ನಮ್ಮ ನೆರಳನ್ನೇ ಮಾಯ ಮಾಡಲಿದ್ದಾನೆ ಸೂರ್ಯ! – ಏನಿದು ಶೂನ್ಯ ನೆರಳು ದಿನ?
ನಾವು ಎಲ್ಲಿ ಹೋದರೂ ನೆರಳು ನಮ್ಮನ್ನು ಹಿಂಬಾಲಿಸಿ ಬಿಡುತ್ತದೆ. ಬೆಳಗ್ಗೆ ಮತ್ತು ಸಂಜೆಗೆ ಹೋಲಿಸಿದರೆ ಮಧ್ಯಾಹ್ನ ನಮ್ಮ ನೆರಳು ಪುಟ್ಟದಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಇಂದು (ಶುಕ್ರವಾರ) ನಮ್ಮ ನೆರಳು ನಮಗೆ ಕಾಣಿಸುವುದಿಲ್ಲ. ನಮ್ಮ ನೆರಳು ಎಲ್ಲಿ ಹೋಯಿತು ಎಂದು ಹುಡುಕಬೇಕಾಗುತ್ತದೆ. ಇಂದು ಶೂನ್ಯ ನೆರಳಿನ ದಿನ. ಬೆಂಗಳೂರಿಗರಿಗೆ ಮತ್ತೊಮ್ಮೆ ಶೂನ್ಯ ನೆರಳನ್ನು ನೋಡಬಹುದು.
ನಮ್ಮನ್ನು ಸದಾ ನಮ್ಮ ನೆರಳು ಹಿಂಬಾಲಿಸುತ್ತದೆ. ಆದರೆ ಶುಕ್ರವಾರ ಬೆಂಗಳೂರಿನ ಜನರು ಶೂನ್ಯ ನೆರಳನ್ನು ಕಾಣಲಿದ್ದಾರೆ. ನಮ್ಮ ನಡು ನೆತ್ತಿಯ ಮೇಲೆ ಬರಲಿರುವ ಸೂರ್ಯ ನಮ್ಮ ನೆರಳನ್ನೇ ಮಾಯ ಮಾಡಲಿದ್ದಾನೆ. ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಘಟಿಸುವ ಈ ವಿದ್ಯಮಾನವನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ. ಶೂನ್ಯ ನೆರಳಿನ ದಿನದಂದು ಸೂರ್ಯ ನಮ್ಮ ನಡು ನೆತ್ತಿಯ ಮೇಲೆ ಬರುವುದರಿಂದ ನೆರಳು ರೂಪುಗೊಳ್ಳುವುದಿಲ್ಲ. ಇದರಿಂದ ಎಷ್ಟೇ ಪ್ರಖರ ಬಿಸಿಲಿದ್ದರೂ ನಮ್ಮ ನೆರಳೇ ಮೂಡದಿರುವ ಪ್ರಕೃತಿಯ ವಿಸ್ಮಯ ನಡೆಯಲಿದೆ.
ಇದನ್ನೂ ಓದಿ: ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶ – ನೀಲಿ ಬಾನಿನ ಬಣ್ಣ ಬದಲಾಗಿದ್ದು ಎಲ್ಲಿ?
ಶೂನ್ಯ ನೆರಳು ಎಂಬುದು ಅಪರೂಪವಾದ ಖಗೋಳ ವಿದ್ಯಮಾನವಾಗಿದ್ದು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ಒಳಗೆ ಬರುವ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ನೆರಳು ಮೂಡುವುದಿಲ್ಲ. ಶುಕ್ರವಾರ ಬೆಂಗಳೂರಿನಲ್ಲಿ ಶೂನ್ಯ ನೆರಳನ್ನು ಕಾಣಬಹುದಾಗಿದ್ದು, ಸೂರ್ಯ ನಮ್ಮ ನೆತ್ತಿಯ ಮೇಲೆ ಹಾದು ಹೋಗುವಾಗ ಈ ವಿದ್ಯಮಾನ ಘಟಿಸಲಿದೆ. ನಮ್ಮ ನೆರಳಿನ ಮೇಲೆ ನಾವು ನಿಂತಿರುವುದರಿಂದ ನಮ್ಮ ನೆರಳು ನೇರವಾಗಿ ನಮ್ಮ ಕಾಲ ಕೆಳಗಿರುತ್ತದೆ. ಯಾವುದೇ ಲಂಬ ವಸ್ತುವಿನ ನೆರಳು ಕಾಣಿಸುವುದಿಲ್ಲ. ವಿಶೇಷ ಉಪಕರಣಗಳಿಲ್ಲದೇ ಇದನ್ನು ವೀಕ್ಷಿಸಬಹುದಾಗಿದೆ. ಸೂರ್ಯ ಸರಿಯಾಗಿ ನಮ್ಮ ತಲೆಯ ಮೇಲೆ ಇರುವ ಕಾರಣ, ನಮ್ಮ ನೆರಳು ನಮಗೆ ಕಾಣಿಸುವುದಿಲ್ಲ.
ವೈಜ್ಞಾನಿಕವಾಗಿ ಹೇಳುವುದಾದರೆ ಅನ್ಯ ದಿನಗಳಲ್ಲಿ ಸೂರ್ಯ ನಮ್ಮ ನೆತ್ತಿಯ ಮೇಲೆ ಇದ್ದಂತೆ ಭಾಸವಾಗುತ್ತಿದ್ದರೂ ವಾಸ್ತವದಲ್ಲಿ ತುಸು ಅತ್ತಿತ್ತ ಇರುತ್ತಾನೆ. ಆದರೆ ಶೂನ್ಯ ನೆರಳಿನ ದಿನದಂದು ಸೂರ್ಯ ಖಗೋಳ ಶಾಸ್ತ್ರದ ಪ್ರಕಾರ ಝೆನಿತ್ ಅಥವಾ ತುತ್ತತುದಿ ಎಂಬ ಕಾಲ್ಪನಿಕ ಬಿಂದುವಿನ ಮೇಲಿರುತ್ತಾನೆ. ಸೂರ್ಯ ಈ ಕಾಲ್ಪನಿಕ ಬಿಂದುವಿನ ಮೇಲೆ ಹಾದು ಹೋಗುವಾಗ ಆ ನಿರ್ದಿಷ್ಟಸ್ಥಳದಲ್ಲಿ ನೆರಳು ಮರೆಯಾಗುತ್ತದೆ. ಸೂರ್ಯ ಉಳಿದ ದಿನಗಳಲ್ಲಿ ಈ ಝೆನಿತ್‌ನ ತುಸು ಎಡ ಅಥವಾ ಬಲದಲ್ಲಿ ಇರುವುದರಿಂದ ನೆರಳು ಮೂಡುತ್ತಿರುತ್ತದೆ.
ಇನ್ನು ಈ ಶೂನ್ಯ ನೆರಳಿನ ಅನುಭವ ಪಡೆಯಲು ಯಾವುದೇ ವೈಜ್ಞಾನಿಕ ಉಪಕರಣದ ಅಗತ್ಯವಿಲ್ಲ. ನಿಮ್ಮ ಮನೆಯ ಅಂಗಳ, ಟೆರೇಸ್, ರಸ್ತೆ ಹೀಗೆ ಯಾವುದೇ ಬಯಲು ಪ್ರದೇಶದಲ್ಲಿ ನಿಂತು ನಿಮ್ಮನ್ನು ನೀವೇ ಪ್ರಯೋಗಕ್ಕೆ ಒಳಪಡಿಸಿ ನೆರಳು ಮರೆಯಾಗುವುದನ್ನು ನೋಡಬಹುದು. ಹಾಗೆಯೇ ಲಂಬವಾಗಿ ಒಂದು ಕೊಳವೆಯನ್ನೋ, ಕಂಬವನ್ನೋ ನಿಲ್ಲಿಸಿ ನಿಧಾನವಾಗಿ ಅದರ ನೆರಳು ಕಡಿಮೆ ಆಗುತ್ತ ಬಂದು ಕೊನೆಗೆ ನೆರಳು ಮಾಯವಾಗುವುದನ್ನು ಗಮನಿಸಬಹುದು.