ಕಾಂಗ್ರೆಸ್‌ಗೆ ಪಾಠ   

ಒಳಜಗಳಕ್ಕೆ ಬ್ರೇಕ್ ಬ್ರೇಕ್ ಹಾಕಬೇಕು

ಆಡಳಿತ ಇದ್ದ ಮಾತ್ರಕ್ಕೆ ಗೆಲುವು ಖಚಿತ ಅಲ್ಲ. ಒಳಜಗಳಕ್ಕೆ ಬ್ರೇಕ್ ಹಾಕದಿದ್ದರೆ ಮುಂದಿನ ಚುನಾವಣೆಗಳಲ್ಲೂ ಇದೇ ಸ್ಕೋರ್ ರಿಪೀಟ್ ಆಗಬಹುದು ಅನ್ನೋದು

 ಬಿಜೆಪಿ- ಜೆಡಿಎಸ್‌ ಪಾಠ 

 ಯಾವ ಕೋಟೆಯೂ ಶಾಶ್ವತ ಅಲ್ಲ.

ಬಿಜೆಪಿ–ಜೆಡಿಎಸ್‌ಗೆ: ಮೈತ್ರಿ ಕೆಲಸ ಮಾಡಿದೆ ಅನ್ನೋದು ಸ್ಪಷ್ಟ. ಆದರೆ ನಾಗ್ಪುರದ ಫಲಿತಾಂಶ ಹೇಳೋದು ಒಂದೇ. ಯಾವ ಕೋಟೆಯೂ ಶಾಶ್ವತ ಅಲ್ಲ.

ಜನ ಯಾರಿಗೂ ಖಾಲಿ ಚೆಕ್ ಕೊಡ್ತಿಲ್ಲ

 ಜನ ಯಾರಿಗೂ ಖಾಲಿ ಚೆಕ್ ಕೊಡ್ತಿಲ್ಲ. ಎಲ್ಲರ ಪರ್ಫಾರ್ಮೆನ್ಸ್ ಚೆಕ್ ಮಾಡ್ತಿದ್ದಾರೆ.  ಅನ್ನೋದು

ಇದಕ್ಕೇ ಹೇಳೋದು “ಮಾಡಿದ್ದುಣ್ಣೋ ಮಹಾರಾಯ.” ಅಂತ. ಅಧಿಕಾರ ಕೈಯಲ್ಲಿದ್ದಾಗ ಮಾಡಿದ್ದನ್ನೇ ಚುನಾವಣೆ ಬಂದಾಗ ಉಣ್ಣಬೇಕಾಗುತ್ತದೆ..

Kishor KV

Leave a Reply

Your email address will not be published. Required fields are marked *