ಕನ್ನಡಕ್ಕೆ ಬಂದ ದಿಗ್ಗಜ ನಟ ಕಬೀರ್ ಬೇಡಿ – ‘ಕರಿ ಹೈದ ಕರಿ ಅಜ್ಜ’ ಸಿನಿಮಾದ ಪಾತ್ರ ರಿವೀಲ್

ಕನ್ನಡಕ್ಕೆ ಬಂದ ದಿಗ್ಗಜ ನಟ ಕಬೀರ್ ಬೇಡಿ – ‘ಕರಿ ಹೈದ ಕರಿ ಅಜ್ಜ’ ಸಿನಿಮಾದ ಪಾತ್ರ ರಿವೀಲ್

ಧರ್ಮ ಮತ್ತು ದೈವಗಳ ವಿಭಿನ್ನ ಕಥಾಹಂದರವಿರುವ ಕಾಂತಾರ ಸಿನಿಮಾ ಗೆದ್ದ ಮೇಲೆ ಮತ್ತೊಂದು ಕಾರಣಿಕ ದೈವ ಕೊರಗಜ್ಜನ ಕಥೆಯಾಧಾರಿತ ಸಿನಿಮಾ ಸೆಟ್ಟೇರಿದೆ. ‘ಕರಿ ಹೈದ ಕರಿ ಅಜ್ಜ’ ಟೈಟಲ್ ಹೊಂದಿರುವ ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ನಟಿ ಶ್ರುತಿ ಅಭಿನಯದ ಕೆಲವು ದೃಶ್ಯಗಳ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ, ಈ ಚಿತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ನಟ, ಭಾರತೀಯ ಚಿತ್ರರಂಗದ ದಿಗ್ಗಜ ಕಬೀರ್ ಬೇಡಿ ನಟಿಸುವ ಪಾತ್ರ ರಿವೀಲ್ ಆಗಿದೆ. ಕೊರಗಜ್ಜ ತನಿಯನ ತಾಯಿ ಪಾತ್ರದಲ್ಲಿ ನಟಿ ಶ್ರುತಿ ಅಭಿನಯಿಸುತ್ತಿದ್ದಾರೆ. ರಾಜನ ಪಾತ್ರದಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ.

ಇದನ್ನೂ ಓದಿ :  ತಮಿಳು ನಟ ಧನುಷ್ ಅಣ್ಣನಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ – ‘ಕ್ಯಾಪ್ಟನ್ ಮಿಲ್ಲರ್’ ತಮಿಳು ಸಿನಿಮಾದಲ್ಲಿ ವಿಶೇಷ ಪಾತ್ರ

ದಿಗ್ಗಜ ನಟ ಕಬೀರ್ ಬೇಡಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ವಿಶೇಷ. ತನ್ನದೇ ಆದ ವಿಭಿನ್ನ ಮ್ಯಾನರಿಸಂನಿಂದ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಟ ಕಬೀರ್ ಬೇಡಿ,  ಈಗ ಸ್ಯಾಂಡಲ್‌ವುಡ್ ಅಂಗಳಕ್ಕೆ ಕಾಲಿಟ್ಟಿದ್ದಕ್ಕೆ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ. ಕರಾವಳಿಯ ಕಾರಣಿಕ ದೈವ ಕೊರಗಜ್ಜನ ಕಥೆಯಾಧಾರಿತ ‘ಕರಿ ಹೈದ ಕರಿ ಅಜ್ಜ’ ಸಿನಿಮಾದಲ್ಲಿ ಕಬೀರ್ ಬೇಡಿ ರಾಜನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ತನ್ನ ಪಾತ್ರದ ಚಿತ್ರೀಕರಣವನ್ನು ಮುಗಿಸಿದ್ದ ಕಬೀರ್ ಬೇಡಿ, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನ ಆಡಿದ್ದಾರೆ. ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದು ಖುಷಿ ತಂದಿದೆ.   ‘ಕರಿ ಹೈದ ಕರಿ ಅಜ್ಜ’ ಚಿತ್ರದಲ್ಲಿ ರಾಜನ ಪಾತ್ರ ಮಾಡಿದ್ದೇನೆ. ಆದಿವಾಸಿ ಸಮುದಾಯದ ದೈವದ ಸುತ್ತ ಇಡೀ ಸಿನಿಮಾ ಕಥೆ ಸಾಗುತ್ತದೆ. ಇಡೀ ಚಿತ್ರತಂಡ ಶ್ರಮವಹಿಸಿ ಒಂದೊಳ್ಳೇ ಸಿನಿಮಾವನ್ನು ತೆರೆಗೆ ತರುತ್ತಿದೆ. ಶ್ರುತಿ, ಭವ್ಯಾ, ಭರತ್ ಸೂರ್ಯರಂತಹ ನಟರೊಂದಿಗೆ ಅಭಿನಯಿಸಿದ್ದು ಒಳ್ಳೆಯ ಅನುಭವ ನೀಡಿದೆ. ಇದೊಂದು ಅಪರೂಪದ ಸಿನಿಮಾ ಆಗಲಿದೆ ಎಂದು ಕಬೀರ್ ಬೇಡಿ  ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಧ್ರುತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್‌ನಡಿ ‘ಕರಿ ಹೈದ ಕರಿ ಅಜ್ಜ’ ಸಿನಿಮಾವನ್ನು ತ್ರಿವಿಕ್ರಮ್ ಸಾಫಲ್ಯ ನಿರ್ಮಿಸುತ್ತಿದ್ದಾರೆ. ಸುಧೀರ್ ಅತ್ತಾವರ್ ಈ ಸಿನಿಮಾದ ನಿರ್ದೇಶಕರು.  ನಟಿ ಶ್ರುತಿ ಅಭಿನಯದ ಈ ಚಿತ್ರದ ಕೆಲ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಬೆಳ್ತಂಗಡಿ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿಲ್ಲದ ಕೆಲ ಮಾಹಿತಿಗಳು ಈ ಚಿತ್ರದಲ್ಲಿದ್ದು, ಕೊರಗಜ್ಜನ ಮಹಿಮೆ ಸಾರುವ ಈ ಚಿತ್ರ ಕನ್ನಡದ ಅಪರೂಪದ ಚಿತ್ರಗಳಲ್ಲಿ ಒಂದಾಗಲಿದೆ ಅನ್ನೋ ನಿರೀಕ್ಷೆ ಚಿತ್ರತಂಡದ್ದು.

suddiyaana