ಕೇರಳ ಬಳಿಕ ರಾಜ್ಯಕ್ಕೂ ಕಾಲಿಟ್ಟ ಮಹಾಮಾರಿ! – ಚಿಕ್ಕಬಳ್ಳಾಪುರದಲ್ಲಿ `ಝೀಕಾ ವೈರಸ್’ ಪತ್ತೆ
ಕೇರಳದಲ್ಲಿ ಪತ್ತೆಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಝಿಕಾ ವೈರಸ್ ಈಗ ರಾಜ್ಯದಲ್ಲೂ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಅಪಾಯಕಾರಿ ಜಿಕಾ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೆಲವು ದಿನಗಳ ಹಿಂದೆ ಕೇರಳದ ಕೋಝಿಕೋಡ್ ನಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜೀಕಾ ವೈರಸ್ ಹರಡದಂತೆ ತಡೆಯುವ ಮುಂಜಾಗರೂಕತಾ ಕ್ರಮವಾಗಿ ರಾಜ್ಯದ 68 ಕಡೆಗಳಲ್ಲಿನ ಸೊಳ್ಳೆಗಳನ್ನು ಹಿಡಿದು ಅವುಗಳಲ್ಲಿ ಮಾರಣಾಂತಿಕ ವೈರಸ್ ಇದೆಯೇ ಎಂದು ಪರಿಣತರು ಪರೀಕ್ಷೆ ನಡೆಸಿದ್ದರು. ಇದರ ಅನ್ವಯ ಚಿಕ್ಕಬಳ್ಳಾಪುರದ ಆರು ಪ್ರದೇಶಗಳಲ್ಲಿ ಸೊಳ್ಳೆಗಳನ್ನು ಹಿಡಿದು ಪರೀಕ್ಷಿಸಲಾಗಿತ್ತು. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರೋದು ಧೃಡವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ.
ಇದನ್ನೂ ಓದಿ: ಕೇರಳ ಬ್ಲಾಸ್ಟ್ ಮಾಹಿತಿ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ? – ಕ್ರಿಶ್ಚಿಯನ್ನರ ನಡುವೆ ಏನಿದು ದೇವರ ಕದನ?
ತಲಕಾಯಲಬೆಟ್ಟ ಗ್ರಾಮ ಸೇರಿದಂತೆ ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ ಸರ್ವೆ ಕಾರ್ಯ ರ್ಯಾಂಡಮ್ ಚೆಕಪ್ ಮಾಡಲಾಗುತ್ತಿದೆ. ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ವಡ್ಡಹಳ್ಳಿ, ಬಚ್ಚಹಳ್ಳಿ ಗ್ರಾಮದ 880 ಮನೆಗಳಲ್ಲಿ ಸರಿಸುಮಾರು 4,800 ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಈಗಾಗಲೇ 30 ಮಂದಿ ಗರ್ಭಿಣಿಯರು ಹಾಗೂ ಜ್ವರದಿಂದ ಬಳಲುತ್ತಿರುವ 3 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಇನ್ನೂ ಮುಂಜಾಗ್ರತಾ ಕ್ರಮವಾಗಿ ಜ್ವರದಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಲಾಗಿದೆಯಾದರೂ ಝಿಕಾ ವೈರಸ್ ಸೋಂಕು ಹುಟ್ಟುವ ಮಕ್ಕಳ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗರ್ಭಿಣಿಯರ ಮೇಲೂ ನಿಗಾ ವಹಿಸಲಾಗಿದೆ.
ಇದುವರೆಗೂ ಮನುಷ್ಯರಲ್ಲಿ ಝಿಕಾ ವೈರಸ್ ಪತ್ತೆಯಾಗಿಲ್ಲ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕುಮಾರ್ ಝಿಕಾ ವೈರಸ್ ಪತ್ತೆಯಾಗಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.