ಅಗರ್ಕರ್ ಜಾಗಕ್ಕೆ ಜಡೇಜಾ? – ಭುವಿಯಂತೆ ಶಮಿ ಕಂಬ್ಯಾಕ್?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20ಯಲ್ಲಿ ಸಿಡಿಲಬ್ಬರದ ಶತಕ ಬಾರಿಸಿದ ನಾಯಕ ಶ್ರೇಯಸ್ ಅಯ್ಯರ್, ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಭರ್ಜರಿ ಜಿಗಿತ ಕಂಡಿದ್ದಾರೆ. 18 ಸ್ಥಾನ ಮೇಲಕ್ಕೇರಿ ವೃತ್ತಿಜೀವನದ ಅತ್ಯುತ್ತಮ 7ನೇ ಸ್ಥಾನಕ್ಕೇರಿದ್ದಾರೆ. ಇಶಾನ್ ಕಿಶನ್ ನಂಬರ್ ಒನ್ ಸ್ಥಾನ ಉಳಿಸಿಕೊಂಡಿದ್ದು, ಅಭಿಷೇಕ್ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ. ಟಾಪ್-10ರಲ್ಲಿ ನಾಲ್ವರು ಭಾರತೀಯರು ಇರುವುದು ಭಾರತದ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.
ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಒಡಿಐ ನಾಯಕ ಶುಭ್ಮನ್ ಗಿಲ್ ತಮ್ಮ ನಂಬರ್ 1 ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಗುವಾಹಟಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅಜೇಯ 223 ರನ್ ಸಿಡಿಸುವ ಮೂಲಕ ಗಿಲ್ ಇತಿಹಾಸ ನಿರ್ಮಿಸಿದ್ದರು. ಈ ಪ್ರದರ್ಶನದಿಂದಾಗಿ ಗಿಲ್ ಅವರ ರೇಟಿಂಗ್ ಪಾಯಿಂಟ್ಸ್ 841 ಕ್ಕೆ ಏರಿಕೆಯಾಗಿದೆ. ಶತಕ ಸಿಡಿಸಿದ ಕೆ.ಎಲ್. ರಾಹುಲ್ ಬರೋಬ್ಬರಿ 7 ಸ್ಥಾನಗಳ ಭರ್ಜರಿ ಪ್ರಗತಿ ಕಾಣುವ ಮೂಲಕ ಮತ್ತೆ ವಿಶ್ವದ ಟಾಪ್ 10 ಒಡಿಐ ಬ್ಯಾಟರ್‌ಗಳ ಪಟ್ಟಿಗೆ ಮರಳಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ.
ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್ ಬಳಿಕ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಭುವನೇಶ್ವರ್ ಉತ್ತಮ ಪ್ರದರ್ಶನ ನೀಡಿದರೆ, 2027ರ ಏಕದಿನ ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಜೊತೆ ಅವರು ಭಾರತದ ವೇಗದ ಬೌಲಿಂಗ್ ಜೋಡಿಯಾಗಬಹುದು ಎಂದು ಅಶ್ವಿನ್ ಹೇಳಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಸರಣಿ ಭುವಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಭುವಿ ಭಾರತ ತಂಡಕ್ಕೆ ಆಯ್ಕೆ ಆಗಿದ್ದು, ನನಗೆ ತುಂಬಾ ಖುಷಿ ಆಗಿದೆ. ಆಯ್ಕೆಗಾರರು ಧೈರ್ಯ ಮಾಡಿ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ. ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಕರೆತರಲು ನಾಲ್ಕು ವರ್ಷಗಳು ಬೇಕಾಯಿತು. ನಾಲ್ಕು ವರ್ಷಗಳಿಂದ ಆಯ್ಕೆಯಾಗದ ವ್ಯಕ್ತಿಯನ್ನು ಆಯ್ಕೆ ಮಾಡುವ ಧೈರ್ಯ ತೋರಿದ ಆಯ್ಕೆದಾರರಿಗೆ ಅಭಿನಂದನೆಗಳನ್ನ ತಿಳಿಸುತ್ತೇನೆ ಎಂದು ಡಿಕೆ ಹೇಳಿದ್ದಾರೆ.
ಇದನ್ನೂ ಓದಿ: ICC RANKINGನಲ್ಲಿ ಭಾರತದ ದರ್ಬಾರ್! – ಶ್ರೇಯಸ್ ಅಯ್ಯರ್ ಭರ್ಜರಿ ಜಂಪ್!
ಭುವನೇಶ್ವರ್ ಕಮ್‌ಬ್ಯಾಕ್ ಬೆನ್ನಲ್ಲೇ ಮೊಹಮ್ಮದ್ ಶಮಿ ವಿಚಾರವೂ ಚರ್ಚೆಗೆ ಬಂದಿದೆ. ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ಶಮಿಯನ್ನು ಏಕದಿನ ತಂಡಕ್ಕೆ ಮತ್ತೆ ಪರಿಗಣಿಸಬೇಕು ಎಂದು ಆಯ್ಕೆ ಸಮಿತಿಗೆ ಸಲಹೆ ನೀಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಶಮಿ ಫಿಟ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವುದು ಜಾಫರ್ ವಾದ. ಬೂಮ್ರಾ, ಶಮಿ ಮತ್ತು ಸಿರಾಜ್ ವೇಗದ ತ್ರಯವೇ ತಮ್ಮ ಮೊದಲ ಆಯ್ಕೆ ಎಂದಿದ್ದಾರೆ
ಅಜಿತ್ ಅಗರ್ಕರ್ ಹುದ್ದೆ ಖಾಲಿಯಾಗುತ್ತಿದ್ದಂತೆ ರವೀಂದ್ರ ಜಡೇಜಾ ಮಾಡಿದ ಒಂದು ತಮಾಷೆಯ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ. ಬಿಸಿಸಿಐ ಮುಖ್ಯ ಆಯ್ಕೆಗಾರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಪೋಸ್ಟ್‌ಗೆ ಜಡೇಜಾ, What’s the procedure?” ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಸದ್ಯ ಸಕ್ರಿಯ ಕ್ರಿಕೆಟಿಗರಾಗಿರುವ ಜಡೇಜಾ ನಿಯಮಗಳ ಪ್ರಕಾರ ಈ ಹುದ್ದೆಗೆ ಅರ್ಹರಲ್ಲ. ಆದರೂ ಅವರ ಕಾಮೆಂಟ್ ಭಾರೀ ಗಮನ ಸೆಳೆದಿದೆ
ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಗ್ಗೆ ಕಪಿಲ್ ದೇವ್ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಆರಂಭಿಕ ಯಶಸ್ಸಿನಿಂದಲೇ ದೊಡ್ಡ ಭವಿಷ್ಯ ಊಹಿಸುವುದು ಸರಿಯಲ್ಲ ಎಂದು ಕಪಿಲ್ ಎಚ್ಚರಿಸಿದ್ದಾರೆ. ವಿನೋದ್ ಕಾಂಬ್ಳಿ ಉದಾಹರಣೆ ನೀಡಿರುವ ಅವರು, ಪ್ರತಿಭೆಯ ಜೊತೆಗೆ ನಿರಂತರ ಪರಿಶ್ರಮ, ಮಾನಸಿಕ ಬಲ ಮತ್ತು ಸ್ಥಿರ ಪ್ರದರ್ಶನ ಅತ್ಯಂತ ಮುಖ್ಯ ಎಂದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟ್ರೇಡ್ ಆಗಿರುವ ರಿಷಭ್ ಪಂತ್ ಅವರ ಪಾತ್ರದ ಬಗ್ಗೆ ಗಂಗೂಲಿ ಮಹತ್ವದ ಸುಳಿವು ನೀಡಿದ್ದಾರೆ. ಮುಂಬರುವ ಸೀಸನ್‌ನಲ್ಲಿ ಪಂತ್ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಆಧಾರಸ್ತಂಭವಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಅದರಲ್ಲೂ ಡೆಲ್ಲಿಯ ತವರು ಮೈದಾನವಾದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಪಂತ್ ಹೊಂದಿರುವ ಅತ್ಯುತ್ತಮ ದಾಖಲೆ ತಂಡಕ್ಕೆ ದೊಡ್ಡ ಬಲ ತರಲಿದೆ ಎಂಬುದು ಗಂಗೂಲಿ ಅವರ ಲೆಕ್ಕಾಚಾರವಾಗಿದೆ.
ಮಾಜಿ ಮುಂಬೈ ವಿಕೆಟ್‌ಕೀಪರ್ ವಿನಾಯಕ್ ಸಾಮಂತ್ ಅವರನ್ನು ಚಂಡೀಗಢ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಕುತೂಹಲವೆಂದರೆ ಮುಂಬೈ ಮತ್ತು ಚಂಡೀಗಢ ರಣಜಿ ಟ್ರೋಫಿ ಆರಂಭಿಕ ಪಂದ್ಯದಲ್ಲೇ ಮುಖಾಮುಖಿಯಾಗಲಿವೆ. ಹೀಗಾಗಿ ತಮ್ಮ ಹಳೆಯ ತಂಡದ ವಿರುದ್ಧವೇ ಹೊಸ ತಂಡದ ಡಗೌಟ್‌ನಿಂದ ಸಾಮಂತ್ ತಂತ್ರ ರೂಪಿಸಲಿದ್ದಾರೆ. ಇದು ರಣಜಿ ಆರಂಭದ ಆಸಕ್ತಿದಾಯಕ ಮುಖಾಮುಖಿಯಾಗಿದೆ.
2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಅಕ್ಟೋಬರ್ 2ರಿಂದ ನವೆಂಬರ್ 21ರವರೆಗೆ ಟೂರ್ನಿ ನಡೆಯಲಿದೆ. ಭಾರತ-ಪಾಕಿಸ್ತಾನ ಪಂದ್ಯಕ್ಕೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್ ಅರ್ಜಿಗಳು ಬಂದಿರುವುದು ಅಭಿಮಾನಿಗಳ ಕ್ರೇಜ್ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ವಿಶ್ವಕಪ್ ಆರಂಭಕ್ಕೆ ಇನ್ನೂ ಸಮಯವಿದ್ದರೂ ಹೈವೋಲ್ಟೇಜ್ ಪಂದ್ಯಕ್ಕೆ ಈಗಲೇ ಭರ್ಜರಿ ಬೇಡಿಕೆ ಕಂಡುಬಂದಿದೆ.

ನೋಡಿರಿ

