ಜೋಡಿ ನಂ.1ಗೆ ಬಿಗ್‌ಬಾಸ್ ಧನು.. ರುದ್ರ ಮಾಸ್ಟರ್‌ ಬಿಟ್ರೆ ಯಾರೂ ಇಲ್ವಾ? – ಹೊಸ ಶೋ ಸಾಮಾನ್ಯ ಜನರಿಗಲ್ವಾ?

ಜೋಡಿ ನಂ.1ಗೆ ಬಿಗ್‌ಬಾಸ್ ಧನು.. ರುದ್ರ ಮಾಸ್ಟರ್‌ ಬಿಟ್ರೆ ಯಾರೂ ಇಲ್ವಾ? – ಹೊಸ ಶೋ ಸಾಮಾನ್ಯ ಜನರಿಗಲ್ವಾ?

ಜೀಕನ್ನಡ ಮನರಂಜನೆ ಕೊಡೋದ್ರಲ್ಲಿ ಯಾವಾಗ್ಲೂ ಎಕ್ಸಪರ್ಟ್..‌ ವಿಭಿನ್ನ ಕಥಾಹಂದರ ಹೊಂದಿರೋ ಸೀರಿಯಲ್‌, ರಿಯಾಲಿಟಿ ಶೋಗಳನ ಮೂಲಕ ಜನರನ್ನ ರಂಜಿಸ್ತಾ ಬಂದಿದೆ. ಇದೀಗ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಈ ಶೋ ಬಳಿಕ ಮುಂದೇನು ಅಂತಾ ಕೇಳ್ತಿದ್ದ ವೀಕ್ಷಕರಿಗೆ ಜೀಕನ್ನಡ ವಾಹಿನಿ ಸರ್‌ಪ್ರೈಸ್‌ ಕೊಟ್ಟಿದೆ. ಇದೀಗ ಜೋಡಿ ನಂಬರ್‌ 1 ಕಾರ್ಯಕ್ರಮ ಶುರುವಾಗಲಿದೆ. ಆದ್ರೆ ಶೋ ಆರಂಭಕ್ಕೂ ಮುನ್ನವೇ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ:  ಸ್ಕೂಲ್‌ ಫೀಸ್‌ ಆಯ್ತು.. ಈಗ ಪಠ್ಯ ಪುಸ್ತಕವೂ ಬಲು ದುಬಾರಿ! – ಒಂದು ಪಠ್ಯ ಪುಸ್ತಕದ ಬೆಲೆ  1,035 ರೂ!

ಕಿರುತೆರೆಯಲ್ಲಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜೀ ಕನ್ನಡ ವಾಹಿನಿ ಮನೆ ಮಾತಾಗಿದೆ. ರಿಯಾಲಿಟಿ ಶೋಗಳ ವಿಚಾರದಲ್ಲೂ ಜೀ ಕನ್ನಡ ಪ್ರೇಕ್ಷಕರ ಮನಗೆದ್ದಿದೆ. ಇದೀಗ ಮತ್ತೊಂದು ಶೋ ಮೂಲಕ ವೀಕ್ಷಕರಿಗೆ ಮನರಂಜನೆಯ ನೀಡಲು ಸಜ್ಜಾಗಿದೆ. ಅದುವೇ ಜೋಡಿ ನಂಬರ್‌ 1. ಈಗಾಗಲೇ ಜೋಡಿ ನಂಬರ್‌ 1 ಶೋ ಪ್ರೋಮೋ ರಿಲೀಸ್‌ ಆಗಿದೆ. ಯಾರೆಲ್ಲಾ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ.

ಹೌದು.. ಜೋಡಿ ನಂಬರ್‌ 1 ಶೋ ಈಗಾಗಲೇ 2 ಸೀಸನ್‌ ಗಳನ್ನ ಯಶಸ್ವಿಯಾಗಿ ಮುಗಿಸಿದ್ದು, ಮೂರನೇ ಸೀಸನ್‌ ಆರಂಭವಾಗಲಿದೆ. ಏಪ್ರಿಲ್‌ 4 ರಿಂದ ಈ ಶೋ ಶುರುವಾಗಲಿದ್ದು, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಈ ಶೋನ ಹೋಸ್ಟ್‌ ಮಾಡ್ತಿದ್ದಾರೆ. ಪ್ರೋಮೋದಲ್ಲಿ ಕೋಪ ಎಲ್ಲಿ ಇರ್ತದೋ ಅಲ್ಲಿ ಪ್ರೀತಿ ಇದ್ದೇ ಇರುತ್ತದೆ. ಈ ಒಂದು ಮಾತನ್ನ ಶ್ವೇತಾ ಚಂಗಪ್ಪ ಹೇಳ್ತಾರೆ. ಪಕ್ಕದಲ್ಲಿಯೇ ಕುಳಿತ ಕುರಿ ಪ್ರತಾಪ್ ಹೌದಲ್ವೇ ಅಂತ ಹೇಳುತ್ತಿದ್ದಂತೆ, ಸ್ಪರ್ಧಿಗಳನ್ನು ಪರಿಚಯಿಸಲಾಗಿದೆ.  ಈ ಸೀಸನ್‌ನಲ್ಲಿ ಇತ್ತೀಚೆಗೆ ಮದುವೆಯಾದ ಜೋಡಿಗಳಿಂದ ಹಿಡಿದು ದಾಂಪತ್ಯದ ಅನುಭವ ಹೊಂದಿರುವ ಹಿರಿಯ ಜೋಡಿಗಳವರೆಗೂ ಸ್ಪಧಿಗಳಾಗಿ ಭಾಗವಹಿಸುತ್ತಿದ್ದಾರೆ.

ಜೋಡಿ ನಂಬರ್‌ 1 ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರುದ್ರ ಮಾಸ್ಟರ್ ಹಾಗೂ ನಿರೀಕ್ಷಾ ಭಾಗವಹಿಸುತ್ತಿದ್ದಾರೆ. ರುದ್ರ ಮಾಸ್ಟರ್‌ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ವೀಕ್ಷಕರಿಗೆ ಚಿರಪರಿಚಿತರು. ಇದೀಗ ಡಿಕೆಡಿ ಮುಗಿಯುತ್ತಿದ್ದಂತೆ ಹೊಸ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ರ ಸ್ಪರ್ಧಿ, ಗಿಚ್ಚಿ-ಗಿಲಿಗಿಲಿ ಖ್ಯಾತಿಯ ಧನರಾಜ್‌ ಆಚಾರ್ಯ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದಾರೆ. ಪತ್ನಿ ಪ್ರಜ್ಞಾ ಜೊತೆಗೆ ಜೋಡಿಯಾಗಿ ರಂಜಿಸಲು ಸಜ್ಜಾಗಿದ್ದಾರೆ.

ಇವ್ರ ಜೊತೆ ಬ್ರಹ್ಮಗಂಟು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಗೀತಾ ಭಾರತಿ ಭಟ್‌ಹಾಗೂ ಅವರ ಪತಿ ರಾಜಾ ರಾಮ್‌ ಜೋಡಿ ನಂ 1 ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಗೀತಾ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು.

ಇನ್ನು ಹೊಸದಾಗಿ ಮದುವೆ ಜೋಡಿಗಳಲ್ಲಿ ನಟಿ ರಜಿನಿ ಅವರು ಕೂಡ ಒಬ್ಬರು. ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ರಜಿನಿ, ಸೋಶಿಯಲ್‌ ಮೀಡಿಯಾದಲ್ಲಿ ಗೆಳೆಯ ಅರುಣ್‌ ಗೌಡ ಜೊತೆಗೆ ಫನ್ನಿ ರೀಲ್ಸ್‌ಗಳನ್ನ ಮಾಡುತ್ತಾ ಫೇಮಸ್‌ ಆಗಿದ್ದರು. ಇತ್ತೀಚೆಗೆ ರಜಿನಿ ಹಾಗೂ ಅರುಣ್‌ ಮದುವೆಯಾಗಿದ್ರು. ಇದೀಗ ಈ ದಂಪತಿ ಕೂಡ ಜೋಡಿ ನಂಬರ್‌ 1 ಶೋನಲ್ಲಿ ಭಾಗವಹಿಸಲಿದ್ದಾರೆ.

ಮತ್ತೊಂದು ಯಂಗ್‌ ದಂಪತಿ ನಯನ ನಾಗರಾಜ್‌-ಸುಹಾಸ್‌.  ನಯನ ನಾಗರಾಜ್‌ ಅವರು ಗಿಣಿರಾಮ, ಪಾಪಾ ಪಾಂಡು, ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಪಡೆದಿದ್ರು. ನಯನ ಗಾಯಕ ಸುಹಾಸ್‌ ಅವರನ್ನ ಪ್ರೀತಿಸಿ ಮದುವೆ ಆಗಿದ್ರು. ಇದೀಗ ಇವರು ಕೂಡ ‘ಜೋಡಿ ನಂ 1’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಉತ್ತರಕರ್ನಾಟಕದ ಪ್ರತಿಭೆ, ಸರಿಗಮಪ ಶೋ ಮೂಲಕ ಜನಪ್ರಿಯತೆ ಪಡೆದ ಗಾಯಕ ಬಾಳು ಬೆಳಗುಂದಿ ಹಾಗೂ ಅವರ ಪತ್ನಿ ಮಾಲಾಶ್ರೀ ಕೂಡ ಇದೇ ಶೋನಲ್ಲಿ ಭಾಗವಹಿಸಲಿದ್ದಾರೆ. ಇವ್ರ ಜೊತೆ ಲವ್‌ ಮಾಕ್ಟೇಲ್ ಸಿನಿಮಾ ಖ್ಯಾತಿಯ ನಟ ಅಭಿಲಾಷ್‌ ಹಾಗೂ ಅವರ ಪತ್ನಿ ಅಪೂರ್ವ ಸಹ ಈ ಶೋನಲ್ಲಿ ಸ್ಪರ್ಧಿಸಲಿದ್ದಾರೆ.

ಮತ್ತೊಂದು ವಿಶೇಷತೆ ಅಂದ್ರೇ ಇದೇ ಮೊದಲ ಬಾರಿಗೆ ಕೋಟೆ ಪ್ರಭಾಕರ್ ಹಾಗೂ ಅವರ ಪತ್ನಿ ಮಾಲತಿ ಕೂಡ ಜೋಡಿ ನಂಬರ್‌ 1 ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ. ಖಳನಟನಾಗಿ ಪರಿಚಯವಿರುವ ಕೋಟೆ ಪ್ರಭಾಕರ್ ಅವರ ದಾಂಪತ್ಯ ಜೀವನದ ಗುಟ್ಟು ಈ ಶೋ ಮೂಲಕ ಅನಾವರಣವಾಗಲಿದೆ.  ಇನ್ನು ಇವ್ರ ಜೊತೆ ಹಾಸ್ಯ ನಟ ಜಗ್ಗಪ್ಪ  ಮತ್ತು ಸುಷ್ಮಿತಾ, ಹಿರಿಯ ಜೋಡಿಗಳಾದ ಮಿಮಿಕ್ರಿ ಗೋಪಿ- ಉಷಾರಾಣಿ  ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ.

ಇನ್ನು ಜೋಡಿ ನಂಬರ್‌ 1 ಶೋ ಪ್ರೋಮೋ ರಿಲೀಸ್‌ ಆಗ್ತಿದ್ದಂತೆ ವೀಕ್ಷಕರು ಕೊಂಚ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಜೋಡಿ ನಂಬರ್‌ 1 ಶೋ ಇದೊಂದು ದಾಂಪತ್ಯದ ಕಷ್ಟ ಸುಖಗಳ ಅನಾವರಣದ ಕಾರ್ಯಕ್ರಮವಾಗಿದೆ. ಆದ್ರೆ ಶೋ ಮಾಡ್ಬೇಕು ಅಂತ ನಿನ್ನೆ ಮೊನ್ನೆ ಮದುವೆ ಆದವರನ್ನ ಕರೆಸಿಕೊಳ್ಳೋದು ಯಾಕೆ? ಅವರಿಗೆ ದಾಂಪತ್ಯ ಜೀವನದ ಅನುಭವ ಇದ್ಯಾ? ರುದ್ರ ಮಾಸ್ಟರ್‌ ಬಿಟ್ಟು ನಿಮಗೆ ಬೇರೆ ಯಾವ ಜೋಡಿ ಸಿಕ್ಕಿಲ್ವಾ? ಅಂತ ಕೆಲವರು ಪ್ರಶ್ನೆ ಮಾಡಿದ್ರೆ, ಇನ್ನೂ ಕೆಲವರು ಜೀ ಕನ್ನಡ ಕೊಟ್ಟವರಿಗೆ ಮಾತ್ರ ಚಾನ್ಸ್‌ ಕೊಡುತ್ತೆ. ಜನಸಾಮಾನ್ಯರಿಗೆ ಯಾಕೆ ಚಾನ್ಸ್‌ ಕೊಡಲ್ಲ ಅಂತ ಪ್ರಶ್ನೆ ಮಾಡ್ತಿದ್ದಾರೆ.

Shwetha M