IPLಗೆ ಸಿಕ್ಸರ್ ಕಿಂಗ್ ರೀ ಎಂಟ್ರಿ – ಗುಜರಾತ್ ಟೈಟಾನ್ಸ್ ಗೆ ಯುವಿ ಕೋಚ್
ನೆಹ್ರಾಗೆ ಕೊಕ್.. ಸಿಂಗ್ ಸೆಲೆಕ್ಟ್ ಆಗಿದ್ದೇಗೆ?

IPLಗೆ ಸಿಕ್ಸರ್ ಕಿಂಗ್ ರೀ ಎಂಟ್ರಿ – ಗುಜರಾತ್ ಟೈಟಾನ್ಸ್ ಗೆ ಯುವಿ ಕೋಚ್ನೆಹ್ರಾಗೆ ಕೊಕ್.. ಸಿಂಗ್ ಸೆಲೆಕ್ಟ್ ಆಗಿದ್ದೇಗೆ?

ಯುವರಾಜ್ ​ಸಿಂಗ್‌​ ಅಂದಾಕ್ಷಣ ಪಟ್ ಅಂತಾ ನೆನಪಾಗೋದೇ ಅವ್ರ ಸಿಕ್ಸರ್. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟುತ್ತಿದ್ದ ಯುವಿ 2007ರ ಟಿ20 ವಿಶ್ವಕಪ್​ನಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸಿದ್ರು. ಈ ಪಂದ್ಯ ಮುಗಿಯೋ ಹೊತ್ತಿಗೆ ಯುವರಾಜ್​ಸಿಂಗ್ ​​ಹೆಸರು, ಸಿಕ್ಸರ್​ಕಿಂಗ್ ​ಎಂದೇ ಕ್ರಿಕೆಟ್ ಜಗತ್ತಿನಲ್ಲಿ ಮರುನಾಮಕರಣವಾಗಿತ್ತು. ಆಂಗ್ಲರ ಗರ್ವಭಂಗ ಮಾಡಿದ್ದ ಯುವಿ ಇಂದಿಗೂ ಕೂಡ ಕ್ರಿಕೆಟ್ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕವೇ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಅದೇ ಸಿಕ್ಸರ್‌ ಕಿಂಗ್‌ ಯುವರಾಜ್‌ ಸಿಂಗ್‌, ಐಪಿಎಲ್‌ನಲ್ಲಿ ಆರು ವರ್ಷಗಳ ಬಳಿಕ ಮತ್ತೊಮ್ಮೆ ಅಖಾಡಕ್ಕೆ ಇಳಿಯಲು ಸಜ್ಜಾರಾಗಿದ್ದಾರೆ. ಆದ್ರೆ ಆಟಗಾರನಾಗಿ ಅಲ್ಲ ಗುರುವಿನ ಸ್ಥಾನದಲ್ಲಿ. ಹಾಗಾದ್ರೆ ಯುವಿ ಯಾವ ಟೀಂ ಸೇರಿಕೊಳ್ತಾರೆ..? ಅವ್ರ ಟಾರ್ಗೆಟ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶೆಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್- ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಏಳೆಂಟು ತಿಂಗಳಿದ್ದರೂ ಹಲವು ಫ್ರಾಂಚೈಸಿಗಳ ಕೋಚಿಂಗ್ ಸಿಬ್ಬಂದಿ ವಿಭಾಗದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್, ತಮ್ಮ ಸ್ಥಾನ ತೊರೆದು ಟೀಮ್ ಇಂಡಿಯಾ ಹೆಡ್​ಕೋಚ್​ ಆಗಿ ನೇಮಕಗೊಂಡಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯಕೋಚ್​ ಸ್ಥಾನದಿಂದ ರಿಕಿ ಪಾಂಟಿಂಗ್ ಕೆಳಗಿಳಿದಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಬೆಂಗಳೂರು ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ವಿಶ್ವಕಪ್ ಗೆಲ್ಲಿಸಿಕೊಟ್ಟ ಬಿಸಿಸಿಐ ಮಾಜಿ ಕೋಚ್ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ಸೇರಲು ಅಂತಿಮ ಹಂತದ ಮಾತುಕತೆಯಲ್ಲಿದ್ದಾರೆ. ಇದೀಗ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಈ ಸಾಲಿಗೆ ಸೇರಲಿದೆ.

ಗುಜರಾತ್ ಟೈಟಾನ್ಸ್ ಸೇರ್ತಾರಾ ಯುವರಾಜ್ ಸಿಂಗ್?

ಟೀಂ ಇಂಡಿಯಾದಲ್ಲಿ ತಮ್ಮ ಧಮಾಕೇದಾರ್ ಬ್ಯಾಟಿಂಗ್ ಮೂಲಕವೇ ಸದ್ದು ಮಾಡಿದ್ದ ಯುವಿ, ಈಗ ಮತ್ತೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಜಲ್ವಾ ತೋರಿಸೋಕೆ ರೆಡಿಯಾಗ್ತಿದ್ದಾರೆ. ಮತ್ತೆ ಯುವರಾಜ್‌ ಸಿಂಗ್‌ ಡ್ರೆಸಿಂಗ್ ರೂಮ್‌ ಸೇರಿಕೊಳ್ಳುತ್ತಾರೆ ಎಂಬ ಸುದ್ದಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಆದ್ರೆ ಈ ಬಾರಿ ಯುವಿ ಒಬ್ಬ ಆಟಗಾರನಾಗಿ ಅಂಗಳ ಪ್ರವೇಶಿಸುತ್ತಿಲ್ಲ. ಬದಲಿಗೆ ಗುರುವಾಗಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು, ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಸಾಕಷ್ಟು ಬದಲಾವಣೆ ಮಾಡಿಕೊಳ್ತಿದೆ. ಈಗ ಹೊರಬಿದ್ದಿರೋ ಬಿಗ್ ಅಪ್​ಡೇಟ್ ಅಂದ್ರೆ ಮುಖ್ಯ ಕೋಚ್ ಆಶಿಶ್ ನೆಹ್ರಾ ಮತ್ತು ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಗುಜರಾತ್ ಟೈಟಾನ್ಸ್‌ ತೊರೆಯಬಹುದು ಎನ್ನಲಾಗ್ತಿದೆ. ಅಲ್ದೇ ಯುವರಾಜ್ ಸಿಂಗ್ ಗುಜರಾತ್ ತಂಡದ ಮುಂದಿನ ಮುಖ್ಯ ಕೋಚ್ ಆಗುವ ಸಾಧ್ಯತೆ ದಟ್ಟವಾಗಿದೆ. ಈಗಾಗ್ಲೇ ತಂಡದ ಮಾರ್ಗದರ್ಶಕ ಗ್ಯಾರಿ ಕರ್ಸ್ಟನ್ ತಂಡದಿಂದ ಹೊರ ಬಂದಿದ್ದಾರೆ.

2022ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಹಾಗೇ 2023ರಲ್ಲಿ ರನ್ನರ್ ಅಪ್ ಆಗಿದ್ದ​ ಗುಜರಾತ್ ಟೈಟಾನ್ಸ್ ತಂಡದ ಹೆಡ್​ಕೋಚ್ ಆಶಿಶ್ ನೆಹ್ರಾ ಮುಂದಿನ ಟೂರ್ನಿಗೆ ಫ್ರಾಂಚೈಸಿ ತೊರೆಯಲಿದ್ದಾರೆ ಎನ್ನಲಾಗಿದೆ. ಹಾಗೇ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಅವರು ಸಹ ಐಪಿಎಲ್ 2025ಕ್ಕೂ ಮುನ್ನ ಗುಜರಾತ್ ಜೊತೆಗಿನ ಅವಧಿಯನ್ನು ಕೊನೆಗೊಳಿಸುವ ಸಾಧ್ಯತೆ ಇದೆ. ನೆಹ್ರಾ ಮತ್ತು ಸೋಲಂಕಿ ಅವರು 2022ರ ಐಪಿಎಲ್​ನಲ್ಲಿ ಟೈಟಾನ್ಸ್ ಸೇರಿದ್ದರು. ಅವರ ಚೊಚ್ಚಲ ಋತುವಿನಲ್ಲೇ ಫ್ರಾಂಚೈಸಿಯನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅಲ್ಲದೆ, 2023ರ ಟೂರ್ನಿಯಲ್ಲಿ ಗುಜರಾತ್ ತಂಡವನ್ನು ಫೈನಲ್​​ವರೆಗೂ ಕೊಂಡೊಯ್ದಿದ್ದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಸಿಎಸ್​ಕೆ ವಿರುದ್ಧ ಸೋತು ರನ್ನರ್​ಅಪ್ ಆಗಿತ್ತು. 2024ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ​ ಸೇರಿದ ನಂತರ ಅವರ ಸ್ಥಾನ ತುಂಬಿದ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಜಿಟಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಲ್ದೇ 17ನೇ ಆವೃತ್ತಿಯಲ್ಲಿ ಹಾರ್ದಿಕ್ ಸ್ಥಾನ ತುಂಬಲು ವಿಫಲವಾದ ಗುಜರಾತ್, ಮಿನಿ ಹರಾಜಿನಲ್ಲೂ ಆಟಗಾರರ ಖರೀದಿಯಲ್ಲಿ ಎಡವಿತ್ತು. ಗಾಯದ ಮೇಲೆ ಬರೆ ಎಂಬಂತೆ ಮೊಹಮ್ಮದ್ ಶಮಿ ಗಾಯಗೊಂಡು ಐಪಿಎಲ್ ಮಿಸ್ ಮಾಡಿಕೊಂಡಿದ್ರು. ಶಮಿ ಗೈರು ತಂಡದ ಹಿನ್ನಡೆಗೆ ಕಾರಣವಾಗಿತ್ತು. ಹಲವು ಕಾರಣಗಳಿಂದ ಜಿಟಿ ಪ್ಲೇಆಫ್​​ಗೆ ಅರ್ಹತೆ ಪಡೆಯಲಿಲ್ಲ. ಈ ನಡುವೆ ನೆಹ್ರಾ ಮತ್ತು ಸೋಲಂಕಿ ಫ್ರಾಂಚೈಸಿಯಿಂದ ಹೊರಬರಲು ನಿರ್ಧರಿಸಿರುವ ಕಾರಣ ಫ್ರಾಂಚೈಸಿಯು ಯುವಿಯನ್ನ ತಂಡಕ್ಕೆ ಕರೆತರೋ ಯತ್ನದಲ್ಲಿದೆ.

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸದ್ಯ ಯಾವುದೇ ತಂಡದ ಕೋಚ್​ ಆಗಿಲ್ಲ. ಈ ಹಿಂದೆಯೂ ಎಲ್ಲೂ ಕೋಚ್ ಆಗಿರುವ ಅನುಭವ ಹೊಂದಿಲ್ಲ. ಆದರೆ ಕ್ರಿಕೆಟ್​ನಲ್ಲಿ ಅಪಾರ ಅನುಭವ ಹೊಂದಿರುವ ಕಾರಣ ಯುವಿ ಆಯ್ಕೆಗೆ ಫ್ರಾಂಚೈಸಿ ಒಲವು ತೋರಿದ್ದು, ಈಗಾಗಲೇ ಚರ್ಚೆಗಳನ್ನೂ ನಡೆಸುತ್ತಿದೆ.  ಹಾಗೇ ಗುಜರಾತ್ ತಂಡಕ್ಕೆ ಯುವಿ ಸೇರಿದ್ರೆ ಟೀಂ ಮತ್ತಷ್ಟು ಸ್ಟ್ರಾಂಗ್ ಆಗಲಿದೆ. ಯಾಕಂದ್ರೆ ಯುವರಾಜ್ ಈ ಹಿಂದೆ ಜಿಟಿ ನಾಯಕ ಶುಭ್ಮನ್ ಗಿಲ್​ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರಿಬ್ಬರು ಮೈದಾನದ ಹೊರಗೂ ಕೂಡ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಳೆದ 3 ಋತುಗಳಲ್ಲಿ ಟೈಟಾನ್ಸ್ ತಂಡದ ಸಹಾಯಕ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರು ಈಗಾಗಲೇ ಫ್ರಾಂಚೈಸಿಯೊಂದಿಗೆ ಬೇರ್ಪಟ್ಟು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಟೈಟಾನ್ಸ್ ತಂಡದ ಇತರ ಕೋಚಿಂಗ್ ಸಿಬ್ಬಂದಿಗಳಾದ ಆಶಿಶ್ ಕಪೂರ್, ನಯೀಮ್ ಅಮೀನ್, ನರೇಂದರ್ ನೇಗಿ ಮತ್ತು ಮಿಥುನ್ ಮನ್ಹಾಸ್ ಕೂಡ ನೆಹ್ರಾ ಮತ್ತು ಸೋಲಂಕಿ ಬೇರ್ಪಟ್ಟರೆ ಫ್ರಾಂಚೈಸಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸುವ ನಿರೀಕ್ಷೆಯಿದೆ.

ಟೀಂ ಇಂಡಿಯಾಗೆ 2 ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ವಿಶ್ವದಾದ್ಯಂತ ನಿವೃತ್ತ ಆಟಗಾರರ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಂತ್ಯಗೊಂಡ ಲೆಜೆಂಡ್ಸ್‌ ವರ್ಡ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಇಂಡಿಯಾ ಲೆಜೆಂಡ್ಸ್‌ಗೆ ಟ್ರೋಫಿ ಗೆದ್ದುಕೊಟ್ಟಿದ್ದರು. ಇದೀಗ ಐಪಿಎಲ್​ನಲ್ಲಿ ಕಮ್ ಬ್ಯಾಕ್ ಮಾಡಲು ಹೊರಟಿದ್ದಾರೆ. ಐಪಿಎಲ್​ನಲ್ಲಿ ಸುದೀರ್ಘ ಅನುಭವ ಹೊಂದಿರುವ ಯುವಿ, ಐಪಿಎಲ್‌ನಲ್ಲಿ 132 ಪಂದ್ಯಗಳನ್ನಾಡಿದ್ದು 2,750 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳೂ ಸೇರಿವೆ. ಯುವರಾಜ್ ಪಂಜಾಬ್, ಹೈದರಾಬಾದ್, ಪುಣೆ ವಾರಿಯರ್ಸ್, ಆರ್‌ಸಿಬಿ, ಮುಂಬೈ ಇಂಡಿಯನ್ಸ್ ತಂಡಗಳಲ್ಲಿ ಆಡಿದ್ದಾರೆ.  ಒಂದು ವೇಳೆ ಯುವರಾಜ್ ಸಿಂಗ್ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್‌ ಆದರೆ ಅವರಿಗೆ ಭಾರಿ ಮೊತ್ತದ ಸಂಭಾವನೆ ಸಿಗುವ ಸಾಧ್ಯತೆಯೂ ಇದೆ.

ಆಟಗಾರನಾಗಿ, ಸೀಮಿತ ಓವರ್‌ಗಳಲ್ಲಿ ಯುವರಾಜ್ ಸಿಂಗ್ ಅವರ ದಾಖಲೆಯು ಅತ್ಯುತ್ತಮವಾಗಿದೆ. ಅವರಿಗೆ ಐಪಿಎಲ್‌ನಲ್ಲಿ ಆಡಿದ ಸಾಕಷ್ಟು ಅನುಭವವಿದೆ. ಈ ಮೂಲಕ ಅವರು ಆಶಿಶ್ ನೆಹ್ರಾ ಅವರ ಸ್ಥಾನವನ್ನು ತುಂಬಬಹುದು.  ಮತ್ತೊಂದೆಡೆ CVC ಕ್ಯಾಪಿಟಲ್ ಪಾರ್ಟ್ನರ್ಸ್ ಮಾಲೀಕತ್ವದ ಗುಜರಾತ್ ಟೈಟಾನ್ಸ್​ ಫ್ರಾಂಚೈಸಿಯು ತನ್ನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಐಪಿಎಲ್​ನಲ್ಲಿ ಮೂರು ಸೀಸನ್​ನಲ್ಲಿ ಆಡಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ತನ್ನ ಷೇರಿನ ಬಹುಪಾಲನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಈ ಷೇರುಗಳ ಖರೀದಿಗೆ ಅದಾನಿ ಗ್ರೂಪ್ ಹಾಗೂ ಟೊರೆಂಟ್ ಗ್ರೂಪ್ ಮುಂದಾಗಿದ್ದು ಮಾತುಕತೆ ಕೂಡ ನಡೀತಿದೆ. ಒಟ್ಟಾರೆ ಯುವಿ ಐಪಿಎಲ್​ಗೆ ಕಮ್​ಬ್ಯಾಕ್ ಮಾಡೋಕೆ ಸಜ್ಜಾಗಿದ್ದು ಗುಜರಾತ್ ಟೈಟಾನ್ಸ್ ಹೊಸ ಮಾಲೀಕತ್ವದೊಂದಿಗೆ ಮತ್ತಷ್ಟು ಸ್ಟ್ರಾಂಗ್ ಆಗಲು ಈಗಿನಿಂದಲೇ ತಂತ್ರಗಾರಿಗೆ ಶುರು ಮಾಡಿದೆ.

Shwetha M

Leave a Reply

Your email address will not be published. Required fields are marked *