ಅಂಡರ್ 19 ವಿಶ್ವಕಪ್ನಲ್ಲಿ ವೈಭವ್ ಸೂರ್ಯವಂಶಿ ಆರ್ಭಟ – ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವದಾಖಲೆ

ವೈಭವ್ ಸೂರ್ಯವಂಶಿ ಮತ್ತೆ ಅಬ್ಬರದ ಬ್ಯಾಟಿಂಗ್ ಮಾಡಿ ಮಿಂಚಿದ್ದಾರೆ. ಅಂಡರ್ 19 ವಿಶ್ವಕಪ್ನಲ್ಲೂ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಹರಾರೆಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವೈಭವ್ ಅಂಡರ್ 19 ವಿಶ್ವಕಪ್ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಟಿಪ್ಸ್ ಕೊಟ್ರೆ ಡ್ಯಾನ್ಸ್ ಮಾಡ್ತೀವಿ! – ಬೆಂಗಳೂರಿನ ಈ ಕೆಫೆ ಸಿಬ್ಬಂದಿ ಮಸ್ತ್ ಡ್ಯಾನ್ಸ್!
ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಳಪೆ ಆರಂಭ ಪಡೆಯಿತು. ಕಳೆದ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ್ದ ಆರಂಭಿಕ ಆರನ್ ಜಾರ್ಜ್ ಈ ಪಂದ್ಯದಲ್ಲಿ ಕೇವಲ 9 ರನ್‌ಗಳಿಗೆ ಔಟಾದರು. ಆದರೆ ಆ ಬಳಿಕ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಎಂದಿನಂತೆ ಬೌಂಡರಿ ಸಿಕ್ಸರ್ಗಳ ಮಳೆಗರೆದ ಸೂರ್ಯವಂಶಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅರ್ಧಶತಕದ ಬಳಿಕ ಮತ್ತಷ್ಟು ಕೆರಳಿದ ವೈಭವ್ ಮುಂದಿನ 23 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಅಂದರೆ ವೈಭವ್ ಕೇವಲ 55 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಶತಕದ ಇನ್ನಿಂಗ್ಸ್ನಲ್ಲಿ ವೈಭವ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 80 ರನ್ ಕಲೆಹಾಕಿದರು. ಶತಕದ ಬಳಿಕವೂ ಸ್ಫೋಟಕ ಆಟ ಮುಂದುವರೆಸಿದ ಸೂರ್ಯವಂಶಿ 71 ಎಸೆತಗಳಲ್ಲಿ 150 ರನ್ಗಳ ಗಡಿ ದಾಟಿದ್ದಾರೆ. ಆದರೆ ದ್ವಿಶತಕದತ್ತ ಸಾಗುತ್ತಿದ್ದ ವೈಭವ್ 175 ರನ್ ಕಲೆಹಾಕಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 80 ಎಸೆತಗಳನ್ನು ಎದುರಿಸಿದ ವೈಭವ್ 15 ಬೌಂಡರಿ ಹಾಗೂ 15 ಸಿಕ್ಸರ್ ಕೂಡ ಬಾರಿಸಿದರು.

ನೋಡಿರಿ

